ETV Bharat / business

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ?; ಹಾಗಾದರೆ ಈ ತಪ್ಪುಗಳನ್ನು ಮಾತ್ರ ಮಾಡಲೇಬೇಡಿ - Mutual Fund Investment Mistakes

author img

By ETV Bharat Karnataka Team

Published : Apr 29, 2024, 7:54 AM IST

common-mistakes-to-avoid-while-investing-in-mutual-funds
ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಹಾಗಾದರೆ ಈ ತಪ್ಪುಗಳನ್ನು ಮಾತ್ರ ಮಾಡಲೇಬೇಡಿ

ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಹಾಗಾದರೆ ಅನೇಕರು ಇಂತಹ ಹೂಡಿಕೆಗಳಲ್ಲಿ ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಆರ್ಥಿಕವಾಗಿ ನಷ್ಟಕ್ಕೀಡಾಗುತ್ತಾರೆ. ಇಂತಹ ನಷ್ಟಗಳಿಂದ ಪಾರಾಗಲು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು ಎನ್ನುತ್ತಾರೆ ಹಣಕಾಸು ತಜ್ಞರು.

ಹೈದರಾಬಾದ್: ಅನೇಕ ಜನರು ಹಣ ಉಳಿಸಲು ಸಣ್ಣ ಉಳಿತಾಯ ಯೋಜನೆಗಳನ್ನೇ ಅವಲಂಬಿಸಿದ್ದಾರೆ. ಇತರರು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಸಾಕಷ್ಟು ಕಾಳಜಿ ವಹಿಸಬೇಕು. ಮ್ಯೂಚುವಲ್ ಫಂಡ್ ಹೂಡಿಕೆಯ ಮೂಲ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕು. ನಿಮ್ಮ ಹಣಕಾಸಿನ ಗುರಿ ಪೂರೈಸಲು ನೀವು ಸಾಕಷ್ಟು ಹೂಡಿಕೆ ಮಾಡಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಿ. ವ್ಯವಸ್ಥಿತ (SIP) ವಿಧಾನವನ್ನು ಅನುಸರಿಸಬೇಕು. ಆಗ ಮಾತ್ರ ದೀರ್ಘಾವಧಿಯಲ್ಲಿ ಉತ್ತಮ ಆದಾಯ ಗಳಿಸುವ ಸಾಧ್ಯತೆ ಹೆಚ್ಚುತ್ತದೆ. ಆದರೆ, ಅನೇಕ ಜನರು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಗೊತ್ತಿದ್ದೂ ತಿಳಿಯದೆಯೂ ಕೆಲವು ತಪ್ಪುಗಳು ಆಗುತ್ತವೆ. ಇದು ಅವರ ಹಣಕಾಸಿನ ಗುರಿಗಳನ್ನು ಸಾಧಿಸುವ ಸಾಧ್ಯತೆಗಳನ್ನು ಬಹಳಷ್ಟು ಕಡಿಮೆ ಮಾಡುತ್ತದೆ.

ಸ್ಪಷ್ಟವಾದ ಅರಿವಿನ ಕೊರತೆ: ಅಲ್ಪಾವಧಿ ಲಾಭಕ್ಕಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತವಲ್ಲ. ಕನಿಷ್ಠ ಏಳು ವರ್ಷಗಳವರೆಗೆ ಹೂಡಿಕೆ ಮಾಡಿ. ಅದಕ್ಕಿಂತ ಹೆಚ್ಚು ಕಾಲ ಹೂಡಿಕೆ ಮುಂದುವರಿಸುವುದು ಉತ್ತಮ. ಮಾರುಕಟ್ಟೆ ಬೆಳವಣಿಗೆಯನ್ನು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಬೇಕು. ಅದರ ಹೊರತಾಗಿ, ಅಲ್ಪಾವಧಿ ಗಮನದಲ್ಲಿಟ್ಟುಕೊಂಡು ಸರಿಯಾದ ಗುರಿಯಿಲ್ಲದೇ ಹೂಡಿಕೆ ಮಾಡಿದರೆ ನಷ್ಟದ ಅಪಾಯವಿದೆ. ಏಕೆಂದರೆ ಷೇರು ಮಾರುಕಟ್ಟೆಯು ಅಲ್ಪಾವಧಿಯಲ್ಲಿಯೇ ಅನೇಕ ಏರಿಳಿತಗಳನ್ನು ಕಾಣುತ್ತಿರುತ್ತದೆ. ಇದು ಸಹಜವೂ ಕೂಡಾ. ಇಂತಹ ಸಮಯದಲ್ಲಿ ಡಿಸ್ಕೌಂಟ್​ನಲ್ಲಿ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬೇಕು. ಮ್ಯೂಚುವಲ್ ಫಂಡ್‌ಗಳು ದೀರ್ಘಾವಧಿಯವರೆಗೆ ಶಿಸ್ತುಬದ್ಧವಾಗಿ ಹೂಡಿಕೆ ಮಾಡಿದರೆ ಉತ್ತಮ ಆದಾಯವನ್ನು ಗಳಿಸುವ ಸಾಧ್ಯತೆ ಇದೆ.

