ETV Bharat / state

ನಾನು ಬದುಕಿರುವವರೆಗೂ ಆರ್​ಎಸ್ಎಸ್ ವಿರೋಧಿಸುತ್ತೇನೆ: ಸಿದ್ದರಾಮಯ್ಯ

author img

By

Published : Mar 7, 2023, 2:28 PM IST

Leader of Opposition Siddaramaiah
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ಆರ್​ಎಸ್​ಎಸ್​ ವಿರುದ್ದ ಸಿದ್ದರಾಮಯ್ಯ ಕಿಡಿಕಾರಿದರು.

ಸಿದ್ದರಾಮಯ್ಯ ಭಾಷಣ

ಮೈಸೂರು : ಆರ್‌ಆರ್‌ಎಸ್‌, ಹಿಂದೂ ಮಹಾಸಭಾ ಸಂವಿಧಾನ ವಿರೋಧಿಗಳು. ಬಿಜೆಪಿ ಮೇಲ್ಜಾತಿ ಮತ್ತು ಮೇಲ್ವರ್ಗದವರ ಪಕ್ಷ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ತಿ.ನರಸೀಪುರ ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷ ಸೇರ್ಪಡೆ ಹಾಗೂ ಕುರುಬರ ಸಂಘದ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಇದೇ ವೇಳೆ ನಾನು ಬದುಕಿರುವವರೆಗೂ ಆರ್‌ಎಸ್‌ಎಸ್‌ ವಿರೋಧಿಸುತ್ತೇನೆ ಎಂದರು.

ನನಗೆ ಅಧಿಕಾರ ಇರಲಿ, ಹೋಗಲಿ. ನಾನು ಬದುಕಿರುವವರೆಗೂ ಆರ್​ಎಸ್ಎಸ್ ವಿರೋಧ ಮಾಡುತ್ತೇನೆ. ಅಧಿಕಾರಗೊಸ್ಕರ ನಾನು ರಾಜಕೀಯ ಮಾಡೋಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಹಿಂದೂ ಧರ್ಮವನ್ನು ಯಾಕೆ ಬಿಟ್ಟರು? ಹಿಂದೂ ಆಗಿ ಹುಟ್ಟಿಯೂ ಅವರಿಗೆ ದಲಿತ ವರ್ಗ ಎದುರಿಸುತ್ತಿರುವ ಸಮಸ್ಯೆಗಳನ್ನು ಸುಧಾರಣೆ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಬೌದ್ಧ ಧರ್ಮ ಸ್ವೀಕರಿಸಿದರು. ಆರ್​ಎಸ್‌ಎಸ್‌ನವರಿಗೆ ಮನುಸ್ಮೃತಿ ಆಧಾರದ ಸಂವಿಧಾನ ಬೇಕು ಎಂದು ಕಿಡಿಕಾರಿದರು.

ಎಲ್ಲರೂ ಸಮಾನರು ಅಂತಾನೇ ಬಸವಣ್ಣ ಅನುಭವ ಮಂಟಪ ಮಾಡಿದರು. ಯಾವ ಧರ್ಮದಲ್ಲಿ ಮನುಷ್ಯ ಮನುಷ್ಯನನ್ನು ವಿರೋಧ ಮಾಡು ಅಂತ ಹೇಳುತ್ತೆ? ನಾನು ಒಬ್ಬ ಹಿಂದೂ. ನನ್ನನ್ನು ಯಾಕೆ ವಿರೋಧ ಮಾಡುತ್ತಾರೆ. ವಿದ್ಯಾವಂತ ಯುವಕರು ಭಾರತ ಸಂವಿಧಾನವನ್ನು ಓದಬೇಕು. ಮುಖ್ಯವಾಗಿ ಅಂಬೇಡ್ಕರ್ ಅವರನ್ನು ಪಾಲನೆ ಮಾಡಬೇಕು ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾ ಖಾನ್ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿ, ಅವರ ಭಾಷಣ ಕೇಳಿ ಚಪ್ಪಾಳೆ ತಟ್ಟುವ ನಾವು ಶೂದ್ರರು ಎಂದರು. ಎಸ್​ಇಪಿ ಮತ್ತು ಟಿಎಸ್​ಪಿ ಅನುದಾನವನ್ನು ಬಜೆಟ್‌ ನಲ್ಲಿ ಕಡಿಮೆ ಮಾಡಿದ್ದಾರಲ್ಲ. ಇದರ ಬಗ್ಗೆ ಯಾರಾದರೂ ಕೇಳಿದ್ದೀರಾ. ಗೋವಿಂದ ಕಾರಜೋಳ, ಶ್ರೀನಿವಾಸ್ ಪ್ರಸಾದ್ ಅಳಿಯ, ಶಾಸಕ ಹರ್ಷವರ್ಧನ್ ಕೇಳಿದ್ದಾರಾ? ಮತ್ತೆ ಯಾಕೆ ಬಿಜೆಪಿಯಲ್ಲಿ ಇದ್ದೀರಾ. ಕಾರಜೋಳ ಸಚಿವರಾಗಿದ್ದು, ಮಜಾ ಮಾಡ್ಕೊಂಡು ಕೂತಿದ್ದಾನೆ ಎಂದರು.

ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ ಸಿದ್ದರಾಮಯ್ಯರಿಗೆ ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದರು. ಅಭಿಮಾನಿಗಳು ಜೆಸಿಬಿ ಮೂಲಕ ಬೃಹತ್ ಸೇಬಿನ ಹಾರ ಹಾಕಿದರು. ಕಾರ್ಯಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಎ.ಆರ್.ಕೃಷ್ಣಮೂರ್ತಿ ಸೇರಿದಂತೆ ಮುಖಂಡರು ಇದ್ದರು.

ಇದನ್ನೂ ಓದಿ :ನಮ್ಮ ಅವಧಿಯಲ್ಲಿ ಕಾಫಿ ತಿಂಡಿ ಊಟಕ್ಕೆ ಖರ್ಚಾಗಿದ್ದು 3.26 ಕೋಟಿ ರೂ: ಬಿಜೆಪಿಯ 200 ಕೋಟಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.