ETV Bharat / state

ಬೆಳಗಾವಿ: ಚರಂಡಿಯಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆ

author img

By ETV Bharat Karnataka Team

Published : Dec 25, 2023, 10:50 AM IST

Updated : Dec 25, 2023, 12:52 PM IST

newborn baby
ಗಂಡು ಶಿಶುವಿನ ಶವ ಪತ್ತೆ

ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದ ಕಲಾಲ್ ಓಣಿಯಲ್ಲಿರುವ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ.

ಬೆಳಗಾವಿಯಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆ

ಬೆಳಗಾವಿ: ನವಜಾತ ಗಂಡು ಶಿಶುವಿನ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಚರಂಡಿಯಲ್ಲಿ ಎಸೆದಿರುವ ಅಮಾನವೀಯ ಘಟನೆ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ನಡೆದಿದೆ.

ಘಟಪ್ರಭಾ ಪಟ್ಟಣದ ಕಲಾಲ್ ಓಣಿಯಲ್ಲಿರುವ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಹತ್ಯೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಬೀಸಾಕಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ಆಗಮಿಸಿ ನವಜಾತ ಶಿಶುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಬಗ್ಗೆ ಗ್ರಾಮ ಪಂಚಾಯತ್​ ಮಾಜಿ ಸದಸ್ಯ ರಾಜು ಉದ್ದನ್ನವರ ಮಾತನಾಡಿ, ನಮ್ಮ ಏರಿಯಾದಲ್ಲಿ ಶಿಶುವಿನ ಶವ ಎಸೆದು ಹೋಗಿದ್ದಾರೆ. ಇಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷೆ ಮಾಡಿದರೆ ಯಾರು ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಆರೋಪಿಗಳನ್ನು ಪತ್ತೆ ಹಚ್ಚಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳೀಯ ರೆಹಮಾನ್ ಮೊಖಾಶಿ ಮಾತನಾಡಿ, ಇದು ಇಡೀ ಘಟಪ್ರಭಾ ಜನರೇ ತಲೆ ತಗ್ಗಿಸುವಂಥಹ ಘಟನೆ. ಅನೈತಿಕ ಸಂಬಂಧದಿಂದ ಜನಿಸಿದ ಮಗುವನ್ನು ಈ ರೀತಿ ಹತ್ಯೆ ಮಾಡಿರಬಹುದು‌. ತಕ್ಷಣ ಪೊಲೀಸರು ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ, ಯಾರು ಈ ಶಿಶುವನ್ನು ಹತ್ಯೆ ಮಾಡಿದ್ದಾರೋ ಅವರಿಗೆ ಕಠಿಣ ಶಿಕ್ಷೆ ನೀಡಬೇಕು. ಅಲ್ಲದೇ, ಭ್ರೂಣ ಹತ್ಯೆ ತಡೆಗಟ್ಟಲು ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡಿದಿದೆ.

ಇದನ್ನೂ ಓದಿ : ದಾವಣಗೆರೆ: ಮುಳ್ಳಿನ ಕಂಟಿಯಲ್ಲಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆ

ಮುಳ್ಳಿನ ಕಂಟಿಯಲ್ಲಿ ಹೆಣ್ಣು ಶಿಶು ಪತ್ತೆ : ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೂರಮಟ್ಟಿ ಗ್ರಾಮದ ಹೊರವಲಯದ ಮುಳ್ಳಿನ ಕಂಟಿಯಲ್ಲಿ ನವಜಾತ ಹೆಣ್ಣು ಶಿಶುವನ್ನು ದುರುಳರು ಎಸೆದು ಹೋಗಿರುವ ಅಮಾನವೀಯ ಕೃತ್ಯ ಇದೇ ತಿಂಗಳ 13 ನೇ ತಾರೀಖಿನಂದು ಬೆಳಕಿಗೆ ಬಂದಿತ್ತು.

ಮುಳ್ಳಿನ ಕಂಟಿಯಲ್ಲಿ ಪತ್ತೆಯಾದ ನವಜಾತ ಶಿಶು ಸಾವನಪ್ಪಿದ್ದು, ಅಕ್ರಮ ಸಂಬಂಧ ಅಥವಾ ಹೆಣ್ಣು ಮಗು ಜನಿಸಿದ್ದಕ್ಕಾಗಿ ಬಟ್ಟೆಯಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಶಂಕೆ ಸ್ಥಳೀಯರಿಂದ ವ್ಯಕ್ತವಾಗಿತ್ತು. ಸ್ಥಳಕ್ಕೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ವರ್ಗ ಪರಿಶೀಲನೆ ನಡೆಸಿತ್ತು. ಇದಲ್ಲದೇ ಹೊನ್ನಾಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

Last Updated :Dec 25, 2023, 12:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.