ETV Bharat / state

ನೆಟೆ ರೋಗಕ್ಕೆ 10426 ಹೆಕ್ಟೇರ್ ತೊಗರಿ ಬೆಳೆ ಹಾನಿ.. ಸಂಕಷ್ಟಕ್ಕೆ ಸಿಲುಕಿದ ಬೀದರ್​ ರೈತರಿಗೆ ಬೇಕಿದೆ ನೆರವು

author img

By

Published : Dec 20, 2022, 6:38 PM IST

Togari crop affected by nete disease
ನೆಟೆ ರೋಗಕ್ಕೆ ತುತ್ತಾದ ತೊಗರಿ ಬೆಳೆ

ಬೀದರ್ ಜಿಲ್ಲೆಯಲ್ಲಿ ತೊಗರಿ ನೆಟೆ ರೋಗಕ್ಕೆ ತುತ್ತಾಗಿ ಅತಿವೃಷ್ಟಿಯಿಂದ ಸಂಕಷ್ಟದಲ್ಲಿ ನರಳುತ್ತಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರಗತಿಪರ ರೈತ ಚಂದ್ರಶೇಖರ ಪಾಟೀಲ್

ಬೀದರ್ : ರೈತರ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ನೆಟೆ ರೋಗಕ್ಕೆ ತುತ್ತಾಗಿ ಒಣಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ರೋಗದಿಂದ ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದಿದ್ದ ತೊಗರಿ ಹಾನಿಗೀಡಾಗಿದೆ.

ನೆಟೆ ರೋಗ ಸಂಬಂಧ ಕೃಷಿ ಇಲಾಖೆ ನಡೆಸಿದ ಪ್ರಾಥಮಿಕ ವರದಿಯಂತೆ 10,426 ಹೆಕ್ಟೇರ್​ನಲ್ಲಿನ ಬೆಳೆ ನಷ್ಟವಾಗಿರುವುದು ಗೊತ್ತಾಗಿದೆ. ಸಮೃದ್ಧವಾಗಿ ಬಂದಿದ್ದ ತೊಗರಿ ಒಣಗಿ ನಿಂತಿದ್ದು, ಕಳೆದ ಮೂರು ವರ್ಷ ಅತಿವೃಷ್ಟಿಯಿಂದ ಸಂಕಷ್ಟದಲ್ಲಿ ನರಳುತ್ತಿದ್ದ ಅನ್ನದಾತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಧಿಕಾರಿಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಹಾನಿ ಪ್ರದೇಶ ಹೆಚ್ಚಾಗುವ ಸಾಧ್ಯತೆಯಿದೆ.

ಮುಂಗಾರು ಅವಧಿಯಲ್ಲಿ ಚೆನ್ನಾಗಿದ್ದ ಬೆಳೆ.. ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ತೊಗರಿ ಬೆಳೆ ಚೆನ್ನಾಗಿಯೇ ಇತ್ತು. ನಂತರ ಬಂದ ಭಾರಿ ಮಳೆ ಬೆಳೆಗೆ ಮಾರಕ ಎನಿಸಿದೆ. ಔಷಧೋಪಚಾರ ಮಾಡಿದರೂ ರೋಗ ಹತೋಟಿಗೆ ಬರಲಿಲ್ಲ. ತೇವಾಂಶ ಹೆಚ್ಚಾಗಿ ಬೆಳೆ ಬಹುತೇಕ ಒಣಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ.

