ETV Bharat / bharat

ಊಟಿಯನ್ನೂ ಬಿಡದ ಬಿಸಿಲ ಬೇಗೆ; ಗಿರಿಧಾಮದಲ್ಲಿ ದಾಖಲಾಯ್ತು ಅಧಿಕ ತಾಪಮಾನ - Temperature spike in ooty

author img

By PTI

Published : Apr 30, 2024, 5:39 PM IST

Updated : Apr 30, 2024, 6:56 PM IST

temperature-spike-scorches-queen-of-hills-in-tn
temperature-spike-scorches-queen-of-hills-in-tn

ಬೇಸಿಗೆಯ ಬಿಸಿಯು ಈ ಬಾರಿ ಊಟಿಯಂತಹ ಪ್ರಸಿದ್ಧ ಗಿರಿಧಾಮವನ್ನೂ ಕಾಡುತ್ತಿದ್ದು, ಅಧಿಕ ತಾಪಮಾನ ದಾಖಲಾಗಿದೆ.

ಉದಕಮಂಡಲ (ತಮಿಳುನಾಡು): ದೇಶದೆಲ್ಲೆಡೆ ಸೂರ್ಯ ಕೆಂಡವಾಗಿದ್ದು, ಬಿಸಿಲಿನ ಪ್ರತಾಪಕ್ಕೆ ಜನ ಹೈರಾಣಾಗಿದ್ದಾರೆ. ಈ ತಾಪಮಾನದಿಂದ ರಕ್ಷಿಸಿಕೊಳ್ಳಲು ಪ್ರಸಿದ್ಧ ಗಿರಿಧಾಮವಾದ ಊಟಿಗೆ ಹೋಗುವ ಯೋಜನೆ ರೂಪಿಸಿದ್ರೆ ಮತ್ತೊಮ್ಮೆ ಯೋಚಿಸಿ. ಕಾರಣ ಈ ಬಾರಿ ಸೂರ್ಯನ ಶಾಖ ಉದಕಮಂಡಲವನ್ನು ಬಿಟ್ಟಿಲ್ಲ. ಬೇಸಿಗೆಯಲ್ಲೂ ತಂಪಾಗಿರುವ ತಮಿಳುನಾಡಿನ ಈ ಗಿರಿಧಾಮ ಈ ಬಾರಿ ಬಿಸಿಲಿಗೆ ತತ್ತರಿಸಿದೆ.

ಊಟಿ ಎಂದೇ ಖ್ಯಾತಿ ಪಡೆದಿರುವ ಉದಕಮಂಡಲದಲ್ಲಿ ಏಪ್ರಿಲ್​ 29ರಂದು ಅತಿ ಹೆಚ್ಚು ತಾಪಮಾನ 29 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಇದು ಇಲ್ಲಿನ ಸಾಮಾನ್ಯ ತಾಪಮಾನಕ್ಕಿಂತ 5.4 ಡಿಗ್ರಿಯಷ್ಟು ಹೆಚ್ಚಳ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ (ಆರ್​ಎಂಸಿ) ಹೆಚ್ಚುವರಿ ಪ್ರಧಾನ ನಿರ್ದೇಶಕರಾಗಿರುವ ಎಸ್​ ಬಾಲಚಂದ್ರನ್​ ತಿಳಿಸಿದ್ದಾರೆ.

1986ರಲ್ಲಿ ಊಟಿಯಲ್ಲಿ ಅತಿ ಹೆಚ್ಚು ತಾಪಮಾನ ಅಂದರೆ 28.5 ಡಿಗ್ರಿ ಸೆಲ್ಸಿಯಸ್​ ದಾಖಲಾಗಿತ್ತು. ಇದೀಗ ಈ ದಾಖಲೆ ಮುರಿದು 29 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ.

ತಮಿಳುನಾಡಿನ ಉತ್ತರ ಒಳನಾಡಿನಲ್ಲಿ ಈಗಾಗಲೇ ಶಾಖದ ಅಲೆ ಪರಿಸ್ಥಿತಿ ಕುರಿತು ಆರ್​ಎಂಸಿ ಎಚ್ಚರಿಕೆ ನೀಡಿದ್ದು, ಮೇ 3ರ ವರೆಗೆ ಬಿಸಿಲಿನ ತಾಪ ಹೆಚ್ಚಿದ್ದು, ಯೆಲ್ಲೋ ಆಲರ್ಟ್​ ಘೋಷಿಸಲಾಗಿದೆ.

