ETV Bharat / health

ದಡಾರ ಪ್ರಕರಣಗಳ ಸಂಖ್ಯೆ ಶೇ 88ರಷ್ಟು ಹೆಚ್ಚಳ: ಲಸಿಕೆ ಪಡೆಯದಿರುವುದೇ ಕಾರಣ! - Global Measles Cases

author img

By ETV Bharat Karnataka Team

Published : Apr 28, 2024, 12:27 PM IST

2023ರಲ್ಲಿ ದಡಾರ ಪ್ರಕರಣಗಳ ಸಂಖ್ಯೆ ಶೇ 88ರಷ್ಟು ಏರಿಕೆಯಾಗಿದೆ.

Global measles cases see 88pc jump in 2023 from 2022: WHO
Global measles cases see 88pc jump in 2023 from 2022: WHO

ನವದೆಹಲಿ: 2022 ಕ್ಕೆ ಹೋಲಿಸಿದರೆ ವಿಶ್ವಾದ್ಯಂತ ದಡಾರ ಪ್ರಕರಣಗಳ ಸಂಖ್ಯೆ 2023 ರಲ್ಲಿ ಶೇಕಡಾ 88 ರಷ್ಟು ಗಮನಾರ್ಹ ಏರಿಕೆ ಕಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಭಾನುವಾರ ವರದಿ ಮಾಡಿದೆ. 2022 ರಲ್ಲಿ ವಿಶ್ವಾದ್ಯಂತ 1,71,153 ದಡಾರ ಪ್ರಕರಣಗಳು ವರದಿಯಾಗಿದ್ದವು. ಆದರೆ ಈ ಸಂಖ್ಯೆ 2023 ರಲ್ಲಿ 3,21,582 ಕ್ಕೆ ದ್ವಿಗುಣಗೊಂಡಿದೆ ಎಂದು ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಎಸ್​ಸಿಎಂಐಡಿ ಗ್ಲೋಬಲ್ ಕಾಂಗ್ರೆಸ್​ನಲ್ಲಿ ಸಂಶೋಧನಾ ವರದಿಯನ್ನು ಪ್ರಸ್ತುತಪಡಿಸಿದ ಡಬ್ಲ್ಯುಎಚ್ಒದ ಪ್ಯಾಟ್ರಿಕ್ ಒ'ಕಾನರ್ ಹೇಳಿದರು.

ಕೋವಿಡ್ -19 ಸಾಂಕ್ರಾಮಿಕ ಅಲೆಯ ಸಮಯದಲ್ಲಿ ದಡಾರ ಲಸಿಕೆ ನೀಡುವುದು ನಿಧಾನವಾಗಿರುವುದೇ ವಿಶ್ವಾದ್ಯಂತ ದಡಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ.

"ದಡಾರ ಮತ್ತು ರುಬೆಲ್ಲಾ ನಿರ್ಮೂಲನೆಗಾಗಿ ರಚಿಸಲಾಗಿರುವ ಡಬ್ಲ್ಯುಎಚ್ಒ ದ ಪ್ರಾದೇಶಿಕ ಪರಿಶೀಲನಾ ಆಯೋಗಗಳು (ಆರ್​ವಿಸಿಗಳು) (Regional Verification Commissions for Measles and Rubella Elimination -RVCs) 2024 ರಲ್ಲಿ ಎಲ್ಲಾ ರಾಷ್ಟ್ರೀಯ ದಡಾರ ಮತ್ತು ರುಬೆಲ್ಲಾ 2023 ಪ್ರಕರಣಗಳ ವರದಿಗಳನ್ನು ಪರಿಶೀಲಿಸಿವೆ. ಇದರ ಪ್ರಕಾರ ಕಳೆದ ದಶಕದಲ್ಲಿ ದಡಾರ ಮತ್ತು ರುಬೆಲ್ಲಾ ನಿರ್ಮೂಲನೆಯಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ." ಎಂದು ಓ'ಕಾನರ್ ಹೇಳಿದರು.

