ETV Bharat / state

ರಾಜ್ಯದಲ್ಲಿ ಮ್ಯಾಜಿಕ್ ನಂಬರ್ ದಕ್ಕಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಕಾರ್ಯತಂತ್ರವೇನು?

author img

By

Published : Jul 26, 2022, 5:15 PM IST

ಗುಜರಾತ್ ಚುನಾವಣೆ ನಂತ್ರ ಕರ್ನಾಟಕ ಯಾತ್ರೆ ಆರಂಭಿಸಲಿರುವ ಪ್ರಧಾನಿ ಮೋದಿ- ರಾಜ್ಯದಲ್ಲಿ 30 ರ‍್ಯಾಲಿ ನಡೆಸಲು ನಿರ್ಧಾರ- ರಾಜ್ಯದ ನಾಯಕರಿಗೆ ಗೆಲುವಿನ ಮಂತ್ರ ಬೋಧನೆ

ಬಸವರಾಜ ಬೊಮ್ಮಾಯಿ ಹಾಗೂ ನರೇಂದ್ರ ಮೋದಿ
ಬಸವರಾಜ ಬೊಮ್ಮಾಯಿ ಹಾಗೂ ನರೇಂದ್ರ ಮೋದಿ

ಬೆಂಗಳೂರು: ಕರ್ನಾಟಕದಲ್ಲಿ ಪಕ್ಷಕ್ಕೆ ಮ್ಯಾಜಿಕ್ ನಂಬರ್ (113) ದಕ್ಕಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣತೊಟ್ಟಿರುವ ಹೈಕಮಾಂಡ್, ಪ್ರಚಾರಕ್ಕೆ ಭರ್ಜರಿ ಕಾರ್ಯತಂತ್ರ ಹೆಣೆದಿದ್ದಾರೆ.

ಡಿಸೆಂಬರ್​ನಲ್ಲಿ ನಡೆಯಲಿರುವ ಗುಜರಾತ್ ಚುನಾವಣೆ ಮುಗಿಯುತ್ತಿದ್ದಂತೆ ದೆಹಲಿ ನಾಯಕರು ಸಂಪೂರ್ಣವಾಗಿ ಕರ್ನಾಟಕದ ಕಡೆ ಗಮನ ಕೇಂದ್ರೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರಂತರವಾಗಿ ಕರ್ನಾಟಕ ಪ್ರವಾಸ ಮಾಡಲಿದ್ದಾರೆ. ಈ ಮೂಲಕ ಪಕ್ಷವನ್ನು ರಾಜ್ಯ ವಿಧಾನಸಭೆಯ ಮ್ಯಾಜಿಕ್ ಸಂಖ್ಯೆ 113ರ ಗಡಿ ದಾಟಿಸಲು ಎಲ್ಲ ಪ್ರಯತ್ನ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು 'ಈಟಿವಿ ಭಾರತ'ಕ್ಕೆ ತಿಳಿಸಿವೆ.

ರಾಜ್ಯದ ನಾಯಕರಿಗೆ ಗೆಲುವಿನ ಮಂತ್ರ: ಗುಜರಾತ್ ಚುನಾವಣೆ ಮುಗಿದ ತಕ್ಷಣ ಕರ್ನಾಟಕ ಯಾತ್ರೆ ಆರಂಭಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಎಲ್ಲ ಭಾಗಗಳಿಗೆ ತೆರಳಲಿದ್ದು, 30 ರ‍್ಯಾಲಿಗಳನ್ನು ನಡೆಸಲು ನಿರ್ಧರಿಸಿದ್ದಾರೆ. ಅದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣೆ ಹಿನ್ನೆಲೆ ಕರ್ನಾಟಕಕ್ಕೆ ಬಂದು ಬೀಡು ಬಿಡಲಿದ್ದು, ಚುನಾವಣೆಯ ಉಸ್ತುವಾರಿಯನ್ನು ಖುದ್ದಾಗಿ ಗಮನಿಸಿ ರಾಜ್ಯದ ನಾಯಕರಿಗೆ ಗೆಲುವಿನ ಮಂತ್ರ ಬೋಧಿಸಲಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಳೆ ಮೈಸೂರು ಭಾಗದ ಜಿಲ್ಲೆಗಳಿಗೆ ತಮ್ಮ ಗಮನವನ್ನು ಕೇಂದ್ರೀಕರಿಸಲಿದ್ದು, ಒಕ್ಕಲಿಗ ಮತ ಬ್ಯಾಂಕ್ ವಶಕ್ಕೆ ಯತ್ನಿಸಲಿದ್ದಾರೆ. ಕರ್ನಾಟಕದಲ್ಲಿರುವ ವಿವಿಧ ಮತದಾರರನ್ನು ಸೆಳೆಯಲು ಪೂರಕವಾಗಿ ಅವರವರ ಸಮುದಾಯಗಳ ನಾಯಕರು ರಂಗಕ್ಕಿಳಿಯಲಿದ್ದು, ಇಲ್ಲಿನ ಮಾರವಾಡಿ ಸಮುದಾಯವನ್ನು ಸೆಳೆಯಲು ಗುಜರಾತ್​ನಿಂದ ತಂಡ ಬರಲಿದೆ ಎಂದು ಮೂಲಗಳು ಹೇಳಿವೆ.

