ETV Bharat / state

ಬಿಜೆಪಿ ಅವಧಿಯಲ್ಲಿ ಸಾವಿರಾರು ಕೋಮುಗಲಭೆ ಪ್ರಕರಣ ಕೈಬಿಡಲಾಗಿದೆ: ಡಿ.ಕೆ.ಶಿವಕುಮಾರ್‌

author img

By ETV Bharat Karnataka Team

Published : Oct 4, 2023, 8:03 PM IST

Updated : Oct 4, 2023, 9:07 PM IST

DCM Shivakumar spoke to the media.
ಡಿಸಿಎಂ ಶಿವಕುಮಾರ್‌ ಮಾಧ್ಯಮದರೊಂದಿಗೆ ಮಾತನಾಡಿದರು.

ಕೋಮು ಗಲಭೆ ಪ್ರಕರಣಗಳನ್ನು ಕೈಬಿಡುವ ವಿಚಾರಗಳ ಕುರಿತು ಬಿಜೆಪಿ ಮುಖಂಡರ ಟೀಕೆಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಕೋಮು ವಿವಾದಕ್ಕೆ ಸಂಬಂಧಿಸಿದ ಸಾವಿರಾರು ಪ್ರಕರಣಗಳನ್ನು ಕೈಬಿಟ್ಟಿದೆ. ಸಾವಿರಾರು ರೌಡಿಶೀಟರ್‌ಗಳನ್ನೂ ಬೀದಿಗೆ ಬಿಟ್ಟಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಆರೋಪಿಸಿದರು.

ಸದಾಶಿವನಗರದ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯವರಿಗೆ ತಮ್ಮ ಮನೆಯ ಹುಳುಕು, ದೋಸೆ ತೂತು ಕಾಣುತ್ತಿಲ್ಲ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದವರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ತಮ್ಮ ಅಧಿಕಾರವಧಿಯಲ್ಲಿ ಏನೇನು ಮಾಡಿದರು ಎಂಬುದು ಜನರಿಗೆ ಗೊತ್ತಿಲ್ಲ ಎಂದು ತಿಳಿದುಕೊಂಡಿದ್ದಾರೆ. ಹೀಗಾಗಿ ಜನ ಅವರನ್ನು ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಯಾವ ಯಾವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದವರ ಪಟ್ಟಿ ನಮ್ಮ ಬಳಿ ಇದೆ. ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ, ಮಾಧುಸ್ವಾಮಿ ಸೇರಿದಂತೆ ಅನೇಕರು ಮನವಿ ಮಾಡಿದ್ದರು. 2023ರ ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿ 7,361 ರೌಡಿಶೀಟರ್‌ಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದೇ ಬಿಜೆಪಿ ಸರ್ಕಾರ. ಅವರು ಈಗ ನಮಗೆ ಬುದ್ಧಿ ಹೇಳಲು ಬರುತ್ತಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯವರು ಅವರ ಕಾರ್ಯಕರ್ತರ ಪರವಾಗಿ ರಾಜಕಾರಣ ಮಾಡಿದ್ದಾರೆ. ನಾವು ಕಾನೂನು ಪ್ರಕಾರ ನಡೆದುಕೊಳ್ಳುತ್ತಿದ್ದೇವೆ. ಅಮಾಯಕರ ವಿರುದ್ಧ ಇರುವ ಪ್ರಕರಣಗಳನ್ನು ಮಾತ್ರ ಪರಿಶೀಲನೆ ಮಾಡುತ್ತಿದ್ದೇವೆ. ಕಾನೂನಿನ ಚೌಕಟ್ಟಿನಲ್ಲಿ ಮಾಡಲು ಅವಕಾಶವಿದ್ದರೆ ಮಾಡಬಹುದು ಎಂದು ಅಧಿಕಾರಿಗಳು ಶಿಫಾರಸು ಮಾಡುತ್ತಾರೆ. ಇದಕ್ಕೆಂದೇ ಸಮಿತಿ ಇದೆ. ಅವರು ವರದಿ ನೀಡಿದ ಮೇಲೆ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಆತುರದಲ್ಲಿದೆಯೇ ಎಂಬ ಪ್ರಶ್ನೆಗೆ, ನನ್ನ ಮೇಲೂ ಸಾಕಷ್ಟು ಪ್ರಕರಣಗಳಿವೆ, ಈಗಲೂ ಅನೇಕ ಪ್ರಕರಣಗಳು ಚಾಲ್ತಿಯಲ್ಲಿವೆ. ಅನೇಕ ಪ್ರಕರಣಗಳನ್ನು ರಾಜಕೀಯ ಉದ್ದೇಶಕ್ಕೆ ಹಾಕಲಾಗಿದೆ. ಪ್ರಕರಣ ಹಿಂಪಡೆಯಲು ನಮಗೇನೂ ಅವಸರ ಇಲ್ಲ, ಬಿಜೆಪಿಯವರೇ ತರಾತುರಿಯಲ್ಲಿ ಇದ್ದಾರೆ. ನೀವು (ಮಾಧ್ಯಮದವರು) ಅವರನ್ನು ಪ್ರತಿದಿನ ತೋರಿಸುತ್ತಿದ್ದೀರಿ. ಅದಕ್ಕೆ ಅವರು ಆ ರೀತಿ ಹೇಳುತ್ತಿದ್ದಾರೆ ಎಂದರು.

