ETV Bharat / state

ಕಾರವಾರ: ವಿವಿಧ ಪೊಲೀಸ್ ಠಾಣೆಗಳಲ್ಲಿ ಅಗತ್ಯ ಸೌಕರ್ಯ ಕೊರತೆ, ಸಿಬ್ಬಂದಿ ಸಮಸ್ಯೆ ಆಲಿಸಿದ ಐಜಿ

author img

By ETV Bharat Karnataka Team

Published : Oct 18, 2023, 9:58 PM IST

IG heard the problem of police personnel
ಪೊಲೀಸ್​ ಸಿಬ್ಬಂದಿ ಸಮಸ್ಯೆ ಆಲಿಸಿದ ಐಜಿ

ಶೀಘ್ರದಲ್ಲೇ ಉತ್ತರಕನ್ನಡ ಜಿಲ್ಲಾ ಪೊಲೀಸ್ ಇಲಾಖೆಗೆ ಹೊಸ ವಾಹನಗಳು ಬರಲಿವೆ ಎಂದು ಪೊಲೀಸ್ ಮಹಾನಿರ್ದೆಶಕ ಡಾ.ಚಂದ್ರಗುಪ್ತ ಭರವಸೆ ನೀಡಿದರು.

ಕಾರವಾರ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯ ಸಮಸ್ಯೆ, ಸೌಕರ್ಯದ ಕೊರತೆ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಪಶ್ಚಿಮ ವಲಯದ ಪೊಲೀಸ್ ಮಹಾ ನಿರ್ದೆಶಕ ಡಾ.ಚಂದ್ರಗುಪ್ತ ತಿಳಿಸಿದರು. ನಗರದ ಗ್ರಾಮೀಣ ಪೊಲೀಸ್ ಠಾಣೆಗೆ ಭೇಟಿದ ನೀಡಿ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ವಿವಿಧ ಪೊಲೀಸ್ ಠಾಣೆಗಳಿಗೆ ಭೇಟಿ ಸ್ವತಃ ಭೇಟಿ ನೀಡುತ್ತಿದ್ದೇನೆ. ಅಲ್ಲಿ ಮೂಲ ಸೌಕರ್ಯ ಕೊರತೆ ಹಾಗೂ ಸಿಬ್ಬಂದಿಗೆ ಇರುವ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಎಂದರು.

ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸದ ಕುರಿತು ಗಮನಕ್ಕೆ ತಂದಾಗ, ಎಲ್ಲಾ ಪೊಲೀಸ್ ಠಾಣೆಗಳ ಸಿಸಿ ಟಿವಿಗಳ ಒಂದೂವರೆ ವರ್ಷದ ವಿಡಿಯೋಗಳು ಲಭ್ಯವಿದೆ. ಕೆಲವೊಮ್ಮೆ ಕ್ಯಾಮರಾಗಳು ಕೆಟ್ಟಿದ್ದರೂ ಅವುಗಳನ್ನು ಶೀಘ್ರವೇ ದುರಸ್ತಿ ಮಾಡಲಾಗುತ್ತಿದೆ. ಠಾಣೆಯ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿ ಠಾಣೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ನೀಡುತ್ತೇವೆ. ಜಿಲ್ಲೆಯ ಪ್ರವಾಸಿ ತಾಣಗಳ ಭದ್ರತೆಯ ಕುರಿತು ಎಚ್ಚರ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆಗೆ ಸಂಬಂಧಿಸಿದಂತೆ ಚೆಕ್ ಪೋಸ್ಟ್​ಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸುವಂತೆ ಸೂಚನೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆ ನಿಗಾ ವಹಿಸುತ್ತಿದೆ. ಆದರೂ ಅಕ್ರಮ ಸಾಗಾಟ ನಡೆಯುತ್ತಿರುವುದರಿಂದ ಚೆಕ್ ಪೋಸ್ಟ್‌ಗಳಲ್ಲಿ ಹೆಚ್ಚಿನ ಭದ್ರತೆ ನೀಡುತ್ತೇವೆ. ಅಲ್ಲಿನ ಕೆಲವು ಸಿಸಿ ಕ್ಯಾಮರಾಗಳು ಹಾಳಾಗಿವೆ. ಈ ಬಗ್ಗೆ ಚೆಕ್‌ಪೋಸ್ಟ್ ವ್ಯಾಪ್ತಿ ಗ್ರಾಮ ಪಂಚಾಯಿತಿ ಹಾಗು ಸ್ಥಳೀಯ ಸಂಸ್ಥೆಗಳಿಗೂ ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಪೊಲೀಸ್ ಸಿಬ್ಬಂದಿ ವಸತಿಗೃಹಗಳ ಕೊರತೆ ಬಗ್ಗೆ ಮಾತನಾಡಿದ ಅವರು, ಎಲ್ಲೆಂದರಲ್ಲಿ ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ವಸತಿಗೃಹಗಳ ಸಮೀಪದಲ್ಲಿ ಶಾಲೆ, ಆಸ್ಪತ್ರೆ ಸೇರಿದಂತೆ ಮೂಲ ಸೌಕರ್ಯಗಳು ಇರಬೇಕಾಗುತ್ತದೆ. ಈಗಾಗಲೇ ಶಿರಸಿಯಲ್ಲಿ ವಸತಿಗೃಹ ಸಿದ್ದವಾಗಿದೆ. ಕಾರವಾರದ ಪೊಲೀಸ್ ಸಿಬ್ಬಂದಿ ಜತೆಗೆ ವಸತಿಗೃಹಗಳ ನಿರ್ಮಾಣ ಹಾಗೂ ಇಲ್ಲಿನ ಬಾಡಿಗೆ ದರದ ಬಗ್ಗೆ ಚರ್ಚೆ ನಡೆಸುತ್ತೇನೆ. ಹೊಸ ಠಾಣೆಗಳ ಮಂಜೂರಾತಿ ನೀಡಿಲ್ಲ. ಬೇಡಿಕೆ ಇದ್ದರೆ ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು ಎಂದರು.

ಶೀಘ್ರದಲ್ಲಿ ಪೊಲೀಸ್ ಇಲಾಖೆಗೆ ಹೊಸ ವಾಹನಗಳು: ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ವಾಹನಗಳ ಕೊರತೆಯ ಬಗ್ಗೆ ಮಾತನಾಡಿ 15 ವರ್ಷಗಳಿಗಿಂತ ಹೆಚ್ಚು ಕಾಲ ಬಳಕೆಯಲ್ಲಿದ್ದ ವಾಹನವನ್ನು ಬದಲಾಯಿಸುವಂತೆ ಸರಕಾರದ ನಿಯಮವಿದೆ. ಅಲ್ಲದೇ ಕರಾವಳಿ ಪ್ರದೇಶಗಳಲ್ಲಿ ವಾಹನಗಳು ಬೇಗ ಕೆಟ್ಟು ನಿಲ್ಲುತ್ತವೆ. ಹೀಗಾಗಿ ಅಂತಹ ವಾಹನಗಳನ್ನು ಬದಲಾವಣೆಗಾಗಿ ಕಳಿಸಲಾಗಿದೆ. ಶೀಘ್ರದಲ್ಲಿ ವಾಹನಗಳು ಬರಲಿವೆ ಎಂದು ತಿಳಿಸಿದರು.

ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಹಾಜರಿದ್ದರು.

ಇದನ್ನೂಓದಿ: ಆನ್​ಲೈನ್​​ ಗೇಮ್ಸ್​​ನಲ್ಲಿ 1.5 ಕೋಟಿ ರೂ. ಗೆದ್ದಿದ್ದ ಪಿಎಸ್​ಐ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.