ETV Bharat / state

ಪ್ರವಾಸಿಗರ ಸ್ವರ್ಗ 'ಎತ್ತಿನಭುಜ ಗುಡ್ಡ'... ಒಮ್ಮೆ ಹತ್ತಿ ಪ್ರಕೃತಿಯ ನಿಜ ಸೌಂದರ್ಯ ಸವಿಯಿರಿ

author img

By

Published : Dec 24, 2020, 10:50 PM IST

Chikmagalur ethina bhuja betta
ಎತ್ತಿನಭುಜ ಗುಡ್ಡ

ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಪಾಲಿನ ಅಕ್ಷಯ ಪಾತ್ರೆ. ನೋಡುಗರು, ಕೇಳುಗರ ಭಾವನೆಗಳಿಗೆಲ್ಲಾ ಜೀವ ತುಂಬೋ ಜೀವವೈವಿಧ್ಯಮಯ ತಾಣ. ಭೂಲೋಕದ ಸ್ವರ್ಗವೆನ್ನಿಸಿರೋ ಈ ನೆಲದಲ್ಲಿ ಬೆಳಕಿಗೆ ಬಾರದ ಅದೆಷ್ಟೋ ಸುಮಧುರ ತಾಣಗಳಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈರಾಪುರ ಬಳಿ ಇರೋ ಎತ್ತಿನಭುಜ ಗುಡ್ಡ ಕೂಡ ಒಂದು.

ಚಿಕ್ಕಮಗಳೂರು: ಗುಡ್ಡ ಹತ್ತೋದು ಒಂದು ರೀತಿಯ ಸವಾಲೇ ಸರಿ. ನಿಮ್ಮ ಪಯಣ ರೋಮಾಂಚನಕಾರಿ ಆಗಿರಬೇಕು, ಅಡ್ವೆಂಚರ್ ಆಗಿರ್ಬೇಕು ಅಂತಾ ನೀವು ಯೋಚಿಸಿದ್ದರೆ ಇಲ್ಲಿಗೆ ಬರೋದನ್ನು ಮಾತ್ರ ಮಿಸ್ ಮಾಡ್ಕೋಬೇಡಿ.

ಪ್ರವಾಸಿಗರ ಸ್ವರ್ಗ 'ಎತ್ತಿನಭುಜ ಗುಡ್ಡ

ರಾಜ್ಯದ ಎತ್ತರದ ಶಿಖರ ಮುಳ್ಳಯ್ಯನಗಿರಿಯ ಸೌಂದರ್ಯವನ್ನೂ ನಾಚಿಸುವಂತಹ ಸೌಂದರ್ಯ ಅದು. ಉಸ್ಸಾಪ್ಪ ಅಂತಾ ಹೇಗೋ ಬೆವರು ಬಸಿದು ಈ ಬೆಟ್ಟವನ್ನು ಹತ್ತಿದ್ರೆ ಸ್ವರ್ಗಕ್ಕೆ ಮೂರೇ ಗೇಣು. ಇಲ್ಲಿದೆ ನಿನಗಿಂತ ನಾ ಮೇಲೆನ್ನೋ ಒಂದಕ್ಕೊಂದು ಅಂಟಿಕೊಂಡಿರೋ ಒಂಭತ್ತು ಗುಡ್ಡಗಳು. ಕಾಫಿನಾಡಿನ ಎಲೆಮರೆ ಕಾಯಿಯಾಗಿರೋ ಇಲ್ಲಿನ ಸೌಂದರ್ಯ ಸವಿಯೋಕೆ ಪ್ರವಾಸಿಗರಿಲ್ಲದ ದಿನವಿಲ್ಲ.

ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಪಾಲಿನ ಅಕ್ಷಯ ಪಾತ್ರೆ. ನೋಡುಗರು, ಕೇಳುಗರ ಭಾವನೆಗಳಿಗೆಲ್ಲಾ ಜೀವ ತುಂಬೋ ಜೀವವೈವಿಧ್ಯಮಯ ತಾಣ. ಭೂಲೋಕದ ಸ್ವರ್ಗವೆನ್ನಿಸಿರೋ ಈ ನೆಲದಲ್ಲಿ ಬೆಳಕಿಗೆ ಬಾರದ ಅದೆಷ್ಟೋ ಸುಮಧುರ ತಾಣಗಳಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈರಾಪುರ ಬಳಿ ಇರೋ ಎತ್ತಿನಭುಜ ಗುಡ್ಡ ಕೂಡ ಒಂದು. ದೂರದಿಂದ ನೋಡಿದರೆ ಈ ರಮಣೀಯ ತಾಣ ಎತ್ತಿನಭುಜದ ರೀತಿ ಕಾಣಿಸೋದ್ರಿಂದ ಇದನ್ನ ಎತ್ತಿನಭುಜ ಅಂತಾ ಕರೆಯಲಾಗುತ್ತೆ. ಇಲ್ಲಿನ ಮನ ಮೋಹಕ ಗುಡ್ಡಗಳು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿವೆ.

