ETV Bharat / state

ಶೀಘ್ರದಲ್ಲೇ ಆನೇಕಲ್ ವಿಭಾಗಕ್ಕೆ ಸಂಚಾರ ಪೊಲೀಸ್ ಠಾಣೆ : ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ

author img

By

Published : Jan 30, 2023, 8:15 PM IST

traffic-police-station-for-anekal-division-soon-sp-mallikarjuna-baladandi
ಶೀಘ್ರದಲ್ಲೇ ಆನೇಕಲ್ ವಿಭಾಗಕ್ಕೆ ಸಂಚಾರ ಪೊಲೀಸ್ ಠಾಣೆ : ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ

ಪೋಲಿಸ್​ ಇಲಾಖೆ, ಎನ್​ಸಿಸಿ ಮತ್ತು ಎಸ್​ಎಫ್​ಎಸ್​ ಕಾಲೇಜು ವತಿಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಥಾ - ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ.

ಆನೇಕಲ್: ಬೆಂಗಳೂರು ಜಿಲ್ಲೆಯಲ್ಲಿ ಕೊಲೆಗಳಿಗಿಂತ ರಸ್ತೆ ಅಪಘಾತದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಸಾವುಗಳು ಸಂಭವಿಸಿವೆ. ವರ್ಷಕ್ಕೆ 60-65 ಕೊಲೆಗಳು ನಡೆದರೆ, ರಸ್ತೆ ಅಪಘಾತದಲ್ಲಿ 500-550 ಕೊಲೆಗಳು ನಡೆದಿರುವುದು ದಾಖಲಾಗಿದೆ. ಇದಕ್ಕಾಗಿ ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಅನಿವಾರ್ಯತೆಯಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ‌ ತಿಳಿಸಿದರು.

ಎಸ್​ಎಫ್ಎಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗು ಎನ್​ಸಿಸಿ ತಂಡದೊಂದಿಗೆ ಏರ್ಪಡಿಸಲಾಗಿದ್ದ ರಸ್ತೆ ಸುರಕ್ಷತೆಯ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಒಟ್ಟು ಅಪರಾಧ ಪ್ರಕರಣಗಳ ದಾಖಲೀಕರಣಕ್ಕೆ ಹೋಲಿಸಿದರೆ ಶೇಕಡ 10ರಷ್ಟು ರಸ್ತೆ ನಿಯಮ ಉಲ್ಲಂಘನೆಯ ಪ್ರಕರಣಗಳೇ ಹೆಚ್ಚು ಠಾಣೆಗೆ ಬರುತ್ತದೆ. ಕೇವಲ ರ್ಯಾಲಿಗೆ ಮಾತ್ರ ಸೀಮಿತವಲ್ಲದೆ ಪ್ರತಿದಿನ ರಸ್ತೆ ನಿಯಮಗಳನ್ನು ಪಾಲಿಸಬೇಕು ಮತ್ತು ವಿದ್ಯಾರ್ಥಿಗಳು ಎಲ್ಲರಿಗೂ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಕರೆ ನೀಡಿದರು.

