ETV Bharat / state

ಪ್ರಧಾನಿಗಳು ಕುಮಾರಸ್ವಾಮಿಯನ್ನ ಕೇಂದ್ರ ಮಂತ್ರಿ ಮಾಡ್ತೇನಿ ಅಂತಾ ಹೇಳಿದ್ರೆ ಸಂತೋಷ: ಕೆ ಎಸ್ ಈಶ್ವರಪ್ಪ

author img

By ETV Bharat Karnataka Team

Published : Dec 19, 2023, 3:52 PM IST

Updated : Dec 19, 2023, 6:33 PM IST

KS Eshwarappa spoke to the media.
ಕೆ ಎಸ್ ಈಶ್ವರಪ್ಪ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರದಿಂದ ಒಳ್ಳೆಯ ಹೆಸರು ಬಂದಿದೆ. ರಾಜ್ಯದಲ್ಲಿ ಬಿಜೆಪಿ ಗೆಲ್ಲಲು ಸಮ್ಮಿಶ್ರ ಸರ್ಕಾರದ ಸಾಧನೆಯೂ ಕಾರಣ, ಬಿಜೆಪಿ ಪಕ್ಷ ಬೆಳವಣಿಗೆ ಆಯ್ತು, ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಎನ್‌ಡಿಎ ಸೇರುವುದನ್ನು ಈಗಾಗಲೇ ಸ್ವಾಗತ ಮಾಡಿದ್ದೇವೆ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಯಚೂರು:ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ ಡಿ ಕುಮಾರಸ್ವಾಮಿ ಅವರನ್ನು ಒಂದು ವೇಳೆ ಕೇಂದ್ರ ಸಚಿವರಾಗಿ ಮಾಡುತ್ತೇನೆ ಅಂತ ಹೇಳಿದ್ರೆ ಸಂತೋಷದ ವಿಷಯ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಹಾಗೇನಾದರೂ ಹೇಳಿದರೆ, ರಾಜ್ಯಕ್ಕೂ ದೇಶಕ್ಕೂ ಒಳ್ಳೆಯದಾಗುತ್ತೆ. ಹೆಚ್‌ಡಿಕೆ ಅವರು ಮಾಜಿ ಪ್ರಧಾನಿ ದೇವೆಗೌಡರ ಪುತ್ರ, ಹೆಚ್ ಡಿ ದೇವೆಗೌಡರು ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ರೈತರಿಗಾಗಿ ಹೆಚ್ಚು ಓಡಾಡಿ, ಕೆಲಸ ಮಾಡಿದ್ದಾರೆ. ದೇವೇಗೌಡರ ಮಾರ್ಗದರ್ಶನದಲ್ಲಿ ಕುಮಾರಸ್ವಾಮಿ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲೂ ಒಳ್ಳೆಯ ಹೆಸರು ಬಂದಿದೆ. ಮತ್ತೆ ಬಿಜೆಪಿ ಗೆಲ್ಲಲು ಸಮ್ಮಿಶ್ರ ಸರ್ಕಾರದ ಸಾಧನೆ ಕೂಡ ಕಾರಣ, ಬಿಜೆಪಿ ಬೆಳವಣಿಗೆಯಾಯ್ತು, ಕುಮಾರಸ್ವಾಮಿ ಎನ್‌ಡಿಎ ಸೇರುವುದಕ್ಕೆ ಈಗಾಗಲೇ ಸ್ವಾಗತ ಮಾಡಿದ್ದೇವೆ. ಇದರಿಂದ ರಾಜ್ಯದ ರೈತರಿಗೆ ಹೆಚ್ಚು ಸಂತೋಷವಾಗುತ್ತೆ, ಮೋದಿಯವರು ಕೇಂದ್ರ ಮಂತ್ರಿ ಮಾಡುತ್ತೇನೆ ಅಂತ ಹೇಳಿದ್ದರೆ ಇನ್ನೂ ಸಂತೋಷ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮಶೇಖರ್, ಹೆಬ್ಬಾರ್ ವಿರುದ್ಧ ಕಿಡಿ: ಬಿಜೆಪಿ ಅಲ್ಲಿ ಇರೋ ಹಾಗಿದ್ದರೆ ಇರ್ರೀ, ಇಲ್ಲವೇ ಹೋಗಿ ಅಂತ ಪಕ್ಷ‌ ತೊರೆಯುವ ನಾಯಕರಿಗೆ ಎಚ್ಚರಿಕೆ ನೀಡಿದರು. ಚುನಾವಾಣೆಯಲ್ಲಿ ನಿಲ್ಸಿ, ಗೆಲ್ಸಿ ಮಂತ್ರಿ ಮಾಡಾಯ್ತು. ಈಗ ಮತ್ತೆ ಗೆದ್ದಾಯ್ತು. ಈಗ ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್​ ಬಗ್ಗೆ ಒಲವು ಇದ್ದರೆ, ಕಾಂಗ್ರೆಸ್ ಬಗ್ಗೆ ಒಲವು ಆಗಿದೆಯಾ ?, ತಾಳಿ ಒಬ್ಬರಿಂದ ಕಟ್ಟಿಸಿಕೊಂಡು ಸಂಸಾರ ಮತ್ತೊಬ್ಬರ ಜೊತೆ ಮಾಡಬಾರದು ಎಂದು ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಹೆಬ್ಬಾರ್ ವಿರುದ್ಧ ಕಿಡಿಕಾರಿದರು.

