ETV Bharat / state

ಎರಡು ರಸ್ತೆಗೆ ಬೇಲಿ ಹಾಕಿ ಸಂಚಾರಕ್ಕೆ ಅಡ್ಡಿ: ಚಿಕ್ಕಬಳ್ಳಾಪುರದ ದಪ್ಪರ್ತಿ ಗ್ರಾಮಸ್ಥರಿಗೆ ಕಿರಿಕಿರಿ

author img

By

Published : Jul 19, 2022, 8:56 AM IST

Fence for two roads in dapparti village of Chikkaballapura
ಎರಡು ರಸ್ತೆಗೆ ಬೇಲಿ-ಸಂಚಾರಕ್ಕೆ ಅಡ್ಡಿ

ಇಲ್ಲಿನ ಎರಡು ರಸ್ತೆಗಳಿಗೆ ಜನರು ಬೇಲಿ ಹಾಕಿದ್ದು ದಪ್ಪರ್ತಿ ಗ್ರಾಮಸ್ಥರು ಸಂಚಾರಕ್ಕೆ ಪರದಾಡುತ್ತಿದ್ದಾರೆ.

ಗುಡಿಬಂಡೆ(ಚಿಕ್ಕಬಳ್ಳಾಪುರ): ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಮುಖ್ಯರಸ್ತೆಗೆ ಬೇಲಿ ಹಾಕಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಮಾಡುತ್ತಿದ್ದರೂ ಕೂಡಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ಸ್ಥಳೀಯರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಲಿ ಹಾಕಿದ್ದೇಕೆ?: ದಪ್ಪರ್ತಿ ಗ್ರಾಮದಲ್ಲಿ ಸುಧಾಕರ ಎಂಬುವವರ ಮನೆಗೆ ಹೋಗಲು ರಸ್ತೆಯಿದ್ದು, ಆ ರಸ್ತೆಯನ್ನು ನಾಗರಾಜಚಾರಿ ಮತ್ತು ನಾಗರಾಜಪ್ಪ ಎನ್ನುವವರು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲಿ ಮನೆ, ಶೆಡ್ ನಿರ್ಮಿಸಿದ್ದು ಸುಧಾಕರ ಅವರ ಮನೆಗೆ ಹೋಗಲು ಸೂಕ್ತ ದಾರಿ ಇಲ್ಲ. ಈ ಬಗ್ಗೆ ಅವರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ನಾಲ್ಕು ವರ್ಷಗಳ ಹಿಂದೆಯೇ ಮನವಿ ಪತ್ರ ನೀಡಿದ್ದಾರೆ.

ಈಗ ಇವರ ಮನೆಗೆ ಹೋಗುವ ರಸ್ತೆಯನ್ನು ನಾಗರಾಜಪ್ಪ ಎಂಬುವವರು ಬೇಲಿ ಹಾಕಿ ಸಂಪೂರ್ಣವಾಗಿ ಮುಚ್ಚಿದ್ದಾರೆ. ಸುಧಾಕರ್ ಕೂಡ ತಮ್ಮ ಮನೆಗೆ ಹೋಗುವ ರಸ್ತೆ ತೆರವು ಮಾಡಿಸುವವರೆಗೂ ಮುಖ್ಯ ರಸ್ತೆಯಲ್ಲೂ ಯಾರೂ ಓಡಾಡಬಾರದು ಎಂದು ಮರದ ತುಂಡುಗಳನ್ನು ಹಾಕಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಅಧಿಕಾರಿಗಳು ಜನರಿಂದ ಹಣ ಪಡೆದು ರಸ್ತೆ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿದ್ದಾರೆ. ರಸ್ತೆ ನಮಗೆ ಸೇರಿದ್ದು ಎಂದು ಅವರು ರಸ್ತೆಯನ್ನು ಆಕ್ರಮಿಸಿಕೊಂಡು ಮನೆಗಳನ್ನು ನಿರ್ಮಿಸಿದ್ದಾರೆ. ಅಧಿಕಾರಿಗಳು ಮಾಡುವ ತಪ್ಪಿಗೆ ಜನಸಾಮಾನ್ಯರು ಪ್ರತಿ ದಿನ ಕಿರಿ ಕಿರಿ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

"ನಮ್ಮ ಮನೆಗೆ ಹೋಗಲು ಸರ್ಕಾರಿ ರಸ್ತೆ ಇದ್ದು, ಕೆಲ ಖಾಸಗಿ ವ್ಯಕ್ತಿಗಳು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ನಮಗೆ ಓಡಾಡಲು ಬಿಡದೇ ಬೇಲಿಯನ್ನು ಹಾಕಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಒತ್ತುವರಿ ತೆರವು ಮಾಡಿಸಿಲ್ಲ. ಹಾಗಾಗಿ ರಸ್ತೆ ಒತ್ತುವರಿ ತೆರವು ಮಾಡಿಸಲು ನ್ಯಾಯಾಲಯದ ಮೊರೆ ಹೋಗಬೇಕಾಗಿದೆ. ಊರಿನವರಿಗೆಲ್ಲ ಒಂದು ನ್ಯಾಯ ನಮಗೆ ಒಂದು ನ್ಯಾಯ ಏಕೆ?" ಎಂದು ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ: ಮನೆಗಳಿಗೆ ಹಾನಿ, ರಸ್ತೆಗಳು ಜಲಾವೃತ

"ಕಳೆದ 15 ದಿನಗಳ ಹಿಂದೆ ರಸ್ತೆಗೆ ಬೇಲಿ ಹಾಕಿರುವ ಬಗ್ಗೆ ನಮಗೆ ಮಾಹಿತಿ ಬಂದಿದ್ದು, ದಪ್ಪರ್ತಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಿ ರಸ್ತೆ ಒತ್ತುವರಿ ತೆರವು ಮಾಡಿಸಿ ಬಂದಿದ್ದೇವೆ. ಆದರೆ ಮತ್ತೆ ರಸ್ತೆಗೆ ಬೇಲಿ ಹಾಕಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಕ್ರಮ ಜರುಗಿಸುತ್ತೇನೆ" ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.