ಅಷ್ಟೇ ಅಲ್ಲದೆ ಈ ಬೆಟ್ಟ ಏರೋ ಸವಾಲು ಇದೆಯಲ್ಲ ಅದು ನಿಜಕ್ಕೂ ರೋಮಾಂಚನಕಾರಿಯಾಗಿದೆ. ಬೈರಾಪುರ ಗ್ರಾಮದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರೋ ಈ ಬೆಟ್ಟವನ್ನು ನಡೆದುಕೊಂಡೇ ಹತ್ತಬೇಕು. ಅದು ಕೂಡ ಕಡಿದಾದ ರಸ್ತೆಯಲ್ಲಿ ಕಲ್ಲು, ಮಣ್ಣು ಎನ್ನದೆ ಗುಡ್ಡವನ್ನು ಹತ್ತುತ್ತಾ ಸಾಗಬೇಕು. ಹೀಗೆ ಬೆಟ್ಟ ಹತ್ತುವ ಸಾಹಸಕ್ಕೆ ಬಿದ್ದಾಗ ಸಾಕು ಸಾಕು ಎನ್ನೋ ಸೋಲು ನಮ್ಮನ್ನು ಮುಂದೆ ಗುಡ್ಡ ಏರದಂತೆ ತಡೆಯುತ್ತೆ. ಆದರೆ ಮುಂದೆ ನಡೆಯದಂತೆ ತಡೆಯೋ ಸುಸ್ತು, ಸೋಲನ್ನು ಹಿಮ್ಮೆಟ್ಟಿಸಿ ಹೆಜ್ಜೆ ಹಾಕಿ ಬೆಟ್ಟ ಏರಿದ್ರೆ ಸಿಗೋದು ನಿಜಕ್ಕೂ ಸ್ವರ್ಗ.

ಇಲ್ಲಿನ ಒಂಭತ್ತು ಗುಡ್ಡಗಳಲ್ಲಿ ಕಾಣೋ ಎತ್ತಿನಭುಜದ ಬೆಟ್ಟದ ಮಧ್ಯೆ ನಿಂತರೆ ಯಾವುದೋ ದ್ವೀಪದಲ್ಲಿ ನಿಂತ ಅನುಭವವಾಗತ್ತೆ. ಈ ಗುಡ್ಡವನ್ನು ಹತ್ತಿ ಇಳಿಯುವುದೇ ಖುಷಿ. ಸುಸ್ತಿನ ನಡುವೆಯೂ ಬೆಟ್ಟ ಹತ್ತುವಾಗ ಬೀಸೋ ತಣ್ಣನೆಯ ಗಾಳಿ ಎಂತಹ ಆಯಾಸವನ್ನು ಮಾಯವಾಗಿಸುತ್ತೆ. ‌ಅದ್ರಲ್ಲೂ ಚಿಕ್ಕ ಚಿಕ್ಕ ಮಕ್ಕಳನ್ನ ಕರೆದುಕೊಂಡು ಎತ್ತಿನಭುಜ ಬೆಟ್ಟವನ್ನ ಏರೋ ಸಾಹಸ ನಿಜಕ್ಕೂ ಸವಾಲೇ. ಈ ಮಧ್ಯೆಯೂ ಎಲ್ಲಾ ಅಡೆತಡೆಗಳನ್ನ ಭೇದಿಸಿ ಬೆಟ್ಟದ ಮೇಲೆ ನಿಂತಾಗ ಸಿಗೋ ಖುಷಿ ಅಷ್ಟಿಷ್ಟಲ್ಲ. ಆಕಾಶಕ್ಕೆ ಮೂರೇ ಗೇಣು ಅನ್ನೋ ಮಾತು ಈ ಬೆಟ್ಟದ ಮೇಲೆ ನಿಂತವರಿಗೆ‌ ಅನುಭವವಾಗದೇ ಇರದು. ಅಷ್ಟು ಸುಂದರ, ಮನಮೋಹಕ, ರಮಣೀಯ ತಾಣ ಈ ಎತ್ತಿನಭುಜ. ಅದ್ರಲ್ಲೂ ನವಜೋಡಿಗಳು, ಪ್ರೇಮಿಗಳು, ಯುವಕ-ಯುವತಿಯರು ಈ ಬೆಟ್ಟವನ್ನೇರಿ ಅನುಭವಿಸೋ ಕ್ಷಣವಂತೂ ಜೀವನದಲ್ಲೇ ಮರೆಯಲಾಗದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.