ETV Bharat / state

ಹೆಲಿಕಾಪ್ಟರ್​ನಲ್ಲಿ ಹಾರಿ ಬಂದು ಸಪ್ತಪದಿ ತುಳಿಯಬೇಕಿದ್ದ ಜೋಡಿಯ ಮದುವೆ ಕೊನೆ ಕ್ಷಣದಲ್ಲಿ ರದ್ದು

author img

By

Published : Nov 11, 2021, 3:09 PM IST

Updated : Nov 11, 2021, 3:14 PM IST

couple who was dreamed to come marriage hall by helicopter marriage cancelled
ಮದುವೆ ರದ್ದು

ಹೆಲಿಕಾಪ್ಟರ್​ನಲ್ಲಿ ಬಂದು ಹಸೆಮಣೆ ಏರಿ ಹೊಸ ದಾಂಪತ್ಯ ಜೀವನಕ್ಕೆ ಅದ್ಧೂರಿಯಾಗಿ ಕಾಲಿಡಬೇಕೆಂದಿದ್ದ ಜೋಡಿಯ ಮದುವೆ ಕೊನೆಘಳಿಗೆಯಲ್ಲಿ ರದ್ದಾದ ಘಟನೆ ಕಲಬುರಗಿಯಲ್ಲಿ ನಡೆಯಿತು.

ಕಲಬುರಗಿ: ಅದ್ಧೂರಿಯಾಗಿ ಹೆಲಿಕಾಪ್ಟರ್​​ನಲ್ಲಿ ಕಲ್ಯಾಣ ಮಂಟಪದ ಆವರಣಕ್ಕೆ ಬಂದಿಳಿದು, ವಿಂಟೇಜ್ ಮಾದರಿಯ ಕಾರ್‌ನಲ್ಲಿ ಮದುವೆ ವೇದಿಕೆಗೆ ತಲುಪಬೇಕು ಎಂದು ಆ ಜೋಡಿ ಕನಸು ಕಂಡಿತ್ತು. ಇದಕ್ಕೆ ಬೇಕಾದ ಅಗತ್ಯ ಸಿದ್ದತೆಗಳೂ ನಡೆದಿದ್ದವು. ಆದ್ರೆ ಮದುವೆ ಹಿಂದಿನ ರಾತ್ರಿ ಸಂಭವಿಸಿದ ಸೋದರ ಸಂಬಂಧಿಯ ಸಾವು ಇಡೀ ಸಂಭ್ರಮ ಕಳಚಿ ಬೀಳುವಂತೆ ಮಾಡಿದೆ. ಮದುವೆ ಮನೆಯಲ್ಲೀಗ ಸೂತಕದ ಛಾಯೆ ಬಿಟ್ಟು ಬೇರೇನಿಲ್ಲ.

couple who was dreamed to come marriage hall by helicopter marriage cancelled
ಮದುವೆಗೆ ಸಕಲ ಸಿದ್ಧತೆ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕು ಚಿಂಚೋಳಿ ಗ್ರಾಮದ ಹೂಗಾರ ಮನೆತನ ಮದುವೆ ಬುಧವಾರ ಅಫಜಲಪುರದ ಪಟ್ಟಣಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ರಾಜಶೇಖರ ಹೂಗಾರ ಹಾಗೂ ಜೇವರ್ಗಿಯ ಮಾವೂರ ಗ್ರಾಮದ ಅಂಬಿಕಾ ಬುಧವಾರ ಗೃಹಸ್ಥಾಶ್ರಮಕ್ಕೆ ಕಾಲಿಡಬೇಕಿತ್ತು.

ಇನ್ನೇನು ಮದುವೆಗೆ 10 ಗಂಟೆ ಮಾತ್ರ ಬಾಕಿ ಇದೆ ಅಂತ ಖುಷಿಯಲ್ಲಿ ಮುಳುಗಿದ್ದ ಕುಟುಂಬಕ್ಕೆ ತಡರಾತ್ರಿ 1-30ರ ಸುಮಾರಿಗೆ ಸೋದರಳಿಯ, ಮನೆ ಮಗನಂತಿದ್ದ ಗೊಲ್ಲಾಳಪ್ಪ ಹೂಗಾರ(24) ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. ಮದುವೆ ಕಾರ್ಯಕ್ಕಾಗಿ ಅಫಜಲಪುರಕ್ಕೆ ಹೋಗಿ ಚಿಂಚೋಳಿ ಗ್ರಾಮಕ್ಕೆ ಮರಳುವಾಗ ಬೈಕ್ ಅಪಘಾತವಾಗಿ ಗೊಲ್ಲಾಳಪ್ಪ ಮೃತಪಟ್ಟಿದ್ದಾರೆ.

