ETV Bharat / state

ಕೈ ಅಸಮಾಧಾನಿತ ಶಾಸಕರು ಹೈಕಮಾಂಡ್ ಟಚ್‌ನಲ್ಲಿದ್ದಾರೆ: ಸರ್ಕಾರದ ಪತನದ ಬಗ್ಗೆ ಭವಿಷ್ಯ ನುಡಿದ ನಿರಾಣಿ

author img

By ETV Bharat Karnataka Team

Published : Nov 4, 2023, 6:34 PM IST

Updated : Nov 4, 2023, 6:44 PM IST

ಮುರುಗೇಶ ನಿರಾಣಿ
ಮುರುಗೇಶ ನಿರಾಣಿ

ಕಾಂಗ್ರೆಸ್​ನ ಹಲವು ಅಸಮಾಧಾನಿತ ಶಾಸಕರು ಬಿಜೆಪಿಯ ಹೈಕಮಾಂಡ್ ಟಚ್‌ನಲ್ಲಿದ್ದು, ಸದ್ಯದಲ್ಲೇ ಈ ಸರ್ಕಾರ ಪತನವಾಗಲಿದೆ. ಜನರ ಪರವಾಗಿ ಇರುವಂತಹ ಹೊಸ ಸರ್ಕಾರ ಬರಲಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಭವಿಷ್ಯ ನುಡಿದರು.

ಮುರುಗೇಶ ನಿರಾಣಿ

ವಿಜಯಪುರ: ''ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇದೆಯಾ ಅನ್ನುವುದು ಗೊತ್ತಾಗ್ತಿಲ್ಲ. ಮೋಸ ಮಾಡಿ ಅಧಿಕಾರಕ್ಕೆ ಬಂದರು. ಫ್ರೀ ಕರೆಂಟ್ ನೀಡ್ತೇವಿ ಎಂದು ಈಗ ಪವರ್ ಕಟ್ ಮಾಡ್ತಿದ್ದಾರೆ. ಬಸ್ ಫ್ರೀ ಅಂತ ಹೇಳಿ ಬಸ್​​ಗಳನ್ನೇ ಕಡಿಮೆ ಮಾಡಿದ್ದಾರೆ'' ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ನೇತೃತ್ವದಲ್ಲಿ ವಿಜಯಪುರದ ಜಾಲಗೇರಿ ಗ್ರಾಮದಲ್ಲಿ ಇಂದು ನಡೆಸಿದ ಬರ ಅಧ್ಯಯನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಉಚಿತ ಗ್ಯಾರಂಟಿಗಳ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ 7 ಕೋಟಿ ಜನರಿಗೆ ಮೋಸ ಮಾಡಿದೆ. ಹಿಂದಿನ ಸರ್ಕಾರದ ಕಾಮಗಾರಿ ನಡೆಯುತ್ತಿಲ್ಲ. ಹಣ ಕೊಟ್ಟರೆ ಮಾತ್ರ ಕೆಲಸ ಮಾಡುತ್ತಿದ್ದಾರೆ'' ಎಂದು ಆರೋಪ ಮಾಡಿದರು.

ಸಿಎಂ ಬದಲಾವಣೆ ಗದ್ದಲ ವಿಚಾರಕ್ಕೆ ಪ್ರತಿಕ್ರಿಯಿಸಿ, ''ಕಾಂಗ್ರೆಸ್ ಮಾತನಾಡುವುದು ಒಂದು, ಮಾಡೋದು ಇನ್ನೊಂದು. ಅವರಲ್ಲಿ ಎರಡಲ್ಲ, ನಾಲ್ಕು ಬಣಗಳಿವೆ. ಮೇಲ್ನೋಟಕ್ಕೆ ಎರಡು ಬಣಗಳು ಮಾತ್ರ ಕಾಣುತ್ತವೆ. 5 ಡಿಸಿಎಂ ಕೇಳ್ತಿದ್ದಾರೆ. ಸಿಎಂ ವಿಚಾರದಲ್ಲೂ ಗೊಂದಲ‌ ಇದೆ. ರಾಜ್ಯ ಸರ್ಕಾರವೇ ಗೊಂದಲದಲ್ಲಿದೆ. ಸಚಿವ ಸ್ಥಾನ ವಂಚಿತ ಶಾಸಕರು, ಅಸಮಾಧಾನಿತ ಶಾಸಕರು ಸೇರಿದಂತೆ ಹಲವರು ಬಿಜೆಪಿಯ ಹೈಕಮಾಂಡ್ ಟಚ್‌ನಲ್ಲಿದ್ದಾರೆ. ಅವರೇ ಬಂದು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ನಮ್ಮ ಅಲ್ಪ ರಾಜಕೀಯ ತಿಳಿವಳಿಕೆಯಿಂದ ಹೇಳಬೇಕು ಎಂದರೆ ಈ ಸರ್ಕಾರ 5 ವರ್ಷ ಪೂರ್ಣ ಮಾಡಲ್ಲ. ಸದ್ಯದಲ್ಲೇ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ''ನನಗೆ ರಾಜ್ಯಾಧ್ಯಕ್ಷನಾಗುವ ಆಸೆ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಅರ್ಹತೆಗೆ ಅನುಗುಣವಾಗಿ ಕೊಟ್ಟ ಕೆಲಸ ಮಾಡ್ತೇನೆ. ಟಿಕೆಟ್ ಕೊಡದೇ ಕಾರ್ಯಕರ್ತನಾಗಿ ಕೆಲಸ ಮಾಡು ಎಂದರೂ ಮಾಡುವೆ'' ಎಂದರು. ''ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಒಂದು ಸಾರಿಯೂ ಮಳೆ ಆಗೋದಿಲ್ಲ'' ಅಂತ ಸಂಸದ ರಮೇಶ ಜಿಗಜಿಣಗಿ ಕೂಡ ವಾಗ್ದಾಳಿ ನಡೆಸಿದರು. ಪಿಸಿ ಗದ್ದಿಗೌಡರ, ಶಾಸಕ ಸಿದ್ದು ಸವದಿ ಸೇರಿದಂತೆ ಹಲವರು ಈ ವೇಳೆ ಇದ್ದರು.

