ETV Bharat / state

ಜಿಲ್ಲಾಡಳಿತಗಳು ಸಂವೇದನಾಶೀಲತೆಯಿಂದ ಕೆಲಸ ಮಾಡಬೇಕು: ಸಿಎಂ ಬಿಎಸ್​ವೈ

author img

By

Published : Jul 25, 2021, 5:15 PM IST

Updated : Jul 25, 2021, 5:23 PM IST

action-for-release-of-pending-solution-says-cm-bsy
ಅತಿವೃಷ್ಟಿ/ಪ್ರವಾಹ ಕುರಿತ ಸಭೆ

ರಾಜ್ಯದ ಅಧಿಕಾರಿಗಳು ಮಹಾರಾಷ್ಟ್ರದ ಜತೆ ನಿರಂತರ ಸಂಪರ್ಕದಲ್ಲಿದ್ದು, ಪ್ರವಾಹ‌ ನಿರ್ವಹಣೆ ಕುರಿತು ನಿಗಾ ವಹಿಸಲಾಗಿದೆ. 2-3 ದಿನಗಳಲ್ಲಿ ಹರಿವು ಹೆಚ್ಚಾಗುವ ಸಾಧ್ಯತೆಯಿದೆ. ಪರಿಸ್ಥಿತಿ ನಿರ್ವಹಣೆಗೆ ಸರ್ಕಾರದಿಂದ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಬೆಳಗಾವಿ: ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ಮಧ್ಯೆಯೂ ಪ್ರವಾಹ ಸ್ಥಿತಿ ಉದ್ಭವಿಸಿದೆ.‌ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತಗಳು ಸಂವೇದನಾಶೀಲತೆಯಿಂದ ಕೆಲಸ ಮಾಡಬೇಕು. ಹಣಕಾಸು ಸೇರಿದಂತೆ ಯಾವುದೇ ತೊಂದರೆ ಇದ್ದರೂ, ತಕ್ಷಣವೇ ಸಂಬಂಧಿಸಿದವರ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು.

ನಗರದ ಪ್ರವಾಸಿಮಂದಿರದಲ್ಲಿ ನಡೆದ ಅತಿವೃಷ್ಟಿ/ಪ್ರವಾಹ ಕುರಿತ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ವಾರದಿಂದ ದಾಖಲೆ ಪ್ರಮಾಣದ ಮಳೆಯಾಗಿದೆ. ರಾಜ್ಯದ ಅಧಿಕಾರಿಗಳು ಮಹಾರಾಷ್ಟ್ರದ ಜತೆ ನಿರಂತರ ಸಂಪರ್ಕದಲ್ಲಿದ್ದು, ಪ್ರವಾಹ‌ ನಿರ್ವಹಣೆ ಕುರಿತು ನಿಗಾ ವಹಿಸಲಾಗಿದೆ. 2-3 ದಿನಗಳಲ್ಲಿ ಹರಿವು ಹೆಚ್ಚಾಗುವ ಸಾಧ್ಯತೆಯಿದೆ. ಪರಿಸ್ಥಿತಿ ನಿರ್ವಹಣೆಗೆ ಸರ್ಕಾರದಿಂದ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರವಾಸಿಮಂದಿರದಲ್ಲಿ ನಡೆದ ಅತಿವೃಷ್ಟಿ/ಪ್ರವಾಹ ಕುರಿತ ಸಭೆ

ಪ್ರವಾಹ-ಬಾಕಿ ಪರಿಹಾರ ಬಿಡುಗಡೆಗೆ ಸೂಚನೆ: ಕಳೆದ ವರ್ಷದ ಪ್ರವಾಹ ಸಂದರ್ಭದಲ್ಲಿ ಮನೆಹಾನಿಯ ಬಾಕಿ ಪರಿಹಾರ ಬಿಡುಗಡೆಗೆ ತುರ್ತು ಕ್ರಮ ಕೈಗೊಳ್ಳಬೇಕು. ಬೆಳಗಾವಿ ಜಿಲ್ಲೆಯಲ್ಲಿ 113 ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿರುವುದರಿಂದ ಜನರ ತುರ್ತು ರಕ್ಷಣೆ ಹಾಗೂ ತಾತ್ಕಾಲಿಕ ಪುನರ್ವಸತಿಗಾಗಿ 89 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಜನರ ಕಷ್ಟಗಳನ್ನು ಅರಿತುಕೊಂಡು ಜಿಲ್ಲಾಡಳಿತ ಸಂವೇದನಾಶೀಲತೆಯಿಂದ ಕೆಲಸ ಮಾಡಬೇಕು. ಪರಿಹಾರ ಕಾರ್ಯದಲ್ಲಿ ತೊಡಕು ಉಂಟಾದರೆ ತಕ್ಷಣವೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ನಿರ್ದೇಶನ ನೀಡಿದರು.