couple who was dreamed to come marriage hall by helicopter marriage cancelled
ವಿಂಟೇಜ್ ಮಾದರಿಯ ಕಾರ್‌ನಲ್ಲಿ ವಧು-ವರರು ಮದುವೆ ವೇದಿಕೆಗೆ ಬರಲು ತಯಾರಿ

ಈ ಸಾವಿನ ಸುದ್ದಿಯಿಂದ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮನೆಯ ಮಗನ ಸಾವಿನಿಂದ ಮದುವೆ ರದ್ದು ಮಾಡಲಾಗಿದೆ. ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂಬಂಧಿಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತ ದುಸ್ಥಿತಿ ನಿರ್ಮಾಣವಾಗಿದೆ.

ಚಿಂಚೋಳಿ ಗ್ರಾಮದ ಬಸಲಿಂಗಪ್ಪ ಹೂಗಾರ ಅವರಿಗೆ ನಾಲ್ಕು ಜನ‌ ಮಕ್ಕಳಿದ್ದಾರೆ. ಮಹಾರಾಷ್ಟ್ರದ ಪೂನಾದಲ್ಲಿ ರಾಜ್ ಟೂಲ್ಸ್ ಹಾರ್ಡ್​​ವೇರ್ ಹೆಸರಿನಲ್ಲಿ ಸ್ವಂತ ಕಂಪನಿ ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗ ನೀಡಿ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ತಮ್ಮ ಕೊನೆಯ ಸಹೋದರ ರಾಜಶೇಖರ ಮದುವೆ ಕಲಬುರಗಿ ಜಿಲ್ಲೆಯಲ್ಲಿಯೇ ಹಿಂದೆಂದೂ ನಡೆದಿರದಂತೆ ಅದ್ಧೂರಿಯಾಗಿ ಆಗಬೇಕೆಂಬ ಆಸೆಯಿಂದ ಮದುಮಕ್ಕಳನ್ನು ಕರೆತರಲು ಹೆಲಿಕಾಪ್ಟರ್ ಬುಕ್ ಮಾಡಿ ಹೆಲಿಕ್ಯಾಪ್ಟರ್ ಲ್ಯಾಂಡ್​ಗಾಗಿ ತಾತ್ಕಾಲಿಕ ಗ್ರೌಂಡ್ ಕೂಡಾ ನಿರ್ಮಾಣ ಮಾಡಲಾಗಿತ್ತು. ನಂತರ ಮದುವೆ ವೇದಿಕೆವರೆಗೆ ವಿಂಟೇಜ್ ಮಾದರಿಯ ಕಾರ್​ನಲ್ಲಿ‌ ಕರೆದೊಯ್ಯಲು ಕಾರ್ ತಂದು ನಿಲ್ಲಿಸಲಾಗಿತ್ತು.

ಸಾವಿರಾರು ಜನ ಹಿತೈಷಿಗಳ ಆಗಮನದ ಹಿನ್ನೆಲೆಯಲ್ಲಿ ಬೃಹತ್ ಪೆಂಡಾಲ್​ ಹಾಕಿ ಭವ್ಯವಾಗಿ ಶೃಂಗಾರ ಮಾಡಲಾಗಿತ್ತು. ಅತಿಥಿಗಳಿಗೆ ಭಕ್ಷ್ಯಭೋಜನ ಸಿದ್ಧಪಡಿಸಲಾಗುತಿತ್ತು. ಆದ್ರೆ ಅಂತಿಮ ಕ್ಷಣದಲ್ಲಿ ವಿಧಿಯಾಟಕ್ಕೆ ಎಲ್ಲವೂ ಬದಲಾಗಿ ಹೋಗಿದೆ. ಸಂಭ್ರಮದಲ್ಲಿ ಇರಬೇಕಾದ ಕುಟುಂಬವನ್ನು ಸೋದರಳಿಯನ ಸಾವು ನೋವಿನ ಮನೆಗೆ ತಳ್ಳಿದೆ.

Last Updated :Nov 11, 2021, 3:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.