ETV Bharat / bharat

ನಕ್ಸಲ್​ವಾದದ ಬೆನ್ನೆಲುಬು ಮುರಿದ ಭದ್ರತಾ ಪಡೆಗಳು, ನಾಲ್ಕೇ ತಿಂಗಳಲ್ಲಿ 91 ಮಂದಿ ಬೇಟೆ; 205 ಮಂದಿ ಬಂಧನ - action on naxalites

author img

By ETV Bharat Karnataka Team

Published : May 5, 2024, 8:25 PM IST

ಛತ್ತೀಸ್​ಗಢದಲ್ಲಿ ನಕ್ಸಲ್​ ಕಾರ್ಯಾಚರಣೆ ಈ ವರ್ಷ ಭಾರೀ ತೊಡಕುಂಟಾಗಿದೆ. ಕಳೆದ 4 ತಿಂಗಳಲ್ಲಿ 91 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ನೂರಾರು ಜನರನ್ನು ಬಂಧಿಸಲಾಗಿದೆ.

ನಕ್ಸಲೀಯರ ದಮನ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿ
ನಕ್ಸಲೀಯರ ದಮನ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿ (Source: file photo (Etv bharat))

ಬಸ್ತಾರ್ (ಛತ್ತೀಸ್​ಗಢ): ನಕ್ಸಲ್​ಪೀಡಿತ ರಾಜ್ಯಗಳಲ್ಲಿ ಒಂದಾದ ಛತ್ತೀಸ್​ಗಢದಲ್ಲಿ ಭದ್ರತಾ ಪಡೆಗಳು ಭಾರೀ ಯಶಸ್ಸು ಕಂಡಿವೆ. ಕೆಲ ವರ್ಷಗಳಿಂದ ನಕ್ಸಲ್​ ದಮನ ಕಾರ್ಯಾಚರಣೆಯಲ್ಲಿ ನೂರಾರು ಮಾವೋವಾದಿಗಳನ್ನು ಬೇಟೆಯಾಡಲಾಗಿದೆ. ಅದರಲ್ಲೂ ಈ ವರ್ಷದ 4 ತಿಂಗಳಲ್ಲಿ ಕ್ಷಿಪ್ರಗತಿಯ ಕಾರ್ಯಾಚರಣೆಗೆ ಭರ್ಜರಿ ಯಶಸ್ಸು ಸಿಕ್ಕಿದೆ.

ನಕ್ಸಲರ ಹಾವಳಿಯಿಂದ ಕುಖ್ಯಾತಿಯಾಗಿರುವ ಛತ್ತೀಸ್​ಗಢದ ಬಸ್ತಾರ್​, ದಾಂತೇವಾಡ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಅರಣ್ಯ ಪ್ರದೇಶದೊಳಗೆ ನುಗ್ಗಿ ನಕ್ಸಲೀಯರನ್ನು ಗುಂಡಿಕ್ಕಿ ಹತ್ಯೆ ಮಾಡುತ್ತಿವೆ. ಈವರೆಗೂ ನಡೆದ ಕಾರ್ಯಾಚರಣೆಯಲ್ಲಿ 500 ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಅದರಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 91 ಜನರು ಹತ್ಯೆಯಾಗಿದ್ದರೆ, 205 ಮಂದಿಯನ್ನು ಬಂಧಿಸಲಾಗಿದೆ. 231 ಜನರು ಶರಣಾಗತರಾಗಿ ಬದುಕಿನ ಹಾದಿಯನ್ನು ಬದಲಿಸಿಕೊಂಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲ್​ವಾದಕ್ಕೆ ಮೂಗುದಾರ: ನಕ್ಸಲ್​​ವಾದವನ್ನು ಹತ್ತಿಕ್ಕಲು ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಜೊತೆಗೆ ಶರಣಾಗತರಾಗುವ ಮಾವೋವಾದಿಗಳಿಗೆ ಪುನಶ್ಚೇತನ ಶಿಬಿರಗಳನ್ನು ರೂಪಿಸಿದೆ. ಬಸ್ತಾರ್​ನಲ್ಲಿ 80ಕ್ಕೂ ಅಧಿಕ ಭದ್ರತಾ ಪಡೆಗಳ ಶಿಬಿರಗಳನ್ನು ರೂಪಿಸಿ, ಕಾವಲು ಕಾಯುತ್ತಿವೆ. ಇದರಿಂದಾಗಿ ನಕ್ಸಲ್​ ಚಟುವಟಿಕೆಗಳಿಗೆ ಬ್ರೇಕ್​ ಬಿದ್ದಂತಾಗಿದೆ.

ವಿಧ್ವಂಸಕ ಕೃತ್ಯಗಳನ್ನು ಸೃಷ್ಟಿಸಿ ತಲೆಗೆ ಬಹುಮಾನ ಘೋಷಿತವಾಗಿದ್ದ ಹಾರ್ಡ್​ಕೋರ್​ ನಕ್ಸಲೀಯರು ಸೇರಿದಂತೆ ಹಲವರು ಹತ್ಯೆಯಾಗಿದ್ದಾರೆ. 1.80 ಕೋಟಿಗೂ ಅಧಿಕ ಹಣವನ್ನು ವಶಕ್ಕೆ ಪಡೆಯಲಾಗಿದೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ದಾಂತೇವಾಡದಲ್ಲಿ 35 ಮಂದಿ ಶರಣು: ಭಾನುವಾರ (ಮೇ 5) ನಡೆದ ವಿದ್ಯಮಾನದಲ್ಲಿ ದಾಂತೇವಾಡ ಜಿಲ್ಲೆಯಲ್ಲಿ 35 ಮಂದಿ ನಕ್ಸಲೀಯರು ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಇದರಲ್ಲಿ 16 ವರ್ಷದ ಬಾಲಕಿ, 18 ವರ್ಷದ ಬಾಲಕ ಕೂಡ ಇದ್ದಾರೆ. ಇವರು ರಸ್ತೆ ಅಗೆಯುವುದು, ರಸ್ತೆಗಳಿಗೆ ಮರ ಅಡ್ಡ ಹಾಕುವುದು, ನಕ್ಸಲೀಯರು ಕರೆದ ಬಂದ್‌ಗಳ ಸಮಯದಲ್ಲಿ ಪೋಸ್ಟರ್‌ ಮತ್ತು ಬ್ಯಾನರ್‌ ಹಚ್ಚುವ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಪೂಂಚ್‌ನಲ್ಲಿ ವಾಯುಪಡೆ ವಾಹನದ ಮೇಲೆ ಉಗ್ರರ ದಾಳಿ: ಓರ್ವ ಯೋಧ ಹುತಾತ್ಮ, ನಾಲ್ವರಿಗೆ ಗಾಯ - Poonch Terror Attack

ETV Bharat Logo

Copyright © 2024 Ushodaya Enterprises Pvt. Ltd., All Rights Reserved.