ETV Bharat / state

2018ರ ಚುನಾವಣೆಯಲ್ಲಿ ಸೋಲಿಸಲು ಸ್ವಪಕ್ಷದವರಿಂದಲೇ ಹಣ ಹಂಚಿಕೆ.. ಸತೀಶ್​ ಜಾರಕಿಹೊಳಿ‌ ಸ್ಫೋಟಕ ಹೇಳಿಕೆ

author img

By

Published : Aug 20, 2022, 11:16 AM IST

Updated : Aug 20, 2022, 2:14 PM IST

Satish Jarkiholi
ಸತೀಶ್​ ಜಾರಕಿಹೊಳಿ‌

2018ರ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸ್ವಪಕ್ಷದವರಿಂದಲೇ ಹಣ ಹಂಚಿಕೆ ಮಾಡಲಾಗಿತ್ತು ಎಂದು ಕಾಂಗ್ರೆಸ್​ನಲ್ಲಿರುವ ತಮ್ಮ ವಿರೋಧಿಗಳ ಹೆಸರನ್ನು ಪ್ರಸ್ತಾಪಿಸದೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಗುಟ್ಟನ್ನು ಬಹಿರಂಗ ಮಾಡಿದರು.

ಬೆಳಗಾವಿ: 2018ರಲ್ಲಿ ನಡೆದ ಚುನಾವಣೆಯಲ್ಲಿ ಸೋಲಿಸಲು ಸ್ವಪಕ್ಷದ ನಾಯಕರು ಮಾಡಿದ ತಂತ್ರಗಾರಿಕೆ ಬಗೆಗಿನ ಗುಟ್ಟನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಬಹಿರಂಗ ಪಡಿಸಿದ್ದಾರೆ. 'ನನ್ನನ್ನು ಸೋಲಿಸಲು ಕ್ಷೇತ್ರದಲ್ಲಿ ಸ್ವಪಕ್ಷದವರೇ ಹಣ ಹಂಚಿಕೆ ಮಾಡಿದ್ರು. ನಾವು ಅವರನ್ನ ಸೋಲಿಸಲು ಪ್ರಯತ್ನ ಮಾಡಿದ್ವಿ ಎಂದು ಸಹ ಹೇಳಿಕೊಂಡಿದ್ದಾರೆ' ಅಂತಾ ಸ್ಫೋಟಕ ಹೇಳಿಕೆ ನೀಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ‌ ಆದ ತಪ್ಪು ಈಗ ಆಗಲ್ಲ. ನನ್ನನ್ನು ಕಟ್ಟಿಹಾಕಲು ಕ್ಷೇತ್ರದಲ್ಲಿ ಈಗಾಗಲೇ ಪೂರಕವಾಗಿ ಬಿಜೆಪಿಯ ನಾಯಕರು ಕೆಲಸ ಮಾಡುತ್ತಿದ್ದಾರೆ. ಯಮಕನಮರಡಿ ಕ್ಷೇತ್ರಕ್ಕೆ ನನ್ನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಕ್ಷೇತ್ರದ ಮೇಲೆ ಹಿಡಿತವಿದೆ. ಜನರು ಯಾರ ಪರವಾಗಿ ಇದ್ದಾರೆ ಅಂತ ಗೊತ್ತಿದೆ. ರಾಜ್ಯದ 224 ಕ್ಷೇತ್ರದಲ್ಲಿ ವಿರೋಧ ಅಲೆ ಇರೋದು ಸಹಜ ಎಂದರು.

ಬೆಳಗಾವಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್​ ಜಾರಕಿಹೊಳಿ‌

ಯಮಕನಮರಡಿ ಕ್ಷೇತ್ರದಲ್ಲಿ ಆಪ್ತ ಸಹಾಯಕರ ಹಾವಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಮುಖ ಕಾರ್ಯಕರ್ತರು, ಆಪ್ತ ಸಹಾಯಕರು ಇಲ್ಲದೇ ಕೆಲಸ ಮಾಡಲು ಸಾಧ್ಯವಿಲ್ಲ. ತಪ್ಪನ್ನು ಸರಿ ಮಾಡಲು ನಿರಂತರ ಪ್ರಯತ್ನ ನಡೆಯಲಿದೆ. ಆಪ್ತ ಸಹಾಯಕರು ಇಲ್ಲದೇ ಶಾಸಕರು ಕೆಲಸ ಮಾಡಲು ಕಷ್ಟವಾಗುತ್ತದೆ.‌ ಬಿಜೆಪಿಯವರು ಎಂಆರ್​ಪಿ ಫಿಕ್ಸ್ ಎಂದು ಕುಳಿತಿದ್ದಾರೆ. ಇದು ರಾಜಕೀಯ, ಆಗಿನ ಸಂದರ್ಭ ಬೇರೆ ಇತ್ತು. ಈಗ ಬೇರೆ ಇದೆ. ಕ್ಷೇತ್ರದಲ್ಲಿ ಪ್ರಚಾರ ನಡೆಸದೇ, ಹಣ ಖರ್ಚು ಮಾಡದೇ ಗೆದ್ದಿದ್ದೇನೆ. ಇದರ ಅರಿವು ಬಿಜೆಪಿ ನಾಯಕರಿಗೆ ಇಲ್ಲ ಎಂದರು.