ಕರ್ನಾಟಕದಲ್ಲಿ ಚುನಾವಣೆ ನಡೆದರೆ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ ಎಂಬ ವರದಿಗಳು ಹೈಕಮಾಂಡ್ ವರಿಷ್ಟರನ್ನು ತಲುಪಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಹಿಡಿಯಲು ಕೊರತೆಯಾಗುವ 25 ರಿಂದ 30 ಸೀಟುಗಳನ್ನು ಗೆಲ್ಲಿಸಿಕೊಡುವುದು ವರಿಷ್ಠರ ಲೆಕ್ಕಾಚಾರ. ರಾಜ್ಯವನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿರುವ ಬಿಜೆಪಿ ವರಿಷ್ಠರಿಗೆ ಪಕ್ಷ ಸ್ವಯಂಬಲದ ಮೇಲೆ ಗೆಲ್ಲುವುದಿಲ್ಲ ಎಂಬ ಸೂಕ್ಷ್ಮತೆ ಗೊತ್ತಾಗಿದೆ. ಕಾಂಗ್ರೆಸ್ ಪಕ್ಷಕ್ಕಿಂತ ಸ್ವಲ್ಪ ಮುಂದಿದ್ದರೂ ಸರ್ಕಾರ ರಚಿಸಲು ಕೆಲ ಸ್ಥಾನಗಳ ಕೊರತೆಯಾಗಲಿದೆ ಎಂದು ಸರ್ವೇ ವರದಿಗಳು ಹೇಳಿದ್ದು, ಅದೇ ಕಾರಣಕ್ಕೆ ಗೆದ್ದೇ ಗೆಲ್ಲುವ ಹಾಲಿ ಶಾಸಕರಲ್ಲಿ ಕಾಂಗ್ರೆಸ್ ಪಕ್ಷದವರೇ ಹೆಚ್ಚು ಎಂಬುದು ಬಿಜೆಪಿ ಹೈಕಮಾಂಡ್​ಗೆ ಸಿಕ್ಕಿರುವ ಮಾಹಿತಿ.

ಇದೇ ರೀತಿ ಬಿ ಗುಂಪಿನಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿರುವವರ ಸಂಖ್ಯೆ ಬಿಜೆಪಿಯಲ್ಲಿ ಹೆಚ್ಚಿದೆ. ಸಿ ಗುಂಪಿನ ಪ್ರಕಾರ, ಸೋಲುವವರ ಸಂಖ್ಯೆ ಕಾಂಗ್ರೆಸ್​ನಲ್ಲಿ ಹೆಚ್ಚು ಎಂಬುದು ಪಕ್ಷದ ದೆಹಲಿ ವರಿಷ್ಠರಿಗೆ ತಲುಪಿರುವ ಮಾಹಿತಿ. ಹಾಗಾಗಿ, ಎ ಗುಂಪಿನಲ್ಲಿರುವ ಗೆದ್ದೇ ಗೆಲ್ಲುವ ಕಾಂಗ್ರೆಸ್ ಶಾಸಕರ ಸಂಖ್ಯೆಯನ್ನು ಕಡಿಮೆ ಮಾಡಬೇಕು, ಬಿ ಗುಂಪಿನಲ್ಲಿ ಗೆಲ್ಲುವ ಸಾಧ್ಯತೆಗಳು ಹೆಚ್ಚಿರುವ ಬಿಜೆಪಿಗೆ ಮತ್ತಷ್ಟು ಬಲ ನೀಡಬೇಕು ಮತ್ತು ಸೋಲುವುದು ಖಚಿತ ಎಂಬುದನ್ನು ಸೂಚಿಸುವ ಸಿ ಗುಂಪಿನಲ್ಲಿ ಕಾಂಗ್ರೆಸ್ ಪಕ್ಷದವರೇ ಹೆಚ್ಚಿರುವಂತೆ ನೋಡಿಕೊಳ್ಳಬೇಕು ಎಂಬುದು ಹೈಕಮಾಂಡ್ ಯೋಚನೆಯಾಗಿದೆ.

