ETV Bharat / state

ಪರೇಶ್ ಮೇಸ್ತಾ ಸಾವಿನ ರಹಸ್ಯ ಇನ್ನೂ ನಿಗೂಢ

author img

By

Published : Dec 10, 2021, 11:01 AM IST

paresh mesta murder case
ಅಂತ್ಯ ಕಾಣದ ಪರೇಶಮೇಸ್ತಾ ಪ್ರಕರಣ: ನಿಗೂಢವಾಗಿಯೇ ಉಳಿದ ಸಾವಿನ ರಹಸ್ಯ!

ಹೊನ್ನಾವರದ ಯುವಕ ಪರೇಶ್ ಮೇಸ್ತಾ ಸಂಶಯಾಸ್ಪದವಾಗಿ ಸಾವನ್ನಪ್ಪಿ ನಾಲ್ಕು ವರ್ಷಗಳು ಕಳೆದರೂ ಸಹ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಚುನಾವಣೆ ಸಂದರ್ಭದಲ್ಲಿ ಪ್ರಕರಣದ ತನಿಖೆಗೆ ಒತ್ತಾಯಿಸಿ ಹೋರಾಟಕ್ಕಿಳಿದಿದ್ದ ಹಿಂದೂ ಸಂಘಟನೆಗಳು, ಬಿಜೆಪಿ ಮುಖಂಡರು ಇದೀಗ ಮೌನವಹಿಸಿದ್ದು ಪ್ರಕರಣ ನಿಗೂಢವಾಗಿದೆ.

ಕಾರವಾರ: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೊನ್ನಾವರದ ಯುವಕ ಪರೇಶ್ ಮೇಸ್ತಾ ಸಾವಿನ ಪ್ರಕರಣ ರಾಜ್ಯದ ಕರಾವಳಿಯಲ್ಲಿ ಗಲಭೆಗೆ ಕಾರಣವಾಗಿತ್ತು. ಅಲ್ಲದೇ ಇದೇ ಪ್ರಕರಣ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ನೆರವಾಗಿತ್ತು.

ಆದರೆ ಈ ಪ್ರಕರಣ ನಡೆದು ನಾಲ್ಕು ವರ್ಷಗಳೇ ಕಳೆದಿದ್ದರೂ ಇದುವರೆಗೂ ಯುವಕನ ಸಾವಿಗೆ ನಿಖರ ಕಾರಣ ಏನು ಎನ್ನುವುದು ಇದುವರೆಗೂ ತಿಳಿದುಬಂದಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಿದ್ದರೂ ಸಹ ಇದುವರೆಗೂ ಪ್ರಕರಣ ಬಗೆಹರಿದಿಲ್ಲ.

ಅಂದು 2017ರ ಡಿಸೆಂಬರ್ 6. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ವೇಳೆ ಪರೇಶ್ ಮೇಸ್ತಾ ಎನ್ನುವ ಯುವಕ ಕಾಣೆಯಾಗಿದ್ದ. ತೀವ್ರ ಹುಡುಕಾಟದ ಬಳಿಕ ಡಿಸೆಂಬರ್ 8ರಂದು ಪಟ್ಟಣದ ಶನೈಶ್ಚರ ದೇವಾಲಯದ ಹಿಂಬದಿಯ ಶೆಟ್ಟಿ ಕೆರೆಯಲ್ಲಿ ಯುವಕನ ಶವ ಪತ್ತೆಯಾಗಿದ್ದು ಆತನನ್ನ ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇಡೀ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ ಮೃತ ಯುವಕನನ್ನು ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ ಬಿಜೆಪಿ, ಯುವಕನ ಹತ್ಯೆಗೆ ನ್ಯಾಯ ಒದಗಿಸಿಕೊಡುವಂತೆ ಹೋರಾಟಕ್ಕೆ ಮುಂದಾಗಿದ್ದು ಇದು ಇಡೀ ಜಿಲ್ಲೆಯಲ್ಲಿ ದೊಡ್ಡ ಗಲಭೆಗೂ ಕಾರಣವಾಗಿತ್ತು.

