ETV Bharat / state

ಬಿಎಸ್​ವೈ ಮನೆಯಲ್ಲಿ ವಾಚ್​ಮ್ಯಾನ್ ಆಗ್ತೀನಿ ಎಂದಿದ್ದ ಮಾತನ್ನು ಜಮೀರ್​ ಉಳಿಸಿಕೊಳ್ಳಲಿ: ಸಿ ಟಿ ರವಿ ಕುಟುಕು

author img

By

Published : Jul 26, 2022, 6:14 PM IST

bjp-leader-ct-ravi-mocks-on-congress-mla-zameer-ahmed
ಬಿಎಸ್​ವೈ ಮನೆಯಲ್ಲಿ ವಾಚ್​ಮ್ಯಾನ್ ಆಗ್ತೀನಿ ಎಂದಿದ್ದ ಮಾತು ಉಳಿಸಿಕೊಳ್ಳಲಿ: ಜಮೀರ್​ಗೆ ರವಿ ಕುಟುಕು

ಮುಖ್ಯಮಂತ್ರಿ ಖುರ್ಚಿ ಖಾಲಿ ಇದ್ರೆ ಟವೆಲ್ ಹಾಕಬಹುದು- ಈಗ ಕುರ್ಚಿ ಖಾಲಿಯೇ ಇಲ್ಲ- ಟವೆಲ್​ನಲ್ಲಿ ಗಾಳಿ ಹಾಕಬಹುದು ಅಷ್ಟೇ- ಶಾಸಕ ಸಿ.ಟಿ. ರವಿ

ಚಿಕ್ಕಮಗಳೂರು: ಹೆಚ್​.ಡಿ. ದೇವೇಗೌಡ, ಮಾಜಿ ಸಿಎಂಗಳಾದ ಹೆಚ್​ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯರಿಗೆ ನಾನು ಬಕೆಟ್ ಹಿಡಿದಿಲ್ಲ. ನಾನು ಬಕೆಟ್ ಹಿಡಿದು ರಾಜಕಾರಣಿ ಆದವನಲ್ಲ. ಶಾಸಕ ಜಮೀರ್ ಅಹ್ಮದ್​ ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿ.ಎಸ್​. ಯಡಿಯೂರಪ್ಪನವರ ಮನೆಯಲ್ಲಿ ವಾಚ್​ ಮ್ಯಾನ್ ಆಗ್ತೀನಿ ಎಂದು ಹೇಳಿದ್ರಲ್ಲ. ಮೊದಲು ಆ ಮಾತನ್ನು ಉಳಿಸಿಕೊಳ್ಳಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಕುಟುಕಿದರು.

ಸಿ.ಟಿ. ರವಿಗೆ ಮುಸ್ಲಿಂ-ಹಿಂದೂಗಳ ಮೇಲೆ ಪ್ರೀತಿ ಇಲ್ಲ ಎಂಬ ಜಮೀರ್ ಹೇಳಿಕೆಗೆ ನಗರದಲ್ಲಿಂದು ಪ್ರತಿಕ್ರಿಯಿಸಿದ ಅವರು, ನನ್ನ ನಿಯತ್ತನ್ನು ನನ್ನ ಕ್ಷೇತ್ರದ ಜನ ನೋಡಿ, 4 ಬಾರಿ ಗೆಲ್ಲಿಸಿದ್ದಾರೆ. ಸಚಿವ ಆಗಿದ್ದ ನಾನು ಪಕ್ಷದ ಕೆಲಸಕ್ಕಾಗಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.

ನಾವು, ನಮ್ಮ ಸಾಧನೆ, ಸಿದ್ಧಾಂತ ಮುಂದಿಟ್ಟು ಮತ ಕೇಳುತ್ತೇವೆ. ಒಂದು ಪಕ್ಷ ಅಧಿಕಾರಕ್ಕೆ ಬರಬೇಕಂದರೆ ನೀತಿ, ನೇತೃತ್ವ, ನಿಯತ್ತಿನ ಮೇಲೆ ಜನ ಮತ ಹಾಕೋದು. ನಮಗೆ ನೀತಿ, ನೇತೃತ್ವ, ನಿಯತ್ತು ಇದೆ. ಮತ್ತೆ ಅಧಿಕಾರಕ್ಕೆ ಬಂದೇ ಬರ್ತೀವಿ. ಉಳಿದವರು ಖಾಲಿ ಇಲ್ಲದಿರೋ ಖುರ್ಚಿಗೆ ಕಿತ್ತಾಡ್ತಿದ್ದಾರೆ. ಇದ್ದಾಗ ಉಳಿಸಿಕೊಳ್ಳಲು ಆಗಲಿಲ್ಲ. ಈಗ ಟವೆಲ್ ಹಾಕಲು ಖುರ್ಚಿ ಖಾಲಿ ಇಲ್ಲ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ಗೇಲಿ ಮಾಡಿದರು.

