ತುಮಕೂರು: ಬೀಗ ಹಾಕಿದ ಮನೆಗಳ ಮಾಲೀಕರನ್ನು ಕಳ್ಳರಿಂದ ರಕ್ಷಿಸಲು ತುಮಕೂರು ಜಿಲ್ಲಾ ಪೊಲೀಸರು ಎಲ್ಹೆಚ್ಎಂಎಸ್ ತುಮಕೂರು ಪೊಲೀಸ್ ಆ್ಯಪ್ ಜಾರಿಗೆ ತಂದಿದ್ದಾರೆ.
ಮಾಲೀಕರು ಮನೆಗೆ ಬೀಗ ಹಾಕಿ ಊರಿಗೆ ಹೋಗಿ ಬರುವವರೆಗೂ ಪೊಲೀಸ್ ಇಲಾಖೆ ವತಿಯಿಂದ ಸಿಸಿ ಕ್ಯಾಮರಾ ಟೆಕ್ನಾಲಜಿ ಮೂಲಕ ಮನೆಯ ಮೇಲೆ ನಿಗಾ ವಹಿಸಲಾಗುತ್ತದೆ. ತುಮಕೂರು ಸ್ಮಾರ್ಟ್ ಸಿಟಿ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆ್ಯಪ್ ಅಭಿವೃದ್ಧಿಪಡಿಸಿದ್ದು, ಕನಿಷ್ಠ 15 ದಿನಗಳವರೆಗೆ ಈ ಸೌಲಭ್ಯ ಮನೆ ಮಾಲೀಕರಿಗೆ ಸಿಗಲಿದೆ.
ಮನೆಗೆ ಬೀಗ ಹಾಕಿಕೊಂಡು ದೂರದ ಸ್ಥಳಗಳಿಗೆ ಹೋಗುವ ಮುನ್ನ ಸ್ಥಳೀಯ ಪೊಲೀಸರಿಗೆ ವಿಚಾರ ತಿಳಿಸಿದಾಗ ಅವರು ತಮ್ಮ ಮನೆಗೆ ಬಂದು ಮನೆಯ ಬಗ್ಗೆ ನಿಗಾ ವಹಿಸಲು ವ್ಯವಸ್ಥೆ ಕೈಗೊಳ್ಳುಲಿದ್ದಾರೆ. ನಂತರ ಮನೆಯ ಸಂಪೂರ್ಣ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಂಗೆ ರವಾನಿಸಲಾಗುತ್ತದೆ. ಅಲ್ಲದೇ ಮನೆಯೆದುರು ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಮಾಹಿತಿಯನ್ನು ಕಂಟ್ರೋಲ್ ರೂಮ್ನಲ್ಲಿ ದಾಖಲಿಸಲಾಗುತ್ತದೆ.