ETV Bharat / state

ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಭಾವಿಸಿ: ಸಿದ್ದರಾಮಯ್ಯ

author img

By

Published : Apr 13, 2023, 5:51 PM IST

consider-myself-a-candidate-for-chamundeshwari-siddaramaiah
ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಭಾವಿಸಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದು ಚಾಮುಂಡೇಶ್ವರಿ ಕ್ಷೇತ್ರದ ಕೂರ್ಗಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರ ಜೊತೆ ಪೂರ್ವಭಾವಿ ಸಭೆ ನಡೆಸಿದರು.

ಮೈಸೂರು: "ಚಾಮುಂಡೇಶ್ವರಿ ಕ್ಷೇತ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿದರೂ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದೀರಿ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೆಗೌಡ ನೆಪಮಾತ್ರ, ನಾನೇ ಇಲ್ಲಿ ಅಭ್ಯರ್ಥಿ ಎಂದೇ ಭಾವಿಸಿ. ಹಾಗಾಗಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ, ಅವಕಾಶವಾದಿ ಜಿ.ಟಿ.ದೇವೆಗೌಡನನ್ನು ಸೋಲಿಸಿ" ಎಂದು ಜೆಡಿಎಸ್​ ಅಭ್ಯರ್ಥಿ ಜಿ.ಟಿ.ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಕೂರ್ಗಳ್ಳಿಯಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೆಗೌಡ ಸಮರ್ಥ ಅಭ್ಯರ್ಥಿ ಅಲ್ಲದಿದ್ದರೂ, ಈ ಕ್ಷೇತ್ರಕ್ಕೆ 11 ಮಂದಿ ಟಿಕೆಟ್​​ ಬಯಸಿ ಅರ್ಜಿ ಸಲ್ಲಿಸಿದ್ದರು. ಅವರೆಲ್ಲರೂ ಸಮರ್ಥರೆೇ. ಈಗ ತಮ್ಮಲ್ಲಿರುವ ಭಿನ್ನಮತ ಮರೆತು, ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಈ ಬಾರಿ ಚುನಾವಣೆ ರಾಜ್ಯದ ಹಿತದೃಷ್ಟಿಯಿಂದ ಮಹತ್ವದ ಸ್ಥಾನ ಪಡೆದಿದೆ. ನಾವು ಯಾರೂ ಇದನ್ನು ಹಗುರವಾಗಿ ಪರಿಗಣಿಸಬಾರದು. ಇಲ್ಲಿ ನಾನೇ ಅಭ್ಯರ್ಥಿ ಎಂದು ಭಾವಿಸಿ, ಎಲ್ಲರೂ ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.

ಜಿ.ಟಿ.ದೇವೇಗೌಡ ಅವಕಾಶವಾದಿ: ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರಲು ಮುಂದಾಗಿದ್ದ. ನನ್ನ ಜೊತೆ ಮಾತುಕತೆ ನಡೆಸಿದ್ದ. ನಂತರ ಅಂತರ ಕಾಯ್ದುಕೊಂಡ‌‌. ಈಗ ಜೆಡಿಎಸ್ ಅಭ್ಯರ್ಥಿಯಾಗಿದ್ದಾನೆ. ಜೆಡಿಎಸ್ ಯಾವುದೇ ಕಾರಣಕ್ಕೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ. ಜೆಡಿಎಸ್‌ನವರು ನನ್ನನ್ನು ಹೊರ ಹಾಕಿದರು. ಆಗ ಜಿ.ಟಿ.ದೇವೇಗೌಡ ಮಂತ್ರಿ ಆಗುವ ಆಸೆಯಿಂದ ಅಲ್ಲೇ ಉಳಿದುಕೊಂಡ. ಅವರನ್ನು ಹುಣಸೂರಿನಲ್ಲಿ ಗೆಲ್ಲಿಸಿದವರು ಯಾರು ಎಂದು ಹೇಳಲಿ ಎಂದರು.

ಚಾಮುಂಡೇಶ್ವರಿ ಕ್ಷೇತ್ರದ ಕೂರ್ಗಳ್ಳಿಯಲ್ಲಿ ನಡೆದ ಪೂರ್ವಭಾವಿ ಸಭೆ
ಚಾಮುಂಡೇಶ್ವರಿ ಕ್ಷೇತ್ರದ ಕೂರ್ಗಳ್ಳಿಯಲ್ಲಿ ನಡೆದ ಪೂರ್ವಭಾವಿ ಸಭೆ

ಇದನ್ನೂ ಓದಿ: ಪರಿವರ್ತನೆಗೆ ಬೇಸರ ಬೇಡ, ಟಿಕೆಟ್‌ ಕೈತಪ್ಪಿದವರಿಗೆ ಪಕ್ಷ ಬೇರೆ ಜವಾಬ್ದಾರಿ ನೀಡಲಿದೆ: ಅಣ್ಣಾಮಲೈ

ಯಡಿಯೂರಪ್ಪನವರ ಮಗ ವಿಜಯೇಂದ್ರ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ ಎಂಬ ಕಾರಣದಿಂದ, ಮಂತ್ರಿ ಮಂಡಲವನ್ನೇ ವಿಸ್ತರಣೆ ಮಾಡಲಿಲ್ಲ. ಬಿಜೆಪಿ ಮತ್ತು ಜೆಡಿಎಸ್​​ಗೆ ಸಿದ್ದರಾಮಯ್ಯ ಅವರನ್ನು ಮುಗಿಸಬೇಕೆಂಬ ಏಕೈಕ ಉದ್ದೇಶ ಹೊಂದಿದ್ದು, ಸಿದ್ದರಾಮಯ್ಯ ಎಂದರೆ ಎಲ್ಲರಿಗೂ ಭಯ. ರಾಜ್ಯದ ಜನ ನನ್ನ ಜೊತೆ ಇರುವವರೆಗೂ ನನ್ನನ್ನು ಯಾರು ಏನು ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಈ ಬಾರಿ 100ಕ್ಕೆ 200ರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಜಿ.ಟಿ.ದೇವೇಗೌಡನಿಗಿಂತ ಹೆಚ್ಚಿನ ಕೆಲಸ ಮಾಡಿದ್ದೇನೆ. ಆದ್ದರಿಂದ ಈ ಬಾರಿ ಜಿ.ಟಿ.ದೇವೇಗೌಡನಿಗೆ ಮತ ಹಾಕಬೇಡಿ. ಜೆಡಿಎಸ್ ಹಾಗೂ ಬಿಜೆಪಿ ನಮಗೆ ಸಮಾನ ಶತೃುಗಳು ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಈಶ್ವರಪ್ಪ ಪುತ್ರನ ಜೊತೆ ಬಿಎಸ್​ವೈ, ಕಟೀಲ್ ಮಾತುಕತೆ: ಸಾಯೋವರೆಗೂ ಪಕ್ಷದ ನಿರ್ಧಾರಕ್ಕೆ ಬದ್ಧ ಎಂದ ಕಾಂತೇಶ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.