ಜ್ಞಾನವ್ಯಾಪಿ ಸಮೀಕ್ಷೆ: ಜ್ಞಾನವ್ಯಾಪಿ ವೈಜ್ಞಾನಿಕ ಸಮೀಕ್ಷೆಗೆ ಮುಸ್ಲಿಂ ಸಮುದಾಯ ಸಲ್ಲಿಸಿದ್ದ ಅರ್ಜಿ ವಜಾ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಎರಡು ಕನಸು ಈಗ ಈಡೇರಿದೆ. ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಆರ್ಟಿಕಲ್ 370 ರದ್ದುಗೊಳಿಸಲಾಗಿದೆ. ಕಾಶಿ ವಿಶ್ವನಾಥನ ಸರ್ವೇ ರಿಪೋರ್ಟ್ ಬಂದಿದೆ. ಸ್ವಾತಂತ್ರ್ಯ ಬಂದ ಮೇಲೆ ಮುಸಲ್ಮಾನರು ಹೊಸ ಮಸೀದಿ ಕಟ್ಟಿಕೊಂಡು ನಮಾಜ್ ಮಾಡ್ತಿದ್ದಾರೆ ಅದಕ್ಕೆ ಗೌರವ ಕೊಡುತ್ತೇವೆ ಎಂದರು.

ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ :ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸ್ವಪಕ್ಷದ ವಿರುದ್ಧ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಆನೆ ಇದ್ದಂತೆ, ಗಜ ಗಾಂಭೀರ್ಯದಿಂದ ಹೋಗುವಾಗ ನಾಯಿ ನರಿಗಳು ಬೊಗಳುತ್ತವೆ. ಯತ್ನಾಳ್ ಅವರದ್ದೇನು ಹೊಸದಲ್ಲ, ಯಾರನ್ನು ಬಿಟ್ಟಿದ್ದಾರೆ, ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಅವರನ್ನೇ ಬಿಟ್ಟಿಲ್ಲ, ಅವರ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ, ನಾಲ್ಕು ಜನ ಮಾಡಿದ್ದನ್ನು ಗುಂಪುಗಾರಿಕೆ ಅಂದ್ರೆ ಒಪ್ಪಲ್ಲ. ಯತ್ನಾಳ, ಬೆಲ್ಲದ್, ಸೋಮಣ್ಣ ಅವರಿಗಾದ ಅಸಮಾಧಾನ ಬಹಿರಂಗ ಹೊರಹಾಕಿದ್ದಾರೆ. ನಮ್ಮಲ್ಲಿ ತಪ್ಪಿದೆ ನಾವು ಸೋತಿದ್ದೇವೆ ಒಪ್ಪಿಕೊಳ್ಳುತ್ತೇನೆ. ನಮ್ಮಲ್ಲಿ ಶಿಸ್ತು ಇಲ್ಲ. ಶಿಸ್ತು ತಪ್ಪಿದವರನ್ನು ತಿದ್ದಲು ನಮ್ಮ ಪಕ್ಷದಲ್ಲಿ ಹಿರಿಯ ನಾಯಕರಿದ್ದಾರೆ ಎಂದು ತಿಳಿಸಿದರು.

