ಖಾನಾಪುರ ಸಕ್ಕರೆ ಕಾರ್ಖಾನೆ ಭ್ರಷ್ಟಾಚಾರ ಆರೋಪ: ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ

By ETV Bharat Karnataka Team

Published : Dec 12, 2023, 6:11 PM IST

thumbnail

ಬೆಳಗಾವಿ: ಖಾನಾಪುರದ ಸಕ್ಕರೆ ಕಾರ್ಖಾನೆಯಲ್ಲಿ 600 ಕೋಟಿ ರೂ. ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ, ರಾಜ್ಯ ಸರ್ಕಾರದ ಆದೇಶದ ಮೇರೆಗೆ ಇಂದು ಬೆಳಗ್ಗೆ ನಿವೃತ್ತ ನ್ಯಾಯಾಧೀಶ ಎಸ್ ಬಿ ವಸ್ತ್ರಮಠ ನೇತೃತ್ವದ ತಂಡ ಕಾರ್ಖಾನೆಗೆ ಆಗಮಿಸಿ ಸತತ 3 ಗಂಟೆವರೆಗೆ ಆಡಳಿತ ಮಂಡಳಿಯ ವಿಚಾರಣೆ ನಡೆಸಿತು.

ವಿಚಾರಣೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಿವೃತ್ತ ನ್ಯಾಯಾಧೀಶ ಎಸ್ ಬಿ ವಸ್ತ್ರಮಠ, "ಕರ್ನಾಟಕ ಸರ್ಕಾರದ ಆದೇಶದಂತೆ ಭಾಗ್ಯಲಕ್ಷ್ಮಿ  ಸಕ್ಕರೆ ಕಾರ್ಖಾನೆಗೆ ವಿಚಾರಣೆಗೆ ಆಗಮಿಸಿದ್ದೇನೆ. ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ದೂರಿನ ಮೇರೆಗೆ ತನಿಖೆ ಆರಂಭವಾಗಿದೆ. ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ತನಿಖೆಗೆ ಸಹಕರಿಸುತ್ತಿದೆ. ಈಗಾಗಲೇ ತನಿಖೆಗೆ ಬೇಕಾದ ದಾಖಲಾತಿಗಳನ್ನು ಒದಗಿಸಿದ್ದಾರೆ. ತನಿಖೆ ಮಾಡಿ ಮೂವತ್ತು ದಿನಗಳ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಡಿ.19 ರಂದು ಮತ್ತೆ ಸಕ್ಕರೆ ಕಾರ್ಖಾನೆಗೆ ಆಗಮಿಸಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು" ಎಂದು ತಿಳಿಸಿದರು.

ಲೈಲಾ ಶುಗರ್ ನಡೆಸುತ್ತಿರುವ ಖಾನಾಪುರ ಬಿಜೆಪಿ ಶಾಸಕ ವಿಠ್ಠಲ್ ಹಲಗೇಕರ್ ಮತ್ತು ಅವರ ಕಂಪನಿಯ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗಾಗಿ ನಿವೃತ್ತ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಅವರನ್ನು ವಿಶೇಷ ತನಿಖಾ ಅಧಿಕಾರಿಯನ್ನಾಗಿ ನೇಮಿಸಿದೆ‌. ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ನೀಡಿದ ದೂರಿನ ಮೇರೆಗೆ ಸರ್ಕಾರ  ತನಿಖೆಗೆ ಆದೇಶಿಸಿದೆ.

ಅದೇ ರೀತಿ ಬಿಜೆಪಿ ಶಾಸಕ ವಿಠ್ಠಲ್ ಹಲಗೇಕರ್ ಅವರ ಒಡೆತನದಲ್ಲಿರುವ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ನಿರಂತರವಾಗಿ ರೈತರ ಹಣ ಮತ್ತು ನಂಬಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಇನ್ಶೂರೆನ್ಸ್ ಪಾಲಿಸಿಗಳ ಹೆಸರಿನಲ್ಲಿ ವಂಚಿಸುತ್ತಿದ್ದ ದಂಪತಿ ಬಂಧನ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.