ಯಾರ್ಯಾರು ಪ್ರಕರಣ ಹಿಂಪಡೆಯಲು ಪತ್ರ ಬರೆದಿದ್ದರು, ಸಹಿ ಹಾಕಿದ್ದರು, ಆ ಪತ್ರಗಳನ್ನೆಲ್ಲಾ ಮುಂದಿಡಲೇ? ನಾನು ಹೆಸರಿಸಿದವರು ಗಲಭೆ ಪ್ರಕರಣಗಳನ್ನು ಹಿಂಪಡೆಯಲು ಶಿಫಾರಸು ಮಾಡಿಲ್ಲ ಎಂದು ಹೇಳಲಿ. ಅವರೇ ಬರೆದಿರುವ ಪತ್ರಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಸವಾಲೆಸೆದರು.

ಜಾತಿಗಣತಿ ವರದಿ ಬಗ್ಗೆ ಶೀಘ್ರ ನಿಲುವು: ಬಿಹಾರ ಮಾದರಿಯಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಬೇಕು ಎಂಬ ಒತ್ತಾಯದ ಬಗ್ಗೆ ಕೇಳಿದಾಗ, ನಮ್ಮ ಸರ್ಕಾರವೇ ಕಾಂತರಾಜು ಸಮಿತಿ ವರದಿ ಮಾಡಿಸಿದೆ. ನಮ್ಮ ಪಕ್ಷದಲ್ಲೂ ಇದರ ಬಗ್ಗೆ ನಿಲುವು ವ್ಯಕ್ತವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪಕ್ಷ ಒಂದು ನಿಲುವು ತೆಗೆದುಕೊಳುತ್ತದೆ. ಅದರಂತೆ ನಾವು ನಡೆಯುತ್ತೇವೆ. ಒಂದಷ್ಟು ಜನ ಅಪೇಕ್ಷೆ, ಆಕ್ಷೇಪ ಎಲ್ಲ ವ್ಯಕ್ತಪಡಿಸುತ್ತಿದ್ದಾರೆ. ಆದಷ್ಟು ಬೇಗ ಒಂದು ನಿಲುವಿಗೆ ನಾವು ಬರುತ್ತೇವೆ. ಸರ್ಕಾರದ ಮನಸ್ಥಿತಿ ಹೇಗಿದೆಯೋ ಅದೇ ರೀತಿ ಉಳಿದವರು ಇರುತ್ತಾರೆ. ಅದಕ್ಕೆ ಶಿವಮೊಗ್ಗ ಗಲಭೆ ನಡೆದಿದೆ ಎಂಬ ಸಂಸದ ಪ್ರತಾಪ್‌ ಸಿಂಹ ಅವರ ಮಾತಿಗೆ ಪ್ರತಿಕ್ರಿಯಿಸಿ, ಹಿಂದೆ ಮೈಸೂರಿನಲ್ಲಿ ಹೊಡೆದಾಟ, ಬಡಿದಾಟ ಮಾಡಿದ್ರಲ್ಲ? ಆಗ ಯಾವ ಮನಸ್ಥಿತಿ ಕೆಲಸ ಮಾಡಿತ್ತು ಎಂದು ಪ್ರತಿರೋಧ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬರ ಪರಿಸ್ಥಿತಿ ಅವಲೋಕಿಸಲು ನಾಳೆ ರಾಜ್ಯಕ್ಕೆ ಕೇಂದ್ರದ ಮೂರು ತಂಡಗಳು ಭೇಟಿ

Last Updated :Oct 4, 2023, 9:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.