"ದಡಾರ ವೈರಸ್ ಅತ್ಯಂತ ಸಾಂಕ್ರಾಮಿಕವಾಗಿದೆ. ಹೀಗಾಗಿ ದಡಾರ ನಿರೋಧಕ ಲಸಿಕೆ ನೀಡುವುದರಲ್ಲಿ ವಿಳಂಬವಾದಾಗ ದಡಾರ ಮತ್ತೆ ಮರುಕಳಿಸುತ್ತದೆ. ಹೀಗಾಗಿ ಲಸಿಕಾ ವ್ಯಾಪ್ತಿಯನ್ನು ಹೆಚ್ಚಿಸಬೇಕು ಮತ್ತು ಲಸಿಕೆ ನೀಡುವಿಕೆಯು ಏಕರೂಪ ಮತ್ತು ಸಮಾನವಾಗಿರಬೇಕು" ಎಂದು ಅವರು ಹೇಳಿದರು.

ಈ ವರ್ಷದ ಏಪ್ರಿಲ್ ಆರಂಭದವರೆಗೆ ಸುಮಾರು 94,481 ದಡಾರ ಪ್ರಕರಣಗಳು ವರದಿಯಾಗಿದ್ದು, 2024 ರ ಉಳಿದ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಈ ವರ್ಷ ವರದಿಯಾದ ಪ್ರಕರಣಗಳ ಪೈಕಿ ಶೇಕಡಾ 45 ರಷ್ಟು ಡಬ್ಲ್ಯುಎಚ್ಒ ಯುರೋಪಿಯನ್ ಪ್ರದೇಶದಲ್ಲಿದ್ದರೆ ಯೆಮೆನ್, ಅಜರ್ ಬೈಜಾನ್ ಮತ್ತು ಕಿರ್ಗಿಸ್ತಾನ್ ವಿಶ್ವದಲ್ಲೇ ಅತಿ ಹೆಚ್ಚು ದಡಾರ ಪ್ರಕರಣಗಳನ್ನು ಹೊಂದಿರುವ ದೇಶಗಳಾಗಿವೆ ಎಂದು ವರದಿ ತಿಳಿಸಿದೆ.

ದಡಾರದ ವಿರುದ್ಧದ ಲಸಿಕೆ ಅಭಿಯಾನದಿಂದ 2000 ರಿಂದ 2022 ರವರೆಗೆ ಜಾಗತಿಕವಾಗಿ ಅಂದಾಜು 57 ಮಿಲಿಯನ್ ಸಂಭವನೀಯ ಮರಣಗಳನ್ನು ತಪ್ಪಿಸಲಾಗಿದೆ ಎಂದು ವರದಿ ತೋರಿಸಿದೆ. ಈ ಪೈಕಿ ಯುರೋಪಿಯನ್ ಪ್ರದೇಶದಲ್ಲಿಯೇ 1.5 ಮಿಲಿಯನ್ ಸಂಭವನೀಯ ಸಾವುಗಳನ್ನು ಕಡಿಮೆ ಮಾಡಲಾಗಿದೆ. ಈ ವಲಯದಲ್ಲಿ 2000ನೇ ಇಸ್ವಿಯಲ್ಲಿ 3584 ಜನ ದಡಾರದಿಂದ ಸಾವಿಗೀಡಾಗಿದ್ದರು. ಆದರೆ 2022ರಲ್ಲಿ 70 ಜನ ಮಾತ್ರ ದಡಾರದಿಂದ ಸಾವಿಗೀಡಾಗಿದ್ದು, ಸಾವಿನ ಪ್ರಮಾಣವು ಶೇ 98 ರಷ್ಟು ಕಡಿಮೆಯಾಗಿದೆ.

ಇದನ್ನೂ ಓದಿ : BMW ಎಲೆಕ್ಟ್ರಿಕ್ ಕಾರು ಬಿಡುಗಡೆ: ಬೆಲೆ 1 ಕೋಟಿಗಿಂತ ಸ್ವಲ್ಪ ಜಾಸ್ತಿ! - BMW Electric Car

ETV Bharat Logo

Copyright © 2024 Ushodaya Enterprises Pvt. Ltd., All Rights Reserved.