ETV Bharat / state

ಬೇಸಿಗೆ ರಜೆ ಕಡಿತಕ್ಕೆ ಶಿಕ್ಷಕರ ಆಕ್ರೋಶ, ಎಸ್ಎಸ್ಎಲ್​ಸಿ ಪರೀಕ್ಷೆ-2 ಮುಂದೂಡಿಕೆ: ರಜೆ ಮುಗಿದ ಬಳಿಕ ವಿಶೇಷ ತರಬೇತಿ - SSLC EXAM 2 POSTPONED

author img

By ETV Bharat Karnataka Team

Published : May 17, 2024, 10:54 PM IST

2024ರ ಎಸ್ಎಸ್ಎಲ್ ಸಿ ಪರೀಕ್ಷೆ -1ರಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು 29/05/2024 ರಿಂದ 13/06/2024 ರ ವರೆಗೆ ನಡೆಸಲು ನಿರ್ಧರಿಸಿದೆ ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

Education Department
ಶಿಕ್ಷಣ ಇಲಾಖೆ (ETV Bharat)

ಬೆಂಗಳೂರು: 2024ರ ಎಸ್ಎಸ್ಎಲ್ ಸಿ ಪರೀಕ್ಷೆ -1ರಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ನಡೆಸುವ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಬೇಸಿಗೆ ರಜೆ ಬಳಿಕ ಪ್ರಾರಂಭಿಸುವಂತೆ ಹಾಗೂ ಪರೀಕ್ಷೆ-2 ವನ್ನು ಜೂನ್ 7ರ ಬದಲು 14 ರಿಂದ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ಆದೇಶಿಸಿದೆ.

ಶಿಕ್ಷಣ ಇಲಾಖೆ ಸುತ್ತೋಲೆ:2024ರ ಮಾರ್ಚ್-ಏಪ್ರಿಲ್ ರಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ -1 ರಲ್ಲಿ ಅನುತ್ತೀರ್ಣ ಹಾಗೂ C ಮತ್ತು C+ ಪಡೆದ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ 2024ರ ಎಸ್ ಎಸ್ ಎಲ್ ಸಿ ಪರೀಕ್ಷೆ-2ರಲ್ಲಿ ಉತ್ತೀರ್ಣರಾಗಲು ಆಯಾ ಶಾಲೆಯ ವಿಷಯ ಬೋಧನಾ ಶಿಕ್ಷಕರಿಂದ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ಮೇ 15 ರಿಂದ ಜೂನ್ 5ರ ವರೆಗೆ ನಡೆಸಲು ಸುತ್ತೋಲೆ ಹೊರಡಿಸಲಾಗಿತು.

ಆದರೆ ಈಗ ಸದರಿ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ಸರ್ಕಾರದ ಸೂಚನೆಗಳನ್ವಯ ಮುಂದೂಡಲಾಗಿದೆ. ಅವುಗಳನ್ನು 29/05/2024 ರಿಂದ 13/06/2024 ರ ವರೆಗೆ ನಡೆಸಲು ನಿರ್ಧರಿಸಿರುವುದಾಗಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

2024ರ ಎಸ್ ಎಸ್ ಎಲ್ ಸಿ ಪರೀಕ್ಷೆ-02ವನ್ನು 14/06/2024 ರಿಂದ ಪ್ರಾರಂಭಿಸಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದ್ದು, ಸದರಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಅವರು ಪ್ರತ್ಯೇಕ ಪ್ರಕಟಣೆಯನ್ನು ಹೊರಡಿಸಲಿದ್ದಾರೆ ಎಂದು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಬೇಸಿಗೆ ರಜೆ ಕಡಿತಕ್ಕೆ ಶಿಕ್ಷಕ ವರ್ಗ ಆಕ್ರೋಶ: ಬೇಸಿಗೆ ರಜೆಯಲ್ಲಿ ವಿಶೇಷ ತರಗತಿ ನಡೆಸುವ ಸೂಚನೆ ನೀಡುತ್ತಿದ್ದಂತೆ ಶಿಕ್ಷಕ ವರ್ಗ ಆಕ್ರೋಶ ವ್ಯಕ್ತಪಡಿಸಿತು. ಮೇ 29 ರ ವರೆಗೆ ರಜೆ ಇದೆ. ಆದರೆ ವಿಶೇಷ ತರಗತಿ ಕಾರಣಕ್ಕೆ 14 ದಿನ ಬೇಸಿಗೆ ರಜಾದಿನಗಳು ಕಡಿತಗೊಳ್ಳುವ ಹಿನ್ನೆಲೆ ಶಿಕ್ಷಕರು ವಿರೋಧ ವ್ಯಕ್ತಪಡಿಸಿದ್ದರು. ಶಿಕ್ಷಕರ ಸಂಘಟನೆಗಳು ಶಿಕ್ಷಕರನ್ನು ಬೆಂಬಲಿಸಿದ್ದವು. ಆದರೆ, ಶಿಕ್ಷಕ ಸಮುದಾಯದಿಂದ ಅಸಮಾಧಾನ ಮುಂದುವರೆದಲ್ಲಿ ಆಗಬಹುದಾದ ಸಮಸ್ಯೆ ಊಹಿಸಿದ ಸರ್ಕಾರ ತಕ್ಷಣ ಹೆಚ್ಚುವರಿ ಗಳಿಕೆ ರಜೆ ಅವಕಾಶ ನೀಡಿ ಶಿಕ್ಷಕರ ಮನವೊಲಿಸಲು ಮುಂದಾಗಿತು. ಆದರೂ ಶಿಕ್ಷಕರ ಅಸಮಾಧಾನ ತಣಿಯದ ಹಿನ್ನೆಲೆ ಶಿಕ್ಷಕರ ರಜೆಗೆ ಬ್ರೇಕ್ ಹಾಕುವ ನಿರ್ಧಾರದಿಂದ ಹಿಂದೆ ಸರಿದಿದ್ದು ರಜೆ ನಂತರವೇ ವಿಶೇಷ ತರಗತಿ ನಡೆಸುವ ಆದೇಶ ಹೊರಡಿಸಿದೆ. ಹೀಗಾಗಿ ಪರೀಕ್ಷೆ ದಿನಾಂಕವನ್ನು ಮುಂದೂಡಿದೆ.

ಇದನ್ನೂಓದಿ:ಮುಂದಿನ ವರ್ಷದಿಂದ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡದಂತೆ ಸಿಎಂ ಸೂಚನೆ - CM Siddaramaih

ETV Bharat Logo

Copyright © 2024 Ushodaya Enterprises Pvt. Ltd., All Rights Reserved.