ಎನ್.ಡಿ.ಆರ್.ಎಫ್ ಅನುದಾನ ಹೆಚ್ಚಳಕ್ಕೆ ಮನವಿ: ಸಭೆಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್​, ಪ್ರವಾಹ ಸಂದರ್ಭದಲ್ಲಿ ತುರ್ತು ಔಷಧಿ ಮತ್ತಿತರ ಸಾಮಗ್ರಿಗಳನ್ನು ಎನ್.ಡಿ.ಆರ್.ಎಫ್. ಅನುದಾನದಲ್ಲಿ ಖರೀದಿಸಬೇಕು. ಎನ್​ಡಿಆರ್​ಎಫ್​ ಹೊರತುಪಡಿಸಿ ಉಳಿದ ಹೆಚ್ಚಿನ ಅನುದಾನ ಅಗತ್ಯವಿದೆ ಎಂಬುದರ ಬಗ್ಗೆ ಪ್ರಸ್ತಾವ ಸಲ್ಲಿಸಬೇಕು. ಅನುದಾನ ಹೆಚ್ಚಿಸುವಂತೆ ಕೋರಿ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಜಾನುವಾರು ಹಾನಿ ಪರಿಹಾರ ವಿತರಣೆಗೆ ಸೂಚನೆ: ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ಕೊಚ್ಚಿ ಹೋಗಿರುವ ಜಾನುವಾರುಗಳ ಕುರಿತು ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಆಲಮಟ್ಟಿ ಸದ್ಯಕ್ಕೆ 72 ಟಿಎಂಸಿ ಮಾತ್ರ ಸಂಗ್ರಹವಿದೆ. ಆದಾಗ್ಯೂ ಒಳಹರಿವು ಆಧರಿಸಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು.ಜಲಾಶಯಗಳಲ್ಲಿ ಕನಿಷ್ಠ ಅಗತ್ಯತೆ ಕಾಯ್ದುಕೊಂಡು ಉಳಿದ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದರು.

1200 ಕೋಟಿ ಹಾನಿ; ತಕ್ಷಣವೇ 170 ಕೋಟಿ ಬಿಡುಗಡೆಗೆ ಮನವಿ: ಬೆಳಗಾವಿ ವಿಭಾಗದಲ್ಲಿ 1400 ಕಿ.ಮೀ. ರಸ್ತೆ ಹಾನಿಯಾಗಿದೆ. 305 ಸೇತುವೆ ಹಾನಿ ಸೇರಿ ಒಟ್ಟಾರೆ 1200 ಕೋಟಿ ರೂಪಾಯಿ ಹಾನಿಯಾಗಿದ್ದು, ತಕ್ಷಣ ದುರಸ್ತಿಗೆ 170 ಕೋಟಿ ಬಿಡುಗಡೆ ಮಾಡಬೇಕು. ಕಳೆದ ಬಾರಿ ಶಾಶ್ವತ ಪುನರ್ವಸತಿ ಕಲ್ಪಿಸಿ ವಿತರಿಸಲಾಗಿರುವ ಮನೆಗಳಿಗೆ ಇದುವರೆಗೆ ಖಾಲಿಯಿರುವ ಮನೆಗಳನ್ನು ಅಗತ್ಯತೆ ಆಧರಿಸಿ ಬೇರೆಯವರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: ನಾನು ಹೈಕಮಾಂಡ್​ ಹಾಕಿದ ಗೆರೆ ದಾಟುವುದಿಲ್ಲ: ಬಿ.ಎಸ್‌.ಯಡಿಯೂರಪ್ಪ

Last Updated :Jul 25, 2021, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.