ETV Bharat / state

ಸಿದ್ದರಾಮಯ್ಯ ಮೊದಲು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋದನ್ನು ಹೇಳಲಿ: ಪ್ರತಾಪ್ ಸಿಂಹ

author img

By

Published : Dec 10, 2022, 5:40 PM IST

mp-pratap-simha-lashed-out-against-siddaramaiah-statement
ಸಿದ್ದರಾಮಯ್ಯ ಮೊದಲು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಿ: ಪ್ರತಾಪ್ ಸಿಂಹ ವಾಗ್ದಾಳಿ

ಮುಂದಿನ ಚುನಾವಣೆಯಲ್ಲಿ ಗೆದ್ದು ಸಿಎಂ ಆಗುತ್ತೇನೆ ಎನ್ನುವ ಸಿದ್ದರಾಮಯ್ಯನವರಿಗೆ ಕ್ಷೇತ್ರ ಹುಡುಕುವ ದಯನೀಯ ಸ್ಥಿತಿ ಏಕೆ ಬಂತು? ಎಂದು ಪ್ರತಾಪ್​ ಸಿಂಹ ಪ್ರಶ್ನಿಸಿದರು.

ಸಿದ್ದರಾಮಯ್ಯ ಮೊದಲು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಿ: ಪ್ರತಾಪ್ ಸಿಂಹ

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವು ಯಾವುದೇ ಪ್ರಚಾರ ಮಾಡದೆ ಸುಮ್ಮನೆ ಇದ್ದರು ಕಾಂಗ್ರೆಸ್ ಗೆಲ್ಲುತ್ತದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಇಂದು ನಗರದ ಮೂಡ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಮೈಸೂರು- ಮಡಿಕೇರಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಮುಂದಿನ ಎರಡು ವಾರಗಳಲ್ಲಿ ಡಿಪಿಆರ್ ಸಿದ್ಧವಾಗಲಿದ್ದು, ಟೆಂಡರ್​ಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಜನವರಿ ಮೊದಲ ವಾರದಲ್ಲಿ ಟೆಂಡರ್ ಕರೆಯಲಾಗುವುದು ಎಂದರು.

ಮೈಸೂರು ಮತ್ತು ಬೆಂಗಳೂರು ನಡುವಿನ ಹೈವೇ ಕಾಮಗಾರಿ ಮದ್ದೂರಿನ ಬೈ ಪಾಸ್ ಫ್ಲೈ ಓವರ್ ಈಗಾಗಲೇ ಸಂಚಾರಕ್ಕೆ ಮುಕ್ತವಾಗಿದ್ದು, ಶ್ರೀರಂಗಪಟ್ಟಣ ಬೈ ಪಾಸ್ ಅನ್ನು ಬರುವ ಸೋಮವಾರದಿಂದ ಮುಕ್ತಗೊಳಿಸಲಾಗುವುದು. ಜೊತೆಗೆ ಮಂಡ್ಯ ಬೈ ಪಾಸ್ ಅನ್ನು ಜನವರಿ ಮೊದಲ ಅಥವಾ ಎರಡನೇ ವಾರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಅಲ್ಲಿ ಈಗ ಯಾವುದೇ ಸಮಸ್ಯೆ ಇಲ್ಲ. ಸಣ್ಣ ಪುಟ್ಟ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಕ್ಷೇತ್ರ ಯಾವುದೆಂದು ಹೇಳಲಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾದಿಂದ ಬಂದು ಚಾಮುಂಡೇಶ್ವರಿಯಲ್ಲಿ ನಿಂತು ಸೋತಿದ್ದರು. ಬಾದಾಮಿಯಲ್ಲಿ ಸಣ್ಣ ಅಂತರದಿಂದ ಗೆದ್ದಿದ್ದ ಸಿದ್ದರಾಮಯ್ಯ, ಈ ಬಾರಿ ಚುನಾವಣೆಯಲ್ಲಿ ಕೋಲಾರಕ್ಕೆ ಅಥವಾ ವರುಣಾಗೆ ಹೋಗಬೇಕೋ ಎಂಬ ಗೊಂದಲದಲ್ಲಿದ್ದಾರೆ. ಈಗ ವರುಣಾ ಕ್ಷೇತ್ರದ ಸಣ್ಣ ಸಣ್ಣ ಹಳ್ಳಿಗಳಿಗೆ ಏಕೆ ಭೇಟಿ ನೀಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಮುಂದಿನ ಚುನಾವಣೆಯಲ್ಲಿ ಗೆದ್ದು ಸಿಎಂ ಆಗುತ್ತೇನೆ ಎನ್ನುವ ಸಿದ್ದರಾಮಯ್ಯನವರಿಗೆ ಕ್ಷೇತ್ರ ಹುಡುಕುವ ದಯನೀಯ ಸ್ಥಿತಿ ಏಕೆ ಬಂತು? ಮೊದಲನೆಯದಾಗಿ ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಮೊದಲು ಸಿದ್ದರಾಮಯ್ಯ ತಾವು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ಹೇಳಲಿ. ಒಂದು ಚೇರ್ ನಿಂದ ಮತ್ತೊಂದು ಚೇರಿಗೆ ಹೋಗಿ ಕೂರಲು ಇದೇನು ಮ್ಯೂಸಿಕಲ್ ಚೇರ್ ಆಟ ಅಲ್ಲ. ಪ್ರತಿ ಚುನಾವಣೆಯಲ್ಲೂ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕುವ ಸಿದ್ದರಾಮಯ್ಯನವರ ಮಾತಿಗೆ ಮನ್ನಣೆ ಕೊಡುವ ಅಗತ್ಯ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

ಗುಜರಾತ್​ನಲ್ಲಿ ಐತಿಹಾಸಿಕ ಗೆಲುವು: ಕಳೆದ 27 ವರ್ಷಗಳಿಂದ ಬಿಜೆಪಿ ಗುಜರಾತ್​ನಲ್ಲಿ ಅಧಿಕಾರ ನಡೆಸುತ್ತಿದ್ದು, ಈ ಬಾರಿ ಐತಿಹಾಸಿಕ ಗೆಲುವು ಸಾಧಿಸಿದೆ. ಆ ಮೂಲಕ ಮೋದಿ ನಾಯಕತ್ವಕ್ಕೆ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದು, ಮೋದಿಯವರು ಕರ್ನಾಟಕಕ್ಕೆ ಬಂದ್ರೆ ಇಲ್ಲೂ ಸಹ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂದರು.

ಇದನ್ನೂ ಓದಿ:ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೆ ಪ್ರಭಾವ ಬೀರುವುದಿಲ್ಲ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.