ETV Bharat / state

ನಮ್ಮ ಅವಧಿಯಲ್ಲಿ ಕಾಫಿ ತಿಂಡಿ ಊಟಕ್ಕೆ ಖರ್ಚಾಗಿದ್ದು 3.26 ಕೋಟಿ ರೂ: ಬಿಜೆಪಿಯ 200 ಕೋಟಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು

author img

By

Published : Mar 6, 2023, 8:24 PM IST

ನಮ್ಮ ಸರ್ಕಾರದ ಅವಧಿಯಲ್ಲಿ ಕಾಫಿ, ತಿಂಡಿ ಮತ್ತು ಊಟಕ್ಕೆ 3.26 ಕೋಟಿ ರೂ. ಖರ್ಚಾಗಿದೆ. ಆದರೆ ಬಿಜೆಪಿಯವರು 200 ಕೋಟಿ ರೂ ಖರ್ಚಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

ಸಿದ್ದರಾಮಯ್ಯ Siddaramaih
ಸಿದ್ದರಾಮಯ್ಯ

ಬೆಂಗಳೂರು: 2013-14 ರಿಂದ 2017-18 ರವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ 3 ಕೋಟಿ 26 ಲಕ್ಷ ರೂ ಕಾಫಿ, ತಿಂಡಿ ಮತ್ತು ಊಟ ಇತ್ಯಾದಿ ಆತಿಥ್ಯದ ವೆಚ್ಚಕ್ಕೆ ಖರ್ಚಾಗಿದೆ. ಆದ್ರೆ 200 ಕೋಟಿ ರೂ ಖರ್ಚು ಮಾಡಿದ್ದಾರೆ ಎಂದು ಸುಳ್ಳನ್ನು ಉತ್ಪಾದಿಸಿ ನಾಡಿನ ಜನತೆಗೆ ದ್ರೋಹ ಬಗೆದಿದ್ದಾರೆ. ಇದು ಐಪಿಸಿ ಕಲಂ 420 ಗೆ ಅರ್ಹವಾದ ಪ್ರಕರಣ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇಡೀ ಬಿಜೆಪಿಯೇ ಸುಳ್ಳಿನ ಕಾರ್ಖಾನೆ ಎಂಬುದನ್ನು ಪದೇ ಪದೆ ಪ್ರೂವ್ ಮಾಡುತ್ತಿದೆ. ಇಂದೂ ಸಹ ಮರಿ ಸುಳ್ಳಿನ ಮಷಿನ್​ ಒಂದು ನಮ್ಮ ಸರ್ಕಾರದ ಅವಧಿಯಲ್ಲಿ ಕಾಫಿ ತಿಂಡಿಗೆಂದು 200 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂಬುದೊಂದು ಸುಳ್ಳನ್ನು ಉತ್ಪಾದಿಸಿ ಮೀಡಿಯಾಗಳಿಗೆ ಬಿಡುಗಡೆ ಮಾಡಿದೆ. ಈ ಬಿಜೆಪಿಗರು ಕರ್ನಾಟಕದ ಜನರನ್ನೇನು ಮೂರ್ಖರು ಎಂದುಕೊಂಡಿದ್ದಾರಾ? ಇವರಿಗೆ ಆತ್ಮಸಾಕ್ಷಿ ಎಂಬುದೇನಾದರೂ ಇದೆಯಾ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. 40 ಪರ್ಸೆಂಟ್ ಹಗರಣ, ಮಾಡಾಳ್ ವಿರೂಪಾಕ್ಷಪ್ಪ ಅವರ ಹಗರಣದಿಂದ ಕಂಗಾಲಾಗಿರುವ ಬಿಜೆಪಿಯು ಇಂಥ ಸುಳ್ಳುಗಳನ್ನು ಉತ್ಪಾದಿಸಿಕೊಂಡು ಓಡಾಡುತ್ತಿದೆ ಎಂದು ದೂರಿದರು.

