ETV Bharat / bharat

ಕಾಸ್ಮೆಟಿಕ್​ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಒಬ್ಬನ ಸಾವು, 29 ಮಂದಿ ರಕ್ಷಣೆ

author img

By ETV Bharat Karnataka Team

Published : Feb 3, 2024, 9:43 AM IST

solan-cosmetic-factory-fire-case-update-jharmajri-himachal-pradesh
ಕಾಸ್ಮೆಟಿಕ್​ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಒಬ್ಬನ ಸಾವು, 29 ಮಂದಿ ರಕ್ಷಣೆ

ಹಿಮಾಚಲ ಪ್ರದೇಶದ ಕಾಸ್ಮೆಟಿಕ್​ ಕಾರ್ಖಾನೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಓರ್ವ ಮೃತಪಟ್ಟಿದ್ದಾನೆ. 29 ಮಂದಿಯನ್ನ ರಕ್ಷಣೆ ಮಾಡಲಾಗಿದೆ. ಉಳಿದ ಎಂಟು ಮಂದಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಸೋಲನ್: ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಸೌಂದರ್ಯವರ್ಧಕ ಕಾರ್ಖಾನೆಯೊಂದರಲ್ಲಿ ನಿನ್ನೆ ರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಬದ್ದಿ ಪ್ರದೇಶದಲ್ಲಿರುವ ಸುಗಂಧ ದ್ರವ್ಯ ತಯಾರಿಕಾ ಕೇಂದ್ರವಾದ ನಾರ್ ಅರೋಮಾ ಫ್ಯಾಕ್ಟರಿಯಲ್ಲಿ ಸಂಭವಿಸಿದ ಬೆಂಕಿಯನ್ನು ಇದುವರೆಗೂ ನಂದಿಸಲು ಸಾಧ್ಯವಾಗಿಲ್ಲ. ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ. ತಡರಾತ್ರಿಯಿಂದ SDRF, NDRF ಮತ್ತು ಅಗ್ನಿಶಾಮಕ ದಳದ ತಂಡಗಳು ಬೆಂಕಿಯನ್ನು ನಂದಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಿವೆ. ಆದರೆ ರಾಸಾಯನಿಕಗಳು ಇರುವ ಹಿನ್ನೆಲೆಯಲ್ಲಿ ಕಾರ್ಖಾನೆಯೊಳಗೆ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸುವುದು ಕಷ್ಟಕರವಾಗಿ ಪರಿಣಮಿಸಿದೆ.

ಇನ್ನೂ 8 ಮಂದಿಗಾಗಿ ಹುಡುಕಾಟ: ಈ ನಡುವೆ ಬೆಂಕಿ ಹೊತ್ತಿಕೊಂಡಿರುವ ಫ್ಯಾಕ್ಟರಿಯಲ್ಲಿ ಎಂಟು ಮಂದಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಅವರನ್ನು ರಕ್ಷಣೆ ಮಾಡಲು ಜಿಲ್ಲಾಡಳಿತ ಅವಿರತವಾಗಿ ಶ್ರಮಿಸುತ್ತಿದೆ. ಜಿಲ್ಲಾಡಳಿತ ನೀಡಿರುವ ಮಾಹಿತಿ ಅನ್ವಯ, ಈವರೆಗೆ 30 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ ಒಬ್ಬರು ಮೃತಪಟ್ಟಿದ್ದು, ಗಾಯಗೊಂಡ 29 ಮಂದಿಯನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರಿಸ್ಥಿತಿ ಅವಲೋಕಿಸಿದ ಆರೋಗ್ಯ ಸಚಿವರು: ಕಾಸ್ಮಿಟಿಕ್​ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ತಡರಾತ್ರಿ ಆರೋಗ್ಯ ಸಚಿವ ಧನಿರಾಮ್ ಶಾಂಡಿಲ್ ಮತ್ತು ಸಿಪಿಎಸ್ ರಾಮಕುಮಾರ್ ಚೌಧರಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಿದರು. ಈ ಬಗ್ಗೆ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರಿಗೂ ಮಾಹಿತಿ ನೀಡಲಾಯಿತು. ಬಳಿಕ ಆಸ್ಪತ್ರೆಗೆ ತೆರಳಿದ ಆರೋಗ್ಯ ಸಚಿವರು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

ಕಾರ್ಖಾನೆಯಲ್ಲಿ ಆರದ ಬೆಂಕಿ: ಈ ಬಗ್ಗೆ ದೂರವಾಣಿಯಲ್ಲಿ ಮಾತನಾಡಿದ ಎಸ್‌ಡಿಎಂ ನಲಗಾರ ದಿವ್ಯಾಂಶು ಸಿಂಗಲ್, ಘಟನಾ ಸ್ಥಳದಲ್ಲಿ ಬೆಂಕಿ ನಂದಿಸಲು ತಡರಾತ್ರಿಯಿಂದಲೂ ನಿರಂತರ ಪ್ರಯತ್ನ ನಡೆಸಲಾಗಿದ್ದರೂ ರಾಸಾಯನಿಕಗಳ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಬೆಂಕಿಯನ್ನು ತಹಬದಿಗೆ ತರಲು ಸಾಧ್ಯವಾಗಿಲ್ಲ. ತಡರಾತ್ರಿಯಿಂದ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ತಂಡಗಳು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿವೆ. ಸದ್ಯ ಬೆಂಕಿ ನಂದಿಸುವವರೆಗೂ ಒಳಗೆ ಹೋಗುವುದು ಕಷ್ಟವಾಗಿದ್ದು, ಪರಿಹಾರ ಕಾರ್ಯ ಮುಂದುವರಿದಿದೆ. ಎಂಟು ಮಂದಿ ನಾಪತ್ತೆಯಾಗಿರುವ ಬಗ್ಗೆ ಆಡಳಿತಕ್ಕೆ ಮಾಹಿತಿ ಸಿಕ್ಕಿದೆ. ಅದೇ ಸಮಯದಲ್ಲಿ, 30 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಖಾನೆಯಲ್ಲಿನ ಬೆಂಕಿಯನ್ನು ನಂದಿಸಲು ಇದುವರೆಗೆ 60 ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿವೆ. ಇನ್ನು ಘಟನೆ ಬಗ್ಗೆ ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಲಾಗುತ್ತಿದೆ. ಎಡಿಸಿ ಸೋಲನ್ ಅಜಯ್ ಯಾದವ್ ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ಅದೇ ಸಮಯದಲ್ಲಿ, ಕಂಪನಿಯ ಆಡಳಿತದ ವಿರುದ್ಧ ಬರೋಟಿವಾಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರ್ಖಾನೆಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗಳಿರಲಿಲ್ಲ ಎಂದು ಸೋಲನ್ ಪೊಲೀಸರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:ಬಿಜೆಪಿ ಶಾಸಕ - ಶಿವಸೇನಾ ಶಿಂಧೆ ಬಣದ ನಡುವೆ ಘರ್ಷಣೆ: ಪೊಲೀಸ್ ಠಾಣೆಯಲ್ಲೇ ಗುಂಡಿನ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.