ಬಿಎಸ್​ವೈ ಮನೆಯಲ್ಲಿ ವಾಚ್​ಮ್ಯಾನ್ ಆಗ್ತೀನಿ ಎಂದಿದ್ದ ಮಾತು ಉಳಿಸಿಕೊಳ್ಳಲಿ: ಜಮೀರ್​ಗೆ ರವಿ ಕುಟುಕು

ಟವೆಲ್ ಎಲ್ಲಿಗೆ ಹಾಕ್ತಾರೆ: ಖುರ್ಚಿ ಖಾಲಿ ಇದ್ರೆ ಟವೆಲ್ ಹಾಕಬಹುದು. ಈಗ ಕುರ್ಚಿ ಖಾಲಿಯೇ ಇಲ್ಲ. ಟವೆಲ್​ನಲ್ಲಿ ಗಾಳಿ ಹಾಕಬಹುದು ಅಷ್ಟೇ. ಖುರ್ಚಿ ಖಾಲಿ ಇಲ್ಲ ಅಂದ್ರೆ ಟವೆಲ್ ಎಲ್ಲಿಗೆ ಹಾಕ್ತಾರೆ. ಇವ್ರು ಅವ್ರಿಗೆ, ಅವ್ರು ಇವ್ರಿಗೆ ಗಾಳಿ ಹಾಕಬಹುದು ಅಷ್ಟೇ ಎಂದು ಸಿ.ಟಿ. ರವಿ ವ್ಯಂಗ್ಯವಾಡಿದರು.

ಸಿಎಂ ಎಂದು ಬೋರ್ಡ್, ಫ್ಲೆಕ್ಸ್ ಹಾಕಿಕೊಂಡ ತಕ್ಷಣ ಸಿಎಂ ಆಗ್ತೀನಾ?. ಸೋಶಿಯಲ್ ಮೀಡಿಯಾದಲ್ಲಿ ಹೇಳಿ, ಜನರ ಕೈನಲ್ಲಿ ಕೂಗಿಸುತ್ತಿದ್ದಂತೆ ಸಿಎಂ ಆಗ್ತೀನಾ?. ಕೊಟ್ಟಿದ್ದನ್ನೇ ಉಳಿಸಿ ಕೊಳ್ಳಲಾಗಿಲ್ಲ. ಇನ್ನು ಗಳಿಸೋದು ಉಂಟಾ?. ಸಿದ್ದರಾಮಯ್ಯನ ಶೈಲಿಯಲ್ಲೇ ಹೇಳೋದಾದ್ರೆ, ಅಪ್ಪನ ಆಣೆಗೂ ಸಿಎಂ ಆಗಲ್ಲ ಎಂದು ಹೇಳಬಹುದು ಎಂದು ಲೇವಡಿ ಮಾಡಿದರು.

ಕಳೆದು ಕೊಂಡಿದ್ದೇ ಹೆಚ್ಚು: ಜನ ಪಕ್ಷಕ್ಕೆ ಮತ ಹಾಕಿದ ಮೇಲೆ ಆ ಪಕ್ಷ ತೀರ್ಮಾನ ಮಾಡಬೇಕು. 8-10 ವರ್ಷದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕಿಂತ ಕಳೆದು ಕೊಂಡಿದ್ದೇ ಹೆಚ್ಚು. ರಾಜಸ್ಥಾನ ಮತ್ತು ಛತೀಸ್‍ಗಢದಲ್ಲೂ ನೂರಕ್ಕೆ ನೂರರಷ್ಟು ಅಧಿಕಾರ ಕಳೆದು ಕೊಳ್ಳುತ್ತೆ. ಕರ್ನಾಟಕದಲ್ಲಿ ಕಾಂಗ್ರೆಸ್ ಹಗಲುಗನಸು ಕಾಣುತ್ತಿದ್ದಾರೆ ಎಂದು ಹೇಳಿದರು.

ಕೆ.ಎಸ್​.ಈಶ್ವರಪ್ಪ ತನ್ನ ಮೇಲೆ ಆಪಾದನೆ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಗ ಮುಖ್ಯಮಂತ್ರಿಗಳು ಪರಿಶೀಲನೆ ಮಾಡಬೇಕು. ಪಕ್ಷ ಕಟ್ಟಿದ ಮತ್ತು ಈ ಹಂತಕ್ಕೆ ಬೆಳೆಸಿದ ಹಲವು ಪ್ರಮುಖರಲ್ಲಿ ಈಶ್ವರಪ್ಪನವರೂ ಕೂಡ ಒಬ್ಬರು ಎಂದು ಈಶ್ವರಪ್ಪನವರ ಪರ ಸಿ.ಟಿ.ರವಿ ಬ್ಯಾಟ್​ ಬೀಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಮ್ಯಾಜಿಕ್ ನಂಬರ್ ದಕ್ಕಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಕಾರ್ಯತಂತ್ರವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.