ರಾಜ್ಯಾದ್ಯಂತ ಸಾಧನಾ ಸಮಾವೇಶ: ಮುಂದಿನ ಚುನಾವಣೆಯಲ್ಲಿ ನಾವು 25 ರಿಂದ 30 ಸೀಟುಗಳನ್ನು ಹೆಚ್ಚುವರಿಯಾಗಿ ಗೆಲ್ಲಿಸಿಕೊಡುತ್ತೇವೆ. ಆದರೆ, ನೀವು ಕನಿಷ್ಠ 90 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸನ್ನದ್ಧರಾಗಿರಬೇಕು ಎಂದು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದು, ಹೀಗೆ ವರಿಷ್ಠರ ಸೂಚನೆ ಸಿಕ್ಕಿರುವ ಹಿನ್ನೆಲೆ ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಈ ತಿಂಗಳ 28 ರಿಂದ ರಾಜ್ಯಾದ್ಯಂತ ಸಾಧನಾ ಸಮಾವೇಶಗಳನ್ನು ನಡೆಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ.

ದೊಡ್ಡ ಬಳ್ಳಾಪುರದಲ್ಲಿ ಜುಲೈ 28 ರಂದು ಮೊದಲ ಸಾಧನಾ ಸಮಾವೇಶ ನಡೆಯಲಿದ್ದು, ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಾಧನಾ ಸಮಾವೇಶ ನಡೆಸಲು ರಾಜ್ಯದ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಕಡ್ಡಾಯವಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಡೆಯುವ ಸಾಧನಾ ಸಮಾವೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಹೊರತುಪಡಿಸಿ, ಆಯಾ ಜಿಲ್ಲೆಯ ಸಚಿವರು, ಪ್ರಮುಖರು ಭಾಗವಹಿಸಲಿದ್ದಾರೆ.

ಸಮಾವೇಶದ ಸಂದರ್ಭದಲ್ಲಿ ವಿವಿಧ ಪಕ್ಷಗಳ ಲಕ್ಷಾಂತರ ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯುವ ಕೆಲಸ ನಡೆಯುತ್ತಿದ್ದು, ಅದರೊಂದಿಗೆ ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆಗಳು ನಡೆಯಲಿವೆ. ಹೀಗೆ ಮಾಡುವ ಮೂಲಕ ಕರ್ನಾಟಕದಲ್ಲಿ ಗೆಲುವಿನ ಸಂಖ್ಯೆಯನ್ನು 100 ರ ಗಡಿ ದಾಟಿಸಬಹುದು ಎಂದು ರಾಜ್ಯದ ನಾಯಕರು ಲೆಕ್ಕ ಹಾಕಿದ್ದಾರೆ. ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ವರ್ಷ ಪೂರೈಸುತ್ತಿದ್ದಂತೆಯೇ ಈ ಸಾಧನಾ ಸಮಾವೇಶಗಳು ನಡೆಯುತ್ತಿರುವುದು ವಿಶೇಷ.

ತಂತ್ರ ಮಾಡಲು ನಾಯಕರು ಮುಂದು: ದಕ್ಷಿಣ ಭಾರತದಲ್ಲಿ ಇತರೆ ರಾಜ್ಯಗಳನ್ನು ವಶ ಮಾಡಿಕೊಳ್ಳಲು ಹಾಗೂ ಅದಕ್ಕಿಂತ ಮೊದಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲಲು ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಅತ್ಯಂತ ಮುಖ್ಯವಾಗಿದೆ. ಆದ್ದರಿಂದಲೇ, ಎಲ್ಲ ರೀತಿಯ ತಂತ್ರಗಳನ್ನು ಮಾಡಲು ದೆಹಲಿ ಹಾಗೂ ರಾಜ್ಯ ನಾಯಕರು ಮುಂದಾಗಿದ್ದಾರೆ.

ಓದಿ: 3&1..ಗಮನ ಸೆಳೆಯುತ್ತಿದೆ ಜನೋತ್ಸವ ಕಾರ್ಯಕ್ರಮದ ಲೋಗೋ ವಿನ್ಯಾಸ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.