ETV Bharat / state

ಅಂಬೇಡ್ಕರ್ ಜಯಂತಿ ಆಚರಿಸಿ ಬಿಜೆಪಿ ಸೇರಿದ ವಿಜಯಪುರ, ಮುದ್ದೇಬಿಹಾಳದ ಮುಖಂಡರು

author img

By

Published : Apr 14, 2023, 4:54 PM IST

Leaders of various parties joined the BJP
ವಿವಿಧ ಪಕ್ಷಗಳ ಮುಖಂಡರು ಬಿಜೆಪಿಗೆ ಸೇರ್ಪಡೆ

ಬಿಜೆಪಿ ಕಚೇರಿಯಲ್ಲಿಂದು ನಡೆದ ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ವಿವಿಧ ಪಕ್ಷಗಳ ಮುಖಂಡರು ಬಿಜೆಪಿಗೆ ಸೇರಿದರು.

ಬೆಂಗಳೂರು : ವಿಜಯಪುರ ಮತ್ತು ಮುದ್ದೇಬಿಹಾಳದ ವಿವಿಧ ಪಕ್ಷಗಳ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ್ದಾರೆ. ನಗರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮತ್ತು ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ 2018ರ ಪಕ್ಷೇತರ ಅಭ್ಯರ್ಥಿ ಗಂಗಾಧರ ನಾಡಗೌಡ, ವಿಜಯಪುರ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ್, ಕಾಂಗ್ರೆಸ್ ಮುಖಂಡ ಗುರುನಾಥ್ ಎಸ್.ದೇಶಮುಖ್, ಕಾಂಗ್ರೆಸ್ ಯುವ ಮುಖಂಡ ಸಂಗಮೇಶ್ ನಾಗೂರು ಬಿಜೆಪಿ ಸೇರ್ಪಡೆಗೊಂಡರು.

ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಪಿ.ಸಿ.ಮೋಹನ್, ಶಾಸಕ ಎ.ಹೆಚ್.ನಡಹಳ್ಳಿ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮತ್ತಿತರ ಮುಖಂಡರು ಪಕ್ಷಕ್ಕೆ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಾದ ಮುನಿಯಮ್ಮ, ಈಶ್ವರ್, ಅರುಣ್, ಭೂಮಿ, ಕಮಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪೌರಕಾರ್ಮಿಕರು ಪಕ್ಷಕ್ಕೆ ಕೃತಜ್ಞತೆ ಸಲ್ಲಿಸಿದರು.

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕಾಂಗ್ರೆಸ್ ಪಕ್ಷ ಬಡವರು, ಶೋಷಿತರು ಮತ್ತು ವಂಚಿತರ ಅಭಿವೃದ್ಧಿ ಮಾಡಲಿಲ್ಲ. ಗರೀಬಿ ಹಠಾವೋ ಎಂದು ಹೇಳುತ್ತಲೇ ಬಂದು ಜನರನ್ನು ದಾರಿ ತಪ್ಪಿಸಿದೆ. ರಾಜ್ಯ ಬಿಜೆಪಿ ಸರ್ಕಾರ ಎಸ್‍ಸಿ ಎಸ್‍ಟಿ ಸಮುದಾಯಗಳಿಗೆ ಹೆಚ್ಚಿಸಿದ ಮೀಸಲಾತಿಯನ್ನು ಕಾಂಗ್ರೆಸ್​ ರದ್ದುಪಡಿಸುವುದಾಗಿಯೂ ಹೇಳುತ್ತಿದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಡವರು, ಶೋಷಿತರು, ವಂಚಿತರನ್ನು ಒಟ್ಟಾಗಿ ಕೊಂಡೊಯ್ಯುತ್ತಿದ್ದು, ಜನಧನ್, ಪಿಎಂ ಆವಾಸ್, ಆಯುಷ್ಮಾನ್ ಭಾರತ್ ಸೇರಿದಂತೆ ಅನೇಕ ಯೋಜನೆಗಳಿಂದ ಬಡವರಿಗೆ ಪ್ರಯೋಜನವಾಗುತ್ತಿದೆ ಎಂದು ತಿಳಿಸಿದರು.