ಜಿಲ್ಲೆಯಲ್ಲಿ 1.07 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, ನೆಟೆ ರೋಗ ಎಲ್ಲೆಡೆ ವ್ಯಾಪಿಸಿ ಈ ತಿಂಗಳ ಪ್ರಾರಂಭದಲ್ಲಿ ರೋಗದ ತೀವ್ರತೆ ಹೆಚ್ಚಾಗಿದ್ದು, ಜಿಲ್ಲೆಯಾದ್ಯಂತ ಈವರೆಗೆ 10,426 ಹೆಕ್ಟೇರ್ ಪ್ರದೇಶದಲ್ಲಿ ರೋಗದಿಂದ ಬೆಳೆ ಹಾನಿಯಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಶೇ 60 ರಷ್ಟು ಬೆಳೆ ನಷ್ಟ.. ತೊಗರಿ ವಾರ್ಷಿಕ ಬೆಳೆಯಾಗಿದ್ದು, ಪದೇ ಪದೆ ಕಳೆ ತೆಗೆಯುವ ಕಷ್ಟ ಇಲ್ಲ. ಉತ್ತಮ ಬೆಲೆ ಸಿಕ್ಕರೆ ಕೈತುಂಬ ಹಣ ಬರುತ್ತದೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ರೈತರು ಪ್ರತಿ ವರ್ಷ ತೊಗರಿಗೆ ಆದ್ಯತೆ ನೀಡುತ್ತಾರೆ. ಅತಿವೃಷ್ಟಿ ಒಂದೆಡೆಯಾದರೆ, ನಿರಂತರ ಬಿತ್ತನೆ ನೆಟೆ ರೋಗಕ್ಕೆ ಪ್ರಮುಖ ಕಾರಣ. ಬೆಳೆ ಸಮೃದ್ಧವಾಗಿ ಬಂದಿದ್ದು, ಆರು ಅಡಿ ಎತ್ತರಕ್ಕೆ ಬೆಳೆದಿದೆ. ನೆಟೆ ರೋಗದಿಂದ ರೈತರ ಹೊಲದಲ್ಲಿ ಶೇ. 25ರಿಂದ ಶೇ.60ರಷ್ಟು ಬೆಳೆ ಹಾನಿಯಾಗಿ ನಾಲ್ಕಾರು ಕಾಯಿ ಆದರೂ ಕಾಳು ತುಂಬಿಕೊಂಡಿಲ್ಲ.

ಸರ್ಕಾರಕ್ಕೆ ವರದಿ ಸಲ್ಲಿಸಿರುವ ಅಧಿಕಾರಿಗಳು.. ರೋಗದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಾಥಮಿಕ ಸಮೀಕ್ಷೆ ನಡೆಸಿದ ಕೃಷಿ ಅಧಿಕಾರಿಗಳು, ಹಾನಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ರೈತರಿಗೆ ಎನ್‍ಡಿಆರ್​ ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ಒದಗಿಸಿಕೊಡಲು ವರದಿಯಲ್ಲಿ ತಿಳಿಸಲಾಗಿದೆ. ಜಿಲ್ಲೆಯ ಎಂಟು ತಾಲೂಕುಗಳ ಪೈಕಿ ಹುಮನಾಬಾದ್ ಹಾಗೂ ಚಿಟಗುಪ್ಪದಲ್ಲಿ ನೆಟೆ ರೋಗಬಾಧೆ ಅಧಿಕವಿದೆ.

ಹುಮನಾಬಾದ್‍ನಲ್ಲಿ 4,208 ಹೆಕ್ಟೇರ್ ಮತ್ತು ಚಿಟಗುಪ್ಪದಲ್ಲಿ 3,483 ಹೆಕ್ಟೇರ್​ನಲ್ಲಿ ಬೆಳೆ ನಾಶವಾಗಿದ್ದು, ಬೀದರ್ 430 ಹೆಕ್ಟೇರ್, ಔರಾದ್ 481 ಹೆ., ಕಮಲನಗರ 454 ಹೆ., ಭಾಲ್ಕಿ 630 ಹೆ., ಬಸವಕಲ್ಯಾಣ 280 ಹಾಗೂ ಹುಲಸೂರು ತಾಲೂಕಿನಲ್ಲಿ 100 ಹೆಕ್ಟೇರ್​ನಲ್ಲಿ ಬೆಳೆ ನಷ್ಟವಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೆಟೆ ರೋಗಕ್ಕೆ ಜಿಲ್ಲೆಯಾದ್ಯಂತ ಬಹುತೇಕವಾಗಿ ತೊಗರಿ ಬೆಳೆ ಹಾನಿಯಾಗಿದೆ. ಅತಿವೃಷ್ಟಿ ಸಂಕಷ್ಟದ ಜತೆಯಲ್ಲಿ ಇದೀಗ ರೈತರು ನೆಟೆ ರೋಗದಿಂದ ತತ್ತರಿಸಿದ್ದಾರೆ. ಸರ್ಕಾರ ವಿಳಂಬ ಮಾಡದೆ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಪ್ರಗತಿಪರ ರೈತ ಚಂದ್ರಶೇಖರ ಪಾಟೀಲ್ ಮನವಿ ಮಾಡಿದರು.

ಇದನ್ನೂ ಓದಿ : ತೊಗರಿಗೆ ನೆಟೆರೋಗ ಬಾಧೆ: ಬೆಳೆಹಾನಿ ಪರಿಹಾರಕ್ಕೆ ರೈತರ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.