ETV Bharat / state

ಕೇರಳ-ಮಹಾರಾಷ್ಟ್ರ ಪ್ರಯಾಣಿಕರ ಮೇಲೆ ನಿಗಾವಹಿಸಲು ವಿಶೇಷ ತಂಡ ; ಡಿಸಿ ನಿತೇಶ್ ಪಾಟೀಲ್

author img

By

Published : Feb 24, 2021, 9:33 PM IST

Updated : Feb 24, 2021, 9:38 PM IST

ಈ ಕುರಿತು ಸ್ಥಾನಿಕವಾಗಿ ಹಾಜರಿದ್ದು ಪರಿಶೀಲಿಸಲು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಸ್ಥಳದಲ್ಲಿಯೇ ದಂಡ ವಿಧಿಸಲು ಮಾರ್ಷಲ್‍ಗಳನ್ನು ತಕ್ಷಣ ನೇಮಿಸುವಂತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು..

dc-nitesh-patil
ಡಿಸಿ ನಿತೇಶ್ ಪಾಟೀಲ್

ಧಾರವಾಡ : ಕೋವಿಡ್-19ರ 2ನೇ ಅಲೆ ರಾಷ್ಟ್ರದಲ್ಲಿ ಆರಂಭವಾಗಿದೆ. ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳದಿಂದ ರಸ್ತೆ, ರೈಲು ಮತ್ತು ವಿಮಾನದ ಮೂಲಕ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಕೊರೊನಾ (ಆರ್​ಟಿಪಿಸಿಆರ್) ನೆಗೆಟಿವ್ ವರದಿ ಹೊಂದಿರಬೇಕೆಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.

ಇದನ್ನು ಪ್ರಯಾಣಿಕ ಮತ್ತು ಪ್ರಯಾಣಿಕರನ್ನು ಹೊತ್ತು ತರುವ ಸಂಚಾರಿ ವಾಹನಗಳ ನಿರ್ವಾಹಕರು ಮತ್ತು ಚಾಲಕರು ಪಾಲಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ, ಮಾಸ್ಕ್ ಧರಿಸದವರಿಂದ ದಂಡ ಸಂಗ್ರಹ ಮತ್ತು ಮದುವೆ, ಸಭೆ, ಸಮಾರಂಭಗಳಿಗೆ ಮಾರ್ಷಲ್‍ಗಳ ನೇಮಕಾತಿ ಕುರಿತು ಜರುಗಿದ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು. ನಿತ್ಯ ಮಹಾರಾಷ್ಟ್ರದಿಂದ ಬಸ್, ರೈಲು, ಲಾರಿ ಮೂಲಕ ಹಾಗೂ ಕೇರಳ ರಾಜ್ಯದಿಂದ ವಿಮಾನದ ಮೂಲಕ ಜಿಲ್ಲೆಗೆ ಪ್ರಯಾಣಿಕರು ಆಗಮಿಸುತ್ತಾರೆ.

ಈ ಕುರಿತು ನಿಯಮ ಪಾಲನೆಗಳ ಪರಿಶೀಲನೆಗೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಸ್ಥಳದಲ್ಲಿಯೇ ಕ್ರಮ ಜರುಗಿಸಲು ಎಸಿಪಿ, ಡಿವೈಎಸ್‍ಪಿ, ಪಾಲಿಕೆಯ ವಲಯ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಧಾರವಾಡ ಮತ್ತು ಹುಬ್ಬಳ್ಳಿಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ.

