ETV Bharat / state

ಡಿ.ಬಿ.ಚಂದ್ರೇಗೌಡ ಸೇರಿ ಅಗಲಿದ ಹಲವು ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ ಸೂಚನೆ

author img

By ETV Bharat Karnataka Team

Published : Dec 4, 2023, 5:59 PM IST

Condolences for late dignitaries in session
ಡಿ.ಬಿ.ಚಂದ್ರೇಗೌಡ ಸೇರಿ ಅಗಲಿದ ಹಲವು ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ ಸೂಚನೆ

Condolences for late dignitaries in session: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಉಭಯಸದನಗಳಲ್ಲೂ ಇತ್ತೀಚೆಗೆ ಅಗಲಿದ ರಾಜಕೀಯ ಮುಖಂಡರು ಸೇರಿ ಗಣ್ಯ ವ್ಯಕ್ತಿಗಳಿಗೆ ಸಂತಾಪ ಸೂಚಿಸಲಾಯಿತು.

ಬೆಳಗಾವಿ/ಬೆಂಗಳೂರು: ರಾಜ್ಯ ಕಂಡ ಅಪರೂಪದ ಸಂಸದೀಯ ಪಟು, ಹಿರಿಯ ರಾಜಕಾರಣಿ ಡಿ.ಬಿ ಚಂದ್ರೇಗೌಡ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನ ಪರಿಷತ್​ ಹಾಗೂ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಕುಂದಾನಗರಿ ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ವಿಧಾನಪರಿಷತ್​ ಹಾಗೂ ವಿಧಾನಸಭೆಯ ಮೊದಲ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸ್ಪೀಕರ್​ ಯು. ಟಿ. ಖಾದರ್​ ಸಂತಾಪ ಸೂಚನೆ ಮಂಡಿಸಿದರು. ನಂತರ ಸ್ಪೀಕರ್ ಯು.ಟಿ. ಖಾದರ್ ಸದನವನ್ನು ಮುಂದೂಡಿದರು.

ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾಗಿದ್ದ ಡಿ.ಬಿ. ಚಂದ್ರೇಗೌಡ, ಮಾಜಿ ಸಚಿವರಾಗಿದ್ದ ಶ್ರೀರಂಗದೇವರಾಯಲು, ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಸಿ. ವೆಂಕಟೇಶಪ್ಪ, ಶ್ರೀಕಾಂತ್ ಶೆಟ್ಟಪ್ಪ ಭೀಮಣ್ಣವರ್, ವಿಲಾಸಬಾಬು ಆಲಮೇಲಕರ್ ಹಾಗೂ ಈಶಾನ್ಯ ರಾಜ್ಯಗಳ ಮಾಜಿ ರಾಜ್ಯಪಾಲರಾಗಿದ್ದ ಪಿ.ಬಿ. ಆಚಾರ್ಯ ಮತ್ತು ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರರ ದಾಳಿಯಲ್ಲಿ ವೀರ ಮರಣ ಹೊಂದಿದ ಯೋಧ ಕ್ಯಾ. ಪ್ರಾಂಜಲ್​ ಸೇರಿದಂತೆ ಐವರು ಯೋಧರ ನಿಧನಕ್ಕೆ ವಿಧಾನಸಭಾ ಕಲಾಪದಲ್ಲಿ ಸಂತಾಪ ಸೂಚಿಸಲಾಯಿತು. ಸಂತಾಪ ನಿರ್ಣಯವನ್ನು ಬೆಂಬಲಿಸಿ ಸಿಎಂ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಆರ್. ಅಶೋಕ್, ಸಚಿವರಾದ ಎಚ್.ಕೆ. ಪಾಟೀಲ್, ಶಾಸಕರಾದ ಬಿ.ವೈ. ವಿಜಯೇಂದ್ರ, ಗಾಲಿ ಜನಾರ್ದನರೆಡ್ಡಿ, ಬಸವರಾಜ ರಾಯರೆಡ್ಡಿ, ನಯನ ಮೋಟಮ್ಮ ಮತ್ತಿತರ ಶಾಸಕರು ಮಾತನಾಡಿ ಸಂತಾಪ ಸೂಚಿಸಿದರು.

Condolences for late dignitaries in session
ಡಿ.ಬಿ.ಚಂದ್ರೇಗೌಡ ಸೇರಿ ಅಗಲಿದ ಹಲವು ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ ಸೂಚನೆ

