ETV Bharat / state

ಸಂಸದ ಸ್ಥಾನದಿಂದ ಪ್ರಜ್ವಲ್​ ರೇವಣ್ಣ ಅನರ್ಹ: ಹೈಕೋರ್ಟ್​​ ಆದೇಶ

author img

By ETV Bharat Karnataka Team

Published : Sep 1, 2023, 3:09 PM IST

Updated : Sep 1, 2023, 7:52 PM IST

ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪ ಹಿನ್ನೆಲೆಯಲ್ಲಿ ಪ್ರಜ್ವಲ್​ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

allegation-of-election-irregularities-high-court-disqualifies-prajwal-revanna-from-mp-post
ಚುನಾವಣಾ ಅಕ್ರಮ ಆರೋಪ ಸಾಬೀತು: ಸಂಸದ ಸ್ಥಾನದಿಂದ ಪ್ರಜ್ವಲ್​ ರೇವಣ್ಣ ಅನರ್ಹಗೊಳಿಸಿದ ಹೈಕೋರ್ಟ್​

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್​ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಪ್ರಜ್ವಲ್​ ರೇವಣ್ಣ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪ ಹಿನ್ನೆಲೆಯಲ್ಲಿ ಅವರ ಸಂಸದ ಸ್ಥಾನವನ್ನು ಅನರ್ಹಗೊಳಿಸಿ ಹೈಕೋರ್ಟ್ ಆದೇಶಿಸಿದೆ. ಪ್ರಜ್ವಲ್​ ರೇವಣ್ಣ ವಿರುದ್ಧ ಎ. ಮಂಜು ಹಾಗೂ ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ​ಪೀಠ ಮಹತ್ವದ ಆದೇಶ ಹೊರಡಿಸಿತು.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದ ಹಾಲಿ ಜೆಡಿಎಸ್ ಶಾಸಕ ಎ. ಮಂಜು ಹಾಗೂ ವಕೀಲರಾದ ಜಿ ದೇವರಾಜೇಗೌಡ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ. ಅಲ್ಲದೆ, ಪ್ರಜ್ವಲ್ ಅವರು ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುವುದರಿಂದ ತಮ್ಮನ್ನು ವಿಜೇತ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂಬ ಕೋರಿ ಎ.ಮಂಜು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಎ. ಮಂಜು ಕೂಡ ಚುನಾವಣೆಯಲ್ಲಿ ಅಕ್ರಮ ನಡೆಸಿರುವ ಸಂಬಂಧ ಸಾಬೀತಾಗಿರುವುದರಿಂದ ಅವರನ್ನು ಸಂಸದರನ್ನಾಗಿ ಘೋಷಣೆ ಮಾಡಬೇಕು ಎಂಬ ಮನವಿ ತಿರಸ್ಕೃತಗೊಂಡಿದೆ.

ಜೊತೆಗೆ, ಶಾಸಕ ಹೆಚ್.ಡಿ. ರೇವಣ್ಣ ಮತ್ತು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹಾಗೂ ಎ. ಮಂಜು ಅವರೂ ಸಹ ಚುನಾವಣೆ ಸಂದರ್ಭದಲ್ಲಿ ಅಕ್ರಮ ನಡೆಸಿದ್ದು, ಅವರಿಗೆ ನೋಟಿಸ್ ಜಾರಿ ಮಾಡಬೇಕು ಎಂದು ರಿಜಿಸ್ಟ್ರಾರ್‌ಗೆ ಹೈಕೋರ್ಟ್​​ ಸೂಚನೆ ನೀಡಿದೆ. ಅಲ್ಲದೆ, ಚುನಾವಣಾ ಪ್ರಕ್ರಿಯಾ ಸಂಹಿತೆ 19ರ ಪ್ರಕಾರ (ಹೆಚ್ಚು ಮತ ಗಳಿಸಿದವರನ್ನು ಆಯ್ಕೆ ಎಂದು ಘೋಷಣೆ ಮಾಡುವುದು) ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ: ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವಾಗ ಪೂರ್ಣ ಪ್ರಮಾಣದಲ್ಲಿ ಆಸ್ತಿ ವಿವರ ಘೋಷಿಸಿಲ್ಲ ಎಂದು ಅರ್ಜಿದಾರರಾದ ಬಿಜೆಪಿಯ ಪರಾಜಿತ ಅಭ್ಯರ್ಥಿ ಎ. ಮಂಜು ದೂರಿದ್ದರು. ಆದರೆ ಅರ್ಜಿ ದೋಷ ಪೂರಿತವಾಗಿದೆ ಎಂದು ಜನವರಿ 17ರಂದು ರಾಜ್ಯ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಅದರಲ್ಲಿನ ಲೋಪಗಳನ್ನು ಸರಿಪಡಿಸಲು ಕಾಲಾವಕಾಶ ನೀಡಿದ ನಂತರವೂ ಕಾಲಮಿತಿಯಲ್ಲಿ ಅವುಗಳನ್ನು ಸರಿಪಡಿಸಿಲ್ಲ ಎಂದು ಹೇಳಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ದೇವರಾಜೇಗೌಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಬಳಿಕ ಈ ಬಗ್ಗೆ ಅರ್ಜಿ ವಿಚಾರಣೆ ನಡೆಸುವಂತೆ ಹೈಕೋರ್ಟ್​ಗೆ ಸುಪ್ರೀಂ ಕೋರ್ಟ್​ ಸೂಚಿಸಿತ್ತು.

