ETV Bharat / state

'ವಕೀಲರೊಂದಿಗೆ ಚರ್ಚಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ': ಪ್ರಜ್ವಲ್ ರೇವಣ್ಣ

author img

By ETV Bharat Karnataka Team

Published : Sep 2, 2023, 6:52 AM IST

Updated : Sep 2, 2023, 11:17 AM IST

Prajwal Revanna
ಪ್ರಜ್ವಲ್ ರೇವಣ್ಣ

HC Disqualifies MP Prajwal Revanna: ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್‌ ಆದೇಶ ಹೊರಡಿಸಿದೆ. ಈ ಬಗ್ಗೆ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

ಹಾಸನ: 2019ರ ಲೋಕಸಭೆ ಚುನಾವಣೆಯ ವೇಳೆ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸುವಾಗ ಪೂರ್ಣ ಪ್ರಮಾಣದಲ್ಲಿ ಆಸ್ತಿ ವಿವರ ಘೋಷಿಸಿಲ್ಲ ಎಂದು ಅರ್ಜಿದಾರರಾದ ಅಂದಿನ ಬಿಜೆಪಿಯ ಪರಾಜಿತ ಅಭ್ಯರ್ಥಿ ಎ. ಮಂಜು ಹಾಗೂ ಇತರರು ಹೈಕೋರ್ಟ್‌​ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಜ್ವಲ್​ ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ ಆರೋಪ ಸಾಬೀತಾದ ಹಿನ್ನೆಲೆ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶಿಸಿದೆ.

ಈ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಪ್ರಜ್ವಲ್ ರೇವಣ್ಣ, ಬಳಿಕ ತಮ್ಮ ಸ್ವಗ್ರಾಮ ಹೊಳೆನರಸೀಪುರ ನಿವಾಸದಲ್ಲಿ ಮಾಧ್ಯಮಗಳಿಗೆ ಮೊದಲ ಹೇಳಿಕೆ ನೀಡಿದ್ದಾರೆ. 'ನಾನು ವಕೀಲರೊಂದಿಗೆ ಚರ್ಚಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇನೆ. ಇದು ದೇವರ ಪರೀಕ್ಷೆ ಅಷ್ಟೇ. ಕೋರ್ಟ್ ತೀರ್ಪಿನ ಬಗ್ಗೆ ಮಧ್ಯಾಹ್ನ ಗೊತ್ತಾಯ್ತು. ಅದರ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ಹಾಗಾಗಿ ಮುಂದೇನು ಮಾಡಬೇಕು? ಎಂದು ನನ್ನ ತಂದೆ ಹಾಗೂ ದೇವೇಗೌಡರ ಜೊತೆ ಮಾತುಕತೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ' ಎಂದು ತಿಳಿಸಿದರು.

ಹಲವು ವಿಚಾರಗಳ ಅಡಿಯಲ್ಲಿ ದೂರು ದಾಖಲಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ನಾನು ಕೋರ್ಟ್​ಗೆ ಹಾಜರಾಗುತ್ತಿದ್ದೇನೆ. ಯಾವ ವಿಚಾರದಲ್ಲಿ ತೀರ್ಪು ಬಂದಿದೆ ಎಂದು ನೋಡಬೇಕಾಗುತ್ತದೆ. ಹಾಗೆಯೇ ಕಾನೂನಾತ್ಮಕವಾಗಿ ಏನು ಮಾಡಬೇಕೋ ಮಾಡೇ ಮಾಡುತ್ತೇವೆ ಎಂದರು.

ಮುಂದಿನ 6 ವರ್ಷ ಚುನಾವಣೆಗೆ ನಿಲ್ಲುವ ಹಾಗಿಲ್ಲ ಎಂದು ಎಲ್ಲಿ ಆದೇಶ ಬಂದಿದೆ? ಎಂದು ಪ್ರಶ್ನಿಸಿದ ಅವರು 'ಕೇವಲ ಸದಸ್ಯತ್ವ ಅಸಿಂಧುಗೊಳಿಸಲಾಗಿದೆ. ಮುಂದೆ ಎಲ್ಲೆಲ್ಲಿ ಹೋಗಿ ವಕೀಲರ ಭೇಟಿ ಮಾಡಬೇಕೋ ಮಾಡುತ್ತೇನೆ. ವಕೀಲರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ.ಮುಂದೆ ಏನೇನಾಗುತ್ತೆ ನೋಡೋಣ. ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದರು.

ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ಆದೇಶ: ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್​ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಪ್ರಜ್ವಲ್​ ರೇವಣ್ಣ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ ಆರೋಪ ಹಿನ್ನೆಲೆಯಲ್ಲಿ ಅವರ ಸಂಸದ ಸ್ಥಾನವನ್ನು ಅನರ್ಹಗೊಳಿಸಿ ನಿನ್ನೆ ಹೈಕೋರ್ಟ್ ಆದೇಶಿಸಿದೆ. ಪ್ರಜ್ವಲ್​ ರೇವಣ್ಣ ವಿರುದ್ಧ ಎ. ಮಂಜು ಹಾಗೂ ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ​ಪೀಠ ಮಹತ್ವದ ಆದೇಶ ಹೊರಡಿಸಿತು.

ಆದೇಶದಲ್ಲಿನ ಪ್ರಮುಖ ಅಂಶಗಳು:

  • ಪ್ರಜ್ವಲ್ ರೇವಣ್ಣ ಅವರ ತಂದೆ ಹೆಚ್​.ಡಿ.ರೇವಣ್ಣ ಅವರು ಅಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
  • ಕಾವೇರಿ ನೀರಾವರಿ ನಿಗಮಕ್ಕೆ ಹಂಚಿಕೆಯಾಗಿದ್ದ ಅನುದಾನವನ್ನು ಬೇರೆ ಕಡೆ ವರ್ಗಾಯಿಸುವ ಮೂಲಕ ಚುನಾವಣಾ ಅಕ್ರಮ ಎಸಗಿದ್ದಾರೆ.
  • ಪ್ರಜ್ವಲ್ ರೇವಣ್ಣ ಅವರ ಚಿಕ್ಕಪ್ಪ ಮತ್ತು ಅಂದಿನ ಮುಖ್ಯಮಂತ್ರಿಗಳೂ ಹಾಗೂ ಕಾವೇರಿ ನೀರಾವರಿ ನಿಗಮದ ಅಧ್ಯಕ್ಷರೂ ಆಗಿದ್ದ ಹೆಚ್​.ಡಿ.ಕುಮಾರಸ್ವಾಮಿ ಅವರು ನಿಗಮದ ಅನುದಾನವನ್ನು ಜಿಲ್ಲೆಯ ಬೇರೆ ಅಭಿವೃದ್ಧಿಗಳಿಗೆ ವರ್ಗಾಯಿಸಿ ಪ್ರಜ್ವಲ್ ರೇವಣ್ಣ ಗೆಲುವಿಗೆ ಸಹಕಾರ ಮಾಡಿದ್ದಾರೆ ಎಂಬುದು ಅರ್ಜಿದಾರರು ಸಾಬೀತುಪಡಿಸಿದ್ದಾರೆ.
  • ಸಂಸತ್ ಸದಸ್ಯ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಅರ್ಜಿಗಳ ಪ್ರಕಿಯಾ ನಿಯಮಗಳ (ಎಲೆಕ್ಷನ್ ಪ್ರೋಸೀಜರ್ ರೂಲ್ಸ್) ಅಧಿನಿಯಮ 19ರ ಅನ್ವಯ ಕ್ರಮಕ್ಕೆ ಮುಂದಾಗಲು ಆದೇಶದ ಪ್ರತಿಯನ್ನು ಚುನಾವಣಾ ಆಯೋಗ ಮತ್ತು ಸಂಸತ್ ಸ್ಪೀಕರ್‌ಗೆ ಕಳುಹಿಸಿಕೊಡಬೇಕು ಎಂದು ರಿಜಿಸ್ಟ್ರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.
  • ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣಗೆ ಲಾಭ ಮಾಡಿಕೊಡಲು ಅವರ ತಂದೆಯಾದ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಮತ್ತು ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅಕ್ರಮ ಎಸಗಿದ್ದಾರೆ. ಹಾಗಾಗಿ, ಅವರ ವಿರುದ್ಧ ಏಕೆ ಕ್ರಮ ಜರುಗಿಸಬಾರದು ಎಂಬುದಾಗಿ ವಿವರಣೆ ಪಡೆಯಲು ಮತ್ತು ಕೋರ್ಟ್ ಮುಂದೆ ಅವರು ಹಾಜರಾಗುವುದಕ್ಕಾಗಿ ಸೂಚಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 99 (1) (2)ಅಡಿ ಹೆಚ್​.ಡಿ ರೇವಣ್ಣ ಮತ್ತು ಸೂರಜ್ ರೇವಣ್ಣಗೆ ನೋಟಿಸ್ ಜಾರಿ.
  • ಪ್ರಜ್ವಲ್​ ರೇವಣ್ಣ ಪ್ರತಿಸ್ಪರ್ಧಿ ಎ.ಮಂಜು ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿದ್ದು, ಅವರನ್ನು ಆಯ್ಕೆ ಮಾಡಬೇಕು ಎಂದು ಘೋಷಣೆ ಮಾಡಲಾಗದು ಎಂದು ಕೋರಿದ್ದ ಪ್ರಜ್ವಲ್​ ಅರ್ಜಿಯ ಪುರಸ್ಕಾರ.