ವಾಸ್ತವ ಏನೆಂದರೆ 2013-14 ರಿಂದ 2017-18 ರವರೆಗೆ ಕಾಫಿ ತಿಂಡಿ ಸೇರಿದಂತೆ ಮುಖ್ಯಮಂತ್ರಿಗಳ ಕಚೇರಿಯು ಆತಿಥ್ಯಕ್ಕೋಸ್ಕರ ಖರ್ಚು ಮಾಡಿದ ದಾಖಲೆಗಳನ್ನು ಸರ್ಕಾರ ನನಗೆ ನೀಡಿದೆ. 13-5-2013 ರಿಂದ 30-01-2014 ರವರೆಗೆ 85,13 ಲಕ್ಷ ರೂಪಾಯಿಗಳು, 2014-15 ರಲ್ಲಿ 58.45 ಲಕ್ಷ ರೂ, 2015-16 ರಲ್ಲಿ 39.20 ಲಕ್ಷ ರೂ, 2016-17 ರಲ್ಲಿ 66 ಲಕ್ಷ ಮತ್ತು 2017-18 ರಲ್ಲಿ 77.26 ಲಕ್ಷ ರೂ ಖರ್ಚಾಗಿದೆ. ಒಟ್ಟಾರೆ 5 ವರ್ಷಗಳ ನಮ್ಮ ಸಕಾರದ ಅವಧಿಯಲ್ಲಿ 3.26 ಕೋಟಿ ರೂ ಮಾತ್ರ ಮುಖ್ಯಮಂತ್ರಿಗಳ ಕಚೇರಿ ಸಭೆ, ಜನತಾದರ್ಶನಗಳು ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಕಾಫಿ, ತಿಂಡಿ ಮತ್ತು ಊಟ ಮುಂತಾದವುಗಳಿಗೆ ಖರ್ಚಾಗಿದೆ ಎಂದು ವಿವರಿಸಿದ್ದಾರೆ.

ಈ ಮಾಹಿತಿ ಬಿಜೆಪಿಯವರಿಗಿದ್ದರೂ ಸಹ ರಾಜ್ಯದ ಜನರಿಗೆ 200 ಕೋಟಿ ಖರ್ಚು ಮಾಡಿದ್ದಾರೆ ಎಂದು ಸುಳ್ಳು ಹೇಳುವ ಮೂಲಕ ನಾಡಿನ ಜನರಿಗೆ ದ್ರೋಹ ಎಸಗಿದ್ದಾರೆ. ಇವರ ಮೇಲೆ ಮುಖ್ಯಮಂತ್ರಿಗಳು ಕ್ರಿಮಿನಲ್ ಮೊಕದ್ದಮೆ ಹೂಡಲು ಅಧಿಕಾರಿಗಳಿಗೆ ನಿರ್ದೇಶನ ಕೊಡುತ್ತಾರಾ ಎಂಬುದನ್ನು ಕಾದು ನೋಡುತ್ತೇನೆ. ನಿರ್ದೇಶನ ನೀಡದಿದ್ದರೆ ಇಡೀ ಬಿಜೆಪಿಯೇ ನನ್ನ ವಿರುದ್ಧ ಸುಳ್ಳಿನ ಪಿತೂರಿ ನಡೆಸುತ್ತಿದೆ ಎಂಬುದನ್ನು ಜನರು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಾರೆ.

ಇನ್ನು ಎಜಿ ಆಡಿಟ್ ವಿಚಾರಕ್ಕೆ ಬಂದರೆ ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ 2021 ರಲ್ಲಿ 41,09,924 ರೂ [ 7.54 ಕೋಟಿ] ಮತ್ತು ಫೆಬ್ರವರಿ 2022 ರಲ್ಲಿ 3,42,43,290 ರೂ ಕೋಟಿ ಖರ್ಚು ಮಾಡಿರುವುದರಲ್ಲಿ ದಾಖಲೆಗಳಿಲ್ಲ. ಡಿಸ್ಕ್ರಿಪೆನ್ಸಿಗಳಿವೆ ಎಂದು ಎಜಿಯವರು ತಮ್ಮ ವರದಿಯಲ್ಲಿ ಹೇಳಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ನಾನು ಲೆಕ್ಕ ಕೊಟ್ಟಿದ್ದೇನೆ. ಹಾಗೆಯೇ ಬಸವರಾಜ್ ಬೊಮ್ಮಾಯಿಯವರು 2019 ರ ಜುಲೈನಿಂದ ಈವರೆಗೆ ಎಷ್ಟು ಖರ್ಚಾಗಿದೆ ಎಂಬುದನ್ನು ಜನರ ಮುಂದೆ ಇಡಬೇಕೆಂದು ಆಗ್ರಹಿಸಿದರು.

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ವಿರುದ್ಧ ಕಿಡಿ: ಬಿಜೆಪಿ ಮಾಡುತ್ತಿರುವುದು ವಿಜಯ ಸಂಕಲ್ಪ ಯಾತ್ರೆಯಲ್ಲ. ಭ್ರಷ್ಟಾಚಾರ ಸಂಕಲ್ಪ ಯಾತ್ರೆ ಮತ್ತು ಗುಜರಾತಿನ ಅಂಬಾನಿ, ಅದಾನಿಗಳಿಗೆ ರಾಜ್ಯವನ್ನು ಅಡವಿಡಲು ನಡೆಸುತ್ತಿರುವ ಸಂಚಿನ ಯಾತ್ರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ: ಸಿಎಂ ಕಚೇರಿ ಕಾಫಿ - ತಿಂಡಿಗೆ 200 ಕೋಟಿ ರೂ.‌ದುಂದು ವೆಚ್ಚ: ಎನ್.ಆರ್.ರಮೇಶ್ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.