ETV Bharat / international

ಇಂದು ಪಾಕಿಸ್ತಾನ ಸಂಸತ್​ ಚುನಾವಣೆ: ಜೈಲಿಂದಲೇ ಪಕ್ಷ ಗೆಲ್ಲಿಸ್ತಾರಾ ಇಮ್ರಾನ್​ ಖಾನ್​?

author img

By ETV Bharat Karnataka Team

Published : Feb 8, 2024, 6:58 AM IST

ಪಾಕಿಸ್ತಾನ ಸಂಸತ್​ ಚುನಾವಣೆ
ಪಾಕಿಸ್ತಾನ ಸಂಸತ್​ ಚುನಾವಣೆ

ಇಂದು ಪಾಕಿಸ್ತಾನದಲ್ಲಿ ಸಂಸತ್​ ಚುನಾವಣೆಯ ಮತದಾನ ನಡೆಯಲಿದೆ.

ಇಸ್ಲಾಮಾಬಾದ್ (ಪಾಕಿಸ್ತಾನ): ರಾಜಕೀಯ ಅನಿಶ್ಚಿತತೆ, ಆರ್ಥಿಕ ಬಿಕ್ಕಟ್ಟು, ಹಿಂಸಾಚಾರ ಮತ್ತು ಭಯೋತ್ಪಾದಕ ದಾಳಿ ಸವಾಲುಗಳ ನಡುವೆ ಇಂದು ಪಾಕಿಸ್ತಾನ ಸಂಸತ್ತಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಜನರು ಮತದಾನ ಮಾಡಲು ಹೊರಬರುತ್ತಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಪಕ್ಷವು ಸದ್ಯ ಟ್ರೆಂಡಿಂಗ್​ನಲ್ಲಿದೆ.

ರಾಷ್ಟ್ರವ್ಯಾಪಿ ನಡೆಯುವ ಮತದಾನದ ವೇಳೆ ಯಾವುದೇ ದುಷ್ಕೃತ್ಯಗಳು ನಡೆಯದಂತೆ ತಡೆಯಲು, ಭದ್ರತಾ ವ್ಯವಸ್ಥೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಪಾಕಿಸ್ತಾನದ ಆಂತರಿಕ ಸಚಿವಾಲಯವು ಕಂಟ್ರೋಲ್ ರೂಮ್ ಸ್ಥಾಪಿಸಿದೆ. ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ನ ನಾಯಕ ನವಾಜ್ ಷರೀಫ್ ಅವರು ನಾಲ್ಕನೇ ಬಾರಿಗೆ ಪ್ರಧಾನಿಯಾಗಲು ಕಣಕ್ಕಿಳಿದಿದ್ದಾರೆ. ಭ್ರಷ್ಟಾಚಾರದ ಆರೋಪ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಗಡಿಪಾರಾಗಿದ್ದ ಷರೀಫ್​ ಈಚೆಗಷ್ಟೆ ಪಾಕಿಸ್ತಾನಕ್ಕೆ ವಾಪಸ್​ ಆಗಿದ್ದರು. ಬಳಿಕ ಕೋರ್ಟ್​, ಮಾಜಿ ಪ್ರಧಾನಿ ಮೇಲಿದ್ದ ಬಹುಪಾಲು ಶಿಕ್ಷೆಗಳನ್ನು ರದ್ದುಗೊಳಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು.

ಖಾನ್​ಗೆ ನೂರೆಂಟು ತೊಡಕು: ಮತ್ತೊಂದೆಡೆ, ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಸಂಸ್ಥಾಪಕ ಮತ್ತು ಜನಪ್ರಿಯ ನಾಯಕರಲ್ಲಿ ಒಬ್ಬರಾಗಿರುವ ಇಮ್ರಾನ್ ಖಾನ್, ಅನೇಕ ಆರೋಪಗಳ ಮೇಲೆ ಅಡಿಯಾಲಾ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಸೈಫರ್ ಕೇಸ್​ನಲ್ಲಿ 10 ವರ್ಷ, ತೋಷಖಾನಾ ಪ್ರಕರಣದಲ್ಲಿ 14 ವರ್ಷ, ಮತ್ತು ವಿವಾಹ ಪ್ರಕರಣದಲ್ಲಿ 7 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಕ್ರಿಕೆಟಿಗ - ರಾಜಕಾರಣಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳಿಸಲಾಗಿದೆ. ಅಲ್ಲದೇ, ಪಕ್ಷದ ಚಿಹ್ನೆಯಾದ 'ಬ್ಯಾಟ್' ಅನ್ನು ಹಿಂತೆಗೆದುಕೊಳ್ಳುವ ಪಾಕಿಸ್ತಾನದ ಚುನಾವಣಾ ಆಯೋಗದ ನಿರ್ಧಾರವನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದು ಮಾಜಿ ಪ್ರಧಾನಿ ಖಾನ್​ಗೆ ಚುನಾವಣೆಗೂ ಮೊದಲು ತೊಡಕುಂಟು ಮಾಡಿದೆ.

ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳು ರಾಜಕೀಯ ಪ್ರೇರಿತ ಎಂದು ಇಮ್ರಾನ್​ ಖಾನ್ ಹೇಳಿದ್ದು, ಫೆಬ್ರವರಿ 8 ರ ಚುನಾವಣೆಯ ನಂತರ ಪಕ್ಷವು ದೇಶಕ್ಕೆ ಅಚ್ಚರಿಯ ಫಲಿತಾಂಶ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಕ್ಸ್​ ಖಾತೆಯಲ್ಲಿ ವಿಡಿಯೋ ಸಂದೇಶ ಹರಿಬಿಟ್ಟಿರುವ ಖಾನ್​, ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ಚುನಾವಣೆಗಳ ಮೂಲಕ ನಿಮ್ಮ ಮತ್ತು ಮಕ್ಕಳ ಭವಿಷ್ಯವನ್ನು ನೀವೇ ಬದಲಾಯಿಸುತ್ತೀರಿ ಎಂದು ಹೇಳಿದ್ದಾರೆ.

ಇನ್ನೊಂದೆಡೆ, ನವಾಜ್​ ಷರೀಫ್​ ಅವರ ಪಿಎಂಎಲ್​ ಪಕ್ಷ "2013 ರಿಂದ 2018 ರವರೆಗಿನ ವರ್ಷಗಳು ಪಾಕಿಸ್ತಾನಕ್ಕೆ ಸುವರ್ಣ ಯುಗವನ್ನು ತಂದುಕೊಟ್ಟಿದೆ. ಪ್ರಗತಿ ಮತ್ತು ಸಮೃದ್ಧಿಯ ಪ್ರಯಾಣವನ್ನು ಮುಂದುವರಿಸೋಣ. ಬುದ್ಧಿವಂತಿಕೆಯಿಂದ ಮತ ಚಲಾಯಿಸಿ ಎಂದು ಮನವಿ ಮಾಡಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣಾ ಪ್ರಚಾರ ಅಂತ್ಯ: ನಾಳೆ ಮತದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.