ಚಂದಾಪುರದಲ್ಲಿ ಸಂಚಾರ ಠಾಣೆ ಶೀಘ್ರ: ಈಗಾಗಲೇ ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯ ಆನೇಕಲ್ ಭಾಗದಲ್ಲಿ ಹೆದ್ದಾರಿ ಸಂಚಾರ ನಿಯಮ ಪಾಲಿಸಲು ಸಂಚಾರ ಠಾಣೆಯನ್ನು ಚಂದಾಪುರದಲ್ಲಿ ತೆರೆಯುವಂತೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಈಗಿರುವ ಪೊಲೀಸ್ ಸಿಬ್ಬಂದಿ ಕೊರತೆಯ ನಡುವೆ ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಿಸಲು ಕಷ್ಟಸಾಧ್ಯವಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೊದಲು ನೆಲಮಂಗಲದಲ್ಲಿ ಮಾತ್ರ ಸಂಚಾರ ಠಾಣೆ ಇತ್ತು. ಇದೀಗ ಹೊಸಕೋಟೆಯಲ್ಲಿ ಚಾಲನೆ ದೊರೆತಿದೆ. ಇನ್ನು, ದೊಡ್ಡಬಳ್ಳಾಪುರ ಹಾಗೂ ಆನೇಕಲ್ ಭಾಗಕ್ಕೆ ಸಂಚಾರ ಪೊಲೀಸ್ ಠಾಣೆ ತೆರೆಯುವ ಭರವಸೆಯಿದೆ ಎಂದು ಎಸ್​ಪಿ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಮದ್ಯೆ ವಿದ್ಯುತ್ ಕಂಬ ಜಾಗದಲ್ಲಿ ಅಡ್ಡಾಡುವುದನ್ನು ತಡೆಗಟ್ಟಲು ಕ್ರಮ: ರಸ್ತೆ ದಾಟುವವರಿಗೆ ಸವಾಲಾಗಿರುವ (ಮೀಡಿಯನ್ಸ್) ಎತ್ತರದ ರಸ್ತೆ ವಿಭಜಕಗಳ ನಡುವೆ ವಿದ್ಯುತ್ ಕಂಬದ ಖಾಲಿ ಜಾಗದಲ್ಲಿ ಅಡ್ಡಾಡುತ್ತಿರುವ ಪಾದಚಾರಿಗಳು ವೇಗದ ವಾಹನಕ್ಕೆ ಸಿಲುಕಿ ಸಾವನ್ನಪ್ಪುತ್ತಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಲವು ಬಾರಿ ಸೂಚಿಸಿದರೂ ಯಾವುದೇ ಕ್ರಮ ವಹಿಸಿಲ್ಲ. ಆದ್ದರಿಂದ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಎಸ್ಎಫ್ಎಸ್ ಕಾಲೇಜಿನ ಪ್ರಾಂಶುಪಾಲ ರೆ ಫಾ ರಾಯ್ ಮಾತನಾಡಿ, ವಿದ್ಯಾರ್ಥಿಗಳ ಈ ಜಾಗೃತಿ ರ್ಯಾಲಿಯಿಂದ ರಸ್ತೆ ಸಂಚಾರಿಗಳು ಸುರಕ್ಷಿತ ನಿಯಮಗಳ ಕುರಿತು ಅರಿವನ್ನು ಹೆಚ್ಚಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಅವರವರ ಕುಟುಂಬದ ನೆರೆಹೊರೆಯವರಲ್ಲಿ ಈ ಕುರಿತು ಮಾತನಾಡಿ ಜಾಗೃತಿ ಮೂಡಿಸಿದರೆ ಎನ್​ಸಿಸಿ ಹಾಗೂ ಪೊಲೀಸ್ ಇಲಾಖೆ ಮತ್ತು ಎಸ್ಎಫ್ಎಸ್ ಸಂಸ್ಥೆಯ ಕಾರ್ಯ ಸಾರ್ಥಕಗೊಳ್ಳುತ್ತದೆ ಎಂದು ಹೇಳಿದರು.

ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳ ಘೋಷಣೆ ಕೂಗುತ್ತಾ, ಕೈಯಲ್ಲಿ ಘೋಷಣಾ ಫಲಕ ಹಿಡಿದು ಎಸ್​ಎಫ್​ಎಸ್​ ಕಾಲೇಜಿನಿಂದ ರಾಷ್ಟ್ರೀಯ ಹೆದ್ದಾರಿ ಸೇವಾ ರಸ್ತೆಯರೆಗೂ ಹೆಜ್ಜೆ ಹಾಕಿದರು. ಜಾಗೃತಿ ಜಾಥದಲ್ಲಿ ಎಎಸ್​ಪಿ ಪುರುಷೋತ್ತಮ್, ಡಿವೈಎಸ್​ಪಿ ಲಕ್ಷ್ಮಿನಾರಾಯಣ್, ಪಿಎಸ್ಐ​ಗಳಾದ ಆನೇಕಲ್ ಚಂದ್ರಪ್ಪ, ಸರ್ಜಾಪುರ ಮಂಜುನಾಥ್, ಅತ್ತಿಬೆಲೆ ಕೆ.ವಿಶ್ವನಾಥ್, ಜಿಗಣಿ ಸುದರ್ಶನ್ ಮತ್ತು ಬನ್ನೇರುಘಟ್ಟ ಉಮಾ ಮಹೇಶ್ ಭಾಗಿಯಾಗಿದ್ದರು.

ಇದನ್ನೂ ಓದಿ: ಸಿಡಿ ಮಹಾನಾಯಕನೇ ಡಿಕೆಶಿ: ರಮೇಶ್ ಜಾರಕಿಹೊಳಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.