ETV Bharat / health

ಮೂತ್ರದ ಬಣ್ಣ ಹೇಳುತ್ತದೆ ನಿಮ್ಮ ಆರೋಗ್ಯ: ಯಾವ ಬಣ್ಣ ಯಾವುದರ ಸೂಚಕ ಗೊತ್ತೇ?

author img

By ETV Bharat Karnataka Team

Published : Mar 21, 2024, 11:10 AM IST

ಮಾನವನ ಮೂತ್ರದ ಬಣ್ಣದಿಂದ ಆತನ ಆರೋಗ್ಯವನ್ನು ನಿರ್ಧರಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಯಾವ ಬಣ್ಣ ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ.

ಮೂತ್ರದ ಬಣ್ಣದಲ್ಲಿ ಅಡಗಿದೆ ನಿಮ್ಮ ಆರೋಗ್ಯ.
ಮೂತ್ರದ ಬಣ್ಣದಲ್ಲಿ ಅಡಗಿದೆ ನಿಮ್ಮ ಆರೋಗ್ಯ.

ನಮ್ಮ ಮೂತ್ರದ ಬಣ್ಣಗಳು ನಮ್ಮ ಆರೋಗ್ಯ ಸ್ಥಿತಿಗತಿಯ ಕುರಿತು ಸೂಚನೆ ನೀಡುತ್ತವೆ. ಅವುಗಳ ಬಣ್ಣವೇ ಎಚ್ಚರಿಕೆಯ ಚಿಹ್ನೆ. ಅದು ಹೇಗೆ ಗೊತ್ತೇ?.

ಹೊಟ್ಟೆಯಲ್ಲಿ ಯಾವುದೇ ರೋಗವಿದ್ದರೆ ಮೂತ್ರದ ಬಣ್ಣದಿಂದ ಪತ್ತೆ ಹಚ್ಚಲು ಸಾಧ್ಯವಿದೆ. ನೀವೇ ಇದನ್ನು ಗಮನಿಸಬಹುದು. ಅನಾರೋಗ್ಯ ನಿಮಿತ್ತ ಸರ್ಕಾರಿ ಅಥವಾ ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ತೆರಳಿದರೆ ಮೊದಲು ಅವರು ನಿಮ್ಮ ರಕ್ತ ಹಾಗೂ ಮೂತ್ರದ ಪರೀಕ್ಷೆ ಮಾಡುತ್ತಾರೆ. ಅದು ರೋಗಿಯ ಆರೋಗ್ಯದ ಬಗ್ಗೆ ಪ್ರಾಥಮಿಕ ಪರೀಕ್ಷೆಗೆ ಸಹಕಾರಿಯಾಗುತ್ತದೆ. ಹಾಗಾದರೆ ಯಾವ ಮೂತ್ರದ ಬಣ್ಣ ಸುರಕ್ಷಿತ, ಯಾವುದು ಅಪಾಯಕಾರಿ ನೋಡೋಣ.

ಯಾವ ಬಣ್ಣ ಯಾವುದರ ಸೂಚಕ?: ನಮ್ಮ ಮೂತ್ರಪಿಂಡದಲ್ಲಿ ಯೂರೋಬಿಲಿನ್ ಎಂಬ ವರ್ಣದ್ರವ್ಯದಿಂದಾಗಿ ಬರುವ ಮೂತ್ರವು ತೆಳು ಹಳದಿ ಬಣ್ಣ ಹೊಂದಿರುತ್ತದೆ. ಹೀಗಿದ್ದರೆ ನೀವು ಆರೋಗ್ಯವಾಗಿದ್ದೀರಿ ಎಂದರ್ಥ. ಆದರೆ ನಾವು ಕುಡಿಯುವ ನೀರನ್ನು ಅವಲಂಬಿಸಿ ಮೂತ್ರದ ಬಣ್ಣವೂ ಬದಲಾಗುತ್ತದೆ. ಕೆಲವೊಮ್ಮೆ ನಾವು ಸೇವಿಸುವ ಆಹಾರ ಮತ್ತು ಔಷಧಗಳು ಮೂತ್ರದ ಬಣ್ಣ ಬದಲಾಯಿಸುತ್ತವೆ. ಆದರೆ ಸಾಮಾನ್ಯ ಸಮಯದಲ್ಲೂ ಮೂತ್ರದ ಬಣ್ಣ ಬದಲಾದರೆ ನೀವು ಎಚ್ಚರದಿಂದಿರಬೇಕು.