ವಿಧಾನಸಭೆಯಲ್ಲಿ ಇಂದು ಸಂತಾಪ ಸೂಚನೆ ನಿರ್ಣಯದ ಮೇಲೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ದಿ. ಡಿ.ಬಿ. ಚಂದ್ರೇಗೌಡರು ಉತ್ತಮ ವಾಜ್ಞ್ಮಿಗಳಾಗಿದ್ದರು. ಡಿ.ಬಿ. ಚಂದ್ರೇಗೌಡ ಅವರು ಸಂಸ್ಕೃತಿಯ ವ್ಯವಹಾರಗಳ ಬಗ್ಗೆ ಅಪಾರ ತಿಳುವಳಿಕೆ ಹೊಂದಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯನ್ನು ಹುಡುಕುವಂತೆ ಬಿಜೆಪಿಯ ಪ್ರಮುಖ ನಾಯಕರಾದ ಅನಂತಕುಮಾರ್ ಮತ್ತು ಬಿ.ಎಸ್. ಯಡಿಯೂರಪ್ಪನವರು ನನಗೆ ಸಲಹೆ ನೀಡಿದ್ದರು. ನಾನು ಚಂದ್ರೇಗೌಡರ ಹೆಸರನ್ನು ಸೂಚಿಸಿ, ಖುದ್ದು ಅವರಿಗೆ ದೂರವಾಣಿ ಕರೆ ಮಾಡಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು, ನೀನು ಹೇಳುವುದಾದರೆ ನಾನು ಈಗಲೇ ಬಸ್ ಹತ್ತಿ ಬೆಂಗಳೂರಿಗೆ ಬರುತ್ತೇನೆ ಎಂದು ಉತ್ಸಾಹ ತೋರಿದ್ದರು. ಕಾನೂನಿನ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ನಮಗೆ ಯಾವುದೇ ಸಮಸ್ಯೆಗಳಾದರೂ ಅವರ ಬಳಿ ಸಲಹೆ ಕೇಳುತ್ತಿದ್ದೆವು ಎಂದು ನೆನಪು ಮಾಡಿಕೊಂಡರು.

ಪಿ.ಬಿ.ಆಚಾರ್ಯ ಈಶಾನ್ಯ ರಾಜ್ಯಗಳಲ್ಲಿ ರಾಜ್ಯಪಾಲರಾಗಿದ್ದಾಗ ಕರ್ನಾಟಕದಲ್ಲಿ ಈ ಭಾಗದ ಜನರ ಮೇಲೆ ದಾಳಿ ಮಾಡುವ ಹುಸಿ ಬೆದರಿಕೆಯ ಕರೆ ಬಂದಿತ್ತು. ಅದರಿಂದ ಆತಂಕಗೊಂಡ ಸಾವಿರಾರು ಜನ ಏಕಾಏಕಿ ತಮ್ಮ ಊರಿಗೆ ತೆರಳಲು ಮುಂದಾದರು. ಒಂದೇ ಒಂದು ರೈಲು ವ್ಯವಸ್ಥೆ ಇತ್ತು. ಅವರಲ್ಲಿ ಒಂದು ಸಾವಿರ ಜನ ಮಾತ್ರ ಪ್ರಯಾಣಿಸುವ ವ್ಯವಸ್ಥೆ ಇತ್ತು. ಮೂರ್ನಾಲ್ಕು ಸಾವಿರ ಜನ ಏಕಾಏಕಿ ಮುನ್ನುಗ್ಗಿದ್ದರಿಂದಾಗಿ ಸಮಸ್ಯೆ ಎದುರಾಯಿತು. ಆಗ ರಾಜ್ಯಪಾಲರಾಗಿದ್ದ ಆಚಾರ್ಯ ಅವರು ತಮ್ಮ ನೆರವಿಗೆ ಧಾವಿಸಿದ್ದರು ಎಂದು ಹೇಳಿದರು. ಜಮ್ಮು-ಕಾಶ್ಮೀರದ ದಾಳಿಯಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ಮತ್ತಷ್ಟು ಸಹಾಯಧನ ನೀಡಬೇಕೆಂದು ಅಶೋಕ್ ಸಲಹೆ ನೀಡಿದರು.

ಗೃಹಸಚಿವ ಜಿ.ಪರಮೇಶ್ವರ್ ಮಾತನಾಡಿ, ಡಿ.ಬಿ.ಚಂದ್ರೇಗೌಡ ಅವರು ಇಂದಿರಾ ಗಾಂಧಿಯವರಿಗೆ ಚಿಕ್ಕಮಗಳೂರು ಕ್ಷೇತ್ರ ಬಿಟ್ಟುಕೊಟ್ಟು ದೇಶದಲ್ಲೇ ರಾಜಕೀಯ ಬದಲಾವಣೆಗೆ ನಾಂದಿ ಹಾಡಿದ್ದರು. ಕ್ಯಾಪ್ಟನ್ ಪ್ರಾಂಜಲ್ ಯುವಕರಿಗೆ ಸ್ಫೂರ್ತಿ ಎಂದು ಸ್ಮರಿಸಿದರು.

