ಜೆರುಸಲೇಂ: ಯುದ್ಧ ಮುಗಿದ ನಂತರ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಆಡಳಿತ ಸ್ಥಾಪಿಸುವುದನ್ನು ವಿರೋಧಿಸುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹೇಳಿದ್ದಾರೆ.
ಬುಧವಾರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ಯಾಲಂಟ್, ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಾಗರಿಕ ಅಥವಾ ಮಿಲಿಟರಿ ನಿಯಂತ್ರಣ ಹೊಂದುವುದಿಲ್ಲವೆಂದು ಘೋಷಿಸಬೇಕೆಂದು ಪ್ರಧಾನಿ ನೆತನ್ಯಾಹು ಅವರನ್ನು ಒತ್ತಾಯಿಸಿದರು. ಸದ್ಯ ಪ್ಯಾಲೆಸ್ಟೈನ್ನಲ್ಲಿ ಅಧಿಕಾರ ಹಿಡಿದಿರುವ ಇಸ್ಲಾಮಿಕ್ ಪ್ಯಾಲೆಸ್ಟೈನ್ ಪ್ರತಿರೋಧ ಆಂದೋಲನವಾದ ಹಮಾಸ್ಗೆ ಪರ್ಯಾಯವಾಗಿ ತಕ್ಷಣವೇ ಹೊಸದೊಂದು ಆಡಳಿತವನ್ನು ಸ್ಥಾಪಿಸಬೇಕೆಂದು ಅವರು ಪ್ರಧಾನಿ ನೆತನ್ಯಾಹುಗೆ ಆಗ್ರಹಿಸಿದರು.
"ಕಳೆದ ವರ್ಷ ಅಕ್ಟೋಬರ್ನಲ್ಲಿ ಹಮಾಸ್ನೊಂದಿಗೆ ಇಸ್ರೇಲ್ನ ಸಂಘರ್ಷ ಪ್ರಾರಂಭವಾದಾಗಲೇ ನಾನು ಹಮಾಸ್ನೊಂದಿಗೆ ಸಂಬಂಧವಿರದ ಹೊಸ ಆಡಳಿತವೊಂದನ್ನು ಪ್ಯಾಲೆಸ್ಟೈನ್ನಲ್ಲಿ ಸ್ಥಾಪಿಸಬೇಕೆಂದು ಹೇಳಿದ್ದೆ. ಆದರೆ ಈ ಬಗ್ಗೆ ಯುದ್ಧ ಕ್ಯಾಬಿನೆಟ್ ಸಭೆಗಳಲ್ಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ" ಎಂದು ಗ್ಯಾಲಂಟ್ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿದ ನೆತನ್ಯಾಹು, "ಹಮಾಸ್ ಅಸ್ತಿತ್ವದಲ್ಲಿ ಇರುವವರೆಗೂ ಬೇರೆ ಯಾವುದೇ ಪಕ್ಷವು ಗಾಜಾದ ಮೇಲೆ ನಿಯಂತ್ರಣ ಸ್ಥಾಪಿಸಲು ಸಾಧ್ಯವಿಲ್ಲ. ಪ್ಯಾಲೆಸ್ಟೈನ್ ಪ್ರಾಧಿಕಾರಕ್ಕೂ ಅದು ಸಾಧ್ಯವಿಲ್ಲ." ಎಂದು ಹೇಳಿದರು. ಆದರೆ ಪ್ಯಾಲೆಸ್ಟೈನ್ನಲ್ಲಿ ಸಂಭವನೀಯ ಇಸ್ರೇಲಿ ಆಡಳಿತದ ವಿಷಯವನ್ನು ಅವರು ನಿರಾಕರಿಸಲಿಲ್ಲ.
ಏತನ್ಮಧ್ಯೆ ಗ್ಯಾಲಂಟ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್, ನ್ಯಾಯಾಂಗ ಸಚಿವ ಯಾರಿವ್ ಲೆವಿನ್ ಮತ್ತು ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್-ಗ್ವೀರ್ ಸೇರಿದಂತೆ ಹಲವಾರು ಕ್ಯಾಬಿನೆಟ್ ಸಚಿವರು ಗ್ಯಾಲಂಟ್ ಅವರು ನೀಡಿದ ಹೇಳಿಕೆಯನ್ನು ಖಂಡಿಸಿದ್ದಾರೆ.
ಆದರೆ ಖಾತೆಯಿಲ್ಲದ ಸಚಿವ ಬೆನ್ನಿ ಗಾಂಟ್ಜ್ ಗ್ಯಾಲಂಟ್ ಅವರ ಬೆಂಬಲಕ್ಕೆ ನಿಂತಿದ್ದಾರೆ. "ರಕ್ಷಣಾ ಸಚಿವರು ಸತ್ಯವನ್ನೇ ಹೇಳುತ್ತಿದ್ದಾರೆ. ಯಾವುದೇ ಬೆಲೆ ತೆತ್ತಾದರೂ ದೇಶಕ್ಕೆ ಸರಿಯಾದದ್ದನ್ನು ಮಾಡುವುದು ನಾಯಕತ್ವದ ಜವಾಬ್ದಾರಿಯಾಗಿದೆ" ಎಂದು ಅವರು ಹೇಳಿದರು.
ಉಗ್ರರ ಲೆಬನಾನ್ ನೆಲೆಗಳ ಮೇಲೆ ದಾಳಿ: ಹಿಜ್ಬುಲ್ಲಾ ಉಗ್ರರ ಭದ್ರಕೋಟೆ ಎಂದು ಪರಿಗಣಿಸಲಾದ ಈಶಾನ್ಯ ಲೆಬನಾನ್ನ ಬಾಲ್ಬೆಕ್ ಪ್ರದೇಶದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಈ ಪ್ರದೇಶವು ಇಸ್ರೇಲ್ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಉತ್ತರ ಇಸ್ರೇಲ್ ಮೇಲೆ ಬುಧವಾರ ತಡರಾತ್ರಿ ಮತ್ತು ಗುರುವಾರ ಮುಂಜಾನೆ ನಡೆದ ಹಿಜ್ಬುಲ್ಲಾ ದಾಳಿಗೆ ಪ್ರತೀಕಾರವಾಗಿ ಈ ವೈಮಾನಿಕ ದಾಳಿ ನಡೆಸಲಾಗಿದೆ. ಆದಾಗ್ಯೂ, ದಾಳಿಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿವೆಯೇ ಎಂಬುದನ್ನು ಐಡಿಎಫ್ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: 2024ರಲ್ಲಿ ಜಾಗತಿಕ ಕಚ್ಚಾ ತೈಲ ಬೇಡಿಕೆ ಕುಸಿತ ಸಾಧ್ಯತೆ: ಐಇಎ ಅಂದಾಜು - oil demand