ETV Bharat / state

ಮಹದಾಯಿ ಬೇಡಿಕೆ ಈಡೇರಿಸುವಂತೆ ಕಾಶಿ ವಿಶ್ವನಾಥನಿಗೆ ಅಭಿಷೇಕ... ಚುನಾವಣೆಗೆ ಸ್ಪರ್ಧಿಸಲು ಹೋರಾಟಗಾರರಿಂದ ಸಿದ್ಧತೆ

author img

By

Published : Apr 1, 2023, 5:04 PM IST

mahadai-fighters-ready-to-enter-politics
ಮಹದಾಯಿ ಜಲ ವಿಶ್ವನಾಥನಿಗೆ ಅರ್ಪಣೆ: ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧವಾದ ಮಹದಾಯಿ ಹೋರಾಟಗಾರರು‌

ಮಹದಾಯಿ ನೀರನ್ನು ಕಾಶಿ ವಿಶ್ವನಾಥನಿಗೆ ಅಭಿಷೇಕ ಮಾಡಿ ನಮ್ಮ ಬೇಡಿಕೆ ಈಡೇರಿಸು ಎಂದು ಬೇಡಿಕೊಂಡಿದ್ದೇವೆ ಎಂದು ರೈತ ಹೋರಾಟಗಾರರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಹದಾಯಿ ಜಲ ವಿಶ್ವನಾಥನಿಗೆ ಅರ್ಪಣೆ: ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧವಾದ ಮಹದಾಯಿ ಹೋರಾಟಗಾರರು‌

ಹುಬ್ಬಳ್ಳಿ: ಮಹದಾಯಿ ನೀರಿಗಾಗಿ ಕಾಶಿಯಾತ್ರೆಗೆ ತೆರಳಿದ್ದ ಹೋರಾಟಗಾರರು ಇಂದು ಹುಬ್ಬಳ್ಳಿಗೆ ಮರಳಿದ್ದಾರೆ. ಬೆಳಗಾವಿ ಜಿಲ್ಲೆಯ ಕಣಕುಂಬಿಯಿಂದ ಸಂಗ್ರಹಿಸಿದ ಮಹದಾಯಿ ನದಿಯ ನೀರಲ್ಲಿ ಕಾಶಿ ವಿಶ್ವನಾಥನಿಗೆ ಅಭಿಷೇಕ ಮಾಡಲು ಹುಬ್ಬಳ್ಳಿಯಿಂದ ನೂರಾರು ಜನ ಮಹದಾಯಿ ಹೋರಾಟಗಾರರು ಕಾಶಿಗೆ ಪ್ರಯಾಣ ಬೆಳೆಸಿದ್ದರು‌. ಮಹದಾಯಿಗಾಗಿ ವಿನೂತನ ಹೋರಾಟದ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಬಾರಿಸುವ ಮೂಲಕ ತಾಯ್ನಾಡಿಗೆ ಮರಳಿದ್ದಾರೆ.

