ETV Bharat / state

ದಲಿತ‌‌ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಿಸಿದ ಬಿಜೆಪಿ ಮುಖಂಡ.. ಮಹಿಳೆಯಿಂದ ಕಪಾಳ ಮೋಕ್ಷ

author img

By

Published : Mar 19, 2023, 8:12 PM IST

ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಿಜೆಪಿ ಮುಖಂಡನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ಶನಿವಾರ ನಡೆದಿದೆ.

ದಲಿತ‌‌ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಿಸಿದ ಬಿಜೆಪಿ ಮುಖಂಡ
ದಲಿತ‌‌ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಿಸಿದ ಬಿಜೆಪಿ ಮುಖಂಡ

ಬೆಂಗಳೂರು: ಸರ್ಕಾರಿ ಜಾಗದಲ್ಲಿ ಮನೆ ಕಟ್ಟುತ್ತಿದ್ದಾರೆಂಬ ಕಾರಣಕ್ಕೆ ಬಿಜೆಪಿ ಮುಖಂಡ ಉಮೇಶ್ ಎಂಬುವವರು ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮಹಿಳೆಯನ್ನ ನಿಂದಿಸಿದ್ದಾರೆ. ಇದರಿಂದ ಕೆರಳಿದ ಮಹಿಳೆ ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಅನಂತರ ಮಹಿಳೆಯ ಮೇಲೆ ಮುಖಂಡನ ಗ್ಯಾಂಗ್ ಹಲ್ಲೆ ನಡೆಸಿರುವ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಬಿಜೆಪಿ ಮುಖಂಡ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಉಮೇಶ್​ ಅವರಿಗೆ ರಂಗಮ್ಮ ಎಂಬ ಮಹಿಳೆ ಮಾತಿನ ಚಕಮಕಿ ನಡೆಸಿ ಕಪಾಳಮೋಕ್ಷ ಮಾಡಿದ್ದಾರೆ. ಆಗ ಉಮೇಶ್​ ಸಹ ಮಹಿಳೆ ಮೇಲೆ ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಪ್ರಕರಣ ಹಿನ್ನೆಲೆ : ಪರಿಶಿಷ್ಟ ಸಮುದಾಯಕ್ಕೆ ಸೇರಿದ ರಂಗಮ್ಮ ಹಾಗೂ ಪುತ್ರ ನವೀನ್ ಚಿಕ್ಕಗೊಲ್ಲರಹಟ್ಟಿ ಸರ್ಕಾರಿ ಜಮೀನಿನಲ್ಲಿ‌ ಮನೆ ಕಟ್ಟಿಕೊಂಡಿದ್ರು. ಮೂರು ದಿನದ ಮುಂಚೆ ನವೀನ್ ಕಾಂಪೌಂಡ್ ನಿರ್ಮಿಸಿದ್ರು. ಈ ಹಿಂದೆ ಇದೇ ಬಿಜೆಪಿ ನಾಯಕ ಉಮೇಶ್​ ಜೊತೆಗಿದ್ದ‌ ನವೀನ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಪರ ಪ್ರಚಾರ ಮಾಡ್ತಿದ್ರಂತೆ. ಇದ್ರಿಂದ ಕೋಪಗೊಂಡಿದ್ದ ಬಿಜೆಪಿ ಮುಖಂಡರು ಏಕಾಏಕಿ ಬಂದು ಈ ಜಾಗ ಅಂಗನವಾಡಿ ಜಾಗ ಅಂತ ಜೆಸಿಬಿ ಯಂತ್ರದ ಮೂಲಕ ಮನೆ ಮುಂದಿನ ಕಾಂಪೌಂಡ್ ತೆರವಿಗೆ ಮುಂದಾಗಿದ್ರು.

ಈ ವೇಳೆ ಉಮೇಶ್ ರಂಗಮ್ಮ ಅವರಿಗೆ ಬಾಯಿಗೆ ಬಂದಂತೆ ಬೈದಿದ್ದರು ಮತ್ತು ಜಾತಿ ಹೆಸರೆಳಿ ನಿಂದಿಸಿದ್ದರು. ಇದರಿಂದ ಆ ಮಹಿಳೆ ಉಮೇಶ್ ಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದರಿಂದ ಕೆರಳಿದ ಉಮೇಶ್ ಅಂಡ್ ಟೀಂ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಸದ್ಯ ರಂಗಮ್ಮ ಅಟ್ರಾಸಿಟಿ ಕಾಯ್ದೆಯಡಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ 9 ಜನರ ಮೇಲೆ ದೂರು ನೀಡಿದ್ದಾರೆ.

