ETV Bharat / state

ಹುಬ್ಬಳ್ಳಿ - ಧಾರವಾಡ ಕೊಲೆ ಪ್ರಕರಣಗಳ ಹೆಚ್ಚಳ: ವರದಿ ಸಲ್ಲಿಸಲು ಎಡಿಜಿಪಿಗೆ ಗೃಹ ಸಚಿವರ ಸೂಚನೆ - Home Minister instruction

author img

By ETV Bharat Karnataka Team

Published : May 17, 2024, 8:15 PM IST

ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣಗಳ ಬಗ್ಗೆ ವರದಿ ಸಲ್ಲಿಸುವಂತೆ ಎಡಿಜಿಪಿಗೆ ಗೃಹ ಸಚಿವರು ಸೂಚನೆ ನೀಡಿದ್ದಾರೆ.

HOME MINISTER INSTRUCTION
ಗೃಹ ಸಚಿವ ಡಾ. ಜಿ.ಪರಮೇಶ್ವರ್ (ETV Bharat)

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸಂಭವಿಸುತ್ತಿರುವ ಕೊಲೆ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಎಡಿಜಿಪಿ ಅವರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೆ ಇಂತಹ ಘಟನೆಗಳು ಸಂಭವಿಸುತ್ತಿವೆ. ಇದಕ್ಕೆ ಕಾರಣ ಏನು? ಯಾವ ಫ್ಯಾಕ್ಟರ್ ಎಂಬುದನ್ನು ಗುರುತಿಸಿ ವರದಿ ಸಲ್ಲಿಸಲಿದ್ದಾರೆ. ಬಳಿಕ ಸಾಧ್ಯವಾದರೆ ನಾನು ಹೋಗಿ ಬರುತ್ತೇನೆ ಎಂದು ಹೇಳಿದರು.

ಯುವತಿ ಅಂಜಲಿ ಕೊಲೆ‌ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಏನು ಕಠಿಣ ಶಿಕ್ಷೆ ಆಗಬೇಕು, ಅದನ್ನು ಮಾಡುತ್ತೇವೆ. ಇದರಲ್ಲಿ ಯಾವುದೇ ಮುಲಾಜಿಲ್ಲ. ಪೊಲೀಸರ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಅಮಾನತು ಮಾಡಲಾಗಿದೆ. ಮುಂದೆ ಏನೆಲ್ಲ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅದೆಲ್ಲವನ್ನು ಮಾಡುತ್ತೇವೆ‌ ಎಂದು ತಿಳಿಸಿದರು.

ಬೆದರಿಕೆ ಬಗ್ಗೆ ದೂರು ಕೊಟ್ಟಿದ್ದರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಪೋಷಕರು ರಿಟರ್ನ್ ಕಂಪ್ಲೇಂಟ್ ಕೊಟ್ಟಿಲ್ಲ. ಈ ಬಗ್ಗೆ ತಿಳಿಸಿದ್ದರು ಎಂಬುದು ನನಗೆ ಬಂದಿರೋ ವರ್ತಮಾನ. ಅದಕ್ಕಾಗಿ ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ. ಪೋಷಕರು ನಿಜವಾಗಿಯೂ ಹೇಳಿದ್ದರೆ? ಅಥವಾ ಇಲ್ಲವೇ ಎಂಬುದರ ಕುರಿತು ತನಿಖೆ ನಡೆಯುತ್ತದೆ. ಇದರಲ್ಲಿ ಅಧಿಕಾರಿಗಳ ತಪ್ಪು ಕಂಡು ಬಂದರೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು

ಗೃಹ ಸಚಿವ ಆಪ್ತನೆಂದು ವಂಚನೆ ಕುರಿತು: ಕೊರಟಗೆರೆ ಕ್ಷೇತ್ರದ ವ್ಯಕ್ತಿ ಎಲ್ಲಿಯೋ ನನ್ನ ಜೊತೆ ಫೋಟೋ ತೆಗೆಸಿಕೊಂಡಿದ್ದ. ಇತ್ತೀಚೆಗೆ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯವಾಗಿದೆ. ಒಳ್ಳೆಯದಕ್ಕೆ ಬಳಸಿದ್ದರೆ ಸರಿ. ಅದನ್ನು ದುರುಪಯೋಗಪಡಿಸಿಕೊಂಡಿರುವುದು ತಪ್ಪು. ಜನರಿಂದ ಹಣ ಪಡೆದುಕೊಂಡು ವಂಚಿಸಿದ್ದಾನೆ. ಹೀಗಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾನೂನು‌ ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಗೃಹ ಸಚಿವರ ಆಪ್ತನೆಂದು ನಂಬಿಸಿ ವಂಚಿಸುತ್ತಿದ್ದ ಆರೋಪಿಯ ಬಂಧನ - Fraud Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.