ETV Bharat / state

ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಾಗ್ತಿದೆ ಟಿಕೆಟ್ ಆಕಾಂಕ್ಷಿಗಳ ಒತ್ತಡ: ಸಂಧಾನದ ಪ್ರಯತ್ನಕ್ಕೆ ಸಿಗುತ್ತಾ ಯಶಸ್ಸು?

author img

By

Published : Mar 6, 2023, 12:55 PM IST

Ticket aspirants Pressure increasing in Congress
ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಾಗುತ್ತಿದೆ ಟಿಕೆಟ್ ಆಕಾಂಕ್ಷಿಗಳ ಒತ್ತಡ

ಪಕ್ಷದ ಸಾಮರ್ಥ್ಯ ಪರೀಕ್ಷಿಸಲು ಆಕಾಂಕ್ಷಿಗಳಿಂದ ಅರ್ಜಿ ಪಡೆದು ಹಣ ಕಟ್ಟಿಸಿಕೊಂಡಿರುವ ರಾಜ್ಯ ಕಾಂಗ್ರೆಸ್​ ನಾಯಕರಿಗೆ ಇದೀಗ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ತೀವ್ರ ತಲೆನೋವಾಗಿ ಪರಿಣಮಿಸಿದೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸುವ ಕಾಂಗ್ರೆಸ್ ಪಕ್ಷಕ್ಕೆ ಆಕಾಂಕ್ಷಿಗಳ ಒತ್ತಡ ತೀವ್ರ ತೊಡಕಾಗಿ ಕಾಡುತ್ತಿದೆ. ದಿನದಿಂದ ದಿನಕ್ಕೆ ಕೈ ಪಾಳಯದಲ್ಲಿ ಟಿಕೆಟ್​ಗಾಗಿ ಪೈಪೋಟಿ, ಒತ್ತಡ, ಪ್ರಭಾವ ಬೀರುವ ಪ್ರಯತ್ನ, ರಾಜ್ಯ ನಾಯಕರ ಮನೆಗೆ ಎಡತಾಕುವುದು, ಶಕ್ತಿ ಪ್ರದರ್ಶನ, ರಾಷ್ಟ್ರೀಯ ಹಾಗೂ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಯತ್ನಗಳು ಹೆಚ್ಚಾಗಿವೆ.

ಒಂದೆಡೆ ಆಸಕ್ತ ಆಕಾಂಕ್ಷಿಗಳಿಂದ ಅರ್ಜಿ ಪಡೆದು ಹಣ ಕಟ್ಟಿಸಿಕೊಂಡಿರುವ ಕಾಂಗ್ರೆಸ್ ನಾಯಕರಿಗೆ ಇದೀಗ ಅದೇ ದೊಡ್ಡ ತೊಡಕಾಗಿದೆ. ದಿನದಿಂದ ದಿನಕ್ಕೆ ರಾಜ್ಯದೆಲ್ಲೆಡೆಯಿಂದ ಆಕಾಂಕ್ಷಿಗಳಿಂದ ಎದುರಾಗುತ್ತಿರುವ ಒತ್ತಡ ಸಹಿಸುವುದು ಕಷ್ಟವಾಗುತ್ತಿದೆ. ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ಒಟ್ಟು 1500 ಮಂದಿ ಆಕಾಂಕ್ಷಿಗಳು ಸ್ಪರ್ಧೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗೆ 5 ಸಾವಿರ ನೀಡಿದ್ದಲ್ಲದೇ, ಎಸ್ಸಿಎಸ್ಟಿ ಸಮುದಾಯದವರು ತಲಾ 1 ಲಕ್ಷ ರೂ. ಹಾಗೂ ಸಾಮಾನ್ಯ ವರ್ಗದವರು 2 ಲಕ್ಷ ರೂ. ಪಕ್ಷಕ್ಕೆ ಪಾವತಿ ಮಾಡಿದ್ದಾರೆ. ಆಕಾಂಕ್ಷಿಗಳ ಸಂಖ್ಯೆ ಅರಿಯಲು ಕಾಂಗ್ರೆಸ್ ರಾಜ್ಯ ನಾಯಕರು ಮಾಡಿದ ಪ್ರಯತ್ನ ಇದೀಗ ಅವರಿಗೇ ಮುಳುವಾಗಿದೆ.

