ETV Bharat / bharat

ಕುಸಿದು ಬಿದ್ದ ಬಾಲಕ, ನಡು ರಸ್ತೆಯಲ್ಲೇ ಸಿಪಿಆರ್​ ಮೂಲಕ ಮಗುವಿಗೆ ಮತ್ತೊಂದು ಜನ್ಮಕೊಟ್ಟ ವೈದ್ಯೆ! - CPR To Boy On The Road

author img

By ETV Bharat Karnataka Team

Published : May 17, 2024, 3:01 PM IST

Updated : May 17, 2024, 4:15 PM IST

ಚೆನ್ನಾಗಿ ಆಟವಾಡುತ್ತಿದ್ದ ಬಾಲಕ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಪಾಲಕರು ಮಗನನ್ನು ಎಷ್ಟೇ ಮೇಲೇಳುವಂತೆ ಪ್ರಯತ್ನಿಸಿದ್ರೂ ಪ್ರಯೋಜನವಾಗಿರಲಿಲ್ಲ. ಇದ್ದಕ್ಕಿದ್ದಂತೆ ಆ ಬಾಲಕ ಹೃದಯ ಬಡಿತ ನಿಂತುಹೋಗಿತ್ತು. ಕೂಡಲೇ ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡ ಪೋಷಕರು ಆಸ್ಪತ್ರೆಯತ್ತ ಓಡಿದರು. ಈ ವೇಳೆ ವೈದ್ಯೆಯೊಬ್ಬರು ರಸ್ತೆಯಲ್ಲೇ ಮಗುವಿಗೆ ಸಿಪಿಆರ್ ನೀಡಿ ಬದುಕಿಸಿದರು. ಸದ್ಯ ಇದರ ವಿಡಿಯೋ ಎಲ್ಲೆಡೆ ವೈರಲ್​ ಆಗ್ತಿದೆ.

VIGILANCE DOCTOR  DOCTOR WHO SAVED THE LIFE  SIX YEAR OLD BOY LIFE SAVE  VIJAYAWADA
ನಡು ರಸ್ತೆಯಲ್ಲಿ ಸಿಪಿಆರ್​ ಮೂಲಕ ಮಗುವಿಗೆ ಮತ್ತೊಂದು ಜನ್ಮಕೊಟ್ಟ ವೈದ್ಯೆ! (ಕೃಪೆ: ETV Bharat)

ಪ್ರಸೂತಿ ತಜ್ಞರಾದ ಡಾ.ನನ್ನಪನೇನಿ ರವಳಿ ಹೇಳಿಕೆ (ಕೃಪೆ: ETV Bharat/Viral Video)

ವಿಜಯವಾಡ (ಆಂಧ್ರಪ್ರದೇಶ): ‘ವೈದ್ಯೋ ನಾರಾಯಣೋ ಹರಿ‘ ಎಂದು ಕರೆಯಲಾಗುತ್ತೆ. ವೈದ್ಯರು ದೇವರ ಸಮಾನ ಎಂದರ್ಥ. ವಿದ್ಯುದಾಘಾತಕ್ಕೆ ಗುರಿಯಾಗಿ ಕುಸಿದು ಬಿದ್ದ ತಮ್ಮ ಮಗನನ್ನು ಹೊತ್ತು ಆಸ್ಪತ್ರೆಗೆ ಧಾವಿಸುತ್ತಿದ್ದ ಪೋಷಕರಿಗೆ ಆ ವೈದ್ಯೆ ದೇವತೆಯಂತೆ ಬಂದರು. ನಾನಿದ್ದೇನೆ ಎಂದು ಭರವಸೆ ನೀಡಿ ರಸ್ತೆಯಲ್ಲೇ ಸಿಪಿಆರ್ ಮಾಡಿ ಮಗುವಿಗೆ ಮತ್ತೊಂದು ಜನ್ಮ ಕೊಟ್ಟರು. ಆಂಧ್ರಪ್ರದೇಶದ ವಿಜಯವಾಡದಲ್ಲಿ ಇದೇ ತಿಂಗಳ 5ರಂದು ನಡೆದಿರುವ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರಿ ಸದ್ದು ಮಾಡುತ್ತಿದೆ.

ವಿಜಯವಾಡದ ಅಯ್ಯಪ್ಪನಗರದ ಆರು ವರ್ಷದ ಬಾಲಕ ಸಾಯಿ ಈ ತಿಂಗಳ 5 ರಂದು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ನೆಲಕ್ಕೆ ಕುಸಿದು ಬಿದ್ದಿದ್ದನು. ಹೆತ್ತವರು ಎಷ್ಟು ಗೋಗೆರೆದರು ಒಂದು ಮಾತೂ ಮಾತನಾಡಲಿಲ್ಲ. ಇದ್ದಕ್ಕಿದ್ದಂತೆ ಬಾಲಕನ ಹೃದಯ ನಿಂತು ಹೋಯಿತು. ದುಃಖವನ್ನು ನುಂಗಿಕೊಂಡ ಪೋಷಕರು ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಯತ್ತ ಓಡಿದರು. ಈ ದೃಶ್ಯ ಅಲ್ಲಿನ ಜನರನ್ನು ಮನಕಲುಕುವಂತೆ ಮಾಡಿದ್ದಂತೂ ಸುಳ್ಳಲ್ಲ.

