ETV Bharat / state

ಚಿಕನ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ..

author img

By

Published : May 30, 2022, 1:44 PM IST

ಕೋಳಿ ಸಾಕಾಣಿಕೆ ವೆಚ್ಚ ಹೆಚ್ಚಾಗಿದೆ. ಬೇಸಿಗೆಯಲ್ಲಿನ ಬಿಸಿಲಿನ ತಾಪಮಾನಕ್ಕೆ ಕೋಳಿ ಉತ್ಪಾದನೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಇದು ಮಾಂಸದ ಬೆಲೆ ಏರಿಕೆಯಾಗಲು ಪ್ರಮುಖ ಕಾರಣವಾಗಿದೆ ಎಂದು ಹೇಳುತ್ತಾರೆ..

chicken-price-increased-to-300-rs
ಚಿಕನ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ...!

ಕೊಪ್ಪಳ : ದಿನಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಅಡುಗೆ ಎಣ್ಣೆಯಿಂದ ಹಿಡಿದು ಇಂಧನದವರೆಗೆ, ಈರುಳ್ಳಿಯಿಂದ ಹಿಡಿದು ಟೊಮ್ಯಾಟೋವರೆಗೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿವೆ.

ಇಷ್ಟು ಸಾಲದು ಎಂಬುದಕ್ಕೆ ಈಗ ಕೋಳಿ ಮಾಂಸದ ಬೆಲೆಯೂ ಹಿಂದಿನ ಬೆಲೆಗಿಂತಲೂ ಹೆಚ್ಚಾಗಿದೆ. ಬೇಸಿಗೆಯಲ್ಲಿ ಬಿಸಿಲಿನ ತಾಪಮಾನಕ್ಕೆ ಕೋಳಿ ಉತ್ಪಾದನೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಮಾರುಕಟ್ಟೆಯಲ್ಲಿ ಚಿಕನ್ ದರವು ಈಗ ಪ್ರತಿ ಕೆಜಿಗೆ 300 ರೂಪಾಯಿಯಾಗಿದೆ. ಪ್ರತಿ ಮೊಟ್ಟೆಯ ಬೆಲೆ 7 ರೂಪಾಯಿ ದಾಟಿದೆ.

ಚಿಕನ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ...

ಬೆಲೆ ಏರಿಕೆಗೆ ಕಾರಣ : ಕೋಳಿ ಸಾಕಾಣಿಕೆ ವೆಚ್ಚ ಹೆಚ್ಚಾಗಿದೆ. ಇದು ಮಾಂಸದ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಬಹುದು. ಈ ಹಿಂದೆ ಮೆಕ್ಕೆಜೋಳವು ಪ್ರತಿ ಕ್ವಿಂಟಾಲ್ ಗೆ 2000-2500 ರೂಪಾಯಿ ಇದ್ದದ್ದು ಈಗ 3000-3500 ರೂಪಾಯಿಗೆ ಏರಿಕೆಯಾಗಿದೆ. ಸೋಯಾ ದರವು ಪ್ರತಿ ಟನ್‌ಗೆ 30000 ರೂಪಾಯಿಗೆ ಹೆಚ್ಚಾಗಿದೆ. ಇದರೊಂದಿಗೆ ಕಾರ್ಮಿಕರ ಕೂಲಿ ಸೇರಿದಂತೆ ಎಲ್ಲವೂ ಹೆಚ್ಚಳವಾಗಿರುವುದರಿಂದ ಕೋಳಿ ಮಾಂಸದ ದರವು ಏರಿಕೆಯಾಗಿದೆ ಎನ್ನುತ್ತಾರೆ ಕೋಳಿ ಫಾರ್ಮ್ ಮಾಲೀಕರು.