ಬಣ್ಣರಹಿತ ಮೂತ್ರ: ವೈದ್ಯರ ಪ್ರಕಾರ, ಮೂತ್ರವು ಸ್ಪಷ್ಟ ಬಣ್ಣವಿಲ್ಲದೆ ನೀರಿನಂತಿದ್ದರೆ ನೀವು ಹೆಚ್ಚು ನೀರು ಕುಡಿಯುತ್ತಿದ್ದೀರಿ ಎಂದರ್ಥ. ಇದರರ್ಥ ನಿಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ನೀರನ್ನು ನೀವು ಸೇವಿಸಿದಾಗ, ನಿಮ್ಮ ಮೂತ್ರಪಿಂಡಗಳು ಹೆಚ್ಚುವರಿ ನೀರನ್ನು ಬಣ್ಣರಹಿತ ಮೂತ್ರದ ರೂಪದಲ್ಲಿ ಹೊರಹಾಕುತ್ತವೆ. ಇದು ಸಾಂದರ್ಭಿಕವಾಗಿ ಸಂಭವಿಸಿದರೆ ಚಿಂತೆ ಇಲ್ಲ. ಆದರೆ ಯಾವಾಗಲೂ ಒಂದೇ ಬಣ್ಣದಲ್ಲಿ ಬರುತ್ತಿದ್ದರೆ ನೀವು ಕುಡಿಯುವ ನೀರನ್ನು ಕಡಿಮೆ ಮಾಡಬೇಕು. ನೀರು ಕುಡಿಯುವುದು ನಿಜವಾಗಿಯೂ ಒಳ್ಳೆಯದು. ಆದರೆ ಹೆಚ್ಚು ಕುಡಿಯುವುದು ರಕ್ತದಲ್ಲಿನ ಎಲೆಕ್ಟ್ರೋಲೈಟ್‌ಗಳ ಅಸಮತೋಲನಕ್ಕೆ ಕಾರಣವಾಗಬಹುದು. ಕೆಲವು ಅಧ್ಯಯನಗಳ ಪ್ರಕಾರ, ಬಣ್ಣರಹಿತ ಮೂತ್ರವು ಸಿರೋಸಿಸ್, ವೈರಲ್ ಹೆಪಟೈಟಿಸ್‌ನಂತಹ ಯಕೃತ್ತಿನ ಸಮಸ್ಯೆಗಳನ್ನು ಸಹ ಸೂಚಿಸುತ್ತದೆ.

ಕೆಂಪು ಬಣ್ಣದ ಮೂತ್ರ: ಬೀಟ್‌ರೂಟ್, ಬೆರಿ ಹಣ್ಣುಗಳಂತಹ ಆಹಾರವನ್ನು ನಿಯಮಿತವಾಗಿ ಸೇವಿಸಿದರೆ, ನಿಮ್ಮ ಮೂತ್ರವು ತಾತ್ಕಾಲಿಕವಾಗಿ ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಉಳಿದ ದಿನದಲ್ಲಿ ನಿಮ್ಮ ಮೂತ್ರ ಕೆಂಪು ಬಣ್ಣದಲ್ಲಿದ್ದರೆ ನೀವು ಜಾಗೃತರಾಗಬೇಕು. ಯಾಕೆಂದರೆ ಮೂತ್ರದಲ್ಲಿ ರಕ್ತ ಅಥವಾ ಹೆಮಟುರಿಯಾ ಇದಕ್ಕೆ ಕಾರಣವಾಗಿರಬಹುದು ಅಥವಾ ಮೂತ್ರನಾಳದ ಸೋಂಕು, ಪ್ರಾಸ್ಟೇಟ್ ಸೋಂಕು/ಮೂತ್ರಪಿಂಡದ ಕಲ್ಲುಗಳಿಂದಲೂ ಇದು ಉಂಟಾಗಬಹುದು. ಕೆಲವು ಸಂದರ್ಭಗಳಲ್ಲಿ ಕೆಂಪು ಮೂತ್ರವು ಮೂತ್ರಪಿಂಡದ ಕಾಯಿಲೆ ಅಥವಾ ಕ್ಯಾನ್ಸರ್​ನ ಸಂಕೇತವಾಗಿರಲೂಬಹುದು ಎಂದು ತಜ್ಞರು ಹೇಳುತ್ತಾರೆ.

