ETV Bharat / state

ಸರ್ಕಾರಿ ಶಾಲೆಗೆ ಎರಡೂವರೆ ಎಕರೆ ಭೂಮಿ ದಾನ ಮಾಡಿದ ಮುಸ್ಲಿಂ ಕುಟುಂಬ

author img

By

Published : Feb 17, 2022, 2:27 PM IST

ಸರ್ಕಾರಿ ಶಾಲೆಗೆ ಭೂಮಿ ದಾನ ಮಾಡಿದ ಮುಸ್ಲಿಂ ಕುಟುಂಬ
ಸರ್ಕಾರಿ ಶಾಲೆಗೆ ಭೂಮಿ ದಾನ ಮಾಡಿದ ಮುಸ್ಲಿಂ ಕುಟುಂಬ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹಂಪಾಪುರ ಹೋಬಳಿಯ ಬಾಚೇಗೌಡನ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಸ್ಲಿಂ ಕುಟುಂಬವೊಂದು ಎರಡೂವರೆ ಎಕರೆ ಭೂಮಿ ದಾನ ಮಾಡಿದೆ.

ಮೈಸೂರು: ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ವಿಚಾರದ ಕುರಿತು ಭಾರಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಮುಸ್ಲಿಂ ಕುಟುಂಬವೊಂದು ಸರ್ಕಾರಿ ಶಾಲೆಗೆ ಎರಡೂವರೆ ಎಕರೆ ಭೂಮಿ ದಾನ ಮಾಡುವ ಮೂಲಕ ಮಾದರಿಯಾಗಿದೆ.

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹಂಪಾಪುರ ಹೋಬಳಿಯ ಬಾಚೇಗೌಡನ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿವಂಗತ ಮಹಮ್ಮದ್ ಜಾಫರ್ ಕುಟುಂಬಸ್ಥರು ಭೂಮಿ ದಾನ ಕೊಟ್ಟಿದ್ದಾರೆ.


ಮಹಮ್ಮದ್ ಜಾಫರ್ ಕುಟುಂಬಕ್ಕೆ ಸೇರಿದ ಒಟ್ಟು 12 ಎಕರೆ ಜಮೀನಿದ್ದು, ಅದರಲ್ಲಿ 60 ಲಕ್ಷ ಮೌಲ್ಯದ 2 ಎಕರೆ 20 ಕುಂಟೆ ಜಮೀನನ್ನು ದಿವಂಗತ ಮಹಮ್ಮದ್ ಜಾಫರ್ ಆಸೆಯಂತೆ ಶಾಲೆಗೆ ದಾನ ಮಾಡಿದ್ದಾರೆ. ನಿನ್ನೆ ಹೆಚ್.ಡಿ.ಕೋಟೆ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಶಾಲೆಯ ಹೆಸರಿಗೆ ನೋಂದಣಿ ಮಾಡಿಸಿದ ದಾನಪತ್ರವನ್ನು ಮಗ ಮಹಮ್ಮದ್ ರಾಖೀಬ್ ನೀಡಿದರು.

ಈ ವೇಳೆ ಮಾತನಾಡಿದ ಅವರು, 'ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಕೊಠಡಿ ಕೊರತೆ, ಜೊತೆಗೆ ಆಟದ ಮೈದಾನದ ಕೊರತೆಯೂ ಇದೆ. ಇದರ ಜೊತೆಗೆ ಆಂಗ್ಲ ಮಾದ್ಯಮ ಶಾಲೆಯನ್ನು ತೆರೆಯಲು ಈ ಜಮೀನು ಉಪಯೋಗ ಆಗಲಿದೆ' ಎಂದು ತಿಳಿಸಿದರು.

ತಂದೆ ಆಸೆ ನೆರವೇರಿಸಿದ ಮಕ್ಕಳು: ಬಾಚೇಗೌಡನ ಹಳ್ಳಿ ಸಮೀಪದ ಮಾರ್ಚಳ್ಳಿ ಗ್ರಾಮದಲ್ಲಿ ವಾಸವಿದ್ದ ದಿವಂಗತ ಮಹಮ್ಮದ್ ಜಾಫರ್ ಅವರು ಸಾಯುವ ಮುನ್ನ ಎರಡು ಎಕರೆ ಭೂಮಿಯನ್ನು ಸರ್ಕಾರಿ ಶಾಲೆಗೆ ದಾನ ನೀಡುವಂತೆ ಹೇಳಿದ್ದರು. ಅದರಂತೆ ತಂದೆ ನಿಧನರಾದ ನಂತರ ನಾಲ್ಕು ಜನ ಮಕ್ಕಳು ಒಟ್ಟಿಗೆ ಸೇರಿ ಸರ್ಕಾರಿ ಶಾಲೆಯ ಮಕ್ಕಳಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ದಾನ ನೀಡಿದ್ದಾರೆ.

ಕೃತಜ್ಞತೆ ಸಲ್ಲಿಸಿದ ಗ್ರಾಮಸ್ಥರು: ಕೃಷಿ ಮೂಲದ ಈ ಮುಸ್ಲಿಂ ಕುಟುಂಬ ಸುಮಾರು 60 ಲಕ್ಷ ಮೌಲ್ಯದ ಎರಡೂವರೆ ಎಕರೆ ಭೂಮಿಯನ್ನು ಶಾಲೆಯ ಹೆಸರಿಗೆ ದಾನ ಮಾಡಿರುವುದಕ್ಕೆ ಗ್ರಾಮದ ಜನರು, ಶಾಲೆಯ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.