ETV Bharat / state

ಕೊಳ್ಳೇಗಾಲದಲ್ಲಿ ಮುಷ್ಕರ ಹೂಡಿದ್ದ ಡಯಾಲಿಸಿಸ್ ಸಿಬ್ಬಂದಿಯ ಮನವೊಲಿಸಿದ ಡಿಹೆಚ್ಒ

author img

By

Published : Dec 1, 2021, 5:40 PM IST

protest at kollegala
ಕೊಳ್ಳೇಗಾಲದಲ್ಲಿ ಕರವೇ ಪ್ರತಿಭಟನೆ!

ವೇತನ ಸಿಗದಿರುವ ಹಿನ್ನೆಲೆ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಮುಷ್ಕರ ಹೂಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕರವೇ ಪ್ರತಿಭಟನೆ ನಡೆಸಿತ್ತು. ನಂತರ ಡಿಹೆಚ್ಒ ಡಾ. ವಿಶ್ವೇಶ್ವರಯ್ಯ ಭೇಟಿ ನೀಡಿ ಸಿಬ್ಬಂದಿಯ ಮನವೊಲಿಸಿ ಡಯಾಲಿಸಿಸ್ ಕೇಂದ್ರವನ್ನು ಒಪನ್​ ಮಾಡಿಸಿದರು..

ಕೊಳ್ಳೇಗಾಲ : ಹಲವು ತಿಂಗಳಿನಿಂದ ವೇತನ ಸಿಗದಿರುವ ಹಿನ್ನೆಲೆ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರ ಸಿಬ್ಬಂದಿ ಮುಷ್ಕರ ಹೂಡಿದ್ದ ಹಿನ್ನೆಲೆ ಮೂರು ದಿನಗಳಿಂದ ಡಯಾಲಿಸಿಸ್ ಕೇಂದ್ರ ಮುಚ್ಚಿತ್ತು. ಪರಿಣಾಮ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮುಷ್ಕರ ನಡೆಸುತ್ತಿದ್ದ ಡಯಾಲಿಸಿಸ್ ಸಿಬ್ಬಂದಿಯ ಮನವೊಲಿಸಿದ ಡಿಹೆಚ್‌ಒ..

ಪಟ್ಟಣದಲ್ಲಿರುವ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಡಯಾಲಿಸಿಸ್ ಕೇಂದ್ರಕ್ಕೆ ಸಿಬ್ಬಂದಿ ಗೈರಾಗಿ ಕೇಂದ್ರಕ್ಕೆ ಬೀಗ ಜಡಿದಿದ್ದರು. ಇಲ್ಲಿ ಆರು ಡಯಾಲಿಸಿಸ್ ಯಂತ್ರಗಳಿವೆ. ‌ಚಿಕಿತ್ಸೆಗಾಗಿ ರೋಗಿಗಳು ಡಯಾಲಿಸಿಸ್ ಕೇಂದ್ರಕ್ಕೆ ನಿತ್ಯವೂ ಅಲೆಯುತ್ತಿದ್ದರು.

ಮುಚ್ಚಿರುವ ಕೇಂದ್ರದ ಮಂಭಾಗವೇ ಓರ್ವ ರೋಗಿ ನರಳುತ್ತಿದ್ದ ಘಟನೆಯೂ ನಡೆದಿದೆ. ರೋಗಿಗಳು ಆಸ್ಪತ್ರೆಯ ಅಸಮರ್ಪಕ ವ್ಯವಸ್ಥೆ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.

ಕರವೇ ಪ್ರತಿಭಟನೆ : ಈ ಹಿನ್ನೆಲೆ ಡಯಾಲಿಸಿಸ್ ಕೇಂದ್ರ ತೆರೆದು ಕೆಲಸ ಪ್ರಾರಂಭಿಸುವಂತೆ ಒತ್ತಾಯಿಸಿ ಕರ್ನಾಟಕದ ರಕ್ಷಣಾ ವೇದಿಕೆಯ ಅಧ್ಯಕ್ಷ ಮತಿನ್ ನೇತೃತ್ವದಲ್ಲಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಯಿತು. ನಾಳೆಯೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಸ್ಥಳೀಯರಾದ ಚೇತನ್ ದೊರೆರಾಜ್ ಮಾತಾನಾಡಿ, 3 ದಿನಗಳಿಂದ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರ ಮುಚ್ಚಲ್ಪಟ್ಟಿದೆ. ವೇತನ ನೀಡಿಲ್ಲ ಎಂಬ ಕಾರಣಕ್ಕೆ ಸಿಬ್ಬಂದಿ ಗೈರಾಗಿದ್ದಾರೆ.

ಇದರಿಂದ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ. ಈ ಕೂಡಲೇ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಡಯಾಲಿಸಿಸ್ ಸೇವೆ ಪ್ರಾರಂಭಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಡಯಾಲಿಸಿಸ್ ಸಿಬ್ಬಂದಿ ಮನವೊಲಿಸಿದ ಡಿಹೆಚ್ಒ : ಪ್ರತಿಭಟನೆ ಹಾಗೂ ರೋಗಿಗಳ ಪರದಾಟ ತಿಳಿದ ಡಿಹೆಚ್ಒ ಡಾ. ವಿಶ್ವೇಶ್ವರಯ್ಯ ಅವರು ತಾಲೂಕು ಆಡಳಿತ ಅಧಿಕಾರಿಗಳೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಡಯಾಲಿಸಿಸ್ ಮೇಲ್ವಿಚಾರಕ ನಿರಂಜನ್ ಕುಮಾರ್ ಜೊತೆ ಚರ್ಚಿಸಿದರು. ಮುಂದಿನ ದಿನಗಳಲ್ಲಿ ವೇತನದ ಸಮಸ್ಯೆ ಬಗೆಹರಿಸಲಾಗುತ್ತದೆ.

ಆರೋಗ್ಯ ಸಿಬ್ಬಂದಿಯಾದ ನಾವು ಮೊದಲು ಜೀವಕ್ಕೆ ಬೆಲೆ ಕೊಡಬೇಕು. ತಕ್ಷಣವೇ ಡಯಾಲಿಸಿಸ್ ಸೇವೆ ಪ್ರಾರಂಭಿಸಿ ಎಂದು ಮನವೊಲಿಸಿ ಡಯಾಲಿಸಿಸ್ ಕೇಂದ್ರವನ್ನು ಒಪನ್​ ಮಾಡಿಸಿದರು. ಬಳಿಕ 15ಕ್ಕೂ ಹೆಚ್ಚು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಡಯಾಲಿಸಿಸ್ ಮಾಡಲಾಯಿತು.

ಇದನ್ನೂ ಓದಿ: ಬೆಳೆ ವಿಮೆ ಕಂಪನಿ ತಪ್ಪಿತಸ್ಥರಾಗಿದ್ದರೆ ಕ್ರಮ ಕೈಗೊಳ್ಳುವುದು ಖಂಡಿತ: ಬಿಸಿ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.