ETV Bharat / state

ನಷ್ಟದಲ್ಲಿ ಸಾರಿಗೆ ನಿಗಮಗಳು, ಬಿಡಿಎಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ ನಷ್ಟ: ಸಿಎಜಿ ವರದಿಯಲ್ಲಿ ಬಹಿರಂಗ

author img

By

Published : Feb 22, 2023, 7:07 PM IST

ಇಂದು ವಿಧಾನಸಭೆಯಲ್ಲಿ ಸಿಎಜಿ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದರು.

CM Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದ ಜನರಿಗೆ ಅನುಕೂಲ ಕಲ್ಪಿಸಲು ಆರಂಭ ಮಾಡಿರುವ ಕರ್ನಾಟಕ ರಸ್ತೆ ಸಾರಿಗೆ ನಿಗಮ ವ್ಯಾಪ್ತಿಯ ನಾಲ್ಕೂ ಸಂಸ್ಥೆಗಳು 2015ರಿಂದ 2021ರವರೆಗೆ 4,689.09 ಕೋಟಿ ರೂ.ನಷ್ಟು ನಷ್ಟ ಅನುಭವಿಸಿದೆ ಎಂಬುದು ಸಿಎಜಿ ವರದಿಯಲ್ಲಿ ಬಹಿರಂಗಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ವಿಧಾನಸಭೆಯಲ್ಲಿ 2016-2021ರ ಅವಧಿಯ ಭಾರತೀಯ ಲೆಕ್ಕ ಪರಿಶೋಧಕರ ವರದಿ (ಸಿಎಜಿ) ವರದಿಯನ್ನು ಮಂಡಿಸಿದರು.

ಸಿಎಜಿ ವರದಿಯಲ್ಲಿ ಕೆಎಸ್ಆರ್​ಟಿಸಿ, ಬಿಎಂಟಿಸಿ, ಎನ್​ಡಬ್ಲ್ಯೂಕೆಆರ್​ಟಿಸಿ ಹಾಗೂ ಕೆಕೆಆರ್​ಟಿಸಿ ಈ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಇದುವರೆಗೆ 659 ಕೋಟಿಯಷ್ಟು ಹಣಕಾಸು ನೆರವು ನೀಡಿದೆ. ಆದರೂ ಆರು ವರ್ಷಗಳ ಅವಧಿಯಲ್ಲಿ ಲಾಭದ ಬದಲಾಗಿ 4 ಸಾವಿರ ಕೋಟಿಗೂ ಮೀರಿದ ನಷ್ಟವನ್ನು ಅನುಭವಿಸಿವೆ ಎಂದು ಹೇಳಿದೆ.

ಕರ್ನಾಟಕದ ಮೊದಲ ಬಿಆರ್​ಟಿಎಸ್ ಹುಬ್ಬಳ್ಳಿ ಧಾರವಾಡದ ನಡುವೆ ಕಾರ್ಯಾಚರಣೆ ಆರಂಭಿಸಿದ ನಂತರ 5.69 ಕೋಟಿ ರೂ. ನಷ್ಟವನ್ನು ಅನುಭವಿಸಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಿಆರ್​ಟಿ​ಎಸ್ ವಿಲೀನ ಮಾಡಿ, ಪ್ರಾರಂಭಿಕ ಪ್ರೋತ್ಸಾಹ ಧನವಾಗಿ 35 ಕೋಟಿ ರೂ.ವನ್ನು ಸರ್ಕಾರ ನೀಡಿತ್ತು. ಆದರೆ, ಉತ್ತಮ ದರ್ಜೆಯ ಹವಾನಿಯಂತ್ರಿತ ಬಸ್ಸುಗಳಿಗೆ ಸಾಮಾನ್ಯ ಬಸ್​​​​ಗಳ ದರವನ್ನು ಅಳವಡಿಕೆ ಮಾಡಿಕೊಂಡಿದ್ದೇ ರಾಜ್ಯದ ಈ ಪ್ರತಿಷ್ಠಿತ ಸಾರಿಗೆ ಸಂಸ್ಥೆ ನಷ್ಟ ಅನುಭವಿಸಲು ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು: ಬಿಎಂಟಿಸಿ 2015-16ರಲ್ಲಿ ಲಾಭದಲ್ಲಿತ್ತು. ನಂತರದಲ್ಲಿ ನಿರಂತರವಾಗಿ ನಷ್ಟವನ್ನು ಅನುಭವಿಸುತ್ತಿದೆ. ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಬಸ್​​ಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ 170.31 ಕೋಟಿ ರೂ. ಬಳಕೆ ಮಾಡಿಕೊಳ್ಳದೇ ನಷ್ಟ ಮಾಡಿಕೊಳ್ಳಲಾಯಿತು. ರಾಜಧಾನಿಯ ನಾಗರಿಕರಿಗೆ ವಾಯುಮಾಲಿನ್ಯ ಸಹನೀವಾಗಿಸಿಕೊಳ್ಳುವ ಅವಕಾಶ ಲಭಿಸಲಿಲ್ಲ ಎಂದು ವರದಿ ಪ್ರಸ್ತಾಪಿಸಿದೆ.