ಸಿದ್ದರಾಮಯ್ಯ ನಿವಾಸದಲ್ಲಿ ಇತ್ತೀಚೆಗೆ ಒಂದು ಸಂಧಾನ ಸಭೆ ನಡೆದಿರುವುದು ಇದಕ್ಕೆ ಸೂಕ್ತ ಉದಾಹರಣೆ. ಬೆಳಗಾವಿ ಜಿಲ್ಲೆಯ ರಾಮದುರ್ಗಾ ಕ್ಷೇತ್ರದ ಆಕಾಂಕ್ಷಿಗಳ ನಡುವೆ ಸಂಧಾನ ಸಭೆ ಮಾಡಿರುವ ಅವರು, ಟಿಕೆಟ್​ಗಾಗಿ ಅಶೋಕ್ ಪಟ್ಟಣ್ ಹಾಗೂ ಚಿಕ್ಕರೇವಣ್ಣ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇಬ್ಬರನ್ನೂ ಕರೆಸಿ ಮಾತನಾಡಿದ್ದಾರೆ. ಶಿವಾನಂದ ವೃತ್ತದ ಸರ್ಕಾರಿ ನಿವಾಸದಲ್ಲಿ ಸಭೆ ನಡೆಸಿದ ಮಾಜಿ ಸಿಎಂ ಟಿಕೆಟ್​ಗಾಗಿ ಪಟ್ಟು ಹಿಡಿದಿದ್ದ ಚಿಕ್ಕರೇವಣ್ಣರ ಮನವೊಲಿಸುವಲ್ಲಿ ಸಫಲವಾಗಿದ್ದಾರೆ. ಈಗ ಅಶೋಕ್ ಪಟ್ಟಣ್​ಗೆ ಟಿಕೆಟ್ ಕೊಡೋಣ. ಸರ್ಕಾರ ಬಂದಾಗ ಸ್ಥಾನಮಾನ ನೀಡೋಣ ಎಂದು ಚಿಕ್ಕರೇವಣ್ಣಗೆ ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯ ಮಾತಿಗೆ ಕೊನೆಗೂ ಒಪ್ಪಿಗೆ ನೀಡಿದ ಚಿಕ್ಕರೇವಣ್ಣ ಅಲ್ಲಿಂದ ತೆರಳಿದ್ದಾರೆ.

ನಂತರ ಮಾಧ್ಯಮಗಳಿಗೆ ಮಾತನಾಡಿದ ಸಂದರ್ಭ ರಾಮದುರ್ಗ ಟಿಕೆಟ್ ಸಂಧಾನ ವಿಚಾರ ಪ್ರಸ್ತಾಪಿಸಿ, ಚಿಕ್ಕ ರೇವಣ್ಣ ಕೆಲಸ ಮಾಡಿಕೊಂಡು ಬರ್ತಾ ಇದ್ರು. ದುಡ್ಡು ಖರ್ಚು ಮಾಡಿ ಸಂಘಟನೆ ಮಾಡ್ತಾ ಇದ್ರು. ಈ ಬಾರಿ ಟಿಕೆಟ್ ಬೇಕು ಅಂತ ಕೆಲಸ ಮಾಡ್ತಾ ಇದ್ರು. ನಾನು ರೇವಣ್ಣ ಅವರನ್ನು ಕರೆದು ಮಾತನಾಡಿದೆ. ಈ ಬಾರಿ ಅಶೋಕ್ ಪಟ್ಟಣ್​ಗೆ ಟಿಕೆಟ್ ಕೊಡೋಣ. ಗೆಲ್ಲಲು ಕೆಲಸ ಮಾಡೋಣ ಅಂತ ಹೇಳಿದ್ದೇನೆ. ಮುಂದೆ ಅವಕಾಶದ ಬಗ್ಗೆ ಹೇಳಿದ್ದೇನೆ. ಇದಕ್ಕೆ ಚಿಕ್ಕ ರೇವಣ್ಣ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಸಂಧಾನ ಅನಿವಾರ್ಯ-ಡಿಕೆಶಿ: ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್​ಗಾಗಿ ಸಾಕಷ್ಟು ದೊಡ್ಡ ಮಟ್ಟದ ಪೈಪೋಟಿ ನಡೆಯುತ್ತಿದ್ದು, ನಾನು ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಾಧ್ಯವಾದಷ್ಟು ಸಂಧಾನ ಸಭೆ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ನಮ್ಮಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಅವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಟಿಕೆಟ್ ಯಾರಿಗೆ ಕೊಡಬೇಕು ಎಂದು ಪಾರ್ಟಿ ತೀರ್ಮಾನ ಮಾಡುತ್ತದೆ.