ವಿಧಾನ ಪರಿಷತ್ತಿನಲ್ಲಿ ಡಿ.ಬಿ ಚಂದ್ರೇಗೌಡ ಸೇರಿದಂತೆ 10 ಮಂದಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ಚಂದ್ರೇಗೌಡರು ಸಂಸದೀಯ ವ್ಯವಹಾರಗಳಲ್ಲಿ ಆಳವಾಗಿ ಅಧ್ಯಯನ ಮಾಡಿ ಸಮಾಜಕ್ಕೆ ಕೊಡುಗೆ ಕಟ್ಟಿದ್ದಾರೆ. ಚಂದ್ರೇಗೌಡರು ಎಂದರೆ ರಾಜಕೀಯದಲ್ಲಿ ಸರ್ವವ್ಯಾಪಿಯಾಗಿದ್ದರು. ಹಿರಿಯ ವ್ಯಕ್ತಿತ್ವದ ಅವರು ಪ್ರಚಲಿತ ರಾಜಕಾರಣಕ್ಕೆ ಪ್ರಸ್ತುತರಾಗಿದ್ದರು. ನಾಲ್ಕು ಸದನದ ಸದಸ್ಯರಾಗಿದ್ದರು. ಸ್ಪೀಕರ್ ಆಗಿ ರಾಜಕಾರಣಕ್ಕೆ ದೊಡ್ಡ ಕೊಡುಗೆ ನೀಡಿದ್ದರು. ಬಿ.ಎಸ್.ವಿಶ್ವನಾಥ್ ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರು. ಹಲವು ದೇಶಕ್ಕೆ ಭೇಟಿ ನೀಡಿದ್ದರು. ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಸಹಕಾರಿ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು.

ಪ್ರೊ.ಎಂ.ಆರ್.ಸತ್ಯನಾರಾಯಣ ವಿಜ್ಞಾನಿಯಾಗಿ ಸಾಕಷ್ಟು ಸೇವೆ ನೀಡಿದ್ದಾರೆ. ಅದೇ ರೀತಿ ವಿಜ್ಞಾನಿ ಅರುಣಾಚಲಂ ಪರಮಾಣು ಕೇಂದ್ರದಲ್ಲಿ ದುಡಿದ್ದಿದ್ದು, ಅಗ್ನಿ, ಆಕಾಶ್ ಕ್ಷಿಪಣಿ ತಯಾರಿಕೆಗೆ ಸಹಕಾರ ಕೊಟ್ಟಿದ್ದರು. ಡಾ.ಕಲ್ಯಂಪುಡಿ ರಾಧಾಕೃಷ್ಣರಾವ್ 19 ದೇಶಗಳಿಂದ 39 ಡಾಕ್ಟರೇಟ್ ಪಡೆದು 477 ಸಂಶೋಧನಾ ಪ್ರಬಂಧ ಬರೆದಿದ್ದರು. ನೋಬೆಲ್​ಗೆ ಸರಿಸಮವಾದ ಪ್ರೈಸ್ ಆಫ್ ಸ್ಟ್ಯಾಟಿಸ್ಟಿಕ್ಸ್ ಪಡೆದುಕೊಂಡಿದ್ದರು. ವಿಜ್ಞಾನಿ ಡಾ.ಎಂ.ಎಸ್ ಸ್ವಾಮಿನಾಥನ್ ಕೃಷಿ ವಿಜ್ಞಾನದಲ್ಲಿ ಕೊಟ್ಟ ವರದಿ ಅವಿಸ್ಮರಣೀಯ. ಹಸಿರು ಕ್ರಾಂತಿಯ ಶ್ರೇಷ್ಠ ವಿಜ್ಞಾನಿಯಾಗಿದ್ದರು ಎಂದರು.

ನಟಿ ಮಮತಾ ಗುಡಾರ್ ಐದು ದಶಕಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿ 5 ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನ ಮಾಡಿದ್ದರು. ಲೇಖಕಿ ಕಮಲಾ ಹೆಮ್ಮಗಿ ದೇವದಾಸಿ ಪದ್ಧತಿ ಬಗ್ಗೆ ಪಿಹೆಚ್​ಡಿ ಮಾಡಿದ್ದು, ಅನೇಕ ಪ್ರಶಸ್ತಿ ಪಡೆದಿದ್ದರು. ಪತ್ರಕರ್ತ ರಂಗನಾಥರಾವ್ ಹಾಗು ಗಂಗೂಬಾಯಿ ಹಾನಗಲ್ ವಿವಿ ವಿಶ್ರಾಂತ ಕುಲಪತಿ ಹನುಮಣ್ಣ ನಾಯಕ್ ಕೊಡುಗೆ ಸ್ಮರಣೀಯ ಎನ್ನುತ್ತಾ 10 ಹಿರಿಯರಿಗೆ ಸಂತಾಪ ಸೂಚನೆ ಮಂಡಿಸಿದ್ದಕ್ಕೆ ಸಹಮತ ಸೂಚಿಸಿ ಅವರೆಲ್ಲರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದರು.

ನಂತರ ಮೃತರ ಕುಟುಂಬಕ್ಕೆ ಪರಮಾತ್ಮ ದುಃಖ ಭರಿಸುವ ಶಕ್ತಿ ಕರುಣಿಸಲು ಎಂದು ಪ್ರಾರ್ಥಿಸಿದ ಸಭಾಪತಿ ಬಸವರಾಜ ಹೊರಟ್ಟಿ ಎದ್ದು ನಿಂತು ಗೌರವ ಸಲ್ಲಿಕೆ ಮಾಡುವಂತೆ ಸದನಕ್ಕೆ ಸೂಚಿಸಿದರು. ಬಳಿಕ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಿದರು.

ಇದನ್ನೂ ಓದಿ: ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆಯಾಗಲಿ: ಸಚಿವ ದಿನೇಶ್​ ಗುಂಡೂರಾವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.