ರಾಜ್ಯದ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸುವುದಕ್ಕೆ ಇಂಧನ ಬೆಲೆ ಹೆಚ್ಚಳ, ಪಾಸ್ ಇತ್ಯಾದಿ ರಿಯಾಯಿತಿಗಳು ಕೂಡ ಕಾರಣ. ಕೈಗಾರಿಕಾ ವಲಯದಲ್ಲಿ ಆಡಳಿತಾತ್ಮಕ ಲೋಪದಿಂದ ಖಜಾನೆಗೆ ನಷ್ಟವಾಗಿದೆ. 2.04 ಕೋಟಿ ರೂ.ನಷ್ಟು ಹೆಚ್ಚುವರಿ (ಅನರ್ಹ) ಲಾಭವನ್ನು ಮಾಡಿಕೊಡಲಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ವರದಿ ಶಿಫಾರಸು ಮಾಡಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಲೋಪಗಳನ್ನೂ ವರದಿ ಗುರುತಿಸಿದೆ. ಹಾಲಿ ನಿಯಮಗಳು, ನಿಯಂತ್ರಣ ಪ್ರಾಧಿಕಾರಗಳು ಹಾಗೂ ನ್ಯಾಯಾಲಯಗಳ ಆದೇಶಗಳನ್ನು ಕಡೆಗಣಿಸಿ ಹೊಸ ಬಡಾವಣೆಗಳಿಗೆ ನೀಡುವಂತಹ ಪರಿಹಾರವನ್ನು ಹಳೆಯ ಬಡಾವಣೆಗಳ ಭೂ ಮಾಲೀಕರಿಗೂ (ಭೂ ಸ್ವಾಧೀನ ಸಂದರ್ಭದಲ್ಲಿ) ನೀಡಿರುವುದರಿಂದ 29.85 ಕೋಟಿ ರೂ.ನಷ್ಟು ಹೆಚ್ಚಿನ ಪಾವತಿ ಈ ಸಂಸ್ಥೆಯಿಂದ ಆಗಿದೆ. ಇದು ಪ್ರಾಧಿಕಾರಕ್ಕೆ ನಷ್ಟವನ್ನು ಉಂಟು ಮಾಡಿದೆ ಎಂದು ಹೇಳಿದೆ. ಹೀಗಾಗಿ ಸಂಬಂಧಿಸಿದ ಬಿಡಿಎ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಿದೆ.

ಎಂಎಸ್ಐಂಎಲ್ 21.14 ಕೋಟಿಯಷ್ಟು ಮರಳನ್ನು ಅನಗತ್ಯವಾಗಿ ಆಮದು ಮಾಡಿಕೊಂಡಿದೆ; 10.47 ಕೋಟಿ ಅನುತ್ಪಾದಕ ಹೂಡಿಕೆ ಮಾಡಿದೆ. ಕಿಯಾನಿಕ್ಸ್ನಿಂಜದ 11.13 ಕೋಟಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಿಂದ 9.25 ಕೋಟಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವು 30.34 ಕೋಟಿ ಸಿಎಜಿ ಗುರುತಿಸಿರುವ ಪ್ರಮುಖ ನಷ್ಟದ ವಲಯಗಳು. ಬಹುತೇಕ ಎಲ್ಲ ಇಲಾಖೆಗಳು ಹಾಗೂ ನಿಗಮಗಳು ಇದೇ ರೀತಿಯ ನಷ್ಟದಲ್ಲಿದ್ದು, ಇದಕ್ಕೆ ಮೂಲ ಕಾರಣ ಸಫಲ ಆಡಳಿತಾತ್ಮಕತೆ ಇಲ್ಲದಿರುವುದೂ ಒಂದು ಪ್ರಮುಖ ಕಾರಣ ಎಂದು ಸಿಎಜಿ ವರದಿ ಹೇಳಿದೆ.