ಇದನ್ನೂ ಓದಿ: ಸಂಸದ ಸ್ಥಾನದಿಂದ ಪ್ರಜ್ವಲ್​ ರೇವಣ್ಣ ಅನರ್ಹ: ಹೈಕೋರ್ಟ್‌ ಆದೇಶದ ಪ್ರಮುಖ ಅಂಶಗಳು..

ಪ್ರಕರಣದ ಹಿನ್ನೆಲೆ: ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವಾಗ ಪೂರ್ಣ ಪ್ರಮಾಣದಲ್ಲಿ ಆಸ್ತಿ ವಿವರ ಘೋಷಿಸಿಲ್ಲ ಎಂದು ಅರ್ಜಿದಾರರಾದ ಬಿಜೆಪಿಯ ಪರಾಜಿತ ಅಭ್ಯರ್ಥಿ ಎ. ಮಂಜು ದೂರಿದ್ದರು. ಆದರೆ, ಅರ್ಜಿ ದೋಷ ಪೂರಿತವಾಗಿದೆ ಎಂದು ಜನವರಿ 17ರಂದು ರಾಜ್ಯ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಅದರಲ್ಲಿನ ಲೋಪಗಳನ್ನು ಸರಿಪಡಿಸಲು ಕಾಲಾವಕಾಶ ನೀಡಿದ ನಂತರವೂ ಕಾಲಮಿತಿಯಲ್ಲಿ ಅವುಗಳನ್ನು ಸರಿಪಡಿಸಿಲ್ಲ ಎಂದು ಹೇಳಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ದೇವರಾಜೇಗೌಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಬಳಿಕ ಈ ಬಗ್ಗೆ ಅರ್ಜಿ ವಿಚಾರಣೆ ನಡೆಸುವಂತೆ ಹೈಕೋರ್ಟ್​ಗೆ ಸುಪ್ರೀಂ ಕೋರ್ಟ್​ ಸೂಚಿಸಿತ್ತು.

ಇದನ್ನೂ ಓದಿ: ಸಂಸದ ಸ್ಥಾನದಿಂದ ಪ್ರಜ್ವಲ್​ ರೇವಣ್ಣ ಅನರ್ಹ: ಹೈಕೋರ್ಟ್​​ ಆದೇಶ

Last Updated :Sep 2, 2023, 11:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.