ಹೆಚ್ಚುವರಿ ಬರಪೀಡಿತ ತಾಲೂಕು ಘೋಷಣೆ: ಈ ಮುಂಚೆ ಜಿಲ್ಲೆಯ ತಿಕೋಟಾ ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಸತತವಾಗಿ ಕಂದಾಯ ಸಚಿವರು ಮತ್ತು ಮುಖ್ಯಮಂತ್ರಿಗಳೊಂದಿಗೆ ತಿಕೋಟಾ ತಾಲೂಕಿನಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಅಗತ್ಯ ದಾಖಲೆಗಳ‌ ಸಮೇತ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದರು. ಅಲ್ಲದೇ, ಬರಪೀಡಿತ ತಾಲೂಕು ಘೋಷಣೆಗೆ ಪರಿಗಣಿಸಲಾಗುವ ಮಾನದಂಡಗಳಿಗೆ ತಿಕೋಟಾ ತಾಲೂಕು ಅರ್ಹವಾಗಿರುವ ಕುರಿತು ಗಮನ ಸೆಳೆದಿದ್ದರು.

ಮುಂಗಾರು ಹಂಗಾಮಿನಲ್ಲಿ ಕೇವಲ‌ ಒಂದು ತಿಂಗಳು ವಾಡಿಕೆಗಿಂತ ಸ್ವಲ್ಪ ಹೆಚ್ಚಿನ ಮಳೆಯಾಗಿದ್ದು ಉಳಿದ ಅವಧಿಯಲ್ಲಿ ಮಳೆಯ ಕೊರತೆಯಾಗಿರುವ ಕುರಿತು ದಾಖಲೆ ಸಮೇತ ಸಂಪೂರ್ಣ ಮಾಹಿತಿ ಒದಗಿಸಿದ್ದರು. ಮಳೆ ಕೊರತೆಯಿಂದ ಬಿತ್ತನೆ, ಸದ್ಯದ ಬೆಳೆಯ ಪರಿಸ್ಥಿತಿ, ಅಂತರ್ಜಲಮಟ್ಟ ಕುಸಿತ, ತೇವಾಂಶ ಕೊರತೆ, ಇದರಿಂದ ಕೃಷಿ ಮತ್ತು ತೋಟಗಾರಿಕೆ ಪ್ರದೇಶದ ಮೇಲಾಗಿರುವ ಪರಿಣಾಮಗಳ ಕುರಿತು ಜಿಲ್ಲಾಡಳಿತದಿಂದ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದರು.

ಈಗ ಈ ಎಲ್ಲ ಅಂಶಗನ್ನು ಪರಿಗಣಿಸಿ ರಾಜ್ಯ ಸರ್ಕಾರ ತಿಕೋಟಾ ತಾಲೂಕನ್ನು ಬರಪೀಡಿತ ತಾಲೂಕು ಎಂದು ಪರಿಗಣಿಸಿ ಆದೇಶ ಹೊರಡಿಸಿದೆ. ಇದರಿಂದ ಬರ ನಿರ್ವಹಣೆ ಕಾರ್ಯಕ್ರಮ ಕೈಗೊಳ್ಳಲು‌ ಅನುಕೂಲವಾಗಲಿದೆ. ಬರ ಘೋಷಣೆಯಿಂದಾಗಿ ಸಚಿವ ಎಂ.ಬಿ. ಪಾಟೀಲ ಅವರ ಸತತ ಪ್ರಯತ್ನ ಈಗ ಫಲಪ್ರದವಾಗಿದೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಒಟ್ಟು 236 ತಾಲೂಕುಗಳ ಪೈಕಿ ಜಿಲ್ಲೆಯ ತಿಕೋಟಾ ಸೇರಿ ಬೇರೆ ಬೇರೆ ಜಿಲ್ಲೆಯ 6 ತಾಲೂಕುಗಳು ಒಳಗೊಂಡಂತೆ 223 ಬರಪೀಡಿದ ತಾಲೂಕುಗಳು ಎಂದು ಸೇರ್ಪಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಹೆಚ್ಚುವರಿಯಾಗಿ 22 ತಾಲೂಕುಗಳು 'ಬರ ಪೀಡಿತ': ರಾಜ್ಯ ಸರ್ಕಾರ ಘೋಷಣೆ

Last Updated :Nov 4, 2023, 6:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.