ಕಳೆದ ಆರು ವರ್ಷಗಳಲ್ಲಿ ರಾಜ್ಯ ಹೆದ್ದಾರಿಗಳು ಮತ್ತು ಪ್ರಮುಖ ಜಿಲ್ಲಾ ರಸ್ತೆಗಳ ಸುಧಾರಣೆ ಹಾಗೂ ನವೀಕರಣಕ್ಕಾಗಿ ಸರ್ಕಾರ 17,046.97 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ಈ ಹಣದ ಸದ್ಬಳಕೆಯಾಗಿಲ್ಲ. ಜೊತೆಗೆ ಕರ್ನಾಟಕದ ‘ರಸ್ತೆ ವಲಯ ನೀತಿ’ ಅನ್ವಯ ಎರಡು ಲೇನ್ (ದ್ವಿಪಥ) ರಸ್ತೆಗಳು ಇನ್ನೂ ಆಗಿಲ್ಲ. ಈ ರೀತಿ ರಸ್ತೆಯ ಜಾಲವನ್ನು ಅಭಿವೃದ್ಧಿ ಮಾಡದೇ ಇರುವುದರಿಂದ ಭಾರತೀಯ ರೋಡ್ ಕಾಂಗ್ರೆಸ್ (ಐಆರ್​​​​ಸಿ) ನಿಯಮಾವಳಿಗಳ ಉಲ್ಲಂಘನೆಯೂ ಆಗಿದೆ.

ಐಆರ್​ಸಿನ ನಿಯಮಗಳು ಮತ್ತು ರಾಜ್ಯ ಸರ್ಕಾರದ ಸೂಚನೆಯ ಅನ್ವಯ ರಸ್ತೆ ಕಾಮಗಾರಿಗಳ ಅಂದಾಜು ವೆಚ್ಚವನ್ನು ತಯಾರಿಸಲಿಲ್ಲ. ಇದರಿಂದ ಬೊಕ್ಕಸಕ್ಕೆ ನಷ್ಟವಾಗಿದೆ. ರಸ್ತೆಗಳ ನಿರ್ಮಾಣ, ದುರಸ್ಥಿ ಇತ್ಯಾದಿಗಳಿಗೆ ತಯಾರಿಸಿದ ಅಂದಾಜು ವೆಚ್ಚವು ಬಹುದೊಡ್ಡ ನ್ಯೂನತೆಗಳಿಂದ ಕೂಡಿದೆ. ಇದರಿಂದ ಸರ್ಕಾರಕ್ಕೆ 38.63 ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ವರದಿ ತಿಳಿಸಿದೆ.

ಸಿಎಜಿ ಸಲಹೆ: ನಿಯಮಗಳ ಅನುಸಾರ ಗುತ್ತಿಗೆದಾರರು ಒಟ್ಟು 333 ಕ್ಷೇತ್ರೀಯ ಪ್ರಯೋಗ ಶಾಲೆಗಳನ್ನು ಸ್ಥಾಪಿಸಬೇಕಾಗಿತ್ತು. ಇದಕ್ಕಾಗಿ ಕರ್ನಾಟಕ ಸರ್ಕಾರ ಗುತ್ತಿಗೆದಾರರಿಗೆ ಈ ಆರು ವರ್ಷಗಳ ಅವಧಿಯಲ್ಲಿ 1,480.37 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ಗುತ್ತಿಗೆದಾರರು ಇವನ್ನು ಸ್ಥಾಪಿಸಲಿಲ್ಲ. ಅಲ್ಲದೇ, ತಮ್ಮ ಬಿಲ್​ಗಳನ್ನು ಸಲ್ಲಿಸುವಾಗ ಗುಣಮಟ್ಟ ನಿಯಂತ್ರಣ ಪರೀಕ್ಷಾ ವರದಿಗಳನ್ನು ಲಗತ್ತಿಸಿಲ್ಲ. ಈ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿರುವ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಸಂಬಂಧಿಸಿದ ಕಾರ್ಯಪಾಲಕ ಎಂಜಿನಿಯರ್​ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಜಿ ಸಲಹೆ ಮಾಡಿದೆ.

ಗುತ್ತಿಗೆದಾರರು ಮತ್ತು ಅಧಿಕಾರಿಗಳಿಂದ ಆಗುವ ನಷ್ಟವನ್ನು ತಪ್ಪಿಸಲು ಸರ್ಕಾರ ವಿಚಕ್ಷಕ ಸಂಸ್ಥೆಯಾಗಿ ಹೊಣೆಗಾರಿಕೆ ನಿಭಾಯಿಸಬೇಕು. ರಸ್ತೆ ಸುರಕ್ಷತಾ ಲೆಕ್ಕಪರಿಶೋಧನೆಗಳು ನಿಯಮಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿ ಏಕೈಕ ಬಿಡ್ ಸ್ವೀಕರಿಸಿದ ಟೆಂಡರ್ ಅಂಗೀಕರಿಸುವ ಪ್ರಾಧಿಕಾರದ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂಬ ಮಹತ್ವದ ಶಿಫಾರಸುಗಳನ್ನು ಸರ್ಕಾರಕ್ಕೆ ಸಿಎಜಿ ಮಾಡಿದೆ.

ಇದನ್ನೂ ಓದಿ: ಆರು ವಿಶ್ವವಿದ್ಯಾಲಯಗಳ ವಿಧೇಯಕ ಪರಿಷತ್​ನಲ್ಲಿ ಮಂಡನೆ, ಪ್ರತಿಪಕ್ಷ ಸಭಾತ್ಯಾಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.