ಇಂಥ ಭೀಕರ ಬರಗಾಲ ನೋಡಿಲ್ಲ: ರಾಜ್ಯದಲ್ಲಿ ಬರಗಾಲ ಬಗ್ಗೆ ರಾಜಕಾರಣವಾಗುತ್ತಿದೆ, ಪರಿಹಾರ ತರುತ್ತಿಲ್ಲ. ಹೊಸದಾಗಿ ಡಿಸಿಎಂ ಆದವರಿಗೆ ಸನ್ಮಾನ ಇರುತ್ತೆ ತಪ್ಪು ಅನ್ನೊಲ್ಲ. ಸಚಿವರಾದವರು ಹೊಲಗದ್ದೆಗಳಿಗೆ ಹೋಗಬೇಕು, ರಾಜ್ಯ ಸರಕಾರದಿಂದ ಕೊಡಬೇಕಾದ ಪರಿಹಾರ ಕೊಡಿ ಅನ್ನೋದು ನಮ್ಮ ವಾದ, ರಾಜಕಾರಣ ಮಾಡುತ್ತಾ ಕುಳಿತರೆ ರೈತರ ಗತಿ ಏನು.

ಬರಗಾಲ ಬಂದರೆ ಜಿಲ್ಲಾ ಉಸ್ತುವಾರಿಗಳು ಯಡವಿದ್ರಾ ಅನ್ನೋದು ಅನುಮಾನ ಕಾಡ್ತಿದೆ, ಇಂಥ ಭೀಕರ ಬರಗಾಲ ಎಂದೂ ನೋಡಿಲ್ಲ. ಆದರೆ ರಾಜ್ಯ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗೆ ಅನುದಾನ ಜೋಡಿಸುವುದೇ ಕೆಲಸ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೇಜಾವರ ಶ್ರೀಗಳ ಹೇಳಿಕೆಗೆ ಸ್ವಾಗತ:ಹಿಂದೂ ರಾಷ್ಟ್ರ ಮಾಡಬೇಕು ಎಂಬ ಪೇಜಾವರ ಶ್ರೀಗಳ ಹೇಳಿಕೆಗೆ ನನ್ನ ಸ್ವಾಗತವಿದೆ. ಸಿದ್ದರಾಮಯ್ಯ ವಿರೋಧ ಮಾಡುವುದು ವಿಶೇಷ ಅಲ್ಲ, ಮುಸ್ಲಿಂ ರಾಷ್ಟ್ರ ಮಾಡ್ತೀವಿ ಅಂದ್ರೆ ವಿಶೇಷ ಎಂದರು. ರಾಜ್ಯದ 224 ಶಾಸಕರು ಅವರಿಗೆ ನಮಸ್ಕಾರ ಮಾಡಿ ಹೋಗಬೇಕು ಎಂಬ ಜಮೀರ್​ ಹೇಳಿಕೆಯನ್ನು ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ನಾನಾಗಿದ್ದರೆ ಒಂದು ನಿಮಿಷ ಕ್ಯಾಬಿನೆಟ್​ನಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ. ಸಿದ್ದರಾಮಯ್ಯ ಮುಸ್ಲಿಂ ರಾಷ್ಟ್ರ ಮಾಡೋಕೆ ಹೊರಟಿದ್ದಾರೆ , ಹಿಂದೂ ರಾಷ್ಟ್ರ ಮಾಡಬೇಕು ಎನ್ನುವ ಪೇಜಾವರ ಶ್ರೀಗಳ ಹೇಳಿಕೆಗೆ ರಾಷ್ಟ್ರದ ಹಿಂದೂ ಭಕ್ತರು ಸ್ವಾಗತಿಸುತ್ತೇವೆ ಎಂದರು.

ಜಾತಿಗಣತಿ ವರದಿ ಬಿಡುಗಡೆಗೆ ವಿಳಂಬ:ಲಿಂಗಾಯತರು, ಒಕ್ಕಲಿಗರು ಜಾತಿ ಜನಗಣತಿ ವಿರೋಧಿಸುತ್ತಿದ್ದಾರೆ, ರಾಜಕಾರಣಿಗಳಿಗೆ ನಿಮ್ಮ ಸಮಾಜದ ಬಗ್ಗೆ ನಿಮಗೆ ಪ್ರೀತಿ ಇದ್ದರೆ, ಪಕ್ಷದಿಂದ ಹೊರಬಂದು ರಾಜೀನಾಮೆ ಕೊಡಿ. ಸಿದ್ದರಾಮಯ್ಯ ಸಿಎಂ ಆಗಿ ಇಷ್ಟು ವರ್ಷ ಆಯ್ತು, ಯಾಕೆ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂಓದಿ:ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: 12,577.86 ಕೋಟಿ ತುರ್ತು ಬರ ಪರಿಹಾರಕ್ಕೆ ಮನವಿ

Last Updated :Dec 19, 2023, 6:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.