ಯಾವ ಗಲಾಟೆಗೂ ಅವಕಾಶವಿಲ್ಲ, ಹೇಗೆ ನಿಭಾಯಿಸಬೇಕು ಎಂದು ಗೊತ್ತಿದೆ. ಮಾ.7, 8 ಕ್ಕೆ ಸ್ಕ್ರೀನಿಂಗ್ ಕಮಿಟಿ ಸಭೆ ಇದೆ. ಒಗ್ಗಟಾಗಿ ಎಲೆಕ್ಷನ್ ಮಾಡ್ತೇವೆ. ಪಕ್ಷದಲ್ಲಿ ಶಿಸ್ತು ಮುಖ್ಯ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಅಧಿಕಾರಕ್ಕೆ ಬಂದ್ರೆ 20 ಎಂಎಲ್​ಸಿ ಮಾಡುವ ಅವಕಾಶ ಇದೆ. ಬೋರ್ಡ್ ಚೇರ್ಮನ್ ಮಾಡುವ ಅವಕಾಶ ಇದೆ. ಸಂಧಾನ ಸಭೆ ಮಾಡ್ತಾ ಇದೇವೆ. ನಾನು ಹಾಗೂ ಸಿದ್ದರಾಮಯ್ಯ ಸಂಧಾನ ಸಭೆ ಮಾಡ್ತಾ ಇದ್ದೇವೆ. ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಪೈಪೋಟಿ ಹೆಚ್ಚಳ: ಬಹುತೇಕ ವಿಧಾನಸಭೆ ಕ್ಷೇತ್ರದಲ್ಲಿ ಪೈಪೋಟಿ ಏರ್ಪಟ್ಟಿದೆ. ಕನಿಷ್ಠ 5 ರಿಂದ 20ರವರೆಗೂ ಅರ್ಜಿ ಸಲ್ಲಿಸಿದವರು ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಕೊಳ್ಳೆಗಾಲ ವಿಧಾನಸಭೆ ಕ್ಷೇತ್ರ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಗುರುತಿಸಿಕೊಂಡಿರುವ ಕ್ಷೇತ್ರದಿಂದ ಮೂವರು ಮಾಜಿ ಶಾಸಕರು ಟಿಕೆಟ್​ಗಾಗಿ ಪೈಪೋಟಿ ನಡೆಸಿದ್ದಾರೆ. ಮಾಜಿ ಶಾಸಕರಾದ ಎಸ್.ಜಯಣ್ಣ, ಎ.ಆರ್. ಕೃಷ್ಣಮೂರ್ತಿ, ಎಸ್. ಬಾಲರಾಜು ಪ್ರಬಲ ರೀತಿಯಲ್ಲಿ ಯತ್ನಿಸುತ್ತಿದ್ದಾರೆ. ಮೂವರು ಸಹ ಪಕ್ಷದ ಒಳಗೆ ಹಾಗೂ ಹೊರಗೆ ಟಿಕೆಟ್​ಗಾಗಿ ಭಾರಿ ಕಸರತ್ತು ನಡೆಸುತ್ತಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ.