ಗುರಿಗೆ ತಕ್ಕಂತೆ ಹೂಡಿಕೆ ಮಾಡ್ತಿಲ್ಲ; ಹೆಚ್ಚಿನ ಜನರು ದೊಡ್ಡ ಆರ್ಥಿಕ ಗುರಿಗಳನ್ನು ಹೊಂದಿದ್ದಾರೆ. ಆದರೆ ತಮ್ಮ ಗುರಿಗಳನ್ನು ಸಾಧಿಸಲು ಇವರೆಲ್ಲ ಸಾಕಷ್ಟು ಹೂಡಿಕೆಗಳನ್ನು ಮಾಡಲು ಸಾಧ್ಯವಾಗಿಲ್ಲ. ಅಂದುಕೊಂಡಷ್ಟು ಹಾಗೂ ಯೋಜನಾ ಬದ್ಧವಾಗಿ ಹೂಡಿಕೆ ಮಾಡಲು ಸಾಧ್ಯವಾಗದೇ ಇದ್ದರೆ ನಿಗದಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಉದಾಹರಣೆಗೆ, ನೀವು 20 ವರ್ಷಗಳಲ್ಲಿ ರೂ.1 ಕೋಟಿ ಗಳಿಸುವ ಗುರಿ ಹೊಂದಿದ್ದೀರಿ ಎಂದು ಭಾವಿಸೋಣ. ಆದರೆ, ತಿಂಗಳಿಗೆ 1000 ರೂ. ಮಾತ್ರ ಹೂಡಿಕೆ ಮಾಡುತ್ತಿದ್ದಾರೆ. ಅಥವಾ ಕೇವಲ 1 ಲಕ್ಷ ಮೊತ್ತದ ಹೂಡಿಕೆ ಮಾಡುತ್ತಿದ್ದೀರಿ ಎಂದು ಭಾವಿಸೋಣ. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಗುರಿ ಈಡೇರುವುದಿಲ್ಲ. ​

ವಾಸ್ತವವಾಗಿ, ನೀವು 20 ವರ್ಷಗಳಲ್ಲಿ ಒಂದು ಕೋಟಿ ರೂಪಾಯಿಗಳನ್ನು ಗಳಿಸಲು ಬಯಸಿದರೆ, ಅಂತಹವರು ಇಂದಿನಿಂದಲೇ ತಿಂಗಳಿಗೆ 7,550 ರೂಪಾಯಿಗಳ ದರದಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು. ಅಥವಾ ಒಮ್ಮೆಲೇ 6.1 ಲಕ್ಷ ರೂ. ಹೂಡಿಕೆ ಮಾಡಿ. ಆಗ ಮಾತ್ರ 20 ವರ್ಷಗಳ ನಂತರ ನೀವು ಒಂದು ಕೋಟಿ ರೂಪಾಯಿಗಳ ಒಟ್ಟು ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. ಇಷ್ಟು ಹಣವನ್ನು ನೀವು ಯೋಜನಾ ಬದ್ಧವಾಗಿ ಮಾಡಿದಾಗ ಮಾತ್ರ ಇದು ಸಾಧ್ಯವಾಗುತ್ತದೆ.

ಯೋಜನಾ ಬದ್ಧವಾಗಿ ಕಾಲಕಾಲಕ್ಕೆ ಎಸ್​​ಐಪಿ ಮಾಡಬೇಕು: ನಿಗದಿಯಂತೆ ತಪ್ಪದೇ ಎಸ್​​ಐಪಿಯನ್ನು ನಿಯಮಿತವಾಗಿ ಹಣ ಕಟ್ಟುತ್ತಾ ಸಾಗಬೇಕು, ಇಲ್ಲದಿದ್ದರೆ ನಿಮ್ಮ ಗುರಿಯನ್ನು ಮುಟ್ಟದೇ ಇರಬಹುದು. ಕೆಲವು ಜನರು ತಮಗೆ ಅಗತ್ಯವಿಲ್ಲದಿದ್ದರೂ ಉತ್ತಮ ಲಾಭವನ್ನು ಹೊಂದಿರುವ ಮ್ಯೂಚುವಲ್ ಫಂಡ್‌ಗಳಿಂದ ಹಣವನ್ನು ಹಿಂಪಡೆಯುತ್ತಲೇ ಇರುತ್ತಾರೆ. ಇತರರು ನಷ್ಟದ ಭಯದಿಂದ ಮ್ಯೂಚುವಲ್ ಫಂಡ್‌ಗಳಿಂದ ಹೂಡಿಕೆಗಳನ್ನು ಹಿಂತೆಗೆದುಕೊಳ್ಳುತ್ತಾರೆ. ಇದರಿಂದಾಗಿ ನಷ್ಟದ ಅಪಾಯವೇ ಹೆಚ್ಚು.