ಇನ್ನೂ ಹುಬ್ಬಳ್ಳಿ ಮೂರುಸಾವಿರ ಮಠದಿಂದ ಧಾರವಾಡ, ಬಾಗಲಕೋಟ, ಗದಗ ಹಾಗೂ ಹಾವೇರಿ ಜಿಲ್ಲೆಯಿಂದ ಆಗಮಿಸಿದ ಹೋರಾಟಗಾರರು ಮಾರ್ಚ್​ 28ರಂದು ಚನ್ನಮ್ಮ ವೃತ್ತ, ಲ್ಯಾಮಿಂಗ್ಟನ್ ರಸ್ತೆ ಮಾರ್ಗವಾಗಿ ಸಾಗಿ ರಾತ್ರಿ 8 ಗಂಟೆಗೆ ರೈಲ್ವೆ ನಿಲ್ದಾಣ ತಲುಪಿದ್ದೆವು. ಈಗ ಮಹತ್ವದ ಕಾರ್ಯವನ್ನು ಪೂರ್ಣಗೊಳಿಸಿ ಹುಬ್ಬಳ್ಳಿಗೆ ಆಗಮಿಸಿದ್ದೇವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲ ಪಕ್ಷಗಳ ಮೇಲೆ ನಮಗೆ ವಿಶ್ವಾಸ ಹೋಗಿದೆ. ನ್ಯಾಯಾಧೀಕರಣ ತೀರ್ಪು ನೀಡಿ ಹಲವು ವರ್ಷಗಳಾದರೂ ರಾಜಕೀಯ ಪಕ್ಷಗಳಿಂದ ನೀರು ತರಲು ಸಾಧ್ಯವಾಗಿಲ್ಲ. ಈಗ ಉಳಿದಿರುವುದು ಒಂದೇ ಮಾರ್ಗ. ಮಹದಾಯಿ ನೀರನ್ನು ಕಾಶಿ ವಿಶ್ವನಾಥನಿಗೆ ಅಭಿಷೇಕ ಮಾಡಿ ನಮ್ಮ ಬೇಡಿಕೆ ಈಡೇರಿಸು ಎಂದು ಬೇಡಿಕೊಂಡಿದ್ದೇವೆ ಎಂದು ರೈತ ಹೋರಾಟಗಾರರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಹದಾಯಿ ನದಿ ದಡದ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳು ಕಣಕ್ಕೆ: ಇದೇ ವೇಳೆ ಮಾತನಾಡಿದ ಮಹದಾಯಿ ಹೋರಾಟಗಾರ ವೀರೇಶ ಸೊಬರದಮಠ, 'ನಮ್ಮ ಧ್ವನಿ ರಾಜಕೀಯ ನಾಯಕರಿಗೆ ಕೇಳುತ್ತಿಲ್ಲ. ಹೀಗಾಗಿ ಮಹದಾಯಿ ಹೋರಾಟಗಾರರು ರಾಜಕೀಯ ರಂಗ ಪ್ರವೇಶ ಮಾಡುತ್ತೇವೆ. ಮಹದಾಯಿ ನದಿ ಪಾತ್ರದ ನಾಲ್ಕು ಜಿಲ್ಲೆ ಮತ್ತು 9 ತಾಲೂಕಿನ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಯೋಚನೆ ಇದೆ. ಇ‌ನ್ನು ಮೂರು ದಿನಗಳಲ್ಲಿ ಯಾವ ಕ್ಷೇತ್ರದಲ್ಲಿ ಯಾರನ್ನು ನಿಲ್ಲಿಸಬೇಕು ಎಂಬ ಬಗ್ಗೆ ನಿರ್ಧಾರ ತಗೆದುಕೊಳ್ಳುತ್ತೇವೆ. ರೈತರ ಕೆಲ ಷರತ್ತುಗಳನ್ನು ಒಪ್ಪುವ ಪಕ್ಷಗಳಿಗೆ ಬೆಂಬಲಿಸುತ್ತೇವೆ. ಇಲ್ಲವಾದರೆ ಪಕ್ಷೇತರಾಗಿ ಸ್ಪರ್ಧೆ ಮಾಡಲಾಗುವುದು ಎಂದು ಮಹದಾಯಿ ಹೋರಾಟಗಾರ ವೀರೇಶ ಸೊಬರದ ಮಠ ಹೇಳಿದರು.

ಕಳಸಾ ಬಂಡೂರಿ, ಮಹದಾಯಿ ಯೋಜನೆ: ಸಹ್ಯಾದ್ರಿ ಬೆಟ್ಟಗಳಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಮಹದಾಯಿ ನದಿಯೂ ಒಂದು. ಖಾನಾಪುರ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಈ ನದಿಯು ಕರ್ನಾಟಕದಲ್ಲಿ 29 ಕಿಮೀ ಹಾಗೂ ಗೋವಾದಲ್ಲಿ 51.5 ಕಿ.ಮೀ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಜಲಾಯೋಗದ ಸಮೀಕ್ಷೆಯಂತೆ ಈ ನದಿಯಲ್ಲಿ ಸುಮಾರು 200 ಟಿಎಂಸಿ ಅಡಿ ನೀರು ಲಭ್ಯವಿದೆ.

ಕಳೆದ ವರ್ಷ ನವೆಂಬರ್ 24 ರಂದು ಕಳಸಾ ನಾಲಾ ತಿರುವು ಯೋಜನೆಯ 995.30 ಕೋಟಿ ರೂ. ಮೊತ್ತದ ಡಿಪಿಆರ್ ಹಾಗೂ ನವೆಂಬರ್ 25ರಂದು ಬಂಡೂರಿ ನಾಲಾ ತಿರುವು ಯೋಜನೆಯ 764 ಕೋಟಿ ರೂ. ಮೊತ್ತದ ಡಿಪಿಆರ್ ಅನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿತ್ತು. ಕೇಂದ್ರ ಜಲ ಆಯೋಗವು ಡಿಸೆಂಬರ್ 29 ರಂದು ಈ ಯೋಜನೆಗೆ ಅನುಮತಿ ನೀಡಿತ್ತು.

ಇದನ್ನೂ ಓದಿ: ಮಹದಾಯಿ ಯೋಜನೆಯ ವಿರುದ್ಧ ಪ್ರಬಲ ವಾದ ಮಂಡಿಸಿದ್ದೇವೆ: ಗೋವಾ ಸಿಎಂ ಸಾವಂತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.