ETV Bharat / state

ನಾನು ತಯಾರಿದ್ದೇನೆ, ದಮ್ಮಿದ್ದರೆ ಟಿಪ್ಪುವಿನ ರೀತಿ ಸಾಯಿಸಿ: ಸಿದ್ದರಾಮಯ್ಯ ಸವಾಲು

author img

By

Published : Feb 23, 2023, 7:45 AM IST

Updated : Feb 23, 2023, 7:55 AM IST

vijayapur
'ನಾನು ತಯಾರಿದ್ದೇನೆ, ದಮ್ಮಿದ್ದರೆ ಟಿಪ್ಪುವಿನ ರೀತಿ ಸಾಯಿಸಿ': ಸಿದ್ದರಾಮಯ್ಯ ಸವಾಲು

ಸಚಿವ ಅಶ್ವತ್ಥನಾರಾಯಣ್​ ವಿವಾದಿತ ಹೇಳಿಕೆ - ತಾಕತ್ತಿದ್ದರೆ ನನ್ನನ್ನು ಕೊಲೆ ಮಾಡಿ - ಪ್ರಜಾಧ್ವನಿ ಯಾತ್ರೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು

ನಾನು ತಯಾರಿದ್ದೇನೆ, ದಮ್ಮಿದ್ದರೆ ಟಿಪ್ಪುವಿನ ರೀತಿ ಸಾಯಿಸಿ: ಸಿದ್ದರಾಮಯ್ಯ ಸವಾಲು

ವಿಜಯಪುರ:ಟಿಪ್ಪು ಸುಲ್ತಾನ್​ ಗೆ ಹೊಡೆದ ಹಾಗೆ ಇವರನ್ನು ಮಂಡ್ಯದ ಜನ ಹೊಡೆಯಬೇಕು ಎಂದು ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್​ ಅವರು ಸಿದ್ದರಾಮಯ್ಯರ ಕುರಿತು ವಿವಾದಾತ್ಮಕ ಹೇಳಿಕೆ ನೀದ್ದರು. ಇದಕ್ಕೆ ಟಾಂಗ್​ ನೀಡಿರುವ ಸಿದ್ದರಾಮಯ್ಯ ಯಾವುದಾದರೂ ಧರ್ಮದಲ್ಲಿ ಹೊಡಿ, ಬಡಿ, ಕೊಲೆ ಮಾಡಿ ಎಂದೆಲ್ಲಾ ಹೇಳುತ್ತಾರಾ? ರಾಜ್ಯದ ಮಂತ್ರಿಯಾಗಿ ಜನರ ಮಾನ, ಪ್ರಾಣ ಕಾಪಾಡಬೇಕಾದ ಅವರೇ ಈ ರೀತಿ ಹೇಳಿದ್ದಾರೆ. ಟಿಪ್ಪು ಸುಲ್ತಾನ್ ಕೊಂದ ರೀತಿಯಲ್ಲೇ ಸಿದ್ದರಾಮಯ್ಯರನ್ನು ಮುಗಿಸಿ ಅಂತಾರಲ್ಲಾ, ಇವರು ಮಂತ್ರಿ ಆಗಲು ಲಾಯಕ್ಕಿದ್ದಾರಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ವಿಜಯಪುರದಲ್ಲಿ ಸಾಗುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, "ಬಿಜೆಪಿಯವರು ಜನರಿಗೆ ಪ್ರಚೋದನೆ ನೀಡುತ್ತಿದ್ದಾರೆ. ನಾನು ನಿಮ್ಮ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ. ನಾನು ಕೊಲೆಯಾಗಲು ತಯಾರಾಗಿದ್ದೇನೆ. ತಾಕತ್ತಿದ್ದರೆ, ನಿಮಗೆ ನಿಜಕ್ಕೂ ದಮ್ಮಿದ್ದರೆ ನನ್ನನ್ನು ಸಾಯಿಸಿ" ಎಂದು ಸವಾಲು ಹಾಕಿದರು.