ನಷ್ಟದ ಭೀತಿ: ಅಲ್ಪಾವಧಿಯಲ್ಲಿ ಷೇರುಗಳ ಬೆಲೆಯಲ್ಲಿ ಏರಿಳಿತಗೊಳ್ಳುವುದು ತೀರಾ ಸಹಜ. ಆದರೆ ಮಾರುಕಟ್ಟೆ ಕುಸಿತಗೊಂಡಾಗ ಅನೇಕ ಅನೇಕರು ಭಯಕ್ಕೆ ಬಿದ್ದು, ಹೂಡಿಕೆ ಹಣವನ್ನು ವಾಪಸ್​ ಪಡೆದುಕೊಳ್ಳುತ್ತಾರೆ. ಇದರಿಂದ ಸ್ವಲ್ಪ ಲಾಭ ಅಥವಾ ನಷ್ಟಕ್ಕೊಳಗಾಗುತ್ತಾರೆ. ಹೀಗೆ ಮಾಡುವುದು ತುಂಬಾ ತಪ್ಪು. ಸ್ಟಾಕ್ ಮಾರುಕಟ್ಟೆಗಳು ನಷ್ಟದಲ್ಲಿದ್ದಾಗ, ಉತ್ತಮ ಷೇರುಗಳು ಅಥವಾ ಮ್ಯೂಚುವಲ್ ಫಂಡ್ ಘಟಕಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುತ್ತವೆ. ಆಗ ನಾವು ಸರಿಯಾಗಿ ಹೂಡಿಕೆ ಮಾಡಬೇಕು. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಆಗ ಮಾತ್ರ ನೀವು ದೀರ್ಘಾವಧಿಯಲ್ಲಿ ಉತ್ತಮ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

ಈಗಾಗಲೇ ಏರಿಕೆ ಆಗಿರುವ ಫಂಡ್‌ಗಳನ್ನು ಬೆನ್ನಟ್ಟಬೇಡಿ: ಅನೇಕ ಜನರು ತಾವು ಉತ್ತಮ ಕಾರ್ಯಕ್ಷಮತೆಯ ಮ್ಯೂಚುವಲ್ ಫಂಡ್‌ಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು ಎಂದು ಭಾವಿಸುತ್ತಾರೆ. ಇದಕ್ಕಾಗಿ, ಈಗಾಗಲೇ ಉತ್ತಮವಾಗಿ ಏರಿಕೆ ಕಂಡ ಅಥವಾ ಬೆಸ್ಟ್​ ಫರ್ಫಾರ್ಮಡ್​​​ ಸ್ಟಾಕ್​ಗಳು ಅಥವಾ ಮ್ಯೂಚುವಲ್ ಫಂಡ್​ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇದು ಸರಿಯಲ್ಲ. ಇಂದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಭವಿಷ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವರು ಈಗಾಗಲೇ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ ಯಾರೋ ಹೇಳಿದಂತೆ, ಅವರು ಅದರಿಂದ ಹಣವನ್ನು ಹಿಂಪಡೆದು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುತ್ತಾರೆ. ಅದು ಅವರು ಹೂಡಿಕೆ ಮಾಡಿದ ಮೇಲೆ ಇಳಿಕೆಯನ್ನೂ ಕಾಣಬಹುದು. ಹೀಗಾಗಿ ಈ ಬಗ್ಗೆ ಜಾಗೃತರಾಗಿರುವುದು ಉತ್ತಮ.

ಯಾವುದೇ ಮ್ಯೂಚುವಲ್ ಫಂಡ್‌ನ ಕಾರ್ಯಕ್ಷಮತೆಯನ್ನು ನೋಡಲು, ಕನಿಷ್ಠ 2-3 ವರ್ಷ ಕಾಯಬೇಕು. ಅಲ್ಲದೆ, ಮ್ಯೂಚುಯಲ್ ಫಂಡ್ ಪೋರ್ಟ್ಫೋಲಿಯೊ ಮತ್ತು ಫಂಡ್ ಮ್ಯಾನೇಜರ್ ಸಾಮರ್ಥ್ಯಗಳನ್ನು ಗಮನಿಸಬೇಕು. ಆಗ ಮಾತ್ರ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದರೆ ಮ್ಯೂಚುವಲ್ ಫಂಡ್ ಗಳನ್ನು ಒಂದರಿಂದ ಇನ್ನೊಂದಕ್ಕೆ ಬದಲಾಯಿಸಿದರೆ ಲಾಭ ಅಥವಾ ನಷ್ಟ ಖಚಿತ.

ಇದನ್ನು ಓದಿ: ಬ್ಯಾಂಕ್​ ಗ್ರಾಹಕರ ಗಮನಕ್ಕೆ: ಮೇ 1 ರಿಂದ ಏನೆಲ್ಲಾ ಬದಲಾವಣೆ: ಇಲ್ಲಿ ತಿಳಿಯಿರಿ! - New Bank Rules From May 1st 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.