ಪತ್ನಿ ಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ ಪತಿ: ಇನ್ನೊಂದೆಡೆ ಕಂಠಪೂರ್ತಿ ಕುಡಿದು ಪತ್ನಿಯನ್ನು ಸಾಯಿಸಲು ಯತ್ನಿಸಿದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ ವಿರುದ್ಧ ಆರ್‌.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಂಡತಿ ಸುಧಾರಾಣಿಯ ತಲೆಯನ್ನು ಗೋಡೆಗೆ ಗುದ್ದಿರುವ ಆರೋಪಿ ಪತಿ ಹರ್ಷ ಬಳಿಕ ಚಾಕುವಿನಿಂದ ಇರಿದುಕೊಂಡು ಸಾವಿಗೆ ಶರಣಾಗುವ ಪ್ರಯತ್ನ ಮಾಡಿದ್ದಾನೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ: ತುಮಕೂರು ಮೂಲದ ಹರ್ಷ ಮತ್ತು ಆತನ ಪತ್ನಿ ಸುಧಾರಾಣಿ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು. ಆರ್.ಆರ್. ನಗರದಲ್ಲಿ ದಂಪತಿ ವಾಸವಿದ್ದರು. ಇವರಿಬ್ಬರಿಗೆ 12 ವರ್ಷದ ಮಗನಿದ್ದಾನೆ‌. ಇತ್ತೀಚೆಗೆ ತುಮಕೂರಿನಲ್ಲಿ ಜಮೀನು ಮಾರಿದ ಹಣ ಕೈ ಸೇರಿದ ಬಳಿಕ ಸಂಪೂರ್ಣವಾಗಿ ಬದಲಾಗಿದ್ದ ಹರ್ಷ ಲಕ್ಷ ಲಕ್ಷ ರೂಪಾಯಿ ಸಂಬಳ ಬರುವ ಕೆಲಸ ಬಿಟ್ಟು ಕುಡಿತದ ದಾಸನಾಗಿದ್ದರಂತೆ.

ಕಳೆದ ಐದಾರು ತಿಂಗಳಿಂದ ಕೆಲಸಕ್ಕೆ ಹೋಗದೆ ಕಂಠಪೂರ್ತಿ ಕುಡಿದು ಮನೆಯಲ್ಲಿಯೇ ಇರುತ್ತಿದ್ದರು. ಹೆಂಡತಿ‌ ಜತೆ‌ ಜಗಳ ಮಾಡಿ ಸೈಕೋ ರೀತಿ ವರ್ತಿಸುತ್ತಿದ್ದರಂತೆ. ಇದರಿಂದ ಬೇಸತ್ತ ಪತ್ನಿ ಸುಧಾರಾಣಿ, 'ಕುಡಿತ ಬಿಟ್ಟು ಕೆಲಸಕ್ಕೆ ಹೋಗಿ' ಎಂದು ಬುದ್ಧಿವಾದ ಹೇಳಿದ್ದಾರೆ.

ಮಾ. 17ರಂದು ಮತ್ತೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಹರ್ಷ ತನ್ನ ಹೆಂಡತಿಯನ್ನು ಗೋಡೆಗೆ ಗುದ್ದಿ ಕೊಲೆಗೆ ಯತ್ನಿಸಿದ್ದಾನೆ‌. ಬಳಿಕ ತಾನೂ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಂದೆಯ ವಿಕೃತಿಗೆ ಭಯಬಿದ್ದ ಮಗ ಮನೆಯಿಂದ ಓಡಿ ಬಂದಿದ್ದಾನೆ. ಸುಧಾರಾಣಿ ಸಹೋದರ ನೀಡಿರುವ ದೂರಿನ ಅನ್ವಯ ಆರ್.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ದಂಪತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್​​ ನಿಂಬರಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು: ಪತ್ನಿ ಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ ಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.