ಕಿತ್ತಳೆ ಬಣ್ಣದ ಮೂತ್ರ: ನಿಮ್ಮ ಮೂತ್ರವು ಕಿತ್ತಳೆ ಬಣ್ಣದಲ್ಲಿರುವುದನ್ನು ನೀವು ಗಮನಿಸಿದರೆ, ಅದು ನಿರ್ಜಲೀಕರಣದ ಲಕ್ಷಣವಾಗಿರಬಹುದು. ಹಾಗಾಗಿ ಆ ಸಮಯದಲ್ಲಿ ಎಚ್ಚೆತ್ತುಕೊಂಡು ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ಬಹಳ ಮುಖ್ಯ. ಕೆಲವು ಅಧ್ಯಯನಗಳ ಪ್ರಕಾರ, ಪಿತ್ತಜನಕಾಂಗದ ಸಮಸ್ಯೆಗಳಿಂದಾಗಿ ಪಿತ್ತರಸವು ನಿಮ್ಮ ರಕ್ತಪ್ರವಾಹಕ್ಕೆ ಪ್ರವೇಶಿಸಿದಾಗ ಈ ಸಮಸ್ಯೆ ಉಂಟಾಗುತ್ತದೆ. ವಯಸ್ಕರಲ್ಲಿ ಕಾಮಾಲೆಯು ಕಿತ್ತಳೆ ಬಣ್ಣದ ಮೂತ್ರಕ್ಕೆ ಕಾರಣವಾಗಬಹುದು.

ಗಾಢ ಕಂದು ಬಣ್ಣದ ಮೂತ್ರ: ನಿಮ್ಮ ಮೂತ್ರವು ಈ ಬಣ್ಣದಲ್ಲಿ ಹೊರಬಂದರೆ ಹಗುರವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಇದು ಮೂತ್ರಕೋಶ ಅಥವಾ ಮೂತ್ರಪಿಂಡದ ಕ್ಯಾನ್ಸರ್‌ನ ಮೊದಲ ಚಿಹ್ನೆ. ಹೆಚ್ಚಾಗಿ ಈ ಬಣ್ಣದ ಮೂತ್ರವು ತೀವ್ರ ನಿರ್ಜಲೀಕರಣವನ್ನು ಸೂಚಿಸುತ್ತದೆ. ಅಲ್ಲದೆ ಈ ಬಣ್ಣದ ಮೂತ್ರವು ಯಕೃತ್ತಿನ ರೋಗವನ್ನೂ ಸಹ ಸೂಚಿಸುತ್ತದೆ. ನಿಮ್ಮ ಮೂತ್ರದಲ್ಲಿ ಪಿತ್ತರಸವು ಸೇರುವುದರಿಂದ ಇದು ಉಂಟಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಹೀಗಾಗಿ, ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಇದನ್ನೂ ಓದಿ: ಕಣ್ಣಿನ ದೃಷ್ಟಿ ಕ್ಷೀಣಿಸಲು ಸ್ಕ್ರೀನ್​ಟೈಂ ಹೊರತಾಗಿ ಇದೂ ಕೂಡ ಕಾರಣ: ಆ ಅಂಶ ಏನು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.