The civic workers were felicitated and honored by the state BJP.
ಪೌರ ಕಾರ್ಮಿಕರಿಗೆ ರಾಜ್ಯ ಬಿಜೆಪಿ ವತಿಯಿಂದ ಸನ್ಮಾನ

ಇದರೊಂದಿಗೆ ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ರಾಜ್ಯದಲ್ಲಿ 39 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಕೆ ಕಲ್ಪಿಸಲಾಗಿದೆ. ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿ ಪೂರಕ ಸರ್ಕಾರವಾಗಿ ಕೆಲಸ ಮಾಡಿದ್ದು, ಮುಂದೆಯೂ ಕೆಲಸ ಮಾಡಲಿದೆ ಎಂದು ಸಿಂಗ್ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಬಿಜೆಪಿ ಸೂಕ್ತ ಗೌರವ ಸಲ್ಲಿಸಿದ್ದು, ಎನ್‍ಡಿಎ ಸರ್ಕಾರದಲ್ಲಿ ಅವರಿಗೆ ಭಾರತರತ್ನ ನೀಡಲಾಯಿತು. ನರೇಂದ್ರ ಮೋದಿ ಸರ್ಕಾರದ ಆಡಳಿತಾವಧಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಅಭಿವೃದ್ಧಿಪಡಿಸಿ ಸ್ಮಾರಕಗಳನ್ನಾಗಿ ಮಾಡಲಾಯಿತು. ಅವರನ್ನು ಗೌರವಿಸಲು ಸಂವಿಧಾನ ದಿನ ಆಚರಿಸಲಾಯಿತು. ಆದರೆ, ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಅವರನ್ನು ಗೌರವಿಸುವ ಯಾವ ಕೆಲಸವನ್ನೂ ಮಾಡಲಿಲ್ಲ ಎಂದು ಅರುಣ್ ಸಿಂಗ್, ಕಾಂಗ್ರೆಸ್​ ಪಕ್ಷವನ್ನು ಟೀಕಿಸಿದರು.

ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಬಿಜೆಪಿ ಇಂದು ರಾಜ್ಯದ ಎಲ್ಲ ಜಿಲ್ಲಾ ಮಟ್ಟಗಳಲ್ಲಿ, 313 ಮಂಡಲಗಳಲ್ಲಿ, 44 ಸಾವಿರ ಬೂತ್ ಮಟ್ಟಗಳಲ್ಲಿ ಆಚರಿಸಲಾಗಿದೆ. ಎಐಸಿಸಿಗೆ ದಲಿತ ಸಮುದಾಯದವರೇ ಅಧ್ಯಕ್ಷರಾಗಿದ್ದು, ಎಷ್ಟು ಬೂತ್ ಗಳಲ್ಲಿ ಆಚರಿಸಲಾಗಿದೆ ಎಂಬುದನ್ನು ಆ ಪಕ್ಷವೇ ಹೇಳಬೇಕು ಎಂದು ಖರ್ಗೆ ಅವರಿಗೆ ಟಾಂಗ್​ ಕೊಟ್ಟರು.

ಅಂಬೇಡ್ಕರ್ ರಾಜ್ಯದಲ್ಲಿ ಪಾದಸ್ಪರ್ಶ ಮಾಡಿದ ಜಾಗಗಳನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕ್ರಮ ತೆಗೆದುಕೊಂಡಿದೆ. ಗುತ್ತಿಗೆ ಸೇವೆಗಳಲ್ಲೂ ಮೀಸಲಾತಿ ಪರಿಪಾಲಿಸಲು ಆದೇಶ ಹೊರಡಿಸಿದೆ. ಸಾಮಾಜಿಕ ನ್ಯಾಯ ಒದಗಿಸಿದ ಬಿಜೆಪಿಯೊಂದಿಗೆ ದಲಿತರಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಸಂಕಲ್ಪವನ್ನು ಜನರು ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಕೆಲವರ ಮಾತಿಗೆಲ್ಲ ನಾನು ಪ್ರತಿಕ್ರಿಯಿಸಲ್ಲ: ಸಚಿವ ವಿ.ಸೋಮಣ್ಣ ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.