ETV Bharat / state

ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು ಪ್ರಕರಣ: ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ ಶಾಸಕರು, ಅಧಿಕಾರಿಗಳು

author img

By

Published : Aug 8, 2023, 11:31 AM IST

Mandya
ಮಂಡ್ಯ

ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಪ್ರಕರಣಕ್ಕೆ ಸಂಬಂಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಶಾಸಕರು ಹಾಗೂ ಅಧಿಕಾರಿಗಳು ದೂರು ನೀಡಿದ್ದಾರೆ.

ಮಂಡ್ಯ: ಕೃಷಿ ಸಚಿವರ ವಿರುದ್ಧ ಮಂಡ್ಯ ಜಿಲ್ಲೆಯ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬರ್ಥದಲ್ಲಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಎಸ್​ಪಿಗೆ ಜಿಲ್ಲೆಯ ಶಾಸಕರುಗಳು ಹಾಗೂ ಕೃಷಿ ಅಧಿಕಾರಿಗಳು ಪ್ರತ್ಯೇಕ ದೂರು ನೀಡಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ದೂರಿನ ವಿವರ: "ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಮಂಡ್ಯ ಜಿಲ್ಲೆಯ ಏಳು ತಾಲೂಕಿನ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರ ನಕಲಿ ಸಹಿ ಬಳಸಿ ಇಲ್ಲ ಸಲ್ಲದ ಆರೋಪಗಳನ್ನು ಸೃಷ್ಟಿಸಿ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಇದು ವ್ಯವಸ್ಥಿತ ಷಡ್ಯಂತರ. ಸಚಿವರು ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತಂದು ಕಳಂಕ ತರಲು ಕೆಲವು ಕಿಡಿಗೇಡಿಗಳು ಸೃಷ್ಟಿಸಿರುವ ನಕಲಿ ಪತ್ರವಾಗಿದೆ".

"ಇದರ ಹಿಂದೆ ರಾಜಕೀಯ ಷಡ್ಯಂತರವಿದೆ. ಸಾರ್ವಜನಿಕ ಪ್ರತಿನಿಧಿಗಳಾದ ಶಾಸಕರು, ಸಚಿವರ ಮೇಲೆ ಅಧಿಕಾರಿಗಳ ಹೆಸರಿನಲ್ಲಿ ದೂರುಗಳನ್ನು ಸೃಷ್ಟಿಸಿ ಬ್ಲಾಕ್​ಮೆಲ್​ ತಂತ್ರಗಳನ್ನು ಬಳಸುವ ಮೂಲಕ ಜನಪ್ರತಿನಿಧಿಗಳನ್ನು ಬೆದರಿಸುವ ಬಹುದೊಡ್ಡ ಹುನ್ನಾರವಾಗಿದೆ. ಇಂತಹವರನ್ನ ಪತ್ತೆ ಮಾಡಿ ಕಾನೂನು ಕ್ರಮದ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ" ಅವರು ಆಗ್ರಹಿಸಿದ್ದಾರೆ. ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಪರಿಷತ್ ಸದಸ್ಯರಾದ ಮಧು ಮಾದೇಗೌಡ ಹಾಗೂ ದಿನೇಶ್ ಗೂಳಿಗೌಡ ದೂರು ನೀಡಿದ್ದಾರೆ.

ಜಿಲ್ಲೆಯ ಏಳು ಸಹಾಯಕ ಕೃಷಿ ನಿರ್ದೇಶಕರ ಪರವಾಗಿ ಮಂಡ್ಯ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಅಶೋಕ್​ ಸಹ ಎಸ್​ಪಿಗೆ ದೂರು ಸಲ್ಲಿಸಿದ್ದಾರೆ. "ರಾಜ್ಯಪಾಲರಿಗೆ ದೂರು ನೀಡಿರುವ ವಿಚಾರವೇ ಗೊತ್ತಿಲ್ಲ. ನಾವಾಗಲಿ, ನಮ್ಮ ಸಿಬ್ಬಂದಿ ಯಾರೂ ದೂರು ನೀಡಿಲ್ಲ. ನಮಗೆ ಯಾರೂ ಬೇಡಿಕೆ ಇಟ್ಟಿಲ್ಲ. ದುರುದ್ದೇಶದಿಂದ ಯಾರೋ ಅಧಿಕಾರಿಗಳ ಹೆಸರಲ್ಲಿ ದೂರು ನೀಡಿದ್ದಾರೆ. ಪೊಲೀಸ್ ಇಲಾಖೆಯಿಂದ ವಿಚಾರಣೆ ನಡೆಸಿ. ಇಲಾಖೆಗೆ ಕೆಟ್ಟ ಹೆಸರು ತರುತ್ತಿರುವವರನ್ನು ಪತ್ತೆ ಮಾಡಿ" ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ಏಳು ಸಹಾಯಕ ನಿರ್ದೇಶಕರ ಮನವಿಯೊಂದಿಗೆ ಅಶೋಕ್​ ದೂರು ನೀಡಿದ್ದಾರೆ. ಇದರ ಜತೆಗೆ ಇಂದು ಬೃಹತ್ ಪ್ರತಿಭಟನೆಗೆ ಜಿಲ್ಲಾ ಕಾಂಗ್ರೆಸ್ ಕರೆ ಕೊಟ್ಟಿದೆ.

ಇದನ್ನೂ ಓದಿ: ಸಚಿವರ ವಿರುದ್ಧದ ನಕಲಿ ಪತ್ರದ ಸೃಷ್ಟಿಕರ್ತರು ಬಿಜೆಪಿಯವರೋ ಅಥವಾ ನಿಮ್ಮ 'ಬ್ರದರ್ರೋ': ಸಿಎಂ

ಪ್ರಕರಣದ ಹಿನ್ನೆಲೆ: ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿ ಮಂಡ್ಯ ಜಿಲ್ಲೆಯ ಏಳು ಕೃಷಿ ಅಧಿಕಾರಿಗಳಿಂದ ದೂರು ಅರ್ಜಿ ಬಂದಿದ್ದು, ಈ ಬಗ್ಗೆ ನಿಯಮಾನುಸಾರ ಪರಿಶೀಲನೆ ನಡೆಸಿ, ಕ್ರಮ ವಹಿಸಬೇಕು ಎಂದು ಕೋರುವುದಾಗಿ ರಾಜ್ಯಪಾಲರ ಕಚೇರಿಯಿಂದ ಮುಖ್ಯಕಾರ್ಯದರ್ಶಿ ಅವರಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ''ತಲಾ 6 ರಿಂದ 8 ಲಕ್ಷ ರೂಪಾಯಿ ಬೇಡಿಕೆ ಇಡಲಾಗಿದೆ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: ಲಂಚದ ಆರೋಪ ಕುರಿತು ರಾಜ್ಯಪಾಲರಿಗೆ ದೂರು.. ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.