ಎರಡು ಗ್ಯಾರೆಂಟಿಗಳನ್ನು ಕೊಟ್ಟಿದ್ದೇವೆ..: ಕಾಂಗ್ರೆಸ್​ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ರೈತರ ಬೆಳೆಗೆ ಬೆಲೆ‌ ಸಿಗದೇ ಹೋದಲ್ಲಿ ನಿಮ್ಮ ಪರವಾಗಿ, ಬೆಂಬಲವಾಗಿ ನಾವು ನಿಲ್ಲುತ್ತೇವೆ. ರೈತರನ್ನು ಉಳಿಸುತ್ತೇವೆ. ಅಲ್ಲದೇ ರಾಜ್ಯದ ಜನತೆಗೆ 10 ಕೆಜಿ‌ ಅಕ್ಕಿಯನ್ನು ಫ್ರೀಯಾಗಿ ಕೊಡುತ್ತೇವೆ.‌ ನೀರಾವರಿ ಯೋಜನೆಗಳಿಗೆ ಐದು ವರ್ಷದಲ್ಲಿ 2 ಲಕ್ಷ ಕೋಟಿ ಖರ್ಚು ಮಾಡಿ ರೈತರ ಜಮೀನಿಗೆ ನೀರು ಹರಿಸುತ್ತೇವೆ. 200 ಯೂನಿಟ್ ವಿದ್ಯುತ್​ ಉವಿತವಾಗಿ ಕೊಡಲಿದ್ದು, ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡುತ್ತೇವೆ. ಗೃಹಲಕ್ಷ್ಮಿ, ಗೃಹಜ್ಯೋತಿ ಎಂಬ ಎರಡು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ನಾನು ಮತ್ತು ಡಿಕೆಶಿ‌ ಅದಕ್ಕೆ ಸಹಿ‌ ಮಾಡಿದ್ದೇವೆ. ಈ ಗ್ಯಾರಂಟಿ ಕಾರ್ಡ್​ಗಳನ್ನು ಮನೆಮನೆಗೆ ಹಂಚುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ನಷ್ಟದಲ್ಲಿ ಸಾರಿಗೆ ನಿಗಮಗಳು, ಬಿಡಿಎಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ ನಷ್ಟ: ಸಿಎಜಿ ವರದಿಯಲ್ಲಿ ಬಹಿರಂಗ

ವಿಜಯಪುರದಲ್ಲಿ ಪ್ರಜಾಧ್ವನಿ ಯಾತ್ರೆ: ರಾಜ್ಯ ಕಾಂಗ್ರೆಸ್ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯು ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ಮತ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಿತು. ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಮಧ್ಯಾಹ್ನ 2 ಗಂಟೆಗೆ ಬರಲಿದ್ದ ಯಾತ್ರೆ ಸಂಜೆ 5.30ಕ್ಕೆ ಆಗಮಿಸಿತು. ಮಧ್ಯಾಹ್ನದಿಂದ ಸಿದ್ದರಾಮಯ್ಯ ಅವರ ಬರುವಿಕೆಗಾಗಿ ಕಾಯುತ್ತಿದ್ದ ಜನ ಸಂಜೆವರೆಗೂ ಅದೇ ಉತ್ಸಾಹದಲ್ಲಿದ್ದರು. ಬಳಿಕ ಸಿದ್ದರಾಮಯ್ಯರವರು ಪ್ರಜಾಧ್ವನಿ‌ ಯಾತ್ರೆಯನ್ನು ಉದ್ಘಾಟಿಸಿದರು.

ಬಸವಣ್ಣ ಪ್ರಾಧಿಕಾರ ರಚನೆ: ಮುದ್ದೇಬಿಹಾಳದಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಪ್ರಜಾಧ್ವನಿ ಯಾತ್ರೆಯು ಬಸವಣ್ಣನ ಹುಟ್ಟಿದ ನಾಡು ಬಾಗೇವಾಡಿಗೆ ತೆರಳಿತು. ಅಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ನಾವು ಆಡಳಿತದಲ್ಲಿರುವಾಗ 165 ಭರವಸೆಗಳನ್ನು ಕೊಟ್ಟಿದ್ದೆವು. ಅದರಲ್ಲಿ 5 ವರ್ಷಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಅಲ್ಲದೆ 30 ಹೆಚ್ಚುವರಿ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ ಎಂದರು.