ಚುನಾವಣಾ ಹಣ ಹಂಚಿಕೆ: ಕಿತ್ತೂರು ಕರ್ನಾಟಕದ ಭಾಗದಲ್ಲಿ 56 ವಿಧಾನಸಭೆ ಕ್ಷೇತ್ರಗಳು ಇವೆ. 2019ರ ಲೋಕಸಭೆ ಚುನಾವಣೆ ಫಲಿತಾಂಶ ಬಿಜೆಪಿ ನಾಯಕರು ನೋಡಬೇಕು. 56 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪ್ಲಸ್ ಇರೋದು ಚಿಕ್ಕೋಡಿ ಕ್ಷೇತ್ರ ಮಾತ್ರ. ಅತಿ ಕಡಿಮೆ ಮೈನಸ್ ಇರೋದು ಯಮಕನಮರಡಿ ಕ್ಷೇತ್ರವಾಗಿದೆ.ಇನ್ನೂ ಅನೇಕ ನಾಯಕರ ಕ್ಷೇತ್ರದಲ್ಲಿ 30-40ಸಾವಿರ ಮೈನಸ್ ಆಗಿದೆ.

ಹಾಗಾದ್ರೆ, ಅವರೆಲ್ಲ ಚುನಾವಣೆಯಲ್ಲಿ ಸೋಲಲಿದ್ದಾರೆಯೇ?. ಕಾಂಗ್ರೆಸ್ ಘಟಾನುಘಟಿ ನಾಯಕರ ಕ್ಷೇತ್ರದಲ್ಲಿ ಮೈನಸ್ ಇದೆ. ಕ್ಷೇತ್ರದ ಪ್ರಚಾರ ನಡೆಸದೇ ಚುನಾವಣೆ ಗೆಲ್ಲಬೇಕು ಎನ್ನುವ ಹಠ ಇತ್ತು. ಕಳೆದ ಚುನಾವಣೆಯಲ್ಲಿ ಪ್ರಚಾರ ನಡಸದೇ ಹಣ ಖರ್ಚು ಮಾಡದೇ ಗೆದ್ದಿದ್ದೇನೆ. ಹೀಗಾಗಿ, ನನ್ನ ಗೆಲುವಿನ ಅಂತರ ಕಡಿಮೆಯಾಗಿದೆ. ನಮ್ಮ ಬೆಂಬಲಿಗರು ಸಹ ಅತಿ ಆತ್ಮವಿಶ್ವಾಸದಿಂದ ಪ್ರಚಾರ ನಡೆಸಲಿಲ್ಲ.

ನಮ್ಮ ಪಕ್ಷದ ನಾಯಕರ ಹಣ ಸ್ವಲ್ಪ ವರ್ಕ್ ಮಾಡಿದೆ. ಬಿಜೆಪಿ ಮಾತ್ರವಲ್ಲದೇ, ನಮ್ಮ ಪಕ್ಷದವರೂ ಸಹ ಹಣ ಕಳುಹಿಸಿದ್ರು. ಇದರಿಂದ ನನ್ನ ಗೆಲುವಿನ ಅಂತರ ಕಡಿಮೆ ಆಗೋಕೆ ಕಾರಣವಾಯಿತು. ನಾವು ಆ ಕಡೆ ಹಣ ಕೊಟ್ಟಿದ್ದೆವು. ಅವರು ಇಲ್ಲಿ ಕೊಟ್ಟರು ಎಲ್ಲ ಸರಿಸಮ ಆಗಿದೆ. ಮುಂದಿನ ಚುನಾವಣೆಯಲ್ಲಿ ಅಂತಹ ತಪ್ಪು ಆಗಲ್ಲ. ಈ ಸಲ ಯಾವುದೇ ಹಣ ನಮ್ಮ ಕ್ಷೇತ್ರಕ್ಕೆ ಬರಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದರು.

ರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್‌ಮೆಂಟ್ ನಡೆಯುತ್ತಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ ವಿಚಾರಕ್ಕೆ, ಮೊಟ್ಟೆ ಎಸೆದಿದ್ದು ಗೊತ್ತಿಲ್ಲ. ಪ್ರತಿಭಟನೆ ಮಾಡೋದನ್ನ ನೋಡಿದ್ದೇವೆ. ಈ ಬಗ್ಗೆ ಪೊಲೀಸರು ಕ್ರಮಕೈಗೊಳ್ಳಲು ನಮ್ಮ ಸಿಎಲ್‌ಪಿ ನಾಯಕರು ಅಗ್ರಹ‌ ಮಾಡಿದ್ದಾರೆ. ಟೆನ್ಸ್ ಏರಿಯಾ ಇರೋದ್ರಿಂದ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಬೇಕಿತ್ತು. ಪೊಲೀಸರು ಏನು ಕ್ರಮ ವಹಿಸುತ್ತಾರೆ ಅದರ ಮೇಲೆ ಡಿಪೆಂಡ್ ಆಗಿರುತ್ತದೆ. ಈಗಾಗಲೇ ಮಂತ್ರಿಗಳು ಹೇಳಿದ್ದಾರಲ್ಲ ಮ್ಯಾನೇಜ್​ಮೆಂಟ್ ಅಂತಾ. ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್‌ಮೆಂಟ್ ನಡೆಯುತ್ತಿದೆ ಎಂದರು.

ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಬಿಜೆಪಿಗರಿಂದ ಮೊಟ್ಟೆ ಎಸೆತ, ಕಪ್ಪು ಬಾವುಟ ಪ್ರದರ್ಶನ

ಸರ್ಕಾರ ಏನಾದರೂ ಮಾಡಿಸುತ್ತಿದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ, ಸ್ಥಳೀಯ ಮುಖಂಡರು, ಪ್ರಭಾವಿ ನಾಯಕರು ಇಲ್ಲದೇ ಹೀಗೆಲ್ಲಾ ಮಾಡಕ್ಕಾಗಲ್ಲ. ಜಿಲ್ಲೆಯ ಯಾವುದೇ ನಾಯಕರ ಪ್ರಚೋದನೆ ಇಲ್ಲದೇ ಈ ರೀತಿ ಮಾಡಲಾಗುವುದಿಲ್ಲ. ಪಂಜಾಬ್​ನಲ್ಲಿ ಪ್ರಧಾನಿ ಭದ್ರತಾ ಲೋಪ ಆದಾಗ ಸರ್ಕಾರದ ಮೇಲೆ ಆರೋಪ ಮಾಡುವ ಪ್ರಯತ್ನ ಮಾಡಿದ್ರು‌. ಇವರಲ್ಲಿ ಪ್ರತಿ ದಿವಸ ಲೋಪಗಳು ಆಗಿಯೇ ಆಗುತ್ತದೆ. ಸರಿಪಡಿಸುವ ಪ್ರಯತ್ನ ಮಾಡಿ ಎಲ್ಲ ಜನರಿಗೆ ರಕ್ಷಣೆ ಕೊಡಬೇಕು ಎಂದರು.

ಗೋಡ್ಸೆ ಭಾವಚಿತ್ರದ ಫ್ಲೆಕ್ಸ್ ಹಾಕಿದ ವಿಚಾರಕ್ಕೆ, ಅವರ ಅಜೆಂಡಾ ಇರೋದೆ ಅದು, ಹಂತ ಹಂತವಾಗಿ ಜಾರಿಗೆ ತರ್ತಾರೆ. ಅವಕಾಶ ಸಿಕ್ಕಾಗ ಇದನ್ನ ಅವರು ಬಳಸಿಕೊಳ್ಳುತ್ತಾರೆ. ಮೊನ್ನೆ ನೆಹರು ಅವರ ಚಿತ್ರ ಬಿಟ್ರು, ಸಾವರ್ಕರ್, ಗೋಡ್ಸೆ ಅವರ ಚಿತ್ರ ಹಾಕ್ತಾರೆ. ಜನ ತಿಳಿದುಕೊಳ್ಳಬೇಕು ಅಷ್ಟೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ: ಗಾಂಧೀಜಿ ಕೊಂದ ಗೋಡ್ಸೆ ವಂಶಸ್ಥರು ಈಗ ಸಾಮರಸ್ಯ ಹಾಳು ಮಾಡುತ್ತಿದ್ದಾರೆ.. ಸಿದ್ದರಾಮಯ್ಯ

ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಉನ್ನತ ಹುದ್ದೆ ವಿಚಾರ ಕುರಿತು ಮಾತನಾಡಿದ, ಸಿದ್ದರಾಮೋತ್ಸವ ಯಶಸ್ಸು ಯಡಿಯೂರಪ್ಪಗೆ ಪ್ಲಸ್ ಬೋನಸ್ ಆಗಿದೆ. ಬಹುಶಃ ಅದು ಯಶಸ್ವಿಯಾಗಿರಲಿಲ್ಲ ಅಂದರೆ ಅವರನ್ನು ದೂರ ತಳ್ಳುತ್ತಿದ್ದರು. ಇದೊಂದು ಚುನಾವಣೆ ಅವರನ್ನು ಬಳಸಿಕೊಳ್ಳುತ್ತಾರೆ. ಕಾದು ನೋಡೋಣ, ಇದು ಅವರ ಪಕ್ಷದ ಆಂತರಿಕ ವಿಚಾರ.

ಆದರೂ, ಸಿದ್ದರಾಮಯ್ಯರ ಕಾರ್ಯಕ್ರಮ ಯಶಸ್ಸಿನಿಂದ ಬಿಎಸ್‌ವೈಗೆ ಎರಡು ಸ್ಥಾನ ಕೊಟ್ಟಿದ್ದಾರೆ. ಚುನಾವಣೆ ಮುಗಿದ ಮೇಲೆ ನೂರಕ್ಕೆ ನೂರು ಅವರಿಗೇನು ಅವಕಾಶ ಇರಲ್ಲ. ಬಿ.ಎಸ್.ಯಡಿಯೂರಪ್ಪಗೆ ಹೆಚ್ಚು ಕಡಿಮೆ 80 ವರ್ಷ ವಯಸ್ಸಾಗಿದೆ. ಇದೊಂದು ಚುನಾವಣೆಯಲ್ಲಿ ಬಳಸಿಕೊಳ್ಳುತ್ತಾರೆ. ಮುಂದೆ ಬಹುಶಃ ಇತಿಹಾಸದಲ್ಲಿ ಯಡಿಯೂರಪ್ಪ ಇರ್ತಾರೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಅಮೃತ ಮಹೋತ್ಸವದಿಂದ ಪಕ್ಷಕ್ಕೆ ಮತ್ತಷ್ಟು ‌ಶಕ್ತಿ.. ಸತೀಶ್​ ಜಾರಕಿಹೊಳಿ‌

ಮಡಿಕೇರಿ ಘಟನೆ ಪೂರ್ವ ನಿಯೋಜಿತ: ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಏಕೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ, ಯಾವುದೇ ಏರಿಯಾದಲ್ಲಿ ಯಾರ ಫೋಟೋ ಬೇಕಾದರೂ ಹಾಕಬಹುದು. ಇದು ಪ್ರಜಾಪ್ರಭುತ್ವ, ನಿರ್ದಿಷ್ಟವಾಗಿ ಇಲ್ಲೇ ಹಾಕಿ ಅಂತಾ ಹೇಳಕ್ಕಾಗಲ್ಲ. ಎಲ್ಲಿ ಬೇಕಾದಲ್ಲಿ ಫೋಟೋ ಹಾಕಬಹುದು.

ಫೋಟೋ ಹಾಕಲಿಕ್ಕೆ ನಿರ್ಬಂಧ ಇರಬಾರದು. ಎಲ್ಲಿ ಬೇಕಾದಲ್ಲಿ ಫೋಟೋ ಹಾಕಲು ಎಲ್ಲರಿಗೂ ಸ್ವಾತಂತ್ರ್ಯ ಇದೆ, ಸಮಾನ ಅವಕಾಶ ಇದೆ. ಆದ್ರೆ ಮಡಿಕೇರಿಯ ಘಟನೆ ಪೂರ್ವ ನಿಯೋಜಿತ, ಇದನ್ನ ಖಂಡಿಸುತ್ತೇವೆ. ಪೊಲೀಸರು ಕ್ರಮ ಕೈಗೊಳ್ಳಬೇಕು. ಮಡಿಕೇರಿ ಘಟನೆ ಖಂಡಿಸಿ ಆ.26 ಕ್ಕೆ ಪ್ರತಿಭಟನೆ ಇದೆ. ನಾವು ಇಲ್ಲಿಯೇ ಮಾಡ್ತೀವಿ.ಇಡೀ ರಾಜ್ಯಾದ್ಯಂತ ಪ್ರತಿಭಟ‌ನೆ ಮಾಡ್ತೀವಿ ಎಂದರು.

ಇದನ್ನೂ ಓದಿ: ಸಾವರ್ಕರ್ ಫೋಟೋ ಸುಟ್ಟ ಪ್ರಕರಣ: ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೂರು ದಾಖಲು

Last Updated :Aug 20, 2022, 2:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.