ವಕೀಲ ದೇವರಾಜೇಗೌಡರ ಮನವಿ ಏನು?: ಪ್ರಜ್ವಲ್ ರೇವಣ್ಣ ಅಕ್ರಮ ಆಸ್ತಿ ಗಳಿಸಿದ್ದು, ಈ ಬಗ್ಗೆ ವಿಚಾರಣೆ ನಡೆಸದೇ ತಾಂತ್ರಿಕ ಕಾರಣ ನೀಡಿ ಹೈಕೋರ್ಟ್ ಅರ್ಜಿ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕು ಎಂದು ವಕೀಲ ಜಿ ದೇವರಾಜೇಗೌಡ ಅವರು ಮನವಿ ಮಾಡಿದ್ದರು. ಪ್ರಜ್ವಲ್ ರೇವಣ್ಣ ಅವರು ತಮ್ಮ 15ನೇ ವಯಸ್ಸಿಗೆ 23 ಕೋಟಿ ರೂ. ಆಸ್ತಿ ಮಾಡಿದ್ದಾರೆ. ಆದರೆ, ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ಮಾಹಿತಿಯಲ್ಲಿ ಈ ಅಂಶಗಳಿಲ್ಲ. ಚುನಾವಣಾ ಆಯೋಗಕ್ಕೂ ಆಸ್ತಿಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಬೇನಾಮಿ ಆಸ್ತಿ ಮತ್ತು ಗೋಮಾಳ ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ತನಿಖೆ ನಡೆಯಬೇಕು ಎಂದು ದೇವರಾಜೇಗೌಡ ಕೋರಿದ್ದರು.

ಪ್ರಜ್ವಲ್​ ರೇವಣ್ಣ ಸಲ್ಲಿಸಿದ್ದ ಆಸ್ತಿ ವಿವರ ಹೀಗಿತ್ತು: 2019ರ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾಗ ತಮ್ಮ ಬಳಿ ಇರುವ ಸ್ಥಿರ ಮತ್ತು ಚರಾಸ್ತಿಗಳ ಒಟ್ಟು ಮೌಲ್ಯ 9.78 ಕೋಟಿ ಎಂದು ಪ್ರಜ್ವಲ್ ರೇವಣ್ಣ ಘೋಷಿಸಿಕೊಂಡಿದ್ದರು. ಈ ಸಂಬಂಧ ಚುನಾವಣಾ ಆಯೋಗಕ್ಕೆ ಆಸ್ತಿ ವಿವರಗಳನ್ನು ಒಳಗೊಂಡಿದ್ದ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಿದ್ದರು. ತಮ್ಮ ಬಳಿ 15.58 ಲಕ್ಷ ನಗದು ಇದೆ. 1.100 ಕೆ.ಜಿ ಚಿನ್ನಾಭರಣ, 23 ಕೆಜಿ ಬೆಳ್ಳಿ ಆಭರಣ, 4.5 ಲಕ್ಷ ಮೌಲ್ಯದ 18 ಹಸುಗಳು, 30 ಸಾವಿರ ಮೌಲ್ಯದ ಒಂದು ಜೊತೆ ಎತ್ತು, ಒಂದು ಟ್ರ್ಯಾಕ್ಟರ್ ಸೇರಿ 1,64,86,632 ರೂ. ಮೊತ್ತದ ಚರಾಸ್ತಿ ಹೊಂದಿದ್ದೇನೆ. ಅದೇ ರೀತಿ 4,89,15,029 ರೂ. ಮೊತ್ತದ ಸ್ಥಿರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು.

ಜೊತೆಗೆ, 3.72 ಕೋಟಿ ರೂ. ಸಾಲವಿದೆ. ತಂದೆ ಹೆಚ್.ಡಿ ರೇವಣ್ಣ ಬಳಿ 1.26 ಕೋಟಿ ಸಾಲ, ತಾಯಿ ಭವಾನಿ ಬಳಿ 43.75 ಲಕ್ಷ ರೂ., ಅತ್ತೆ ಅನಸೂಯ ಮಂಜುನಾಥ್ ಬಳಿ 22 ಲಕ್ಷ ರೂ. ಸಾಲ ಪಡೆದಿದ್ದಾಗಿ ಅಸ್ತಿ ವಿವರದಲ್ಲಿ ಘೋಷಿಸಿಕೊಂಡಿದ್ದಾರೆ. ಸಹೋದರ ಸೂರಜ್ ರೇವಣ್ಣರಿಗೆ 37.20 ಲಕ್ಷ ರೂ., ಅಜ್ಜಿ ಚೆನ್ನಮ್ಮಗೆ 23 ಲಕ್ಷ ಇತರೆ 25 ಲಕ್ಷ ರೂ. ಸಲ ನೀಡಿದ್ದು, 91.10 ಲಕ್ಷ ರೂ. ವಿವಿದೆಡೆ ಬಂಡವಾಳ ಹೂಡಿಕೆ ಮಾಡಿದ್ದು, ವಿವಿಧ ಬ್ಯಾಂಕ್ ಗಳಲ್ಲಿ 11 ಲಕ್ಷ ಠೇವಣಿ ಇಟ್ಟಿರುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದರು.

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಸಮೀಪ ಇರುವಾಗಲೇ ರಾಜ್ಯದಲ್ಲಿ ಜೆಡಿಎಸ್ ಪಕ್ಷದಿಂದ ಏಕೈಕ ಲೋಕಸಭಾ ಸದಸ್ಯರಾಗಿದ್ದ ಪ್ರಜ್ವಲ್​ ರೇವಣ್ಣ ಅವರು ತಮ್ಮ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಈ ಹಿಂದೆ 2019ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡ ಅವರು ತಮ್ಮ ಮೊಮ್ಮಗ ಪ್ರಜ್ವಲ್​ ರೇವಣ್ಣ ಅವರಿಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು.

Last Updated : Sep 1, 2023, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.