ETV Bharat / bharat

ಗರ್ಭಕಂಠದ ಕ್ಯಾನ್ಸರ್ ಜಾಗೃತಿಗೆ ಪೂನಂ ಪಾಂಡೆ ರಾಯಭಾರಿಯಲ್ಲ: ಆರೋಗ್ಯ ಸಚಿವಾಲಯ

author img

By ETV Bharat Karnataka Team

Published : Feb 7, 2024, 6:03 PM IST

ನಟಿ ಪೂನಂ ಪಾಂಡೆ
ನಟಿ ಪೂನಂ ಪಾಂಡೆ

ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್​ ಜಾಗೃತಿಯ ರಾಯಭಾರಿ ಎಂಬ ಸುದ್ದಿ ಹಾರಿದಾಡುತ್ತಿದ್ದು, ಇದನ್ನು ಕೇಂದ್ರ ಆರೋಗ್ಯ ಸಚಿವಾಲಯ ಅಲ್ಲಗಳೆದಿದೆ.

ನವದೆಹಲಿ: ಗರ್ಭಕಂಠ ಕ್ಯಾನ್ಸರ್​ ಕುರಿತು ಜಾಗೃತಿ ಮೂಡಿಸಲು ದೇಶಾದ್ಯಂತ ನಡೆಸುತ್ತಿರುವ ಅಭಿಯಾನದ ರಾಯಭಾರಿಯನ್ನಾಗಿ ವಿವಾದಿತ ನಟಿ ಪೂನಂ ಪಾಂಡೆ ಅವರನ್ನು ಬಳಸಿಕೊಳ್ಳುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

ಮಾರಣಾಂತಿಕ ಕಾಯಿಲೆಯಾದ ಗರ್ಭಕಂಠ ಕ್ಯಾನ್ಸರ್​ನಿಂದ ತಾನು ಸಾವನ್ನಪ್ಪಿದ್ದಾಗಿ ಭಾರೀ ಸುದ್ದಿಯಾಗಿದ್ದ ಪೂನಂ ಪಾಂಡೆಯನ್ನು ಸರ್ಕಾರ ಜಾಗೃತಿ ರಾಯಭಾರಿಯನ್ನಾಗಿ ಮಾಡುವ ಕುರಿತು ಮಾತುಕತೆಗಳು ನಡೆಯುತ್ತಿವೆ ಎಂಬ ಸುದ್ದಿಯ ಬೆನ್ನಲ್ಲೇ ಸಚಿವಾಲಯ ಸ್ಪಷ್ಟನೆ ನೀಡಿದೆ.

ದೇಶಾದ್ಯಂತ ಸರ್ಕಾರ ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಜಾಗೃತಿ ಅಭಿಯಾನ ನಡೆಸುತ್ತಿದೆ. ಆದರೆ, ಪೂನಂ ಪಾಂಡೆ ಅವರನ್ನು ರಾಯಭಾರಿಯನ್ನಾಗಿ ಪರಿಗಣಿಸುವ ಯಾವುದೇ ಪ್ರಸ್ತಾವ ನಮ್ಮ ಮುಂದಿಲ್ಲ. ಕಾಯಿಲೆಯ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಉಂಟು ಮಾಡಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕ್ಯಾನ್ಸರ್​ ಬಳಸಿ ಸುದ್ದಿಯಾಗಿದ್ದ ಪೂನಂ: ವಿವಾದಗಳಿಂದಲೇ ಹೆಚ್ಚು ಚಾಲ್ತಿಯಲ್ಲಿರುವ ಪೂನಂ ಪಾಂಡೆ, ಈಚೆಗೆ ಗರ್ಭಕಂಠ ಕ್ಯಾನ್ಸರ್​ನಿಂದ ಸಾವನ್ನಪ್ಪಿದ್ದಾಗಿ ಸುದ್ದಿಯಾಗಿತ್ತು. ಅವರ ಕುಟುಂಬಸ್ಥರು, ಪೂನಂ ಪಾಂಡೆ ಸರ್ವಿಕಲ್​ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾರೆ ಎಂದು ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಕಾಯಿಲೆ ಮತ್ತು ನಟಿಯ ಸಾವಿನ ಬಗ್ಗೆ ತೀವ್ರ ಆಘಾತ ಮೂಡಿಸಿತ್ತು. ಇದರ ಬೆನ್ನಲ್ಲೇ, ನಟಿ ತಾನೇ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ತಾನು ಸತ್ತಿಲ್ಲ, ಬದುಕಿದ್ದೇನೆ. ಗರ್ಭಕಂಠ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸಲು ತಾವು ಈ ರೀತಿಯ ನಾಟಕವಾಡಿದ್ದಾಗಿ ಹೇಳಿದ್ದರು.

ನನಗೆ ಗರ್ಭಕಂಠದ ಕ್ಯಾನ್ಸರ್ ಇಲ್ಲ. ಆದರೆ, ಈ ರೋಗವನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಮಹಿಳೆಯರಲ್ಲಿ ಮಾಹಿತಿಯ ಕೊರತೆ ಇದೆ. ಹೀಗಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತರ ಕ್ಯಾನ್ಸರ್‌ಗಳಿಗಿಂತ ಇದು ಭಿನ್ನವಾಗಿದೆ. ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಬಹುದು. ಹೆಚ್​ಪಿವಿ ಲಸಿಕೆ ಮತ್ತು ಆರಂಭದಲ್ಲೇ ಪತ್ತೆ ಮಾಡುವುದರಿಂದ ಜೀವವನ್ನು ಉಳಿಸಿಕೊಳ್ಳಬಹುದು. ಈ ಬಗ್ಗೆ ಅರಿವು ಮೂಡಿಸಲು ನಮ್ಮ ತಂಡ ನಾನು ಸಾವನ್ನಪ್ಪಿದ್ದಾಗಿ ಘೋಷಿಸಿತ್ತು ಎಂದಿದ್ದರು.

ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಮಾರಣಾಂತಿಕ ಕಾಯಿಲೆಯನ್ನು ತನ್ನ ಪ್ರಚಾರಕ್ಕಾಗಿ ಬಳಸಿಕೊಂಡ ನಟಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್​ನಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 9-14 ವರ್ಷ ವಯಸ್ಸಿನ ಹುಡುಗಿಯರಿಗೆ ಲಸಿಕೆ ನೀಡಲಾಗುತ್ತದೆ ಎಂದು ಘೋಷಿಸಿದೆ.

ಇದನ್ನೂ ಓದಿ: 'I am alive': ನಾನು ಜೀವಂತವಾಗಿದ್ದೇನೆಂದು ಹೇಳಿಕೊಂಡ ನಟಿ ಪೂನಂ ಪಾಂಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.