ETV Bharat / state

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ಪೊಲೀಸರಿಗೆ ಜವಾಬ್ದಾರಿ ಹೆಚ್ಚಿದೆ: ಪ್ರಭು ಚವ್ಹಾಣ್

author img

By

Published : Feb 16, 2021, 9:02 PM IST

ಪ್ರಭು ಚವ್ಹಾಣ್
ಪ್ರಭು ಚವ್ಹಾಣ್

ಭಾರತ ದೇಶವು ಕೃಷಿಪ್ರಧಾನ ದೇಶವಾಗಿದ್ದು, ಗೋವುಗಳನ್ನು ನಾವು ಪೂಜ್ಯಭಾವದಿಂದ ಗೌರವಿಸುತ್ತೇವೆ. ಹೀಗಾಗಿ ನಮ್ಮ ಸರ್ಕಾರವು ಗೋವುಗಳ ಸಂರಕ್ಷಣೆಗೆಂದು ಈ ಕಾಯ್ದೆಯನ್ನು ಜಾರಿಮಾಡಿದೆ. ಇದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಪಶುಸಂಗೋಪನೆ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಬೇಕು ಎಂದು ಸಚಿವ ಪ್ರಭು ಬಿ. ಚವ್ಹಾಣ್ ಹೇಳಿದರು.

ಮೈಸೂರು: ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಜಾರಿಯಾಗಿದೆ. ಇದರೊಂದಿಗೆ ಪೋಲಿಸ್ ಇಲಾಖೆಯ ಜವಾಬ್ದಾರಿ ಹೆಚ್ಚಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ತಿಳಿಸಿದ್ದಾರೆ.

ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಹಾಗೂ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಪಶುಸಂಗೋಪನೆ ಮತ್ತು ಪೊಲೀಸ್ ಇಲಾಖೆ ಜೊತೆಗೂಡಿ ಕೆಲಸ ಮಾಡಿದರೆ ಮೈಸೂರು ಜಿಲ್ಲೆಯಲ್ಲಿ ಅಕ್ರಮ ಗೋವುಗಳ ಸಾಗಣೆ ಮತ್ತು ವಧೆಗೆ ಕಡಿವಾಣ ಬೀಳುತ್ತದೆ. ಅಲ್ಲದೆ ಚೆಕ್ ಪೋಸ್ಟ್​ನಲ್ಲಿ ಕಡ್ಡಾಯವಾಗಿ ಒಬ್ಬ ಪಶುವೈದ್ಯ ಇರಲೇಬೇಕು ಎಂದು ಹೇಳಿದರು.

ಭಾರತ ದೇಶವು ಕೃಷಿಪ್ರಧಾನ ದೇಶವಾಗಿದ್ದು, ಗೋವುಗಳನ್ನು ನಾವು ಪೂಜ್ಯಭಾವದಿಂದ ಗೌರವಿಸುತ್ತೇವೆ. ಹೀಗಾಗಿ ನಮ್ಮ ಸರ್ಕಾರವು ಗೋವುಗಳ ಸಂರಕ್ಷಣೆಗೆಂದು ಈ ಕಾಯ್ದೆಯನ್ನು ಜಾರಿಮಾಡಿದೆ. ಇದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಪಶುಸಂಗೋಪನೆ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಬೇಕು ಎಂದರು.

'ಗ್ರಾಮಸಭೆ ನಡೆಸಿ ಜಾಗೃತಿ ಮೂಡಿಸಿ'

ಗೋಹತ್ಯೆ ನಿಷೇಧ ಕಾಯ್ದೆಯ ಎಲ್ಲಾ ಅಂಶಗಳನ್ನು ರೈತರಿಗೆ ಮನದಟ್ಟಾಗುವಂತೆ ಕಾಯ್ದೆಯ ಬಗ್ಗೆ ಪ್ರತಿ ಹಳ್ಳಿಗಳಿಗೂ ತೆರಳಿ ಗ್ರಾಮಸಭೆ ನಡೆಸುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಬೇಕು. ಗಂಡು ಕರುಗಳನ್ನು ಕನಿಷ್ಠ ಮೂರು ತಿಂಗಳ ಕಾಲ ನೋಡಿಕೊಂಡರೆ ಸಾಕು, ಆನಂತರ ಇಲಾಖೆಯ ಮೂಲಕ ಕರುಗಳನ್ನು ಗೋಶಾಲೆಗಳಿಗೆ ಕಳುಹಿಸಲಾಗುತ್ತದೆ ಎಂಬುದನ್ನು ಮನವರಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮೈಸೂರಿನಲ್ಲಿ ಇರುವ ಗೋಮಾಳಗಳ ಒತ್ತುವರಿಯಾಗಿದ್ದರೆ ಅವುಗಳನ್ನು ತೆರವು ಮಾಡಿ ಮೇವು ಬೆಳೆಯಲು ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತ ಸಂಪರ್ಕ ಕೇಂದ್ರಗಳಲ್ಲಿ, ಇಲಾಖೆ ವತಿಯಿಂದ ನಡೆಸುವ ತರಬೇತಿಯಲ್ಲಿ ಹಾಗೂ ಗ್ರಾಮ ಸಭೆಗಳಲ್ಲಿ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ತಪ್ಪದೆ ಭಾಗವಹಿಸಿ ರೈತರ ಸಮಸ್ಯೆಗಳನ್ನು ಆಲಿಸಿ ಮತ್ತು ನಮ್ಮ ಇಲಾಖೆಯ ಎಲ್ಲಾ ಯೋಜನೆಗಳು ರೈತರಿಗೆ ತಲುಪುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದರು.

'ಆಸ್ಪತ್ರೆಯಲ್ಲೇ ಜಾನುವಾರುಗಳಿಗೆ ಔಷಧಿ ನೀಡಿ'

ಗ್ರಾಮೀಣ ಭಾಗದಲ್ಲಿ ಜಾನುವಾರು ಕಾಯಿಲೆಯಿಂದ ಪಶು ಆಸ್ಪತ್ರೆಗಳಿಗೆ ಬಂದರೆ ಆಸ್ಪತ್ರೆಯ ವೈದ್ಯರು ಔಷಧಿಗಾಗಿ ಹೊರಗಿನ ಅಂಗಡಿಗಳಿಗೆ ಕಳುಹಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಬೇಕು. ಜಾನುವಾರುಗಳಿಗೆ ಆಸ್ಪತ್ರೆಯಲ್ಲಿ ಔಷಧಿ ನೀಡಬೇಕು ಎಂದು ಹೇಳಿದರು.

ಜಾನುವಾರುಗಳ ಮಾಲೀಕರ ಮನೆಗೆ ವೈದ್ಯರೊಂದಿಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ಒದಗಿಸುವಂತಹ ಪಶು ಸಂಜೀವಿನಿ ಸೌಲಭ್ಯವು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಇದರಿಂದ ರೈತಾಪಿ ವರ್ಗದವರಿಗೆ, ಜಾನುವಾರು ಮಾಲೀಕರಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.

ಇಲಾಖೆಯ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿಯನ್ನು ಸಚಿವರು ಈ ಸಂದರ್ಭದಲ್ಲಿ ಅವಲೋಕಿಸಿದರು. ಎಲ್ಲಾ ಯೋಜನೆಗಳು ಶೇಕಡಾ ನೂರರಷ್ಟು ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.