ಮಾಜಿ ಡಿಸಿಎಂ ಎಂ.ಪಿ. ಪ್ರಕಾಶ್ ಪುತ್ರಿಯರಾದ ವೀಣಾ ಮತ್ತು ಲತಾ ಸದ್ಯ ಹರಪನಹಳ್ಳಿ ಟಿಕೆಟ್​ಗಾಗಿ ಪೈಪೋಟಿ ನಡೆಸಿದ್ದಾರೆ. ಇವರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿ ನಾಯಕರಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಎಂ.ಪಿ. ಪ್ರಕಾಶ್ ಪುತ್ರ ಎಂ.ಪಿ. ರವೀಂದ್ರ ಸ್ಪರ್ಧಿಸಿದ್ದರು. 2013ರಲ್ಲಿ ಶಾಸಕರಾಗಿದ್ದ ರವೀಂದ್ರ 2018ರಲ್ಲಿ ಬಿಜೆಪಿಯ ಕರುಣಾಕರ ರೆಡ್ಡಿ ವಿರುದ್ಧ ಸೋಲನುಭವಿಸಿದ್ದರು. 2008ರಲ್ಲಿ ಎಂ.ಪಿ. ಪ್ರಕಾಶ್ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಕರುಣಾಕರ ರೆಡ್ಡಿ ವಿರುದ್ಧ ಸೋತಿದ್ದನ್ನು ನೆನೆಯಬಹುದು. ಒಟ್ಟಾರೆ ಎಂ.ಪಿ. ಪ್ರಕಾಶ್ ಕುಟುಂಬಕ್ಕೆ ಈ ಸಾರಿ ಟಿಕೆಟ್ ನೀಡಬೇಕೆಂಬ ಒತ್ತಡವೂ ಹೆಚ್ಚಿದೆ.

ಹೊಸಪೇಟೆಯ ವಿಜಯನಗರ ವಿಧಾನಸಭೆ ಕ್ಷೇತ್ರದಲ್ಲೂ ಕೈಗೆ ಸವಾಲು ಹೆಚ್ಚಿದೆ. ಕಾಂಗ್ರೆಸ್ ಟಿಕೆಟ್ ಕೋರಿ 12 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಮುಖಂಡರಾದ ರಾಜಶೇಖರ್ ಹಿಟ್ನಾಳ್, ಸಿರಾಜ್ ಶೇಖ್, ಮಹಮ್ಮದ್ ಇಮಾಮ್ ನಿಯಾಜಿ, ಸೈಯ್ಯದ್ ಮಹಮ್ಮದ್ ಪ್ರಮುಖರು. ಈ ರೀತಿ ರಾಜ್ಯದೆಲ್ಲೆಡೆ ಸಂಧಾನಸಭೆ ನಡೆಸುವುದರಲ್ಲಿಯೇ ಕಾಂಗ್ರೆಸ್ ನಾಯಕರು ಸುಸ್ತಾಗಿ ಹೋಗಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

'ನಮ್ಮಲ್ಲಿ ಸಮಸ್ಯೆ ಇಲ್ಲ': ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ನಾವು ಮೊದಲ ಪಟ್ಟಿಯನ್ನು ಹೈಕಮಾಂಡ್​ಗೆ ಸಲ್ಲಿಕೆ ಮಾಡಲು ಸಿದ್ಧವಿದ್ದೇವೆ. ನಮ್ಮ ವರಿಷ್ಠರು ವಿವಿಧ ತುರ್ತು ಕಾರ್ಯದಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಸಭೆ ನಡೆಸಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ನಮ್ಮ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ನವರು ದಿಂಬು, ಹಾಸಿಗೆಯನ್ನೂ ಬಿಟ್ಟಿಲ್ಲ; ಸಿದ್ದರಾಮಯ್ಯ ಸಚಿವರುಗಳಿಗೆ 'ಟಾರ್ಗೆಟ್‌' ಕೊಡ್ತಿದ್ರು: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.