ತಮಿಳುನಾಡಿನ ಈರೋಡ್​ನಲ್ಲಿ ಅತಿ ಹೆಚ್ಚು ತಾಪಮಾನ 42 ಡಿಗ್ರಿ ದಾಖಲಾಗಿದ್ದು, ಚೆನ್ನೈನಲ್ಲಿ 38.6 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಇನ್ನು ಕನ್ಯಾಕುಮಾರಿ ಮತ್ತು ತಿರುನೆಲ್ವೆಲಿಯಲ್ಲಿ ಹಗುರ ಮಳೆಯಾಗುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ ತಿಳಿಸಿದೆ.

ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಪ್ರವಾಸಿಗರು ಊಟಿಯಂತಹ ತಂಪಾದ ಪ್ರದೇಶಗಳತ್ತ ಮುಖ ಮಾಡುತ್ತಾರೆ. ಆದರೆ ಈ ಬಾರಿ ಈ ಗಿರಿಧಾಮ ಕೂಡ ಬಿಸಿಲ ತಾಪಮಾನಕ್ಕೆ ತತ್ತರಿಸಿದ್ದು, ಯಾವುದೇ ತಂಪು ಅನುಭವ ಉಂಟಾಗುತ್ತಿಲ್ಲ ಎಂದು ವರದಿ ತಿಳಿಸಿದೆ.

ಪ್ರವಾಸಿಗರಿಗೆ ಇ-ಪಾಸ್​ ಕಡ್ಡಾಯ: ಪಶ್ಚಿಮ ಘಟ್ಟಗಳಲ್ಲಿರುವ ನೀಲಗಿರಿ ಗಿರಿಶಿಖರದ ಪ್ರಮುಖ ಗಿರಿಧಾಮವಾಗಿರುವ ಊಟಿಯಲ್ಲಿ ಮೇ 10 ರಿಂದ ಹತ್ತು ದಿನಗಳ ಕಾಲ ಹೂವಿನ ಉತ್ಸವ ಜೊತೆಗೆ ಪ್ರವಾಸಿಗರ ಸೀಸನ್​ ಪ್ರಾರಂಭವಾಗಲಿದೆ. ಇಲ್ಲಿ ಪ್ರವಾಸಿಗರ ಸಂಖ್ಯೆ ಕೂಡ ಗಿರಿಧಾಮಕ್ಕೆ ಹೆಚ್ಚಲಿದೆ. ಈ ಹಿನ್ನೆಲೆ ಇಲ್ಲಿನ ಕಡಿದಾದ ಪ್ರದೇಶಗಳಲ್ಲಿ ಪ್ರವಾಸಿಗರ ವಾಹನ ದಟ್ಟಣೆ ನಿರ್ವಹಣೆ ಉದ್ದೇಶಕ್ಕಾಗಿ, ವಾಹನಗಳ ಪ್ರವೇಶದ ಮೇಲೆ ನಿಗಾ ವಹಿಸಲು ಮೇ 7 ರಿಂದ ಜೂನ್ 30ರ ವರೆಗೆ ಗಿರಿಧಾಮಗಳಿಗೆ ಪ್ರವೇಶಿಸುವ ಎಲ್ಲಾ ವಾಹನಗಳಿಗೆ ಎಲೆಕ್ಟ್ರಾನಿಕ್ ಪಾಸ್ (ಇ-ಪಾಸ್) ನೀಡುವಂತೆ ಮದ್ರಾಸ್ ಹೈಕೋರ್ಟ್ ನೀಲಗಿರಿ ಮತ್ತು ದಿಂಡಿಗಲ್ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದೆ.

ಟೂರಿಸ್ಟ್​ ಸೀಸನ್​ನಲ್ಲಿ ಈ ಗಿರಿಧಾಮಕ್ಕೆ ಸರಾಸರಿ 11,509 ಕಾರುಗಳು, 1,341 ವ್ಯಾನ್‌ಗಳು, 637 ಬಸ್‌ಗಳು ಮತ್ತು 6,524 ದ್ವಿಚಕ್ರ ವಾಹನಗಳು ಆಗಮಿಸುತ್ತವೆ. ಸೀಸನ್​ ಹೊರತಾದ ಸಮಯದಲ್ಲಿ 1,150 ಕಾರುಗಳು, 118 ವ್ಯಾನ್‌ಗಳು, 60 ಬಸ್‌ಗಳು ಮತ್ತು 674 ದ್ವಿಚಕ್ರ ವಾಹನಗಳು ಪ್ರವೇಶಿಸುತ್ತವೆ.

ಇದನ್ನೂ ಓದಿ: ಕೇರಳದಲ್ಲಿ ಹೆಚ್ಚಿದ ಬಿಸಿಲಿಗೆ ಇಬ್ಬರ ಸಾವು: ಹಲವು ಜಿಲ್ಲೆಗಳಲ್ಲಿ ಮೆ 2ರವರೆಗೆ ಸುಡುವ ತಾಪಮಾನ

Last Updated :Apr 30, 2024, 6:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.