ETV Bharat / state

Anna Bhagya Scheme: 'ಪುಕ್ಸಟ್ಟೆ ಅಕ್ಕಿ ಕೊಡುವಂತೆ ನಾವು ಕೇಳಿಲ್ಲ'- ಕೇಂದ್ರದ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ

author img

By

Published : Jun 15, 2023, 6:08 PM IST

ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದರು.

DK Shivakumar angry on central government
DK Shivakumar angry on central government

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ

ಮೈಸೂರು : "ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ತಾರತಮ್ಯವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ, ಹೋರಾಟ ಮಾಡಲು ಕಾರ್ಯಕ್ರಮ ರೂಪಿಸುತ್ತೇವೆ" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಮಾತನಾಡಿದ ಅವರು, "ಕೇಂದ್ರಕ್ಕೆ ಅಕ್ಕಿ ಕೊಡುವಂತೆ ನಾವು ಪುಕ್ಸಟ್ಟೆ ಕೇಳಿಲ್ಲ. ನೀವು ಯಾವ ರೀತಿ ಅಕ್ಕಿ ಕೊಡುತ್ತಿದ್ದಿರೋ ಅದೇ ರೀತಿ ಕೊಡಿ. ಜೂನ್ ಒಂದರಿಂದ ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುತ್ತೇವೆಂದು ತೀರ್ಮಾನ ಮಾಡಿದ್ದೇವೆ. ಆದರೆ, ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂದು ಹೇಳಿದೆ. ಈಗಾಗಲೇ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೆಲಂಗಾಣ, ಛತ್ತಿಸ್​ಗಢ ಮುಂತಾದ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತಿದ್ದಾರೆ. ಕೇಂದ್ರದ ತಾರತಮ್ಯವನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ನಮಗೆ ಕೊಡಬೇಕಾಗುತ್ತದೆ ಎಂಬ ಕಾರಣದಿಂದ ಬೇರೆ ರಾಜ್ಯಗಳಿಗೂ ಕೊಡಬೇಕಾದ ಅಕ್ಕಿಯ ಸರಬರಾಜನ್ನೂ ಸಹ ಕೇಂದ್ರ ಸರ್ಕಾರ ಹಿಂಪಡೆದಿದೆ" ಎಂದರು.

"ಬಿತ್ತನೆ ಬೀಜ ಹಂಚಿಕೆ ಮತ್ತು ರಸಗೊಬ್ಬರ ಬಗ್ಗೆ ಪಾರದರ್ಶಕತೆ ಇರಬೇಕು. ಅದಕ್ಕೊಂದು ನಿಯಮ ಇದೆ. ಹೇಗೆ, ಏನು, ಎಷ್ಟು ಕೆಜಿ ಕೊಡಬೇಕು ಎಂದು ತಿಳಿಸಲಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಓಪನ್ ಮಾರ್ಕೆಟ್​ನಲ್ಲಿ ಖರೀದಿ ಮಾಡಲು ಸಾಧ್ಯವಿಲ್ಲ. ನ್ಯಾಯಬದ್ಧವಾಗಿರುವ ಕೆಲವು ಸಂಸ್ಥೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೆಲವು ಸಂಸ್ಥೆಗಳಿದ್ದು, ಅದರ ಪ್ರಕಾರವೇ ನಾವು ಖರೀದಿ ಮಾಡಬೇಕು" ಎಂದು ಡಿಕೆಶಿ ಹೇಳಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ, ಉಪ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಮೈಸೂರಿನ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಪೊಲೀಸ್​ ಇಲಾಖೆ ವತಿಯಿಂದ ಗೌರವ ವಂದನೆ ಸ್ವೀಕರಿಸಿದರು.

ಇದನ್ನೂ ಓದಿ: Congress Guarantee: ಜೂನ್​ನಿಂದಲೇ 10 ಕೆಜಿ ಅಕ್ಕಿ ನೀಡಿ, ಮಾತು ತಪ್ಪಿದರೆ ಜನರೊಂದಿಗೆ ಸೇರಿ ಪ್ರತಿಭಟನೆ: ಬೊಮ್ಮಾಯಿ ಎಚ್ಚರಿಕೆ

ಹೋರಾಟದ ಎಚ್ಚರಿಕೆ ನೀಡಿದ ಬೊಮ್ಮಾಯಿ: "ಅನ್ನಭಾಗ್ಯಕ್ಕೆ ಹಣಕಾಸಿನ ವ್ಯವಸ್ಥೆ ಮಾಡಲು ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರದ ಕಡೆ ಬೆರಳು ಮಾಡದೇ ಹೊರಗಡೆಯಿಂದ ಖರೀದಿ ಮಾಡಿಯಾದರೂ ಅನ್ನಭಾಗ್ಯ ಯೋಜನೆಯಡಿ ನೀಡಿದ್ದ ಭರವಸೆಯಂತೆ ತಲಾ 10 ಕೆಜಿ ಅಕ್ಕಿಯನ್ನು ಪಡಿತರದಾರರಿಗೆ ನೀಡಬೇಕು. ಅಕ್ಕಿ ನೀಡಲು ಆಗದಿದ್ದರೆ ಪಡಿತರದಾರರ ಖಾತೆಗಳಿಗೆ ಡಿಬಿಟಿ ಮಾಡಿ. ಹಣಪಾವತಿ ಮಾಡಿ ಇಲ್ಲವಾದರೆ, ಜನರೊಂದಿಗೆ ಸೇರಿ ಪ್ರತಿಭಟನೆ ಮಾಡುತ್ತೇವೆ" ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.