ಸಿಬಿಐಗೆ ಪ್ರಕರಣ:

ಇದಾದ ಬಳಿಕ, 2018ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಯುವಕ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನೇ ಪ್ರಚಾರದ ಅಸ್ತ್ರವಾಗಿಸಿಕೊಂಡಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಹಿಂದೂ ಕಾರ್ಯಕರ್ತನ ಹತ್ಯೆ ಎನ್ನುವಂತೆ ಬಿಂಬಿಸಲಾಗಿತ್ತು. ರಾಜ್ಯದ ಕರಾವಳಿಯಲ್ಲಿ ಹಿಂದುತ್ವದ ಅಲೆಯನ್ನೇ ಎಬ್ಬಿಸಿದ್ದ ಬಿಜೆಪಿ ಪಕ್ಷ ಹಿಂದೂ ಕಾರ್ಯಕರ್ತನ ಹತ್ಯೆಗೆ ನ್ಯಾಯ ಒದಗಿಸುವಂತೆ ಹೋರಾಟ ನಡೆಸಿತ್ತು. ಅಲ್ಲದೇ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಕುಟುಂಬಸ್ಥರ ಮೂಲಕ ಸರ್ಕಾರವನ್ನ ಒತ್ತಾಯಿಸಿದ್ದು ಅದರಂತೆ ಪ್ರಕರಣವನ್ನ ಸಿಬಿಐ ತನಿಖೆಗೂ ವಹಿಸಲಾಗಿತ್ತು.

ಪರೇಶ್ ಮೇಸ್ತಾ ಸಾವು ಇನ್ನೂ ನಿಗೂಢ

ಕಾಂಗ್ರೆಸ್ ಪ್ರಶ್ನೆ:

ಇದರ ಫಲ ಎನ್ನುವಂತೆ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು ಇದೀಗ ಬಿಜೆಪಿ ಸರ್ಕಾರವೇ ಆಡಳಿತದಲ್ಲಿದೆ. ಆದರೆ ದುರದೃಷ್ಟ ಎನ್ನುವಂತೆ ಇದುವರೆಗೂ ಸಹ ಯುವಕನ ಸಾವಿಗೆ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಆಡಳಿತದಲ್ಲಿದ್ದರೂ, ಪ್ರಕರಣದ ತನಿಖೆ ಯಾಕೆ ಪೂರ್ಣಗೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್​ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ ಗಲಭೆಗೆ ಕಾರಣವಾಗಿದ್ದ ಪರೇಶ್ ಮೇಸ್ತಾ ಸಾವಿನ ಪ್ರಕರಣ ನಡೆದ ಬಳಿಕ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಅದರಂತೆ 2018ರ ಏಪ್ರಿಲ್ 23ರಂದು ಚೆನ್ನೈನ ಸಿಬಿಐ ವಿಭಾಗ ಪ್ರಕರಣವನ್ನು ಹಸ್ತಾಂತರಿಸಿಕೊಂಡು ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಆದರೆ ಪ್ರಕರಣದ ಸಿಬಿಐ ತನಿಖೆ ಪ್ರಾರಂಭವಾಗಿ ಮೂರು ವರ್ಷಗಳೇ ಕಳೆದಿದ್ದು, ಇದುವರೆಗೂ ಸಹ ಯುವಕನ ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ.

ಅಲ್ಲದೇ, ಘಟನೆ ನಡೆದ ವೇಳೆ ಇದು ಅನ್ಯ ಕೋಮಿನವರು ನಡೆಸಿರುವ ಹತ್ಯೆ ಎಂದು ಆರೋಪಿಸಿದ್ದ ಹಿನ್ನೆಲೆ, ಗಲಭೆ ಸಂಬಂಧ ಬಂಧಿತರಾಗಿದ್ದವರು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇನ್ನು ಈ ಬಗ್ಗೆ ಬಿಜೆಪಿಯವರನ್ನ ಪ್ರಶ್ನಿಸಿದ್ರೆ ಸಿಬಿಐ ಪ್ರಕರಣವನ್ನ ತನಿಖೆ ಮಾಡುತ್ತಿದೆ. ಯುವಕನ ಸಾವಿನ ಕುರಿತು ತನಿಖೆಯ ಮೂಲಕವೇ ತಿಳಿದು ಬರಬೇಕಿದ್ದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಬಿಕೆ ಹರಿಪ್ರಸಾದ್ ತಿಳಿಸಿದ್ದಾರೆ. ಈ ಆರೋಪವನ್ನು ಬಿಜೆಪಿ ನಿರಾಕರಿಸಿದೆ.

ಇದನ್ನೂ ಓದಿ: ಮೈಸೂರು: ಕಲ್ಲಿನ ವಿಗ್ರಹ ಪೂಜಿಸಿ ಜನ ಮೋಸ ಹೋಗುತ್ತಾರೆಂದು ಭಗ್ನಗೊಳಿಸಿದ್ದ ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.