ಮೊಟ್ಟೆಗೆ ಹೆಚ್ಚಿದ ಬೆಲೆ : ಚಿಕನ್ ಬೇಡ ಮೊಟ್ಟೆ ಖರೀದಿಸೋಣ ಅಂದುಕೊಂಡರೂ ಮೊಟ್ಟೆ ದರವು ಹೆಚ್ಚಾಗಿದೆ. ಈಗ ಪ್ರತಿ ಮೊಟ್ಟೆಗೆ 7 ರೂಪಾಯಿಗೂ ಅಧಿಕ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮಾಂಸ, ತರಕಾರಿ ಹೆಚ್ಚಳದಿಂದಾಗಿ ಮಧ್ಯಮ ವರ್ಗದ ಗ್ರಾಹಕರ ಜೇಬಿಗೆ ಹೊರೆಯಾಗಿದೆ.

ಮಾಂಸ ಖರೀದಿಸಲು ಹಿಂದೇಟು : ಸಾಮಾನ್ಯವಾಗಿ ಮಾಂಸ ಪ್ರಿಯರು ಮಟನ್ ಅಥವಾ ಚಿಕನ್ ಸವಿಯಲು ಇಷ್ಟಪಡುತ್ತಾರೆ. ಮಟನ್ ದರವು ಈಗಾಗಲೇ ಪ್ರತಿ ಕೆಜಿಗೆ 600 ರೂಪಾಯಿ ಗಡಿ ದಾಟಿದೆ. ಈ ಮಧ್ಯೆ ಚಿಕನ್ ದರವು 150 ರೂಪಾಯಿಯೊಳಗೆ ಇದ್ದದ್ದು, ಈಗ ಬರೋಬ್ಬರಿ 300 ರೂಪಾಯಿಯಾಗಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಪೌಲ್ಟ್ರಿ ಫಾರ್ಮ್‌ : ರಾಜ್ಯದಲ್ಲಿಯೇ ಅತಿ ಹೆಚ್ಚು ಪೌಲ್ಟ್ರಿ ಫಾರ್ಮಗಳನ್ನು ಹೊಂದಿರುವ ಖ್ಯಾತಿ ಕೊಪ್ಪಳ ಜಿಲ್ಲೆಗಿದೆ. ಇಲ್ಲಿ 14ಕ್ಕೂ ಹೆಚ್ಚು ಬೃಹತ್ ಪೌಲ್ಟ್ರಿ ಫಾರ್ಮ್‌ಗಳಿವೆ. ಇವುಗಳೊಂದಿಗೆ ನೂರಾರು ಸಣ್ಣಪುಟ್ಟ ಫೌಲ್ಟ್ರಿ ಫಾರ್ಮ್‌ಗಳೂ ಇವೆ. ಜಿಲ್ಲೆಯಲ್ಲಿ ಸುಮಾರು 21 ಲಕ್ಷಕ್ಕೂ ಅಧಿಕ ಕೋಳಿಗಳಿವೆ ಎಂದು ಅಂದಾಜು ಮಾಡಲಾಗಿದೆ.

ಇಲ್ಲಿಂದ ನಿತ್ಯ ಸುಮಾರು 15 ಲಕ್ಷ ಮೊಟ್ಟೆಗಳು ಉತ್ಪಾದನೆಯಾಗಿ ಬೇರೆ ಬೇರೆ ಕಡೆ ಸರಬರಾಜು ಆಗುತ್ತಿವೆ. ಒಂದು ಕಡೆ ತರಕಾರಿ ದರವು ಏರಿಕೆ ಕಂಡಿದೆ. ಇನ್ನೊಂದೆಡೆ ತರಕಾರಿ ಬೇಡ ಚಿಕನ್ ತಿನ್ನೋಣ ಅಂದುಕೊಂಡರೆ ಚಿಕನ್ ದರವೂ ಸಹ ದುಬಾರಿಯಾಗಿ ಜೇಬಿಗೆ ಹೊರೆಯಾಗಿದೆ.

ಓದಿ : ಮಂಗಳೂರು ಹಲಸು ಮೇಳಕ್ಕೆ ಬಂದ ಇಬ್ಬರು ಸಮುದ್ರಪಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.