ತಂಡದ ಸದಸ್ಯರು ಮಹಾರಾಷ್ಟ್ರದಿಂದ ಬರುವ ಕೆಎಸ್‍ಆರ್​ಟಿಸಿ ಮತ್ತು ಖಾಸಗಿ ಬಸ್ ನಿರ್ವಾಹಕರು ಕೊರೊನಾ (ಆರ್​ಟಿಪಿಸಿಆರ್​) ನೆಗೆಟಿವ್ ವರದಿ ಹೊಂದಿರದ ಪ್ರಯಾಣಿಕರನ್ನು ಕರೆದುಕೊಂಡು ಬಂದಿದ್ದರೆ ಅಂತಹವರ ಮೇಲೆ ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕು ಮತ್ತು ಅಂತಹ ಬಸ್‍ಗಳನ್ನು ಮುಟ್ಟುಗೋಲು ಹಾಕಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಎಚ್ಚರಿಕೆ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

dc-nitesh-patil
ಡಿಸಿ ನಿತೇಶ್ ಪಾಟೀಲ್

ಈಗಾಗಲೇ ಬಸ್‍ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆಯಿಂದ ಪ್ರತಿ ದಿನ ಗಂಟಲು ದ್ರವ ಸಂಗ್ರಹಕ್ಕೆ ವಾಹನಗಳನ್ನು ನಿಲ್ಲಿಸಲಾಗಿದೆ ಮತ್ತು ಶೀಘ್ರದಲ್ಲಿ ಲಾರಿಗಳು, ಖಾಸಗಿ ಬಸ್‍ಗಳು ನಿಲ್ಲುವ ಸ್ಥಳಗಳಲ್ಲಿ ಮತ್ತು ರೈಲು ನಿಲ್ದಾಣ, ವಿಮಾನ ನಿಲ್ದಾಣದಲ್ಲಿ ವಿಶೇಷ ತಂಡಗಳನ್ನು ನೇಮಿಸಿ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗುವುದು ಎಂದು ಹೇಳಿದರು.

ಓದಿ: ಶಾಸನ ಪತ್ತೆ: ಶ್ರೀಕೃಷ್ಣದೇವರಾಯನ ಕುರಿತ ಅಚ್ಚರಿ ಮಾಹಿತಿ ಬಯಲು!

ಸರ್ಕಾರದ ಸೂಚನೆಯಂತೆ ಜಿಲ್ಲೆಯ ಗ್ರಾಮೀಣ ಪ್ರದೇಶ ಹಾಗೂ ಮಹಾನಗರ ವ್ಯಾಪ್ತಿಯಲ್ಲಿ ನಡೆಯುವ ಮದುವೆ, ಸಭೆ, ಸಮಾರಂಭಗಳಲ್ಲಿ ಭಾಗವಹಿಸುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.

ಈ ಕುರಿತು ಸ್ಥಾನಿಕವಾಗಿ ಹಾಜರಿದ್ದು ಪರಿಶೀಲಿಸಲು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಸ್ಥಳದಲ್ಲಿಯೇ ದಂಡ ವಿಧಿಸಲು ಮಾರ್ಷಲ್‍ಗಳನ್ನು ತಕ್ಷಣ ನೇಮಿಸುವಂತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ್ ಮಾತನಾಡಿ, ಏಪ್ರಿಲ್​ 2020 ರಿಂದ ಫೆ. 2021ರವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ 9,504 ಜನರ ಮೇಲೆ ಪ್ರಕರಣ ದಾಖಲಿಸಿ ರೂ.21,66,900 ಹಾಗೂ ಸಾಮಾಜಿಕ ಅಂತರ ಕಾಪಾಡದ 779 ಜನರ ಮೇಲೆ ಪ್ರಕರಣ ದಾಖಲಿಸಿ ರೂ.1,55,800 ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದ 50 ಜನರ ಮೇಲೆ ಪ್ರಕರಣ ದಾಖಲಿಸಿ ರೂ. 8,700 ಸೇರಿದಂತೆ ಒಟ್ಟು ರೂ.23,31,400 ಗಳ ದಂಡ ವಸೂಲು ಮಾಡಲಾಗಿದೆ. ಪ್ರತಿದಿನ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಕಾಪಾಡುವ ಕುರಿತು ಡ್ರೈವ್ (ಅಭಿಯಾನ) ಗಳನ್ನು ಹೆಚ್ಚು ಮಾಡಲಾಗುವುದೆಂದು ಹೇಳಿದರು.

Last Updated :Feb 24, 2021, 9:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.