ETV Bharat / state

'ವಿಜಯನಗರ ವಸಂತ ವೈಭವ' ಕಲಾ ಪ್ರದರ್ಶನ: ತಾಯಿ ಭುವನೇಶ್ವರಿ ಹೊತ್ತ ವಾಹನ ಚಲಾಯಿಸಿದ ಆನಂದ್ ಸಿಂಗ್‌

author img

By

Published : Jan 27, 2023, 12:33 PM IST

Tourism Minister Anand Singh
ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್

ಹೊಸಪೇಟೆ ನಗರದಲ್ಲಿ ವಸಂತ ವೈಭವ ಕಲಾ ಪ್ರದರ್ಶನದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ವಿಜಯನಗರ ವಸಂತ ವೈಭವ

ವಿಜಯನಗರ : ವಿಶ್ವವಿಖ್ಯಾತ ಹಂಪಿ ಉತ್ಸವದ ಆಚರಣೆಯ ಭಾಗವಾಗಿ ಜನವರಿ 26ರಂದು ನಡೆದ ‘ವಿಜಯನಗರ ವಸಂತ ವೈಭವ’ ಕಲಾ ಪ್ರದರ್ಶನ ಅಕ್ಷರಶಃ ಜನಮನ ಸೂರೆಗೊಂಡಿತು. ಕಲಾ ಪ್ರದರ್ಶನಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಜಯನಗರಕ್ಕೆ ಆಗಮಿಸಿದ್ದ ಕಲಾ ತಂಡಗಳು ನಗರದ ವಡಕರಾಯ ದೇವಸ್ಥಾನದ ಬಳಿ ಸಂಜೆಯ ಹೊತ್ತಿಗೆ ಸಮಾವೇಶಗೊಂಡು ಪ್ರದರ್ಶನಕ್ಕೆ ಬೇಕಾದ ಸಲಕರಣೆ ಸಿದ್ಧಪಡಿಸಿಕೊಂಡು, ಪೋಷಾಕಿನೊಂದಿಗೆ ಮೆರವಣಿಗೆಗೆ ಸನ್ನದ್ಧರಾಗಿದ್ದರು.

ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು. ನಂತರ ಹಸಿರು ನಿಶಾನೆ ತೋರಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಭುವನೇಶ್ವರಿ ದೇವಿಯನ್ನು ಹೊತ್ತು ಸಾಗಿದ ವಾಹನದ ಮುಂಭಾಗದಲ್ಲಿ ಹಂಪಿಯ ಆನೆ ಲಕ್ಷ್ಮಿ ಹೆಜ್ಜೆ ಹಾಕಿ ಗಮನ ಸೆಳೆಯಿತು.

ವಾಹನ ಚಾಲನೆ ಮಾಡಿದ ಆನಂದ್​ ಸಿಂಗ್​: ಮತ್ತೊಂದೆಡೆ ಭುವನೇಶ್ವರಿ ಹೊತ್ತ ತೆರೆದ ವಾಹನವನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಖುದ್ದು ಚಲಾಯಿಸಿದರು. ಸಚಿವರು ಸಾರ್ವಜನಿಕರತ್ತ ಕೈಬೀಸಿ ನಮಸ್ಕರಿಸಿ ಸಂತಸ ವ್ಯಕ್ತಪಡಿಸಿದರು. ಅಭಿಮಾನಿಗಳು ಸಚಿವರೊಂದಿಗೆ ನಿಂತು ಫೋಟೊ ತೆಗೆಸಿಕೊಂಡರು. ಮೆರವಣಿಗೆ ಸಾಗುವ ಸಂದರ್ಭದಲ್ಲಿ ಶಶಿಕಲಾ ಜೊಲ್ಲೆ ಕಲಾತಂಡದ ಜೊತೆಗೆ ಡೊಳ್ಳು ಬಾರಿಸುವ ಮೂಲಕ ಸಂಭ್ರಮಿಸಿದರು.

ಮೆರವಣಿಗೆಯ ಮುಂಭಾಗದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮೊದಲ್ಗೊಂಡು ಸಂಸದರಾದ ದೇವೇಂದ್ರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್, ಅಪರ ಜಿಲ್ಲಾಧಿಕಾರಿ ಅನುರಾಧ ಕೆ. ಹಾಗೂ ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ ಹೆಜ್ಜೆ ಹಾಕಿದರು.

ನಗರದ ವಡಕರಾಯ ದೇವಸ್ಥಾನದಿಂದ ಆರಂಭಗೊಂಡು ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿದ ಮೆರವಣಿಗೆಯಲ್ಲಿ ಕಂಸಾಳೆ, ಮರಗಾಲು ಕುಣಿತ, ಕಂಸಾಳೆ ನೃತ್ಯ, ಮಹಿಳಾ ಪಟಕುಣಿತ, ಸಿಂಧೋಳ ಕುಣಿತ, ನಂದಿಕೋಲು, ಮಹಿಳಾ ಉರುಮೆವಾದ್ಯ, ವೀರಗಾಸೆ, ಹುಲಿವೇಷ, ಚಂಡೆವಾದನ, ಕಥಕ್ಕಳಿ, ಮಯೂರ ನೃತ್ಯಂ, ಪಂಜಾಬಿ ಡೋಲ್, ಗೊರವರ ಕುಣಿತ ಸೇರಿದಂತೆ ಇನ್ನೂ ಆನೇಕ ಕಲಾತಂಡಗಳು ನಗರದ ಮುಖ್ಯ ರಸ್ತೆಗಳಲ್ಲಿ ಪ್ರದರ್ಶನ ನೀಡಿ ಕಣ್ಮನ ತಣಿಸಿದವು.

ವಿದ್ಯುತ್​ ದೀಪಗಳಿಂದ ಅಲಂಕಾರ: ಹಂಪಿ ಉತ್ಸವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ವಿದ್ಯುತ್​ ದೀಪಗಳಿಂದ ಅಲಂಕರಿಸಿದ್ದು ವಿಜಯನಗರ ವಸಂತ ವೈಭವ ಕಲಾ ಪ್ರದರ್ಶನದ ಮೆರುಗು ಮತ್ತಷ್ಟು ಹೆಚ್ಚಿತ್ತು.

ಇದನ್ನೂ ಓದಿ: ಸ್ವದೇಶ್‌ ದರ್ಶನ್‌ ಯೋಜನೆಯಲ್ಲಿ ಮೈಸೂರು ಹಾಗೂ ಹಂಪಿ ಸೇರ್ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.