ಸರ್ಕಾರಿ ಕಚೇರಿಗಳಲ್ಲಿ ಮಹಾತ್ಮಾ ಗಾಂಧಿ, ಅಂಬೇಡ್ಕರ್ ಫೋಟೋ ಇರುತ್ತವೆ. ಅದರ ಜೊತೆಗೆ ಬಸವಣ್ಣನವರ ಫೋಟೋ ಇರಬೇಕು ಎಂದು ಆದೇಶ ಮಾಡಿದ್ದೆ. ಅದಕ್ಕಾಗಿ ಒಂದು ಸಮಿತಿಯನ್ನು ರಚಿಸಿದ್ದೆವು. ಆ ಸಮಿತಿಯು ಅನುಭವ ಮಂಟಪವನ್ನು ಪುನರ್ ನಿರ್ಮಾಣ ಮಾಡಲು 650 ಕೋಟಿ ಖರ್ಚು ಮಾಡಿ ನಿರ್ಮಿಸಬೇಕು ಎಂದು ವರದಿ ಕೊಟ್ಟಿತ್ತು. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಪೂರ್ಣಗೊಳ್ಳದ ಅನುಭವ ಮಂಟಪವನ್ನು ಪೂರ್ಣಗೊಳಿಸಿ ನಾನೇ ಅದನ್ನು ಉದ್ಘಾಟನೆ ಮಾಡುತ್ತೇನೆ ಎಂದು ಮಾಜಿ ಸಿಎಂ ಭರವಸೆ ನೀಡಿದರು.

ನಾವು ಅಧಿಕಾರಕ್ಕೆ ಬಂದ ಮೇಲೆ ಮಾಡುವ ಮೊದಲ ಕೆಲಸವೇ ಬಸವನ‌ ಬಾಗೇವಾಡಿಯ ಬಸವಣ್ಣನ ಅಭಿವೃದ್ಧಿ ಪ್ರಾಧಿಕಾರ. ಬಸವಣ್ಣನವರ ವಿಚಾರಧಾರೆಯಿಂದ ನಾನು ಬಹಳಷ್ಟು ಆಕರ್ಷಿತನಾಗಿದ್ದೇನೆ. ಜೊತೆಗೆ ಅವರ ಅನುಯಾಯಿ‌ ನಾನು. ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ಹೇಳಿದಂತೆ ಮಾಡುವುದು ನಮ್ಮ ಕರ್ತವ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ: ಆರು ವಿಶ್ವವಿದ್ಯಾಲಯಗಳ ವಿಧೇಯಕ ಪರಿಷತ್​ನಲ್ಲಿ ಮಂಡನೆ, ಪ್ರತಿಪಕ್ಷ ಸಭಾತ್ಯಾಗ

ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಘೋಷಿಸಿದ ಸಿದ್ದರಾಮಯ್ಯ: ಇದಕ್ಕೂ ಮುನ್ನ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಪ್ರಜಾಧ್ವನಿ ಯಾತ್ರೆ ಸಮಾವೇಶ ನಡೆಯಿತು. ಇಲ್ಲಿನ ಬಹಿರಂಗ ಸಮಾವೇಶದಲ್ಲಿಯೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿರೂಢ ರಾಜ್ಯ ಸರ್ಕಾರ ಮತ್ತು ಸಚಿವರವನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ನನ್ನನ್ನು ಮುಗಿಸುವ ಮಾತುಗಳನ್ನು ಆಡುವ ಇವರು ಸಚಿವರಾಗಲು ನಾಲಾಯಕ್ ಎಂದು ಕಿಡಿಕಾರಿದರು. ನಾನು ಹೋರಾಟಕ್ಕೆ ಸಿದ್ಧ. ನನ್ನ ಪ್ರಾಣ ಹೋದರೂ ಸರಿಯೇ, ಜನರಿಗೆ ನ್ಯಾಯ ಕೊಡಿಸುವುದು ನನ್ನ ಮೊದಲ ಆದ್ಯತೆ. ಜನರ ಆಶೀರ್ವಾದ ಇರುವ ತನಕ ನನ್ನನ್ನು ಯಾರೂ ಏನು ಮಾಡಲಾಗುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಮಾತು ಕೊಟ್ಟು ತಪ್ಪುವ ಪಕ್ಷ ಅಲ್ಲಾ. ನಾವು ಅಧಿಕಾರಕ್ಕೆ ಬಂದರೆ ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಒಂದು ಕ್ಷಣವು ಅಧಿಕಾರದಲ್ಲಿ ಇರುವುದಿಲ್ಲ ಎಂದು ತಿಳಿಸಿದರು. ಇದೇ ವೇಳೆ ತಮ್ಮ ಅವಧಿಯಲ್ಲಿನ ಸಾಧನೆಗಳನ್ನು ಹೇಳಿದ ಅವರು, ವಿಜಯಾನಂದ ಕಾಶಪ್ಪನವರ್ ಈ ಹಿಂದೆ ಶಾಸಕರಾಗಿದ್ದಾಗ, ಮಂತ್ರಿಗಿರಿ ಮಾಡುವಂತೆ ಕೇಳಲಿಲ್ಲ. ಬರೀ ನನ್ನ ಕ್ಷೇತ್ರಕ್ಕೆ ಕೆಲಸ ಮಾಡಿಕೊಡಿ ಅಂದರು. ಅವರ ಎಲ್ಲ ಕೆಲಸ‌ಮಾಡಿ ಕೊಟ್ಟಿದ್ದೇನೆ. ಈ ಹುನಗುಂದ ಕ್ಷೇತ್ರಕ್ಕೆ 4500 ಕೋಟಿ ಅನುದಾನ ಕೊಟ್ಟಿದ್ದೆ. ಕೂಡಲಸಂಗಮವನ್ನು ದೆಹಲಿ ಮಾದರಿಯ ಅಕ್ಷರಧಾಮ ಮಾಡಲು ಬಜೆಟ್​ನಲ್ಲಿ ಘೋಷಣೆ ಮಾಡಿದ್ದೆ. ಅದಕ್ಕೆ ಅನುದಾನ ಕೂಡ ಬಿಡುಗಡೆ ಮಾಡಿದ್ದೆ. ಈಗ ಕೆಲಸ ನಡೆಯುತ್ತಿದೆಯಾ ಎಂದು ಕೇಳಿದ ಅವರು, ಬಿಜೆಪಿಯರಿಗೆ ಅದೇ ಬಸವಣ್ಣನವರ ಹೆಸರು ಬೇಕು. ಆದರೆ, ಬಸವಣ್ಣನವರ ಕೆಲಸ ಬೇಡ. ಇಂತಹ ಡೋಂಗಿಗಳಿಗೆ ವೋಟು ಹಾಕುತ್ತೀರಾ? ಎಂದು ಕಿಡಿಕಾರಿದರು. ತಮ್ಮ ಭಾಷಣದುದ್ದಕ್ಕೂ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ರಾಜ್ಯ ಮತ್ತು ಕೇಂದ್ರದ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.

ಇದೇ ವೇಳೆ ಹುನಗುಂದ ಮತ ಕ್ಷೇತ್ರಕ್ಕೆ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದ ಸಿದ್ದರಾಮಯ್ಯನವರು, ಪಕ್ಷೇತರ ಅಭ್ಯರ್ಥಿ ಎಸ್.ಆರ್. ನವಲಿಹಿರೇಮಠ ಅವರಿಗೆ ಬುದ್ಧಿ ಕಲಿಸುವ ಮೂಲಕ ವಿಜಯಾನಂದ ಕಾಶಪ್ಪನವರ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು. ಕಾಶಪ್ಪನವರನ್ನು ಗೆಲ್ಲಿಸಿದರೆ ಸಿದ್ದರಾಮಯ್ಯನವರನ್ನು ಗೆಲ್ಲಿಸಿದಂತೆ. ವಿಜಯಾನಂದ ಕಾಶಪ್ಪನವರಿಗೆ ಕೊಡುವ ಪ್ರತೀ ವೋಟು ನನಗೆ ಕೊಟ್ಟ ಹಾಗೆ. ಕಾಶಪ್ಪನವರನ್ನು ಗೆಲ್ಲಿಸಿ ಎಂದು ಹೇಳುವ ಮೂಲಕ ವಿಜಯಾನಂದ ಕಾಶಪ್ಪನವರ ಟಿಕೆಟ್ ಅಂತಿಮ ಎಂದು ಘೋಷಣೆ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಜಮೀರ್​ ಅಹ್ಮದ್, ಹೆಚ್​ಸಿ ಮಹದೇವಪ್ಪ, ಎಂ‌ ಬಿ ಪಾಟೀಲ್​, ಹೆಚ್​ವೈ ಮೇಟಿ, ವೀಣಾ ಕಾಶಪ್ಪನವರ್​ ಹಾಜರಿದ್ದರು.

Last Updated :Feb 23, 2023, 7:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.