Doctor Ravali CPR to Boy on The Road: ಮೆಡ್ಸಿ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ.ನನ್ನಪನೇನಿ ರವಳಿ ಅವರು ಅದೇ ರಸ್ತೆ ಮೂಲಕ ಸಾಗುತ್ತಿದ್ದರು. ಈ ವೇಳೆ ಇದನ್ನೆಲ್ಲ ಗಮನಿಸಿದ ಅವರು, ಪೋಷಕರಿಗೆ ಧೈರ್ಯ ತುಂಬಿದರು. ರಸ್ತೆಯ ಮಧ್ಯೆದಲ್ಲೇ ಬಾಲಕನನ್ನು ಪರೀಕ್ಷಿಸಿ ಸಿಪಿಆರ್ ಅನ್ನು ಪ್ರಾರಂಭಿಸಿದರು. ಒಂದೆಡೆ ಡಾಕ್ಟರ್​ ರವಳಿ ಬಾಲಕನ ಎದೆಯ ಮೇಲೆ ಕೈ ಒತ್ತುತ್ತಿದ್ದರು. ಇನ್ನೊಂದೆಡೆ ಅಲ್ಲಿದ್ದ ಮತ್ತೊಬ್ಬನಿಗೆ ಬಾಯಿಗೆ ಬಾಯಿಟ್ಟು ಗಾಳಿ ಊದುವಂತೆ ಸೂಚಿಸಿದರು. ಏಳು ನಿಮಿಷಕ್ಕೂ ಹೆಚ್ಚು ಕಾಲ ಸಿಪಿಆರ್​ ಮಾಡಿದರು. ಕೊನೆಗೂ ಬಾಲಕ ಹೋದ ಪ್ರಾಣ ಮತ್ತೆ ತಿರುಗಿ ಬಂತು. ಬಳಿಕ ಹುಡುಗನ ಹೃದಯ ಬಡಿಯಲು ಆರಂಭಿಸಿತು, ಕೈಕಾಲುಗಳು ಆಡಲಾರಂಭಿಸಿದವು. ಒಟ್ಟಿನಲ್ಲಿ ವೈದ್ಯ ನನ್ನಪನೇನಿ ಶ್ರಮ ಫಲಕೊಟ್ಟಿತು. ಹೋದ ಬಾಲಕನ ಜೀವ ಬಂತು. ಆತಂಕದಲ್ಲಿದ್ದ ಪೋಷಕರ ಮುಖದಲ್ಲಿ ಸಂತಸ ಅರಳಿತು.

ಇನ್ನೂ ಪೋಷಕರು ಬಾಲಕನನ್ನು ಬೈಕ್​ನಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಗೆ ಹೋಗುತ್ತಿರುವಾಗ ವೈದ್ಯೆ ರವಳಿ ಅವರು ಹುಡುಗನಿಗೆ ಸರಿಯಾಗಿ ಉಸಿರಾಡಲು ತಲೆಯನ್ನು ಸ್ವಲ್ಪ ಬಾಗಿಸಲು ಸಲಹೆ ನೀಡಿದರು. ಬಾಲಕ ಆಸ್ಪತ್ರೆಗೆ ತೆರಳಿದ ಕೂಡಲೇ ಚಿಕಿತ್ಸೆ ನೀಡಲಾಗಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆ. 24 ಗಂಟೆಗಳ ಕಾಲ ಅವರನ್ನು ನಿಗಾದಲ್ಲಿ ಇರಿಸಲಾಗಿತ್ತು. ಬಾಲಕನ ತಲೆಗೆ ಸಿಟಿ ಸ್ಕ್ಯಾನ್ ಮಾಡಿದಾಗ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಬಳಿಕ ಬಾಲಕನನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿಕೊಡಲಾಗಿದೆ . ಈಗ ಹುಡುಗ ಸಂಪೂರ್ಣ ಆರೋಗ್ಯವಾಗಿದ್ದಾನೆ.

ವೈದ್ಯೆ ರವಳಿ ಅವರು ನಡು ರಸ್ತೆಯಲ್ಲಿ ಬಾಲಕನಿಗೆ ಸಿಪಿಆರ್ ಮಾಡುತ್ತಿರುವಾಗ ಅಲ್ಲಿ ನೆರೆದಿದ್ದ ಜನ ವಿಡಿಯೋ ತೆಗೆದಿದ್ದರು. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ವೈದ್ಯರಿಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಸಿಪಿಆರ್ ಎಷ್ಟು ಉಪಯುಕ್ತವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಓದಿ: ಗೊತ್ತಿಲ್ಲದ ಸ್ಥಳ, ಒಬ್ಬಂಟಿಯೆಂಬ ಭಯವೇ? ಯುವತಿಯರೇ, ನಿಮ್ಮ ಮೊಬೈಲ್​ನಲ್ಲಿರಲಿ ಈ ಆ್ಯಪ್​! - My Safetipin App

Last Updated : May 17, 2024, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.